ಅಫ್ಘಾನಿಸ್ತಾನ ಕ್ರಿಕೆಟ್ ತಂಡಕ್ಕೆ ಕೈಫ್ ಕೋಚ್ ಸಾಧ್ಯತೆ

Update: 2017-09-27 18:44 GMT

ಮುಂಬೈ, ಸೆ.27: ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಶೀಘ್ರವೇ ಭಾರತದ ಇನ್ನೋರ್ವ ಕ್ರಿಕೆಟಿಗನನ್ನು ತನ್ನ ಕೋಚ್ ಆಗಿ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಭಾರತದ ಬ್ಯಾಟ್ಸ್‌ಮನ್ ಮುಹಮ್ಮದ್ ಕೈಫ್‌ಗೆ ಕೋಚ್ ಆಫರ್ ನೀಡಿದೆ ಎನ್ನಲಾಗಿದೆ. ಒಂದು ತಿಂಗಳ ಹಿಂದೆ ಭಾರತದ ಮಾಜಿ ಆರಂಭಿಕ ಆಟಗಾರ ಲಾಲ್‌ಚಂದ್ ರಾಜ್‌ಪೂತ್‌ರೊಂದಿಗಿನ ಒಪ್ಪಂದವನ್ನು ಮುಂದುವರಿಸದಿರಲು ನಿರ್ಧರಿಸಿದ್ದ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು(ಎಸಿಬಿ) ಇತ್ತೀಚೆಗೆ ಕೈಫ್‌ರನ್ನು ಸಂಪರ್ಕಿಸಿ ಕೋಚ್ ಹುದ್ದೆಯ ಆಫರ್ ನೀಡಿದೆ ಎನ್ನಲಾ ಗಿದೆ. ಭಾರತದ ಪರ 13 ಟೆಸ್ಟ್ ಹಾಗೂ 125 ಏಕದಿನ ಪಂದ್ಯಗಳನ್ನು ಆಡಿರುವ ಕೈಫ್ ಇತ್ತೀಚೆಗಷ್ಟೇ ಚಂಡಿಗಡ ರಣಜಿ ತಂಡದ ಕೋಚ್ ಹಾಗೂ ಸಲಹೆಗಾರನಾಗಿ ನೇಮಕಗೊಂಡಿದ್ದರು. ಕೈಫ್ ಕಳೆದ ಆವೃತ್ತಿಯ ರಣಜಿಯಲ್ಲಿ ಚಂಡಿಗಡದ ತಂಡದ ನಾಯಕನಾಗಿದ್ದರು. 36ರ ಹರೆಯದ ಕೈಫ್ ಕಳೆದ ವಾರ ಎಸಿಬಿಯ ಉನ್ನತಾಧಿಕಾರಿಗಳನ್ನು ಭೇಟಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೈಫ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಅಫ್ಘಾನಿಸ್ತಾನದ ಕೋಚ್ ಹುದ್ದೆಯ ಕೊಡುಗೆಯನ್ನು ಸ್ವೀಕರಿಸಲಿದ್ದಾರೆಯೇ ಎಂಬ ಕುತೂಹಲ ಎಲ್ಲರಲ್ಲಿದೆ. ಹಿರಿಯ ಕ್ರಿಕೆಟಿಗ ಕೈಫ್ 2002ರಲ್ಲಿ ಇಂಗ್ಲೆಂಡ್‌ನ ವಿರುದ್ಧದ ನಾಟ್‌ವೆಸ್ಟ್ ಸರಣಿಯ ಫೈನಲ್‌ನಲ್ಲಿ ಅಜೇಯ 87 ರನ್ ಗಳಿಸಿ ವೀರೋಚಿತ ಪ್ರದರ್ಶನ ನೀಡಿ ಭಾರತಕ್ಕೆ ಗೆಲುವು ತಂದಿದ್ದರು. ಅತ್ಯುತ್ತಮ ಕ್ಷೇತ್ರರಕ್ಷಕರಾಗಿರುವ ಕೈಫ್ ಕಳೆದ ವರ್ಷದ ಐಪಿಎಲ್‌ನಲ್ಲಿ ಗುಜರಾತ್ ಲಯನ್ಸ್ ತಂಡದ ಫೀಲ್ಡಿಂಗ್ ಕೋಚ್ ಆಗಿ ಆಯ್ಕೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News