×
Ad

‘ನಮಗೂ ಹೇಳಲಿಕ್ಕಿದೆ’ ದೇಶದಾದ್ಯಂತ ಜಾಗೃತಿ ಅಭಿಯಾನ

Update: 2017-09-27 19:36 IST

ಬೆಂಗಳೂರು, ಸೆ. 27: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ಹತ್ತಿಕ್ಕಲು ಬಿಜೆಪಿ ಹಾಗೂ ಸಂಘಪರಿವಾರ ನಡೆಸುತ್ತಿರುವ ಅಪಪ್ರಚಾರವನ್ನು ಖಂಡಿಸಿ, ಸಾರ್ವಜನಿಕರಿಗೆ ವಾಸ್ತವತೆ ಅರ್ಥ ಮಾಡಿಸುವ ಸಲುವಾಗಿ ದೇಶದಾದ್ಯಂತ ‘ನಮಗೂ ಹೇಳಲಿಕ್ಕಿದೆ’ ಎಂಬ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಅಧ್ಯಕ್ಷ ಮುಹಮ್ಮದ್ ಶಾಕಿಬ್ ಹೇಳಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರಕಾರ ಹಾಗೂ ಹಿಂದುತ್ವವಾದಿಗಳು ಪಿಎಫ್ ಐ ಸಂಘಟನೆಗೆ ಕೆಟ್ಟ ಹೆಸರು ತಂದು, ಅದರ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ. ಇಲ್ಲಸಲ್ಲದ ಆರೋಪಗಳನ್ನು ಮಾಡುವ ಮೂಲಕ ಪಿಎಫ್‌ಐ ಅನ್ನು ನಿಷೇಧಿಸಬೇಕು ಎಂದು ಹೇಳುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 7 ವರ್ಷಗಳ ಹಿಂದೆ ಕೇರಳದಲ್ಲಿ ಪ್ರವಾದಿ ವಿರುದ್ಧ ನಿಂದನಾತ್ಮಕ ಭಾಷೆ ಬಳಿಸಿದ್ದ ಪ್ರೊ.ಜೋಸೆಪ್ ಮೇಲೆ ದಾಳಿ ನಡೆಯಿತು. ಆದರೆ, ಈ ದಾಳಿಯ ಹಿಂದೆ ಪಿಎಫ್‌ಐ ಇದೆ ಎಂದು ಆರೋಪ ಮಾಡಿದರು. ಅನಂತರ ನಾರಾತ್‌ನಲ್ಲಿ ಜನಾರೋಗ್ಯ ಜಾಗೃತಿ ಶಿಬಿರ ಆಯೋಜಿಸಿದ್ದ ವೇಳೆ ಶಸ್ತ್ರಾಸ್ತ್ರ ತರಬೇತಿ ನೀಡಲಾಗುತ್ತಿದೆ ಎಂದು ಬಿಂಬಿಸಲಾಯಿತು ಎಂದರು.

ಬೆಂಗಳೂರಿನಲ್ಲಿ ವೈಯಕ್ತಿಕ ದ್ವೇಷದಿಂದ ಆರೆಸ್ಸೆಸ್ ಕಾರ್ಯಕರ್ತನ ಹತ್ಯೆ ನಡೆದ ಸಂದರ್ಭದಲ್ಲಿ, ಈ ಹತ್ಯೆಯಲ್ಲಿ ನಮ್ಮ ಸಂಘಟನೆ ಪಾತ್ರವಿದೆ ಎಂದು ಆರೋಪಿಸಿದರು. ಅಲ್ಲದೆ, ಎನ್‌ಐಎ ಎಂಬ ತನಿಖಾ ಸಂಸ್ಥೆ ಸ್ವಯಂ ಪ್ರೇರಿತವಾಗಿ ಎಫ್‌ಐಆರ್ ದಾಖಲಿಸಿದೆ. ಇಷ್ಟಲ್ಲದೆ, ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಿದ್ದು, ಪಿಎಫ್‌ಐ ಮೇಲೆ ಅನಗತ್ಯ ಆರೋಪ ಮಾಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಸಿರಿಯಾ ಮತ್ತು ಇರಾಕ್‌ನಲ್ಲಿ ಸಕ್ರಿಯವಾಗಿರುವ ಐಎಸ್‌ಐಎಸ್‌ಗೆ ಪಿಎಫ್‌ಐ ಭಾರತ ಯುವ ಜನರನ್ನು ಕಳುಹಿಸಿಕೊಡುತ್ತಿದೆ ಎಂದು ಆರೋಪಿಸಿದ್ದಾರೆ. ಹಾಗೂ ಇತ್ತೀಚಿಗೆ ಕೇರಳದಲ್ಲಿ ಮತಾಂತರಗೊಂಡ ಅದಿಯಾ ಹಿಂದೆ ಪಿಎಫ್‌ಐ ಕೈವಾಡವಿದೆ ಎನ್ನಲಾಗುತ್ತಿದೆ. ಇದೆಲ್ಲ ಅಪ್ಪಟ ಸುಳ್ಳು ಎಂದು ಅವರು ಸ್ಪಷ್ಟಪಡಿಸಿದರು.

ಸಂಘಪರಿವಾರ ಹಾಗೂ ಹಿಂದುತ್ವವಾದಿಗಳು ಮುಸ್ಲಿಂ, ಕ್ರೈಸ್ತ ಹಾಗೂ ಅಲ್ಪಸಂಖ್ಯಾತರನ್ನು ಮತ್ತು ಕಮ್ಯುನಿಸ್ಟರನ್ನು ನಾಶ ಮಾಡಿದಾಗ ಮಾತ್ರ ಹಿಂದೂ ರಾಷ್ಟ ನಿರ್ಮಿಸಲು ಸಾಧ್ಯ ಎಂಬ ಪರಿಕಲ್ಪನೆ ರೂಪಿಸಿಕೊಂಡಿದೆ. ಅದರ ಭಾಗವಾಗಿ ಅನಗತ್ಯವಾಗಿ ಮುಸ್ಲಿಂ ಸಮುದಾಯದ ಹಿತಕ್ಕಾಗಿ ಕೆಲಸ ಮಾಡುತ್ತಿರುವ ಪಿಎಫ್‌ಐ ಮೇಲೆ ಆಧಾರ ರಹಿತ ಆರೋಪ ಮಾಡಲಾಗುತ್ತಿದೆ ಎಂದು ದೂರಿದರು.

ದೇಶದ ಜನರಿಗೆ ಸತ್ಯ ತಿಳಿಸಲು ಈ ಅಭಿಯಾನ ಹಮ್ಮಿಕೊಂಡಿದ್ದು, ದೇಶದ ಎಲ್ಲ ರಾಜ್ಯಗಳಲ್ಲಿ ಅಭಿಯಾನ ನಡೆಯಲಿದೆ. ಅದೇ ರೀತಿ ಕರ್ನಾಟಕದಲ್ಲಿ ಅಭಿಯಾನ ಹಮ್ಮಿಕೊಂಡಿದ್ದು, ಅ.15 ರಂದು ನಗರದಲ್ಲಿ ರಾಜ್ಯ ಮಟ್ಟದ ಸಮಾವೇಶ ನಡೆಯಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಯಾಸಿರ್ ಹಸನ್, ಮುಖಂಡರಾದ ಶಾಫಿ ಬೆಳ್ಳಾರೆ, ಇಲ್ಯಾಸ್ ಅಹ್ಮದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News