ನೋಟು ಅಮಾನ್ಯೀಕರಣದಿಂದ ಅತಿಯಾದ ನಿರುದ್ಯೋಗ ಸಮಸ್ಯೆ: ಪ್ರೊ.ಎಸ್.ಆರ್.ಕೇಶವ್
ಬೆಂಗಳೂರು, ಸೆ.27: ತರಾತುರಿಯಲ್ಲಿ ಕೇಂದ್ರ ಸರಕಾರ ಜಾರಿಗೆ ತಂದ ನೋಟು ಅಮಾನ್ಯೀಕರಣದಿಂದಾಗಿ ದೇಶದ ಜಿಡಿಪಿ ಗಣನೀಯ ಕುಸಿತ ಕಂಡಿದೆ. ಇದರಿಂದ ದೇಶದಲ್ಲಿ ನಿರುದ್ಯೋಗ ಮತ್ತು ಆರ್ಥಿಕ ಬಿಕ್ಕಟ್ಟು ಎದುರಾಗಿದೆ ಎಂದು ಅರ್ಥಶಾಸ್ತ್ರಜ್ಞ ಪ್ರೊ.ಎಸ್.ಆರ್.ಕೇಶವ ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ನಗರದ ಜ್ಞಾನಭಾರತಿ ಆವರಣದ ಡಾ.ಕೆ.ವೆಂಕಟಗಿರಿಗೌಡ ಸ್ಮಾರಕ ಸಭಾಂಗಣದಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಶನ್ ಆಯೋಜಿಸಿದ ನೋಟು ರದ್ದತಿ ಮತ್ತು ಅದರ ಪರಿಣಾಮ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನೋಟು ಅಮಾನ್ಯೀಕರಣದ ಬಳಿಕ ಜಿಡಿಪಿ ಗಣನೀಯ ಕುಸಿತ ಖಂಡಿದೆ. ಮುಂಚೆ 6.7 ರಷ್ಟಿದ್ದ ದೇಶದ ಜಿಡಿಪಿ ಬಳಿಕೆ 5.2 ರಷ್ಟಿಗೆ ಇಳಿದಿದೆ. ಇದರ ಪರಿಣಾಮವಾಗಿ ಕೃಷಿ, ಕೈಗಾರಿಕೋದ್ಯಮದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಇದರಿಂದ ನಿರುದ್ಯೋಗ ಸಮಸ್ಯೆಯು ಹೆಚ್ಚಾಗಿದೆ ಎಂದು ಹೆಳಿದರು.
ನೋಟು ಅಮಾನ್ಯೀಕರಣದ ಬಳಿಕ ಜನರು ಕ್ಯಾಸ್‌ಲೆಸ್ ವ್ಯವಹಾರಕ್ಕೆ ಅಂಟಿಕೊಂಡಿದ್ದರು. ಕ್ರಮೇಣ ನೋಟುಗಳ ಲಭ್ಯತೆ ಹೆಚ್ಚಾಗಿದ್ದರಿಂದ ಕ್ಯಾಸ್‌ಲೆಸ್ ವ್ಯವಹಾರದಲ್ಲಿ ಕುಸಿತ ಕಂಡಿದೆ. ನೋಟು ಅಮಾನ್ಯೀಕರಣದ ಬಳಿಕ ಬ್ಯಾಂಕುಗಳಲ್ಲಿ ಸಂಗ್ರಹವಾದ ಹಣದಲ್ಲಿ ಕಪ್ಪೆಷ್ಟು ಬಿಳುಪೆಸ್ಟು ಎಂದು ಇದುವರೆಗೂ ಬಹಿರಂಗಗೊಳಿಸಿಲ್ಲ ಎಂದು ಹೇಳಿದರು.
2 ಸಾವಿರದ ಹೊಸ ನೋಟು ಮತ್ತು 10 ರೂ. ನಾಣ್ಯವನ್ನು ವಾಪಸ್ ಪಡೆಯಲಾಗುವುದೆಂಬ ಗಾಳಿ ಸುದ್ದಿಯಿಂದ ಜನರಲ್ಲಿ ಈ ನಾಣ್ಯ ಮತ್ತು ನೋಟುಗಳಿಂದ ವ್ಯವಹರಿಸಲು ಹಿಂಜರಿಯುತ್ತಿದ್ದಾರೆ. ಈ ಕುರಿತು ಕೇಂದ್ರ ಸರಕಾರ ಕೂಡಲೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.
ಸರಕಾರ ಕೂಡಲೇ ಎಚ್ಚೆತ್ತುಕೊಂಡು ದೇಶದಲ್ಲಿ ಆರ್ಥಿಕ ಬಿಕ್ಕಟ್ಟನ್ನು ಶಮನಗೊಳಿಸಲು ಪ್ರಯತ್ನಿಸಬೇಕು. ಇಲ್ಲದಿದ್ದರೆ ಜಿಡಿಪಿ ಸಂಪೂರ್ಣವಾಗಿ ನೆಲಕಚ್ಚಲಿದೆ ಎಂದು ಎಚ್ಚರಿಸಿದ ಅವರು, ಕೃಷಿ ಮತ್ತು ಕೈಗಾರಿಕಾ ವಲಯವನ್ನು ಸದೃಢಗೊಳಿಸುವ ಮೂಲಕ ಉದ್ಯೋಗ ಸೃಷ್ಟಿಸಲು ಮೊದಲ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಪ್ರಾಧ್ಯಾಪಕ ಅಬ್ದುಲ್ ಅಝೀಝ್ ಮಾತನಾಡಿ, ನೋಟು ಅಮಾನ್ಯೀಕರಣದಿಂದ ದೇಶದ ಆರ್ಥಿಕ ಬೆಳವಣಿಗೆಯ ಮೇಲೆ ಹೊಡೆತ ಉಂಟಾಗಿದೆ. ಕಪ್ಪುಹಣದ ಸಕ್ರಮಕ್ಕಾಗಿ ಕಾಳಧನಿಕರು ಪರ್ಯಾಯ ಮಾರ್ಗಗಳನ್ನು ಕಂಡುಕೊಂಡಿದ್ದು ಸಂಪೂರ್ಣವಾಗಿ ಕಪ್ಪುಹಣ ಹೊರಬರುವ ಸಾಧ್ಯತೆ ಕಂಡು ಬರುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಜನಧನ್ ಖಾತೆಯಲ್ಲಿ 44 ಕೋಟಿ ಹಣ ಇದ್ದಿದ್ದು, ನೋಟು ಅಮಾನ್ಯೀಕರಣದ ಬಳಿಕ ಕೇವಲ 5 ದಿನಗಳಲ್ಲಿ 74 ಕೋಟಿಗೆ ಏರಿಕೆಯಾಗಿದೆ. ಜನಧನ್ ಖಾತೆಯಲ್ಲಿ ಕಪ್ಪುಹಣ ಜಮಾವಣೆ ಆಗಿರುವ ಕಪ್ಪು ಹಣ ಸರಕಾರದ ಗಮನಕ್ಕೆ ಬಂದಂತಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಎಫ್‌ಕೆಸಿಸಿಐನ ಮಾಜಿ ಅಧ್ಯಕ್ಷ ಪ್ರೊ.ಅಬ್ದುಲ್ ಅಜೀಜ್, ಐಸೆಕ್‌ನ ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಮಚಂದ್ರನ್ ಸೇರಿದಂತೆ ಇತರರು ಇದ್ದರು.