80 ದೇಶಗಳಿಂದ ವೀಸಾ ಇಲ್ಲದೆ ಬರುವವರಿಗೆ ಯಾವುದೇ ಅಡ್ಡಿಯಿಲ್ಲ: ಕತರ್

Update: 2017-09-30 09:40 GMT

ದೋಹ, ಸೆ. 30: ಭಾರತ ಸಹಿತ 80 ದೇಶಗಳಿಂದ ವೀಸಾ ಇಲ್ಲದೆ ಕತರ್‍ಗೆ ಬರುವವರಿಗೆ ಯಾವುದೇ ಅಡ್ಡಿಗಳಿಲ್ಲ ಎಂದು ಪ್ರವಾಸೋದ್ಯಮ ಅಥಾರಿಟಿ ಅಧಿಕಾರಿಗಳು ಪುನಃ ಹೇಳಿದ್ದಾರೆ.  ಆರು ತಿಂಗಳು ಅವಧಿಯಿರುವ ಪಾಸ್‍ಪೋರ್ಟ್ ಮತ್ತು ರಿಟರ್ನ್ ವಿಮಾನ ಟಿಕೆಟು ಬೇಕೆನ್ನುವುದನ್ನು ಹೊರತುಪಡಿಸಿದರೆ ಬೇರೆ ಯಾವ ನಿಬಂಧನೆಗಳೂ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೋಹದಲ್ಲಿ ವಿಶ್ವಸಂಸ್ಥೆಯ ವರ್ಲ್ಡ್ ಟೂರಿಸಂ ಆರ್ಗನೈಝೇಶನ್(ಯುಎನ್‍ಡಬ್ಲ್ಯೂಡಿಒ) ನೇತೃತ್ವದಲ್ಲಿ ನಡೆದ ಜಾಗತಿಕ ಪ್ರವಾಸ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳಿಗೆ  ಕತರ್ ಟೂರಿಸಂ ಅಥಾರಿಟಿ ಅಧ್ಯಕ್ಷ ಮತ್ತು ಮುಖ್ಯ ಪ್ರವಾಸಾಭಿವೃದ್ಧಿ ಅಧಿಕಾರಿಯಾದ ಹಸನ್ ಅಲ್ ಇಬ್ರಾಹೀಂ ಈ ವಿಷಯ ತಿಳಿಸಿದ್ದಾರೆ. ಕೇರಳದ  ವಿಮಾನ ನಿಲ್ದಾಣಗಳಲ್ಲಿ ಈ ರೀತಿ ಕತರ್‍ಗೆ ಬರಲು ಯತ್ನಿಸುವವರನ್ನು ಹಿಂದಕ್ಕೆ ಕಳುಹಿಸುವ ಕುರಿತು ಪ್ರಸ್ತಾಪಿಸಿದಾಗ ಅವರು  ಹೀಗೆ ಹೇಳಿದರು.

80ದೇಶಗಳ ವಿಮಾನ ನಿಲ್ದಾಣ ಮತ್ತು ವಿಮಾನ ಕಂಪೆನಿಗಳ ಸಹಕಾರದಿಂದ ಇದನ್ನು ಜಾರಿಗೊಳಿಸುತ್ತಿದ್ದೇವೆ. ಕೇರಳದ ವಿಮಾನ ನಿಲ್ದಾಣಗಳಿಂದ ಪ್ರಯಾಣಿಕರನ್ನು ಹಿಂದಕ್ಕೆ ಕಳುಹಿಸುತ್ತಿರುವುದು ಆಶ್ಚರ್ಯದ ವಿಷಯವಾಗಿದೆ. ಆದರೂ ಭಾರತದ ವಿದೇಶ ಸಚಿವಾಲಯ ಮತ್ತು ಕತರ್ ಭಾರತದ ರಾಯಭಾರ ಕಚೇರಿಗೆ ತಿಳಿಸುವುದಾಗಿ ಹಸನ್ ಅಲ್ ಇಬ್ರಾಹೀಂ ಹೇಳಿದರು.

ಭಾರತ ಸಹಿತ 80 ದೇಶಗಳ ಜನರು ಕತರ್‍ಗೆ ವೀಸಾವಿಲ್ಲದೆ ಭೇಟಿ ನೀಡಬಹುದು ಎನ್ನುವ ಘೋಷಣೆಯಾದ ಬಳಿಕ ವಿವಿಧ ದೇಶಗಳಿಂದ ಜನರು ಈ ಸೌಲಭ್ಯ ಬಳಸಿ ಕತರ್‍ಗೆ ಬರುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News