×
Ad

ಚುನಾವಣೆ ಬಳಿಕ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರು ಘೋಷಣೆ: ಪರಮೇಶ್ವರ್

Update: 2017-09-27 19:47 IST

ಬೆಂಗಳೂರು, ಸೆ. 27: ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆಗೆ ಮೊದಲೇ ಮುಂದಿನ ಮುಖ್ಯಮಂತ್ರಿ ಹೆಸರನ್ನು ಘೋಷಿಸುವ ಪದ್ಧತಿ ಇಲ್ಲ. ವಿಧಾನಸಭಾ ಚುನಾವಣೆಯ ಬಳಿಕವೇ ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂಬುವುದು ನಿರ್ಧಾರವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಬುಧವಾರ ನಗರಸ ಕೆಪಿಸಿಸಿ ಕಚೇರಿಯಲ್ಲಿ ವಿವಿಧ ಪಕ್ಷಗಳ ನಾಯಕರುಗಳನ್ನು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಮಾತನಾಡಿದ ಅವರು, ಚುನಾವಣಾ ಸಂದರ್ಭದಲ್ಲಿ ಹಲವರು ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಎಂದು ವ್ಯಾಖ್ಯಾನ ಮಾಡಿರಬಹುದು. ಆದರೆ, ಪಕ್ಷದಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್‌ ಗಾಂಧಿ ಹೇಳಿದರೆ ಮಾತ್ರ ಆ ಮಾತಿಗೆ ಮೌಲ್ಯವಿರುತ್ತದೆ. ಯಾರೋ ಯಾರೋ ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಂಡರೆ ಅದಕ್ಕೆಲ್ಲ ಬೆಲೆಯಿಲ್ಲ ಎಂದು ಹೇಳಿದರು.

ಮುಂಬರುವ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲೇ ಎದುರಿಸಲಾಗುವುದು. ಪಕ್ಷ ಬಹುಮತ ಪಡೆದ ನಂತರ ಶಾಸಕಾಂಗ ಪಕ್ಷದ ಸಭೆಯಲ್ಲಿ ವರಿಷ್ಠರು ಕಳುಹಿಸುವ ವೀಕ್ಷಕರ ಸಮ್ಮುಖದಲ್ಲಿ ಮುಂದಿನ ಮುಖ್ಯಮಂತ್ರಿ ಆಯ್ಕೆ ಮಾಡುವುದು ಕಾಂಗ್ರೆಸ್‌ನ ಪದ್ಧತಿ. ಈ ಪದ್ಧತಿಯಲ್ಲಿ ಯಾವುದೇ ಬದಲಾವಣೆ ಇಲ್ಲ, ಈ ಚುನಾವಣೆಯಲ್ಲಿ ಈ ಪದ್ಧತಿ ಮುಂದುವರಿಯಲಿದ್ದು, ಚುನಾವಣೆಗೆ ನಂತರವೇ ಮುಖ್ಯಮಂತ್ರಿ ಯಾರು ಎಂಬುದು ತೀರ್ಮಾನವಾಗುತ್ತದೆ ಎಂದರು.

ಈ ವೇಳೆ ದಕ್ಷಿಣ ಕನ್ನಡದ ಚಿತ್ರ ನಿರ್ಮಾಪಕ ಡಾ. ರಾಜಶೇಖರ ಕೋಟ್ಯಾನ್, ಮಾಜಿ ಶಾಸಕರಾದ ಪಿ.ಎಸ್. ಪ್ರಕಾಶ್, ಪುಟ್ಟ ಸಿದ್ದಶೆಟ್ಟಿ, ಚಿತ್ರ ನಿರ್ಮಾಪಕ ಶ್ರೀನಿವಾಸಮೂರ್ತಿ ಸೇರಿದಂತೆ ಹಲವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪೆಯಾದರು.

ಕಾರ್ಯಕ್ರಮದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್, ಸಚಿವ ಎಂ.ಆರ್. ಸೀತಾರಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಕಾಂಗ್ರೆಸ್ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಇತರರು ಇದ್ದರು.

ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ರಾಜ್ಯದಲ್ಲಿ ಜನರು ಕಾಂಗ್ರೆಸ್ ಪರ ಹೆಚ್ಚು ಒಲವು ತೋರುತ್ತಿದ್ದಾರೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ. ಸರಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಕಾಂಗ್ರೆಸ್ ಕಾರ್ಯಕ್ರಮ ಯಶಸ್ವಿಯಾಗಿದೆ.- ---- --ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News