×
Ad

ಸುಗಮ ಸಂಚಾರ-ರಸ್ತೆ ಸುರಕ್ಷತೆಗೆ ಒತ್ತು ನೀಡಲು ಮೇಯರ್‌ಗೆ ಗೃಹ ಸಚಿವ ಸಲಹೆ

Update: 2017-09-29 17:02 IST

ಬೆಂಗಳೂರು, ಸೆ.29: ನಗರದಲ್ಲಿ ಸುಗಮ ವಾಹನ ಸಂಚಾರ ಹಾಗೂ ರಸ್ತೆ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವಂತೆ ಬಿಬಿಎಂಪಿಯ ನೂತನ ಮೇಯರ್ ಸಂಪತ್‌ರಾಜ್‌ಗೆ ಗೃಹ ಸಚಿವ ರಾಮಲಿಂಗಾರೆಡ್ಡಿ ಸಲಹೆ ನೀಡಿದ್ದಾರೆ.

ಶುಕ್ರವಾರ ಬೆಳಗ್ಗೆ ತಮ್ಮನ್ನು ಭೇಟಿಯಾದ ಮೇಯರ್ ಸಂಪತ್‌ ರಾಜ್‌ರನ್ನು ಅಭಿನಂದಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ವಾಹನ ದಟ್ಟಣೆ ಒಂದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಅದಕ್ಕೆ ಸರಿಯಾದ ಮಾರ್ಗೋಪಾಯ ಕಂಡು ಹಿಡಿಯಬೇಕು ಎಂದು ಹೇಳಿದರು.

ವಾಹನ ಸವಾರರು ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ಸಾಕಷ್ಟು ಅಪಘಾತಗಳು ನಡೆಯುತ್ತಿವೆ. ಆದುದರಿಂದ, ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಯೋಜನೆ ರೂಪಿಸುವಂತೆ  ಸೂಚಿಸಿದರು.

ಮೇಯರ್ ಆಗಿ ಆಯ್ಕೆಯಾದ ಮೊದಲ ದಿನವೇ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ತುರ್ತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಸಂಪತ್‌ ರಾಜ್ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಮಲಿಂಗಾರೆಡ್ಡಿ, ಮುಂದೆಯೂ ಇದೇ ರೀತಿ ಜನಪರ ಕಾರ್ಯಗಳಲ್ಲಿ ತೊಡಗಿಕೊಳ್ಳುವಂತೆ ಹಾರೈಸಿದರು.

ನಗರದಲ್ಲಿ ಮಹಿಳೆಯರ ಸುರಕ್ಷತೆಗೆ ಒತ್ತು ನೀಡಲು ಅ.3ರಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಮತ್ತು ಹಿರಿಯ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದ್ದು, ಅಲ್ಲಿ ಬಿಬಿಎಂಪಿ ಅಧಿಕಾರಿಗಳ ಜತೆಯಲ್ಲಿ ನೀವು ಬನ್ನಿ. ಬೆಂಗಳೂರಿನಲ್ಲಿ ಸುರಕ್ಷಿತ ಹಾಗೂ ಪರಿಸರ ಸ್ನೇಹಿ ವಾತಾವರಣ ಸೃಷ್ಟಿಸಲು ಕಾರ್ಯಕ್ರಮ ರೂಪಿಸೋಣ ಎಂದು ಮೇಯರ್‌ಗೆ ಸಲಹೆ ನೀಡಿದರು.

ರಾಜಧಾನಿ ಬೆಂಗಳೂರಿಗೆ ಪ್ರತೀ ದಿನ ಲಕ್ಷಾಂತರ ಜನ ವಿವಿಧ ಭಾಗಗಳಿಂದ ಬಂದು ಹೋಗುತ್ತಾರೆ. ಅವರಿಗೆ ಭದ್ರತೆ ಒದಗಿಸುವ ಸಂಬಂಧ ಗೃಹ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ. ಕೆಲವು ಗಮನಾರ್ಹ ಸೂಚನೆಗಳನ್ನು ಸಚಿವರು ನೀಡಿದ್ದು, ಅದನ್ನು ಪಾಲಿಸುತ್ತೇನೆ ಎಂದು ಸಂಪತ್‌ರಾಜ್ ಹೇಳಿದರು.

ನಿನ್ನೆ ಮಧ್ಯರಾತ್ರಿಯವರೆಗೂ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಇಂದು ಬೆಳಗ್ಗೆಯೆ ಗೃಹ ಸಚಿವರನ್ನು ಭೇಟಿ ಮಾಡುತ್ತಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಅಧಿಕಾರವಧಿಯಲ್ಲಿ ನಗರಕ್ಕೆ ಸಾಧ್ಯವಾದಷ್ಟು ಸೇವೆ ಮಾಡುವ ಸಂಕಲ್ಪ ಹೊಂದಿದ್ದೇನೆ. ಜನರ ಸೇವೆಗೆ ನನ್ನ ಸಮಯವನ್ನು ಮೀಸಲಿಡಲು ನಿರ್ಧರಿಸಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಬಿಬಿಎಂಪಿ ಸದಸ್ಯರಾದ ಎ.ಆರ್.ಝಾಕೀರ್, ಲಕ್ಷ್ಮೀನಾರಾಯಣ, ಕವಿಕಾ ಅಧ್ಯಕ್ಷ ಮನೋಹರ್, ಮುಖಂಡರಾದ ಜನಾರ್ದನ್, ರಾಮಕೃಷ್ಣ , ಸಲೀಮ್, ಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News