ದಾಖಲೆಗಳನ್ನು ಪಡೆಯಲು ಅಧಿಕಾರಿಗಳ ನಿರ್ಲಕ್ಷ್ಯ: ಆರೋಪ
ಬೆಂಗಳೂರು, ಸೆ. 27: ತುಮಕೂರಿನಿಂದ ಹೊನ್ನಾವರದವರೆಗೆ ನಿರ್ಮಿಸಲು ಉದ್ದೇಶಿಸಿರುವ ರಸ್ತೆ ನಿರ್ಮಾಣಕ್ಕೆ ರೈತರಿಂದ ಭೂಮಿ ವಶಪಡಿಸಿಕೊಳ್ಳುತ್ತಿರುವ ಅಧಿಕಾರಿಗಳು ದಾಖಲೆಗಳನ್ನು ಪಡೆಯಲು ಬೇಜವಾಬ್ದಾರಿತನ ಪ್ರದರ್ಶಿಸುತ್ತಿದ್ದಾರೆ ಎಂದು ಶ್ರೀಗಂಧ ರಕ್ಷಣಾ ವೇದಿಕೆ ಆರೋಪಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ವಿಶುಕುಮಾರ್, ರಸ್ತೆ ನಿರ್ಮಾಣಕ್ಕಾಗಿ ರೈತರ ಭೂಮಿ ವಶಪಡಿಸಿಕೊಳ್ಳುತ್ತಿರುವ ವಿಶೇಷ ಭೂಸ್ವಾಧೀನ ಅಧಿಕಾರಿಗಳು ಬೆಂಗಳೂರಿನಲ್ಲಿರುವ ಕೇಂದ್ರ ಕಚೇರಿಯಲ್ಲಿ ಕುಳಿತುಕೊಂಡು ಪ್ರತೀ ತಾಲೂಕಿಗೆ ಒಂದು ದಿನ ನಿಗದಿಪಡಿಸಿ ರೈತರೇ ಬಂದು ದಾಖಲೆಗಳನ್ನು ಸಲ್ಲಿಸುವಂತೆ ಒತ್ತಡ ಹಾಕುತ್ತಿದ್ದಾರೆ ಎಂದು ದೂರಿದರು.
ಜಮೀನನ್ನು ಕಳೆದುಕೊಳ್ಳುವುದರ ಜೊತೆಗೆ ನೂರಾರು ರೈತರು ತಮ್ಮ ದಿನನಿತ್ಯದ ಕೆಲಸ ಬಿಟ್ಟು ಬೆಂಗಳೂರು ಮಹಾ ನಗರಕ್ಕೆ ಹಣ ಖರ್ಚು ಮಾಡಿಕೊಂಡು ಬಂದು ತಮ್ಮ ಅಹವಾಲು ನೀಡಿ ದಾಖಲೆಗಳನ್ನು ಸಲ್ಲಿಸಿ ಸ್ವೀಕೃತಿ ಪತ್ರ ಪಡೆಯಬೇಕು ಎಂದು ತಿಳಿಸಿದ್ದಾರೆ. ಅಂದರೆ, ಸರಕಾರದಿಂದ ಅಧಿಕಾರಿಗಳಿಗೆ ಸಂಬಳ ಹಾಗೂ ವಾಹನ ವ್ಯವಸ್ಥೆ ಅಗತ್ಯವಿದೆಯಾ ಎಂದು ಪ್ರಶ್ನಿಸಿದರು.
ಅಧಿಕಾರಿಗಳು ನೋಟಿಸ್ ನೀಡಿದ್ದಾರೆ ಎಂಬ ವಿಷಯ ತಿಳಿದು ರಾಯಚೂರಿಗೆ ಕೆಲಸಕ್ಕೆ ಹೋಗಿದ್ದ ಕೆಸರುಗೊಪ್ಪ ಗ್ರಾಮದ ಮಧುಸೂದನ ಎಂಬವರು ದಾಖಲೆಗಳನ್ನು ಸಲ್ಲಿಸಲು ರಾತ್ರೋ ರಾತ್ರಿ ವಾಪಸ್ ಬರುವ ವೇಳೆ ರಸ್ತೆಯಲ್ಲಿ ಆಕ್ಸಿಡೆಂಟ್ ಆಗಿದೆ. ಈ ವೇಳೆ ಮಧುಸೂದನಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರ ಜೊತೆಗಿದ್ದ ಸ್ನೇಹಿತ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇದರ ಹೊಣೆಯನ್ನು ಪ್ರಾಧಿಕಾರದ ಅಧಿಕಾರಿಗಳೇ ಹೊರಬೇಕು ಎಂದು ಆಗ್ರಹಿಸಿದರು.