​ಇಂಡಿಯಾ ಬ್ಲೂ ವಿರುದ್ಧ ರೆಡ್‌ಗೆ ಇನಿಂಗ್ಸ್ ಮುನ್ನಡೆ

Update: 2017-09-27 18:32 GMT

ಲಕ್ನೋ, ಸೆ.27: ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಯುವ ಆಟಗಾರರು ಅತ್ಯುತ್ತಮ ಪ್ರದರ್ಶನ ಮುಂದುವರಿಸಿದ್ದಾರೆ. 21ರ ಹರೆಯದ ಎಡಗೈ ಸ್ಪಿನ್ನರ್ ವಿಜಯ್ ಗೊಹಿಲ್ ಹಾಗೂ 17ರ ಹರೆಯದ ಆಲ್‌ರೌಂಡರ್ ವಾಶಿಂಗ್ಟನ್ ಸುಂದರ್ ತಲಾ 5 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಇಂಡಿಯಾ ಬ್ಲೂ ತಂಡವನ್ನು ಮೊದಲ ಇನಿಂಗ್ಸ್ ನಲ್ಲಿ 299 ರನ್‌ಗೆ ಆಲೌಟ್ ಮಾಡಿದ್ದಾರೆ.

ಮೊದಲ ಇನಿಂಗ್ಸ್‌ನಲ್ಲಿ 184 ರನ್ ಮುನ್ನಡೆ ಪಡೆದಿರುವ ರೆಡ್ ತಂಡ ಎರಡನೆ ಇನಿಂಗ್ಸ್ ನಲ್ಲಿ 51 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 145 ರನ್ ಗಳಿಸಿದೆ. ಇಂದ್ರಜಿತ್ ಅರ್ಧಶತಕ(54) ಗಳಿಸಿ ಔಟಾಗಿದ್ದಾರೆ. ಮೊದಲ ಇನಿಂಗ್ಸ್‌ನ ಶತಕವೀರ ಪೃಥ್ವಿ ಶಾ 31 ರನ್ ಗಳಿಸಿ ರನೌಟಾಗಿದ್ದಾರೆ. ಮುಂಬೈನ 17ರ ಹರೆಯದ ಪೃಥ್ವಿ ಶಾ ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಶತಕ ಸಿಡಿಸಿದ ಕಿರಿಯ ಆಟಗಾರ ಎನಿಸಿಕೊಂಡಿದ್ದರು. ಶಾ, ದಿನೇಶ್ ಕಾರ್ತಿಕ್ ಶತಕ, ಸುಂದರ್ ಅರ್ಧಶತಕದ(88, 118 ಎಸೆತ) ನೆರವಿನಿಂದ ಇಂಡಿಯಾ ರೆಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ 483 ರನ್ ಗಳಿಸಿತ್ತು.

 3ನೆ ದಿನವಾದ ಬುಧವಾರ 5 ವಿಕೆಟ್‌ಗಳ ನಷ್ಟಕ್ಕೆ 181 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಬ್ಲೂ ತಂಡದ ಪರ ಆರಂಭಿಕ ಆಟಗಾರ ಅಭಿಮನ್ಯು ಈಶ್ವರನ್(127, 171 ಎಸೆತ, 15 ಬೌಂಡರಿ) ಹಾಗೂ ಜೈದೇವ್ ಉನದ್ಕಟ್(83 ರನ್, 90 ಎಸೆತ, 7 ಬೌಂಡರಿ, 4 ಸಿಕ್ಸರ್) 6ನೆ ವಿಕೆಟ್‌ಗೆ 140 ರನ್ ಜೊತೆಯಾಟ ನಡೆಸಿ ತಂಡಕ್ಕೆ ಆಸರೆಯಾದರು. ಈಶ್ವರನ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 4ನೆ ಶತಕ ಸಿಡಿಸಿದರು. ಉನದ್ಕಟ್ ವೇಗದ ಬ್ಯಾಟಿಂಗ್‌ನಿಂದ ಗಮನ ಸೆಳೆದರು.

ಆದರೆ ಈ ಇಬ್ಬರನ್ನು ಹೊರತುಪಡಿಸಿ ಬೇರ್ಯಾವ ಬ್ಯಾಟ್ಸ್‌ಮನ್‌ಗಳು ಗೊಹಿಲ್(5-121) ಹಾಗೂ ಸುಂದರ್(5-94) ಸ್ಪಿನ್ ದಾಳಿಯನ್ನು ಎದುರಿಸಲು ಸಾಧ್ಯವಾಗದೇ ಪೆವಿಲಿಯನ್‌ಗೆ ಪರೇಡ್ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News