ನಕಲಿ ಉತ್ಪನ್ನಗಳನ್ನು ಗುರುತಿಸುವುದು ಹೇಗೆ?

Update: 2017-09-28 11:07 GMT

ಇಂದು ಜಗತ್ತಿನಲ್ಲಿ ನಕಲಿ ಉತ್ಪನ್ನಗಳ ಹಾವಳಿ ಹೆಚ್ಚುತ್ತಲೇ ಇದೆ. ನಕಲಿ ವಸ್ತುಗಳನ್ನು ತಯಾರಿಸುವ ಖದೀಮರು ಎಷ್ಟೊಂದು ಪಳಗಿರುತ್ತಾರೆಂದರೆ ಅಸಲಿ ಯಾವುದು,ನಕಲಿ ಯಾವುದು ಎನ್ನುವುದು ಥಟ್ಟನೆ ಗೊತ್ತೇ ಆಗುವುದಿಲ್ಲ. ಹೀಗಾಗಿ ನಮ್ಮ ಎಚ್ಚರಿಕೆಯಲ್ಲಿ ನಾವಿದ್ದರೆ ನಕಲಿ ಉತ್ಪನ್ನಗಳನ್ನು ಖರೀದಿಸಿ ನಂತರ ಪಶ್ಚಾತ್ತಾಪ ಪಡುವುದರಿಂದ ಪಾರಾಗಬಹುದು.

ಅತಿಯಾದ ಡಿಸ್ಕೌಂಟ್


ಉತ್ಪನ್ನವೊಂದನ್ನು ನೀವು ಖರೀದಿಸಲು ಬಯಸಿದಾಗ ಮಾರಾಟಗಾರನು ನೀವು ನಂಬಲೂ ಸಾಧ್ಯವಿಲ್ಲದ ಕಡಿಮೆ ಬೆಲೆಯನ್ನು ಹೇಳಿದರೆ ಅದು ಶೇ.100ರಷ್ಟು ನಕಲಿ ಯಾಗಿರುವ ಸಾಧ್ಯತೆಯೇ ಹೆಚ್ಚು. ಬ್ರಾಂಡೆಡ್ ವಸ್ತುಗಳ ಮೇಲೆ ಸಾಮಾನ್ಯವಾಗಿ ಎಷ್ಟು ಗರಿಷ್ಠ ರಿಯಾಯಿತಿ ದೊರೆಯುತ್ತದೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಿ. ರಿಯಾಯಿತಿಯ ಕೊಡುಗೆಯು ಗರಿಷ್ಠ ಮಾರಾಟ ಬೆಲೆ(ಎಂಆರ್‌ಪಿ)ಯ ಶೇ.70-80 ರಷ್ಟು ಅವಾಸ್ತವ ಪ್ರಮಾಣದಲ್ಲಿದ್ದರೆ ವ್ಯಾಪಾರಿ ನಕಲಿ ಉತ್ಪನ್ನವನ್ನು ನಿಮ್ಮ ತಲೆಗೆ ಕಟ್ಟಲು ಯತ್ನಿಸುತ್ತಿದ್ದಾನೆ ಎಂದೇ ಅರ್ಥ!

ಕಳಪೆ ಪ್ಯಾಕೇಜಿಂಗ್


ಬ್ರಾಂಡೆಡ್ ಸರಕುಗಳನ್ನು ಯಾವುದೇ ಲೋಪವಿಲ್ಲದೆ ಪ್ಯಾಕ್ ಮಾಡಲು ಹೆಚ್ಚು ಹಣವನ್ನು ವ್ಯಯಿಸಲಾಗುತ್ತದೆ. ಇದರ ಜೊತೆಗೆ ಪ್ಯಾಕೇಜಿಂಗ್‌ನಲ್ಲಿ ಬಹಳ ಎಚ್ಚರಿಕೆ ಮತ್ತು ಕಾಳಜಿಯೂ ಇರುತ್ತದೆ. ಉತ್ಪನ್ನವನ್ನು ಕಳಪೆಯಾಗಿ ಪ್ಯಾಕ್ ಮಾಡಿದ್ದರೆ, ಅದು ಪೆಟ್ಟಿಗೆಯಲ್ಲಿ ಸರಿಯಾಗಿ ಹಿಡಿಸದಿದ್ದರೆ, ಅಗ್ಗದ ಪ್ಲಾಸ್ಟಿಕ್ ಮತ್ತು ಆಗಲೇ ಮುದಿಯಾಗಿ ರುವ ಕಾರ್ಡ್‌ಬೋರ್ಡ್‌ನಂತಹ ಕಳಪೆ ವಸ್ತುಗಳ ಬಳಕೆಯಾಗಿದ್ದರೆ ಅದು ನಕಲಿ ಉತ್ಪನ್ನ ಎನ್ನುವುದರ ಸಂಕೇತವಾಗಿದೆ. ಇದೇ ರೀತಿ ಉತ್ಪನ್ನವೊಂದಕ್ಕೆ ಪ್ಯಾಕೇಜ್ ಇಲ್ಲದಿದ್ದರೂ ಅದು ನಕಲಿ ಎನ್ನುವುದಕ್ಕೆ ಬೇರೆ ಸಾಕ್ಷ ಬೇಡ.

ವ್ಯಾಕರಣ ಮತ್ತು ಸ್ಪೆಲ್ಲಿಂಗ್ ತಪ್ಪುಗಳು

ತಪ್ಪು ಸ್ಪೆಲ್ಲಿಂಗ್(ಒಂದು ಹೆಚ್ಚುವರಿ ಅಕ್ಷರ ಅಥವಾ ಒಂದು ಅಕ್ಷರ ನಾಪತ್ತೆ) ಮತ್ತು ವ್ಯಾಕರಣ ದೋಷದ ಮೂಲಕ ನಕಲಿ ಉತ್ಪನ್ನಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಉದಾಹರಣೆಗೆ Hewlett Packard ಅನ್ನುHewlet ಎಂದು ಅಥವಾ Louis Vuitton ಅನ್ನುVitton ಎಂದು ಬರೆಯಲಾಗಿರುತ್ತದೆ. ಖರೀದಿಯ ಬಗ್ಗೆ ಎಚ್ಚರಿಕೆ ವಹಿಸದ ಗ್ರಾಹಕರನ್ನು ಸೆಳೆಯಲು ಈ ಸ್ಪೆಲ್ಲಿಂಗ್ ತಪ್ಪುಗಳು ಉದ್ದೇಶ ಪೂರ್ವಕವಾಗಿದ್ದರೆ, ಉತ್ಪನ್ನದ ಕುರಿತು ಮಾಹಿತಿ ಮತ್ತು ಸೂಚನೆಗಳ ಕೈಪಿಡಿಯಲ್ಲಿನ ವ್ಯಾಕರಣ ದೋಷಗಳು ವಂಚಕ ಉತ್ಪಾದಕನಿಗೆ ಸರಿಯಾದ ವಿದ್ಯೆ ಇಲ್ಲ ಎನ್ನುವುದನ್ನು ಸೂಚಿಸುತ್ತವೆ. ಹೀಗಾಗಿ ಇವುಗಳನ್ನು ಸೂಕ್ಷ್ಮವಾಗಿ ಓದಿ ನೋಡಿ.

ನಕಲಿ ವೆಬ್‌ಸೈಟ್‌ಗಳು

ನೀವು ಆನ್‌ಲೈನ್‌ನಲ್ಲಿ ಖರೀದಿಯನ್ನು ಮಾಡುತ್ತೀರಾದರೆ ವೆಬ್ ಸೈಟ್‌ಗಳ ಅಧಿಕೃತತೆಯನ್ನು ಪರೀಕ್ಷಿಸುವುದು ನಕಲಿ ಉತ್ಪನ್ನಗಳನ್ನು ಖರೀದಿಸಿ ಮೋಸ ಹೋಗುವು ದನ್ನು ತಪ್ಪಿಸಿಕೊಳ್ಳುವ ಸುಲಭದ ಮಾರ್ಗವಾಗಿದೆ. ವೆಬ್‌ಸೈಟ್ ನಕಲಿಯಾದರೆ ಅದು ಮಾರಾಟ ಮಾಡುವ ಉತ್ಪನ್ನಗಳೂ ನಕಲಿಯಾಗಿರುತ್ತವೆ. ಯುಆರ್‌ಎಲ್‌ನ್ನು ಖಚಿತ ಪಡಿಸಿಕೊಳ್ಳಿ ಮತ್ತು 'https' (httpಯ ಬದಲು)ನಿಂದ ಆರಂಭಗೊಂಡಿದೆಯೇ ಹಾಗೂ ಬೀಗದ ಚಿಹ್ನೆ ಇದೆಯೇ ಎನ್ನುವುದನ್ನು ಪರಿಶೀಲಿಸಿ. ಹಾಗಿದ್ದರೆ ಅದು ಸುರಕ್ಷಿತ ವೆಬ್‌ಸೈಟ್ ಆಗಿರುತ್ತದೆ.www.scamadviser.comನಲ್ಲಿ ವೆಬ್‌ಸೈಟ್ ವಿಳಾಸವನ್ನು ಪೇಸ್ಟ್ ಮಾಡುವ ಮೂಲಕವೂ ಅದರ ಅಧಿಕೃತತೆಯನ್ನು ಖಚಿತಪಡಿಸಿ ಕೊಳ್ಳಬಹುದು. ಅದು ನಂಬಲರ್ಹ ವೆಬ್‌ಸೈಟ್ ಹೌದೇ ಎನ್ನುವುದನ್ನು ನೀವು ಇಲ್ಲಿ ಕಂಡುಕೊಳ್ಳಬಹುದು.

ಉತ್ಪನ್ನಗಳ ಕಳಪೆ ಗುಣಮಟ್ಟ


ನಕಲಿ ಉತ್ಪನ್ನಗಳಲ್ಲಿ ಮೂಲ ಬಿಡಿಭಾಗಗಳ ಬದಲು ಅಗ್ಗದ ಬಿಡಿಭಾಗಗಳನ್ನು ಬಳಸ ಲಾಗುವುದರಿಂದ ಅವುಗಳ ಗುಣಮಟ್ಟ ಶಂಕಾಸ್ಪದವಾಗಿರುತ್ತದೆ. ಅವುಗಳ ಆಕಾರವೂ ಸ್ವಲ್ಪ ಭಿನ್ನವಾಗಿರಬಹುದು. ನೀವು ಆಯ್ಕೆ ಮಾಡಿದ ವಸ್ತುವಿಗೆ ಹೆಚ್ಚಿನ ಫಿನಿಷಿಂಗ್ ಇಲ್ಲದೆ ಒರಟಾಗಿದ್ದರೆ, ಬಳಸಿದ ವಸ್ತುವನ್ನು ಕೈಯಲ್ಲಿ ಹಿಡಿದಂತೆ ಭಾಸವಾಗುತ್ತಿದ್ದರೆ ಅದನ್ನು ಖರೀದಿಸುವ ಗೋಜಿಗೆ ಹೋಗಬೇಡಿ.

ವಿವರಗಳ ಕೊರತೆ


 ಅಸಲಿ ಉತ್ಪನ್ನಗಳ ಪ್ಯಾಕೇಜ್‌ನ ಮೇಲೆ ಕೋಡ್, ಸೀರಿಯಲ್ ಅಥವಾ ಮಾಡೆಲ್ ನಂ.,ಟ್ರೇಡ್ ಮಾರ್ಕ್, ಮತ್ತು ಪೇಟೆಂಟ್ ಮಾಹಿತಿಗಳಂತಹ ಹಲವಾರು ವಿವರಗಳು ಮುದ್ರಣಗೊಂಡಿರುತ್ತವೆ. ಸಾಮಾನ್ಯವಾಗಿ ನಕಲಿ ಉತ್ಪನ್ನಗಳಲ್ಲಿ ಈ ವಿವರಗಳನ್ನು ನಕಲು ಮಾಡುವಾಗ ಕೆಲವು ಕೈಬಿಟ್ಟು ಹೋಗಿರುತ್ತವೆ. ವಿಶೇಷವಾಗಿ ಇಲೆಕ್ಟ್ರಾನಿಕ್ ವಸ್ತುಗಳು ಮತ್ತು ಉಪಕರಣಗಳ ವಿಷಯದಲ್ಲಿ ನೀವು ನಂಬರ್‌ಗಳನ್ನು ಆನ್‌ಲೈನ್‌ನಲ್ಲಿ ಅಸಲಿ ಉತ್ಪನ್ನಗಳ ನಂಬರ್‌ಗಳೊಂದಿಗೆ ಹೋಲಿಸಿ ನೋಡಬಹುದಾಗಿದೆ.

ದೋಷಯುಕ್ತ ಲೋಗೊ, ಫಾಂಟ್‌ಗಳು


ಗಮನವಿಟ್ಟು ನೋಡಿದರೆ ಸ್ಪೆಲ್ಲಿಂಗ್‌ಗಳಂತೆ ನಕಲಿ ಲೋಗೊ, ಬ್ರಾಂಡ್ ಹೆಸರು ಮತ್ತು ಟ್ರೇಡ್‌ಮಾರ್ಕ್‌ಗಳನ್ನೂ ಸುಲಭವಾಗಿ ಪತ್ತೆ ಹಚ್ಚಬಹುದು. ಅಸಲಿ ಲೋಗೊ ನಿಮಗೆ ಚೆನ್ನಾಗಿ ಗೊತ್ತಿದ್ದರೆ ಪುಟ್ಟ ವ್ಯತ್ಯಾಸವೂ ನಿಮಗೆ ತಿಳಿದುಬಿಡುತ್ತದೆ. ಇದು ಕಷ್ಟ ಎಂದು ನಿಮಗನ್ನಿಸಿದರೆ ನೀವು ನಕಲಿ ಎಂದು ಭಾವಿಸಿರುವ ಉತ್ಪನ್ನದ ಚಿತ್ರವನ್ನು ತೆಗೆದು ಆನ್‌ಲೈನ್‌ನಲ್ಲಿ ಅದನ್ನು ಅಸಲಿ ಉತ್ಪನ್ನದ ಜೊತೆಗೆ ಹೋಲಿಸಿ ನೋಡಿ. ನಕಲಿ ಉತ್ಪನ್ನಗಳಲ್ಲಿ ಫಾಂಟ್‌ಗಳೂ ಸ್ವಲ್ಪ ಭಿನ್ನವಾಗಿರಬಹುದು ಅಥವಾ ತಪ್ಪು ಗಾತ್ರದ್ದಾಗಿರ ಬಹುದು. ಕಲರಿಂಗ್ ಕೋಡ್‌ನಲ್ಲಿಯೂ ವ್ಯತ್ಯಾಸವಿರಬಹುದು.

ವಿವರಗಳ ಅಲಭ್ಯತೆ

ತಯಾರಕರ ವಿಳಾಸ, ಇ-ಮೇಲ್, ದೂರವಾಣಿ ಸಂಖ್ಯೆ ಅಥವಾ ಸಂಪರ್ಕ ವಿವರಗಳು ಉತ್ಪನ್ನದ ಅಥವಾ ಪ್ಯಾಕೇಜಿನ ಮೇಲೆ ಇಲ್ಲದಿದ್ದರೆ ಅದರ ಅಸಲಿಯತ್ತಿನ ಬಗ್ಗೆ ಅನುಮಾನ ಪಡಬೇಕಾಗುತ್ತದೆ. ವಿವರಗಳಿದ್ದರೆ ಖರೀದಿಗೆ ಮುನ್ನ ಅವುಗಳನ್ನು ವೆಬ್‌ಸೈಟ್‌ನಲ್ಲಿ ಪರಿಶೀಲಿಸಿ ಖಚಿತ ಪಡಿಸಿಕೊಳ್ಳಿ ಇಲ್ಲವೇ ನೇರವಾಗಿ ಕರೆಯನ್ನೇ ಮಾಡಿ.

ನಿಮ್ಮ ಸುರಕ್ಷತೆಗಾಗಿ ಇಲೆಕ್ಟ್ರಾನಿಕ್ ವಸ್ತುಗಳು, ಉಪಕರಣಗಳು, ಗ್ಯಾಜೆಟ್‌ಗಳು ಮತ್ತು ಬ್ರಾಂಡೆಡ್ ಉಡುಪುಗಳನ್ನು ಅಧಿಕೃತ ಮಾರಾಟಗಾರರಿಂದಲೇ ಖರೀದಿಸುವುದು ಉತ್ತಮ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News