ಕ್ರೆಡಿಟ್ ಕಾರ್ಡ್‌ಗಳ ಸದುಪಯೋಗ ಹೇಗೆ?

Update: 2017-09-27 09:56 GMT

ಬ್ಯಾಂಕುಗಳು ಕ್ರೆಡಿಟ್ ಕಾರ್ಡ್‌ಗಳನ್ನು ಬೇಕಾಬಿಟ್ಟಿಯಾಗಿ ನೀಡುತ್ತಿವೆ. ಇದು ಜನರಲ್ಲಿ ಕೊಳ್ಳುಬಾಕ ಸಂಸ್ಕೃತಿಯನ್ನು ಉತ್ತೇಜಿಸುತ್ತದೆ. ಆದರೆ ಕ್ರೆಡಿಟ್ ಕಾರ್ಡ್‌ಗಳ ಬಳಕೆಯ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ನಾವು ಸಾಲದ ಸುಳಿಯಲ್ಲಿ ಸಿಲುಕುತ್ತೇವೆ. ಹೀಗಾಗಿ ಹೆಚ್ಚಿನ ಜನರು ಕ್ರೆಡಿಟ್ ಕಾರ್ಡ್‌ಗಳ ಬದಲಿಗೆ ಡೆಬಿಟ್ ಕಾರ್ಡ್‌ಗಳನ್ನು ಬಳಸಲು ಇಷ್ಟಪಡುತ್ತಾರೆ. ಇದರಿಂದಾಗಿ ಬಳಕೆಯ ಮೇಲೆ ಕಣ್ಣಿಡಬಹುದಾಗಿದೆ. ಆದರೆ ಕ್ರೆಡಿಟ್ ಕಾರ್ಡ್‌ನ್ನು ಸೂಕ್ತರೀತಿಯಲ್ಲಿ ಬಳಸಿದರೆ ನಮ್ಮ ನಗದು ವ್ಯವಹಾರವನ್ನು ಸುಲಲಿತವಾಗಿ ನಿರ್ವಹಿಸಬಹುದು. ಆದರೆ ವೆಚ್ಚಗಳನ್ನು ಕ್ರೆಡಿಟ್ ಕಾರ್ಡ್ ಮೂಲಕ ಬಳಸುವ ಮುನ್ನ ಅದಕ್ಕೆ ವಿಧಿಸಲಾಗುವ ಶುಲ್ಕಗಳು ಮತ್ತು ಬಡ್ಡಿದರದ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯವಾಗಿದೆ.

ಕ್ರೆಡಿಟ್ ಕಾರ್ಡ್‌ನ ಸಾಲ ಆವರ್ತನೆಯಿಂದಾಗಿ ನೀವು ನಿಮ್ಮ ನಗದು ಹರಿವನ್ನು ಅನುಕೂಲಕರವಾಗಿ ನಿರ್ವಹಿಸಬಹುದು. ನಿಯಮಿತ ವೆಚ್ಚಗಳನ್ನು ಕ್ರೆಡಿಟ್ ಕಾರ್ಡ್‌ನ ಮೂಲಕ ಪಾವತಿಸುವುದು ಖರ್ಚುಗಳ ಮೇಲೆ ನಿಗಾಯಿರಿಸುವ ಉತ್ತಮ ಮಾರ್ಗವಾಗಿದೆ.

ನಿಮ್ಮ ಬಳಿ ತಕ್ಷಣಕ್ಕೆ ಹಣವಿಲ್ಲದಿದ್ದರೂ ನೀವು ದೊಡ್ಡ ಮೊತ್ತದ ಖರೀದಿಯನ್ನು ಮಾಡಬಹುದು. ಕೆಲವೊಮ್ಮೆ ನಿಮ್ಮ ದೊಡ್ಡ ಖರೀದಿಗಳನ್ನು ಇಎಂಐಗಳಾಗಿ ಪರಿವರ್ತಿಸುವ ಸೌಲಭ್ಯ ಲಭ್ಯವಿರಬಹುದು. ಅಂತಹ ಸಂದರ್ಭದಲ್ಲಿ ನೀವು ನಿಯಮಿತವಾಗಿ ಇಎಂಐಗಳನ್ನು ಪಾವತಿಸಿದರೆ ರೋಲಿಂಗ್ ಕ್ರೆಡಿಟ್ ಶುಲ್ಕಗಳನ್ನು ಪಾವತಿಸಬೇಕಾಗುವುದಿಲ್ಲ.

ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್‌ಗಳ ಮೂಲಕ ಹಣಪಾವತಿಯು ಹೆಚ್ಚಿನ ಅಪಾಯಗಳನ್ನು ಒಳಗೊಂಡಿರುತ್ತದೆ. ಇದೇ ರೀತಿ ನಿಮ್ಮ ಖರೀದಿ ಮೊತ್ತವನ್ನು ನಮೂದಿಸುವಲ್ಲಿ ತಪ್ಪಾದರೂ ಅಷ್ಟೂ ಹಣ ನಿಮ್ಮ ಬ್ಯಾಂಕ್ ಖಾತೆಯಿಂದ ತಕ್ಷಣವೇ ಕಡಿತಗೊಳ್ಳುತ್ತದೆ. ಅದನ್ನು ಸರಿಪಡಿಸಿ ವ್ಯತ್ಯಾಸದ ಹಣ ನಿಮ್ಮ ಬ್ಯಾಂಕ್ ಖಾತೆಗೆ ಮರಳಿ ಜಮಾ ಆಗುವಂತೆ ಮಾಡುವುದು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ. ಆದರೆ ಕ್ರೆಡಿಟ್ ಕಾರ್ಡ್ ಬಳಸಿದ್ದರೆ ನೀವು ತಪ್ಪನ್ನು ಗಮನಕ್ಕೆ ತಂದು ಸರಿಪಡಿಸುವಂತೆ ಕೇಳಿಕೊಳ್ಳಬಹುದಾಗಿದೆ ಮತ್ತು ನೀವು ಹಣವನ್ನು ಪಾವತಿಸುವುದು ಅಗತ್ಯವಾಗದಿರಬಹುದು.

ನಿಮ್ಮ ಬಳಿ ಹಣದ ಕೊರತೆಯಿದ್ದರೆ ನಿಮ್ಮ ತುರ್ತು ಖರ್ಚುಗಳಿಗಾಗಿ ಹಣವನ್ನು ಹೊಂದಿಸಿಕೊಳ್ಳಲು ಕ್ರೆಡಿಟ್ ಕಾರ್ಡ್ ನೆರವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಯಿಂದ ಓವರ್ ಡ್ರಾ ಮಾಡಿದರೆ ಅಥವಾ ವೈಯಕ್ತಿಕ ಸಾಲವನ್ನು ಪಡೆದರೆ ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಆದರೂ ಕ್ರೆಡಿಟ್ ಕಾರ್ಡ್ ಮೂಲಕ ಸಾಲವನ್ನು ಪಡೆದುಕೊಂಡರೆ ಓವರ್ ಲಿಮಿಟ್ ಶುಲ್ಕ ಮತ್ತು ಸಾಮಾನ್ಯಕ್ಕಿಂತ ಹೆಚ್ಚಿನ ಬಡ್ಡಿದರವನ್ನು ವಿಧಿಸಲಾಗುತ್ತದೆ ಎನ್ನುವುದು ನೆನಪಿರಲಿ.

ನೀವು ಸಾಲವನ್ನು ಹೇಗೆ ಮರುಪಾವತಿಸುತ್ತೀರಿ ಎನ್ನುವದರ ಮೇಲೆ ನಿಮ್ಮ ಕ್ರೆಡಿಟ್ ಸ್ಕೋರ್ ನಿರ್ಧಾರವಾಗುತ್ತದೆ. ಹೀಗಾಗಿ ಉತ್ತಮ ಸಾಲ ಇತಿಹಾಸ ಹೊಂದಲು ಕ್ರೆಡಿಟ್ ಕಾರ್ಡ್ ಸಾಲವನ್ನು ನಿಯಮಿತವಾಗಿ ಪಾವತಿಸುವುದು ಸುಲಭ ಮಾರ್ಗವಾಗಿದೆ. ಉತ್ತಮ ಕ್ರೆಡಿಟ್ ಸ್ಕೋರ್ ನಿಮಗೆ ಅಗತ್ಯವಾದಾಗ ಸುಲಭ ಷರತ್ತುಗಳ ಮೇಲೆ ಸಾಲ ಪಡೆಯಲು ನೆರವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News