ಪಟಾಲಮ್ಮ ಉದ್ಯಾನವನಕ್ಕೆ ಚಾಲನೆ
ಬೆಂಗಳೂರು, ಸೆ. 27: ಔಷಧಿ ಗುಣಗಳನ್ನು ಹೊಂದಿರುವ ವಿವಿಧ ಗಿಡಮೂಲಿಕಾ ಸಸಿಗಳನ್ನು ಒಳಗೊಂಡಿರುವ ಜಯನಗರದಲ್ಲಿರುವ ‘ಪಟಾಲಮ್ಮ ಉದ್ಯಾನವನ’ವನ್ನು ಇಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಆರ್.ಅಶೋಕ್ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿದರು.
ಉದ್ಯಾನವನದಲ್ಲಿ ಔಷಧಿ ಗುಣಗಳಿರುವ 25 ಪ್ರಭೇದಗಳ ತಲಾ 10 ವಿಭಿನ್ನ ಗಿಡಮೂಲಿಕೆಗಳು ಇವೆ. ನೀರುಲಕ್ಕಿ, ಕರಿಲು ತ್ರಾಣಿ, ನಿಂಬೆಹುಲ್ಲು-ಮಜ್ಜಿಗೆ ಹುಲ್ಲು, ಕಮಾಜಿ ಹುಲ್ಲು, ದೊಡ್ಡ ಚಂದ್ರಿಕೆ, ಕಾಡು ಮಲ್ಲಿಗೆ, ಆತಿ ಸೊಪ್ಪು, ಲೋಳೆಸರ, ಮಂಗೊರಲಿ, ನೊಲಿ ಸೇರಿದಂತೆ ನಾನಾ ಬಗೆಯ ಗಿಡಮೂಲಿಕೆಗಳ ಸಸ್ಯ ಸಂಪತ್ತನ್ನು ಒಳಗೊಂಡಿದೆ.
ಒಟ್ಟು 55 ಲಕ್ಷ ರೂ.ಗಳಲ್ಲಿ ಅಭಿವೃದ್ಧಿ ಪಡಿಸಿರುವ ಪಟಾಲಮ್ಮ ಉದ್ಯಾನವನದಲ್ಲಿ ಯಾವುದೇ ಅಶ್ಲೀಲ ಚಟುವಟಿಕೆ ನಡೆಯದಂತೆ ನಾಲ್ಕು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜೊತೆಗೆ ರಾತ್ರಿ ವೇಳೆ ವಾಯು ವಿಹಾರಕ್ಕಾಗಿ ಅತ್ಯಾಧುನಿಕ ಎಲ್‌ಈಡಿ ದೀಪಗಳನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಮಕ್ಕಳ ಆಟದ ಸಲಕರಣೆಗಳನ್ನು ಒಳಗೊಂಡಿದೆ.
ಉದ್ಯಾನವನಕ್ಕೆ ಚಾಲನೆ ನೀಡಿದ ಬಳಿಕ ಆರ್.ಅಶೋಕ್ ಮಾತನಾಡಿ, ಗಿಡಮೂಲಿಕೆಗಳ ಪ್ರಯೋಜನದ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಈ ಉದ್ಯಾನವನ್ನು ಅಭಿವೃದ್ಧಿ ಪಡಿಸಲಾಗಿದೆ. ಇಂತಹ ಉದ್ಯಾನವನಗಳು ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣ ಆಗಬೇಕು ಎಂದು ಹೇಳಿದರು.
ಯಡಿಯೂರು ವಾರ್ಡ್‌ನ ಪಾಲಿಕೆ ಸದಸ್ಯೆ ಪೂರ್ಣಿಮಾ ರಮೇಶ್ ಮಾತನಾಡಿ, ಒಟ್ಟು 55 ಲಕ್ಷ ರೂ.ಗಳಲ್ಲಿ ಕೇವಲ ಮೂರು ತಿಂಗಳಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಪಟಾಲಮ್ಮ ಉದ್ಯಾನವನ ಔಷಧಿ ಗುಣಗಳಿರುವ ಗಿಡಮೂಲಿಕೆಗಳನ್ನು ಹೊಂದಿರುವ ನಗರದ ಮೂರನೇ ಉದ್ಯಾನವನ ಎಂದು ಹೇಳಿದರು.
ಉದ್ಘಾಟನೆ ವೇಳೆ ಬಿಜೆಪಿ ವಕ್ತಾರ, ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಎನ್.ಆರ್.ರಮೇಶ್, ದೊರೆಸ್ವಾಮಿ ಸೇರಿದಂತೆ ಇತರರು ಇದ್ದರು.