ಗೋವಾ ಕನ್ನಡಿಗರ ಮನೆ ಧ್ವಂಸ ಖಂಡಿಸಿ ಪ್ರತಿಭಟನೆ
ಬೆಂಗಳೂರು, ಸೆ.27: ಗೋವಾದ ಬೈನಾ ಬೀಚ್‌ನಲ್ಲಿ ಕನ್ನಡಿಗರ ಮನೆಗಳನ್ನು ಧ್ವಂಸಗೊಳಿಸಿರುವುದನ್ನು ಖಂಡಿಸಿ ನಗರದ ಕನ್ನಡ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಮೈಸೂರು ಬ್ಯಾಂಕ್ ವೃತ್ತದಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಪ್ರತಿಕೃತಿ ದಹನ ಮಾಡುವ ಮೂಲಕ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕನ್ನಡ ಒಕ್ಕೂಟದ ಮುಖ್ಯಸ್ಥ ವಾಟಾಳ್ ನಾಗರಾಜ್ ಮಾತನಾಡಿ, ಬೈನಾ ಬೀಚ್‌ನಲ್ಲಿ ಎರಡು ದೇವಸ್ಥಾನಗಳು ಸೇರಿದಂತೆ ಹಲವು ಮನೆಗಳನ್ನು ತೆರವುಗೊಳಿಸಲಾಗಿದೆ. 2000ದಿಂದಲೂ ಬೈನಾ ಬೀಚ್‌ನಲ್ಲಿ ಕನ್ನಡಿಗರು ಮನೆ ನಿರ್ಮಿಸಿಕೊಂಡು ಸಣ್ಣಪುಟ್ಟ ವ್ಯಾಪಾರ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದರು. ಈಗ ಏಕಾಏಕಿ ಮನೆಗಳನ್ನು ಕೆಡವಿ ಕನ್ನಡಿಗರನ್ನು ಬೀದಿ ಪಾಲು ಮಾಡಿದ್ದಾರೆ ಎಂದು ಕ್ರೋಶ ವ್ಯಕ್ತಪಡಿಸಿದರು.
ಗೋವಾ ಕನ್ನಡಿಗರಿಗೆ ಅಲ್ಲಿನ ಸರಕಾರ ಕನಿಷ್ಠ ಪಯಾರ್ಯ ವ್ಯವಸ್ಥೆ ಮಾಡಿಲ್ಲ. ಈ ಕುರಿತು ಕೂಡಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೋವಾ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಕನ್ನಡಿಗರಿಗೆ ರಕ್ಷಣೆ ಒದಗಿಸಬೇಕು ಎಂದು ಸೂಚಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ, ಪ್ರವೀಣ್‌ಕುಮಾರ್‌ಶೆಟ್ಟಿ, ಕನ್ನಡ ಸೇನೆಯ ಕೆ.ಆರ್.ಕುಮಾರ್ ಸೇರಿದಂತೆ ಇತರರು ಇದ್ದರು.
ಜಯಕರ್ನಾಟಕ ಸಂಘಟನೆ ಪ್ರತಿಭಟನೆ: ಗೋವಾದ ಬೈನಾ ಬೀಚ್‌ನಲ್ಲಿ ಕನ್ನಡಿಗರ ಮೇಲೆ ನಿರಂತರ ದೌರ್ಜನ್ಯ ಹಾಗೂ ಮನೆಗಳ ತೆರವುಗೊಳಿಸಿರುವುದನ್ನು ಖಂಡಿಸಿ ಜಯಕರ್ನಾಟಕ ಸಂಘಟನೆ ನಗರದಲ್ಲಿ ಪ್ರತಿಭಟನೆ ನಡೆಸಿತು.
ಸಂಘಟನೆ ರಾಜ್ಯಾಧ್ಯಕ್ಷ ಎಚ್.ಎನ್.ದೀಪಕ್ ಮಾತನಾಡಿ, ಕನ್ನಡಿಗರನ್ನು ಬಳಸಿಕೊಂಡು ಬೀಚ್ ಅಭಿವೃದ್ಧಿಪಡಿಸಿಕೊಂಡ ಬಳಿಕ ಅವರನ್ನು ಬೀದಿ ಪಾಲು ಮಾಡಿರುವುದು ಸರಿಯಲ್ಲ. ಕೂಡಲೇ ಗೋವಾ ಸರಕಾರ ಅಲ್ಲಿನ ಕನ್ನಡಿಗರಿಗೆ ಪುನರ್ ವಸತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.