ಮೌಲಾನ ಸಗೀರ್‌ ಅಹ್ಮದ್ ನೂತನ ‘ಅಮೀರೆ ಶರೀಅತ್’

Update: 2017-09-27 17:12 GMT

ಬೆಂಗಳೂರು, ಸೆ.27: ದಾರೂಲ್ ಉಲೂಮ್ ಸಬೀಲುರ್ರಶಾದ್(ಅರೇಬಿಕ್ ಕಾಲೇಜು)ನ ಪ್ರಧಾನ ಅಧ್ಯಾಪಕ ಮೌಲಾನ ಸಗೀರ್‌ ಅಹ್ಮದ್‌ ಖಾನ್ ಅವರನ್ನು ರಾಜ್ಯದ ನೂತನ ಅಮೀರೆ ಶರೀಅತ್‌ಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಬುಧವಾರ ದಾರೂಲ್ ಉಲೂಮ್ ಸಬೀಲುರ್ರಶಾದ್‌ನಲ್ಲಿ ನಡೆದ ಸಭೆಯಲ್ಲಿ ಅಮೀರೆ ಶರೀಅತ್ ಹುದ್ದೆಗೆ ಮೌಲಾನ ಸಗೀರ್‌ ಅಹ್ಮದ್ ಹೆಸರನ್ನು ಮೌಲಾನ ಖಾಲಿದ್ ಬೇಗ್ ಪ್ರಸ್ತಾಪಿಸಿದರು, ರಾಜ್ಯಸಭೆ ಸದಸ್ಯ ಡಾ.ಕೆ.ರಹ್ಮಾನ್‌ ಖಾನ್ ಅನುಮೋದಿಸಿದರು.

ಜಮೀಅತೆ ಉಲೇಮಾ, ಜಮೀಅತೆ ಅಹ್ಲೆ ಹದೀಸ್, ಜುಲೂಸೆ ಮುಹಮ್ಮದೀಯಾ ಸಮಿತಿ, ಶಿಯಾ, ಮೆಹ್ದವಿ ಜಮಾತ್ ಸೇರಿದಂತೆ ಎಲ್ಲರೂ ನೂತನ ಅಮೀರೆ ಶರೀಅತ್‌ಗೆ ಆಯ್ಕೆಯಾಗಿರುವ ಮೌಲಾನ ಸಗೀರ್‌ ಅಹ್ಮದ್ ಅವರಿಗೆ ಸಂಪೂರ್ಣ ಸಹಕಾರ ನೀಡುವ ವಾಗ್ದಾನವನ್ನು ಮಾಡಿದರು.

ಈ ವೇಳೆ ಮಾತನಾಡಿದ ಮೌಲಾನ ಸಗೀರ್‌ ಅಹ್ಮದ್, ‘ಅಮೀರೆ ಶರೀಅತ್’ ಎನ್ನುವುದು ಯಾವುದೋ ಅಧಿಕಾರದ ಹುದ್ದೆಯಲ್ಲ. ಇದೊಂದು ಜವಾಬ್ದಾರಿ. ಇಸ್ಲಾಮೀನ ಶರೀಅತ್ ಅನ್ನು ರಕ್ಷಣೆ ಮಾಡುವ ಮಹತ್ವದ ಜವಾಬ್ದಾರಿ ಇದಾಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮುದಾಯದ ಒಗ್ಗಟ್ಟಿಗೆ, ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಮೌಲಾನ ಮುಹಮ್ಮದ್ ಅಶ್ರಫ್ ಅಲಿ ಯಾವ ರೀತಿಯಲ್ಲಿ ತಮ್ಮ ಜೀವಿತಾವಧಿಯಲ್ಲಿ ಈ ಹುದ್ದೆಯ ಘನತೆಯನ್ನು ಕಾಪಾಡಿಕೊಂಡು ಮುಂದುವರೆದಿದ್ದರೂ, ಅದೇ ರೀತಿಯಲ್ಲಿ ಕಾರ್ಯವಿಧಾನವನ್ನು ಮಾರ್ಗದರ್ಶನವನ್ನಾಗಿಟ್ಟುಕೊಂಡು ಮುಂದುವರೆಯುತ್ತೇನೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಸಿಟಿ ಮಾರುಕಟ್ಟೆಯ ಜಾಮಿಯಾ ಮಸೀದಿಯ ಮೌಲಾನ ಮಖ್ಸೂದ್‌ ಇಮ್ರಾನ್ ರಶಾದಿ, ಮುಫ್ತಿ ಇಫ್ತೆಖಾರ್‌ ಅಹ್ಮದ್‌ ಖಾಸ್ಮಿ, ಸಬೀಲುರ್ರಶಾದ್‌ನ ಪ್ರಾಂಶುಪಾಲ ಮೌಲಾನ ಅಹ್ಮದ್‌ ಮಾಝ್ ರಶಾದಿ, ಮೌಲಾನ ಮುಸ್ತಫಾ ರಿಫಾಯಿ, ಮೌಲಾನ ಹನೀಫ್ ಅಫ್ಸರ್ ಅಝೀಝಿ, ಮಿಲ್ಲಿ ಕೌನ್ಸಿಲ್ ರಾಜ್ಯ ಉಪಾಧ್ಯಕ್ಷ ಸುಲೈಮಾನ್‌ ಖಾನ್, ಪ್ರಧಾನ ಕಾರ್ಯದರ್ಶಿ ಸೈಯ್ಯದ್ ಶಾಹಿದ್ ಅಹ್ಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News