ಅ.4ರಂದು ನ್ಯಾಯಾಂಗದ ಸಮಸ್ಯೆ ಪರಿಹರಿಸಲು ಆಗ್ರಹಿಸಿ ಧರಣಿ
ಬೆಂಗಳೂರು, ಸೆ.27: ಹೈಕೋರ್ಟ್ ನ್ಯಾಯಮೂರ್ತಿ ಜಯಂತ್ ಪಟೇಲ್ ಅವರ ಏಕಾಏಕಿ ರಾಜೀನಾಮೆ ಸೇರಿ ಇನ್ನಿತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಬಗೆಹರಿಸಬೇಕೆಂದು ಒತ್ತಾಯಿಸಿ ಅ.4ರ ಬುಧವಾರ ಕರ್ನಾಟಕ ರಾಜ್ಯ ವಕೀಲದ ಸಂಘವು ಕಲಾಪವನ್ನು ಬಹಿಷ್ಕರಿಸಿ ಧರಣಿ ನಡೆಸಲು ಮುಂದಾಗಿದೆ.
ಕರ್ನಾಟಕ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳ ಕೊರತೆಯಿದ್ದು, ಈ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಬೇಕು. ಅಲ್ಲದೆ, ಜಯಂತ್ ಪಟೇಲ್ ಅವರ ರಾಜೀನಾಮೆಯಿಂದಾಗಿ ನ್ಯಾಯಮೂರ್ತಿಗಳ ಸಂಖ್ಯೆ ಬಹಳ ಕಡಿಮೆಯಾಗಿದೆ. ಹೀಗಾಗಿ, ಈ ಎಲ್ಲ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿ ಅ.4ರಂದು ಹೈಕೋರ್ಟ್ ಎದುರು ಧರಣಿ ನಡೆಸಲು ತೀರ್ಮಾನ ಕೈಗೊಂಡಿದ್ದಾರೆ.
ಸುಪ್ರೀಂ ಕೋರ್ಟ್‌ಗೆ ಪತ್ರ: ನ್ಯಾಯಮೂರ್ತಿ ಜಯಂತ್ ಪಟೇಲ್ ಅವರ ರಾಜೀನಾಮೆ ಪತ್ರವನ್ನು ಅಂಗೀಕರಿಸಬಾರದೆಂದು ಬೆಂಗಳೂರು ವಕೀಲರ ಸಮುದಾಯ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದಾರೆ. ಅಲ್ಲದೆ, ಜಯಂತ್ ಪಟೇಲ್ ಅವರು ಪ್ರಾಮಾಣಿಕರು ಹಾಗೂ ನ್ಯಾಯಾಪರರು. ಹೀಗಾಗಿ, ಅವರ ರಾಜೀನಾಮೆಯನ್ನು ಅಂಗೀಕರಿಸಬಾರದೆಂದು ಪತ್ರ ಬರೆದಿದ್ದಾರೆ.