ನೆನಪಿಡಿ, ಇವುಗಳಿಗೆ ಆಧಾರ್ ಜೋಡಣೆ ಕಡ್ಡಾಯ

Update: 2017-09-30 09:12 GMT

ನಿಮಗೆ ಬೇಕೋ ಬೇಡವೋ ಗೊತ್ತಿಲ್ಲ....ಆದರೆ ಇನ್ನು ಮುಂದೆ ಆಧಾರ್ ಇಲ್ಲದೇ ಬದುಕೇ ಕಠಿಣವಾಗಲಿದೆ. ಹೊಸ ಮೊಬೈಲ್ ಸಂಪರ್ಕ, ಸರಕಾರಿ ಸಬ್ಸಿಡಿಗಳು ಮತ್ತು ಪಿಂಚಣಿ ಪಡೆಯುವುದರಿಂದ ಹಿಡಿದು ಹಣಕಾಸು ವಹಿವಾಟುಗಳನ್ನು ನಡೆಸುವವರೆಗೆ ನೀವು ಆಧಾರ್‌ನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಿಮ್ಮ ಆಧಾರ್ ಜೋಡಣೆಯನ್ನು ಕಡ್ಡಾಯಗೊಳಿಸಿರುವ ಕಾರ್ಯಭಾರಗಳ ದೊಡ್ಡ ಪಟ್ಟಿಯೇ ಇದೆ. ಮಂದಿನ ತಿಂಗಳಲ್ಲಿ ಇನ್ನಷ್ಟು ಸೇವೆಗಳು ಈ ಪಟ್ಟಿಗೆ ಸೇರುವ ಸಾಧ್ಯತೆಯಿದೆ.

ಬ್ಯಾಂಕ್ ಖಾತೆ

ಬ್ಯಾಂಕುಗಳು ತಮ್ಮ ಗ್ರಾಹಕರ ಆಧಾರ ಸಂಖ್ಯೆಯನ್ನು ಅವರ ಉಳಿತಾಯ ಖಾತೆ ಗಳೊಂದಿಗೆ ಜೋಡಣೆಗೊಳಿಸುವುದನ್ನು ಸರಕಾರವು ಕಡ್ಡಾಯಗೊಳಿಸಿದೆ. ಈ ಕಾರ್ಯ ವನ್ನು ಪೂರ್ಣಗೊಳಿಸಲು 2017,ಡಿಸೆಂಬರ್ 1 ಅಂತಿಮ ಗಡುವಾಗಿದೆ. ಈ ಗಡುವಿನ ಬಳಿಕ ಆಧಾರ ಜೋಡಣೆಯಾಗದಿರುವ ಖಾತೆಗಳು ನಿಷ್ಕ್ರಿಯಗೊಳ್ಳಲಿವೆ.

ಮ್ಯೂಚ್ಯುವಲ್ ಫಂಡ್ ಹೂಡಿಕೆಗಳು

ಮ್ಯೂಚ್ಯುವಲ್ ಫಂಡ್ ಹೌಸ್‌ಗಳು ಸೇರಿದಂತೆ ಹಣಕಾಸು ಸಂಸ್ಥೆಗಳು ತಮ್ಮ ಗ್ರಾಹಕರ ಆಧಾರ್ ಸಂಖ್ಯೆಗಳನ್ನು ಪಡೆದುಕೊಂಡು ಅವುಗಳನ್ನು ಅವರ ಖಾತೆಗಳಿಗೆ ಜೋಡಣೆಗೊಳಿಸುವುದು ಕಡ್ಡಾಯವಾಗಿದೆ. ಇದಕ್ಕಾಗಿಯೇ ಹಣ ಚಲುವೆ ತಡೆ ಕಾಯ್ದೆ(ಪಿಎಂಎಲ್‌ಎ) ನಿಯಮಗಳು,2017ಕ್ಕೆ ಇತ್ತೀಚಿಗೆ ತಿದ್ದುಪಡಿಯನ್ನು ತರಲಾಗಿದೆ. ಇದಕ್ಕೆ 2017,ಡಿಸೆಂಬರ್ 1 ಅಂತಿಮ ಗಡುವಾಗಿದೆ.

ಪಾನ್ ಕಾರ್ಡ್

2017,ಜುಲೈ 1ರ ಬಳಿಕ ಸಲ್ಲಿಸಲಾದ ಆದಾಯ ತೆರಿಗೆ ರಿಟರ್ನ್‌ಗಳನ್ನು ತೆರಿಗೆ ದಾರರು ತಮ್ಮ ಪಾನ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ಜೋಡಣೆಗೊಳಿಸಿದರೆ ಮಾತ್ರ ಸ್ವೀಕರಿಸಲಾಗುವುದು ಎಂದು ಸರಕಾರವು ಈ ಹಿಂದೆ ಅಧಿಸೂಚನೆಯನ್ನು ಹೊರಡಿಸಿತ್ತು. ಸರಕಾರದ ಈ ನಿರ್ದೇಶವನ್ನು ಪಾಲಿಸಲು ಇತ್ತೀಚಿನ ಅಂತಿಮ ಗಡುವು 2017, ಡಿಸೆಂಬರ್ 1 ಆಗಿದೆ. ಈ ಗಡುವಿನೊಳಗೆ ವ್ಯಕ್ತಿಗಳು ತಮ್ಮ ರಿಟರ್ನ್‌ಗಳ ಸಂಸ್ಕರಣೆಗಾಗಿ ತಮ್ಮ ಪಾನ್ ಕಾರ್ಡ್‌ನ್ನು ಆಧಾರ್‌ನೊಂದಿಗೆ ಜೋಡಣೆಗೊಳಿಸಬೇಕಿದೆ.

ಸಾಮಾಜಿಕ ಭದ್ರತಾ ಯೋಜನೆಗಳು

ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಪ್ರಧಾನ ಮಂತ್ರಿ ಉಜ್ವಲ ಯೋಜನೆಯಂತಹ ಸಾಮಾಜಿಕ ಭದ್ರತಾ ಯೋಜನೆಗಳ ಲಾಭಗಳನ್ನು ಪಡೆದುಕೊಳ್ಳಲು ಆಧಾರ್ ಕಡ್ಡಾಯವಾಗಿದೆ. ಇದಕ್ಕಾಗಿ ಆಧಾರ್ ವಿವರಗಳನ್ನು ಸಲ್ಲಿಸಲು 2017, ಡಿಸೆಂಬರ್ 1 ಅಂತಿಮ ಗಡುವಾಗಿದೆ. ಆದರೆ ಆಧಾರ್ ನಾಗರಿಕರ ಖಾಸಗಿತನದ ಮೂಲಭೂತ ಹಕ್ಕನ್ನು ಅತಿಕ್ರಮಿಸುತ್ತದೆ ಎಂಬ ಕಾರಣದಿಂದ ಅದರ ಸಿಂಧುತ್ವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಬಗ್ಗೆ ತನ್ನ ಅಂತಿಮ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯವು ಇನ್ನಷ್ಟೇ ನೀಡಬೇಕಾಗಿದೆ.

ಪಿಂಚಣಿ ಖಾತೆ

ಈ ವರ್ಷದ ಜನವರಿಯಲ್ಲಿ ನೌಕರರ ಭವಿಷ್ಯನಿಧಿ ಸಂಸ್ಥೆ(ಇಪಿಎಫ್‌ಒ)ಯು ತನ್ನ ಪಿಂಚಣಿದಾರ ಸದಸ್ಯರು ತನ್ನ ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳಾಗಿ ಮುಂದುವರಿಯಲು ಆಧಾರ್ ಅಥವಾ ಎನ್‌ರೋಲ್‌ಮೆಂಟ್ ಐಡಿಯನ್ನು ಸಲ್ಲಿಸುವು ದನ್ನು ಕಡ್ಡಾಯಗೊಳಿಸಿದೆ. 2017,ಫೆ.1ರಿಂದ ಅನ್ವಯಗೊಡಿರುವ ಇಪಿಎಫ್‌ಒ ನಿದೇಶವನ್ನು ಪಾಲಿಸಲು ನೌಕರರ ಪಿಂಚಣಿ ಯೋಜನೆ(ಫಾರ್ಮ್ 10ಸಿ-10 ವರ್ಷಗಳಿಗಿಂತ ಹೆಚ್ಚಿನ ನಿರಂತರ ಸೇವೆ)ಯಡಿ ಅರ್ಹ ಸದಸ್ಯರು ತಮ್ಮ ಆಧಾರ್ ಸಂಖ್ಯೆಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

ಮೊಬೈಲ್ ಸಿಮ್ ಕಾರ್ಡ್

2018,ಫೆ.6ರೊಳಗೆ ಎಲ್ಲ ಮೊಬೈಲ್ ಫೋನ್ ಸೇವೆಗಳ ಚಂದಾದಾರರ ಆಧಾರ್ ಆಧಾರಿತ ಇ-ಕೆವೈಸಿ ದೃಢೀಕರಣ ಪೂರ್ಣಗೊಳ್ಳಬೇಕಾಗಿದೆ. ಈ ದಿನಾಂಕದೊಳಗೆ ಹಾಲಿ ಇರುವ ಬಳಕೆದಾರರ ಆಧಾರ್ ಆಧರಿತ ಇ-ಕೆವೈಸಿ ಯನ್ನು ಪುನರ್ ದೃಢೀಕರಿಸುವಂತೆ ಸರಕಾರವು ಎಲ್ಲ ದೂರಸಂಪರ್ಕ ಕಂಪನಿಗಳಿಗೆ ಸೂಚಿಸಿದೆ. ಹೊಸ ಮೊಬೈಲ್ ಸಂಪರ್ಕಗಳನ್ನು ಪಡೆಯುವಾಗ ಆಧಾರ್ ವಿವರಗಳನ್ನು ಒದಗಿಸುವುದು ಕಡ್ಡಾಯ ವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News