ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಓಪನ್ ಸ್ಟ್ರೀಟ್ ಫೆಸ್ಟ್ ಗೆ ಡಿಸಿ ಚಾಲನೆ

Update: 2017-09-27 18:04 GMT

ಮೈಸೂರು,ಸೆ.27: ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಇದೇ ಮೊಟ್ಟಮೊದಲ ಬಾರಿಗೆ ಮೈಸೂರು ದೇವರಾಜ ಅರಸ್ ರಸ್ತೆಯಲ್ಲಿ ಆಯೋಜಿಸಿದ್ದ ಓಪನ್ ಸ್ಟ್ರೀಟ್ ಫೆಸ್ಟ್ ಗೆ ಉತ್ತಮ ಪ್ರತಿಕ್ರಿಯೆ ದೊರೆತು ಭಾರೀ ಜಸ್ತೋಮವೇ ಸೇರುವುದರ ಮೂಲಕ ಯಶಸ್ವಿಯಾಯಿತು.

ಸಾಂಸ್ಕೃತಿಕ ನಗರಿ ಮೈಸೂರಿಗೆ ನಾಡಹಬ್ಬ ದಸರಾ ಮಹೋತ್ಸವ ಸಂದರ್ಭದಲ್ಲಿ ವಿದೇಶಗಳಲ್ಲಿ ಅತ್ಯಂತ ಜನಪ್ರಿಯ ಆಚರಣೆಯಾದ ಕಾರ್ನಿವಲ್ ಮಾದರಿಯಲ್ಲಿಯೇ ಪ್ರವಾಸಿಗರನ್ನು ಸೆಳೆಯುವುದರೊಂದಿಗೆ ಜಿಲ್ಲೆಯ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಬುಧವಾರ ಆಯೋಜಿಸಿದ್ದ ಓಪನ್ ಸ್ಟ್ರೀಟ್ ಪೆಸ್ಟಿವಲ್ ಗೆ ಅಪಾರ ಸಂಖ್ಯೆಯ ಸಾರ್ವಜನಿಕರು ಪಾಲ್ಗೊಂಡು ಗಮನ ಸೆಳೆದರು.

ಬೆಳಗ್ಗೆ 7 ರಿಂದ ರಾತ್ರಿ 11ರವರೆಗೆ ಕೆ.ಆರ್.ವೃತ್ತದಿಂದ ಜೆಎಲ್ ಬಿ ರಸ್ತೆ ಜಂಕ್ಷನ್ ರವರೆಗೆ ದೇವರಾಜ ಅರಸ್ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸುವ ಮೂಲಕ ಇಡೀ ರಸ್ತೆಯನ್ನು ಓಪನ್ ಫೆಸ್ಟಿವಲ್ ಗೆ ಸನ್ನದ್ದುಗೊಳಿಸಲಾಗಿತ್ತು. ಇದರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಫೆಸ್ಟಿವಲ್ ನಲ್ಲಿ ಅಳವಡಿಸುವ ಮೂಲಕ ಮೆರಗನ್ನು ನೀಡಲಾಗಿತ್ತು. ಇದೇ ಮೊದಲ ಬಾರಿಗೆ ಆಚರಿಸಲಾದ ಈ ಫೆಸ್ಟಿವಲ್ ಗೆ ಮೈಸೂರು ನಗರ ಸೇರಿದಂತೆ ಬೇರೆ ಬೇರೆ ರಾಜ್ಯ ಮತ್ತು ವಿದೇಶಗಳಿಂದಲೂ ಆಗಮಿಸಿದ ಪ್ರವಾಸಿಗರು, ತಮ್ಮ ಕುಟುಂಬದ ಸದಸ್ಯರೊಂದಿಗೆ ಒಡಗೂಡಿ ಡಿ.ದೇವರಾಜ ಅರಸು ರಸ್ತೆಯಲ್ಲಿ ತೆರೆಯಲಾಗಿದ್ದ 67 ಮಳಿಗೆಗಳಲ್ಲಿ ವಿವಿಧ ವಸ್ತುಗಳನ್ನು ಖರೀದಿಸಿ ಸಂಭ್ರಮಿಸಿದರು.

ದೇವರಾಜ ಅರಸ್ ರಸ್ತೆಯು ಮಿನಿ ವಸ್ತು ಪ್ರದರ್ಶನವಾಗಿ ಮಾರ್ಪಟ್ಟಿದ್ದು ವಿವಿಧ ಬಗೆಯ ಬಟ್ಟೆಗಳು, ಅಲಂಕಾರಿ ವಸ್ತುಗಳು, ತರೇವಾರಿ ತಿಂಡಿ ತಿನಿಸುಗಳು, ಚಾಟ್ಸ್ ಫೆಸ್ಟಿ ನಲ್ಲಿ ಪ್ರವಾಸಿಗರನ್ನು ಕೈ ಬೀಸಿ ಕರೆದವು. 

ರಾತ್ರಿಯಿಡಿ ಸುರಿಯುತ್ತಿದ್ದ ಮಳೆಯಿಂದ ಸ್ವಲ್ಪ ತಡವಾಗಿ 10 ಗಂಟೆಗೆ ಓಪನ್ ಸ್ಟ್ರೀಟ್ ಫೆಸ್ಟಿವಲ್ ಆರಂಭವಾಯಿತು. ಜಿಲ್ಲಾಧಿಕಾರಿ ಡಿ.ರಂದೀಪ್, ಮೇಯರ್ ಎಂ.ಜೆ.ರವಿಕುಮಾರ್ ಬಲೂನ್‍ಗಳನ್ನು ಹಾರಿಬಿಡುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಜನಾರ್ಧನ್ ಸೇರಿದಂತೆ ಹಲವು ಅಧಿಕಾರಿಗಳು ಜೊತೆಯಲ್ಲಿದ್ದರು.

ಕಾರ್ಯಕ್ರಮದಲ್ಲಿ ದೇಶ ವಿದೇಶದಿಂದ ಆಗಮಿಸಿದ್ದ ಪ್ರವಾಸಿಗರು, ನೃತ್ಯ, ಸಂಗೀತ, ಸಾಹಸ ಕ್ರೀಡೆಗಳು, ಚಲನಚಿತ್ರ ಗೀತೆಗಳನ್ನು ಹಾಡುವುದರ ಮೂಲಕ ನೆರೆದಿದ್ದವರನ್ನು ರಂಜಿಸಿದರು. ವಿವಿಧ ಕಲಾಪ್ರಕಾರಗಳು ಅನಾವರಣಗೊಂಡದನ್ನು ಕಂಡ ಯವಕರು ಯುವತಿಯರು ಕೆಲವು ಜನಪ್ರಿಯ ಹಾಡುಗಳಿಗೆ ಹೆಜ್ಜೆಹಾಕಿ ಸಂಭ್ರಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News