ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಚಿವ ರಮೇಶ್‌ಕುಮಾರ್ ಕರೆ
ಬೆಂಗಳೂರು, ಸೆ.29: ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹೃದಯ ಅತ್ಯಮೂಲ್ಯವಾಗಿದ್ದು, ಅದರ ಆರೋಗ್ಯಕ್ಕೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ್ ಕುಮಾರ್ ತಿಳಿಸಿದ್ದಾರೆ.
ಶುಕ್ರವಾರ ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಆಯೋಜಿಸಲಾಗಿದ್ದ ವಿಶ್ವ ಹೃದಯ ದಿನಾಚರಣೆಯಲ್ಲಿ ವಿಶೇಷ ಲಕೋಟೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಹೃದಯ ಆರೋಗ್ಯವಾಗಿದ್ದರೆ ದೇಹದಲ್ಲಿನ ಇತರ ಸಮಸ್ಯೆಗಳನ್ನು ದೂರ ಮಾಡಬಹುದು. ಆಧುನಿಕ ಜೀವನ ಶೈಲಿಯಿಂದ ಹೃದಯದ ಆರೋಗ್ಯದ ಕಡೆ ಗಮನಹರಿಸುವುದು ಕಡಿಮೆಯಾಗಿದೆ. ವಿಶ್ವದಲ್ಲಿ ಹೃದಯ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ಅಂಚೆ ಇಲಾಖೆ ವಿಶೇಷ ಲಕೋಟೆ ಬಿಡುಗಡೆ ಮಾಡಿ ಹೃದಯದ ಬಗ್ಗೆ ಜಾಗೃತಿಯ ಸಂದೇಶ ನೀಡುತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.
ಹೃದಯದ ಆರೋಗ್ಯವು ಕೇವಲ ದೈಹಿಕ ಆರೋಗ್ಯಕ್ಕಷ್ಟೇ ಅಲ್ಲ, ಮಾನಸಿಕ ಆರೋಗ್ಯಕ್ಕೂ ಬಹಳ ಮುಖ್ಯ. ಮೆದುಳು ಬುದ್ಧಿವಂತಿಕೆಯ ಸಾಧನವಾದರೆ, ದೇಹ ಕ್ರಿಯಾಶೀಲತೆಯನ್ನು ಗುರುತಿಸಲು ಸಾಧನವಾಗಿದೆ. ಹೃದಯವು ಸಮಾಜದ ಕ್ರಿಯಾಶೀಲತೆಗೆ ಕೆಲಸ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.
ಅಂಚೆ ಇಲಾಖೆಯು ಒಂದು ಕಾಲದಲ್ಲಿ ಸಂಪರ್ಕ ಕ್ಷೇತ್ರದ ಪ್ರಮುಖ ಮಾಧ್ಯಮವಾಗಿತ್ತು. ನಾನು ರಾಜಕಾರಣ ಪ್ರವೇಶಿಸಿದ ದಿನಗಳಲ್ಲಿ ಟೆಲಿಗ್ರಾಂ ಮೂಲಕವೇ ಹೆಚ್ಚು ಸಂದೇಶಗಳು ರವಾನೆಯಾಗುತ್ತಿದ್ದವು. ಆಧುನಿಕ ಸಂಪರ್ಕ ಸಾಧನಗಳು ಹೆಚ್ಚಾದಂತೆ ಅಂಚೆ ಇಲಾಖೆಯ ಕೆಲಸ ಕಡಿಮೆಯಾಗಿದೆ ಎಂದು ಕೆಲವರು ಭಾವಿಸಿರಬಹುದು. ಆದರೆ ಅಂಚೆ ಇಲಾಖೆ ಇಂದಿಗೂ ಉತ್ತಮ ಸೇವೆ ಸಲ್ಲಿಸುವ ಮೂಲಕ ಜನರ ನಂಬಿಕೆಗೆ ಪಾತ್ರವಾಗಿದೆ ಎಂದು ಹೇಳಿದರು.
ರಾಜ್ಯ ವೃತ್ತದ ಮುಖ್ಯ ಅಂಚೆ ಮಹಾನಿರ್ದೇಶಕ ಚಾರ್ಲ್ಸ್ ಲೋಬೊ ಮಾತನಾಡಿ, ಅಂಚೆ ಇಲಾಖೆಯು ಆರೋಗ್ಯಕ್ಕೆ ಸಂಬಂಧಿಸಿದ ಸಂದೇಶಗಳ ಲಕೋಟೆಗಳನ್ನು ಕಾಲ ಕಾಲಕ್ಕೆ ಬಿಡುಗಡೆ ಮಾಡುತ್ತದೆ. ರಕ್ತದಾನ, ನೇತ್ರದಾನ, ಅಂಗಾಂಗ ದಾನ ಹಾಗೂ ಕುಟುಂಬ ಕಲ್ಯಾಣದಂತಹ ಸಂದೇಶಗಳನ್ನು ಅಂಚೆ ಇಲಾಖೆ ಪರಿಣಾಮಕಾರಿಯಾಗಿ ರವಾನಿಸುತ್ತದೆ ಎಂದರು.
ಇತ್ತೀಚೆಗೆ ಅಂಚೆ ಇಲಾಖೆ ಸಹಯೋಗದಲ್ಲಿ ಅಂಚೆ ಚೀಟಿ ಸಂಗ್ರಹಕಾರರು ಏರ್ಪಡಿಸಿದ್ದ ರಕ್ತದಾನ ಮತ್ತು ಸ್ತನಪಾನ ಕುರಿತ ಜಾಗೃತಿ ಕಾರ್ಯಕ್ರಮ ಮುಖ್ಯ ಆಕರ್ಷಣೀಯವಾಗಿತ್ತು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಅಂಚೆ ಇಲಾಖೆ ನಿರ್ದೇಶಕ ಪಿ.ಎಲ್.ನಟರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.