×
Ad

ದೇವೇಗೌಡರನ್ನು ಭೇಟಿ ಮಾಡಿದ ಬಿಬಿಎಂಪಿ ಮೇಯರ್-ಉಪಮೇಯರ್

Update: 2017-09-29 18:42 IST

ಬೆಂಗಳೂರು, ಸೆ.29: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ನೂತನ ಮೇಯರ್ ಸಂಪತ್‌ರಾಜ್ ಹಾಗೂ ಉಪ ಮೇಯರ್ ಪದ್ಮಾವತಿ ನರಸಿಂಹಮೂರ್ತಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಶುಕ್ರವಾರ ಪದ್ಮನಾಭ ನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ ನೂತನ ಮೇಯರ್ ಹಾಗೂ ಉಪಮೇಯರ್, ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೆಲಕಾಲ ಮಾತುಕತೆ ನಡೆಸಿ, ಅವರ ಆಶೀರ್ವಾದ ಪಡೆದುಕೊಂಡರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ, ಮೇಯರ್ ಮತ್ತು ಉಪಮೇಯರ್ ಇಂದು ನನ್ನನ್ನು ಭೇಟಿ ಮಾಡಿದ್ದಾರೆ. ಒಳ್ಳೆಯ ಕೆಲಸ ಮಾಡಿಕೊಂಡು ಹೋಗುವಂತೆ ಅವರಿಗೆ ಸಲಹೆ ನೀಡಿದ್ದೇನೆ. ಒಂದು ಸಮನ್ವಯ ಸಮಿತಿ ರಚನೆ ಮಾಡಲು ಹೇಳಿದ್ದೇನೆ. ಯಾವಾಗ ಮಾಡುತ್ತಾರೊ ಅದು ಅವರಿಗೆ ಬಿಟ್ಟಿದ್ದು ಎಂದರು.

ಮೇಯರ್ ಸಂಪತ್‌ ರಾಜ್ ಮಾತನಾಡಿ, ಬೆಂಗಳೂರು ಅಭಿವೃದ್ಧಿಗೆ ಇಬ್ಬರು ಒಟ್ಟಾಗಿ ಕೆಲಸ ಮಾಡುವಂತೆ ದೇವೇಗೌಡರು ಸೂಚನೆ ನೀಡಿದ್ದಾರೆ. ನಮ್ಮ ನಡುವೆ ಯಾವುದೇ ಸಮಸ್ಯೆಗಳಿಲ್ಲ. ಇದ್ದಂತಹ ಗೊಂದಲಗಳನ್ನು ಪಕ್ಷದ ವರಿಷ್ಠರು ಪರಿಹರಿಸಿದ್ದಾರೆ. ಎರಡು ಪಕ್ಷಗಳ ಸದಸ್ಯರು ಹೊಂದಿಕೊಂಡು ನಗರದ ಅಭಿವೃದ್ಧಿಗೆ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

ನಗರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಲವಾರು ಸಮಸ್ಯೆಗಳು ಸೃಷ್ಟಿಯಾಗಿವೆ. ಅವುಗಳನ್ನು ಪರಿಹರಿಸುವ ಕೆಲಸ ಮಾಡುವುದು ನಮ್ಮ ಮುಂದಿರುವ ಆದ್ಯತೆ. ರಾಜಕಾಲುವೆ ಒತ್ತುವರಿ ತೆರವು ಮಾಡುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ. ಜಾಹೀರಾತು ಮಾಫಿಯಾಕ್ಕೆ ಕಡಿವಾಣ ಹಾಕಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಂಪತ್‌ ರಾಜ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News