ಬಾತ್ ಟವೆಲ್‌ಗಳ ಮರುಬಳಕೆ ಸುರಕ್ಷಿತವಲ್ಲ ಎನ್ನುವುದು ನಿಮಗೆ ಗೊತ್ತೇ?

Update: 2017-09-30 09:53 GMT

 ಬಾತ್ ಟವೆಲ್‌ಗಳ ಮರುಬಳಕೆ ಸುರಕ್ಷಿತವೇ? ಬಾತ್ ಟವೆಲ್‌ಗಳನ್ನು ಎಷ್ಟು ದಿನಗಳಿಗೊಮ್ಮೆ ಒಗೆಯಬೇಕು? ನಮ್ಮಲ್ಲಿ ಹೆಚ್ಚಿನವರಿಗೆ ಈ ಬಗ್ಗೆ ಯೋಚಿಸಲೂ ಸಮಯವಿಲ್ಲ. ಆದರೆ ಇವು ಮಹತ್ವದ ಪ್ರಶ್ನೆಗಳಾಗಿವೆ.

ಟವೆಲ್‌ಗಳು ಸೃಷ್ಟಿಸುವ ಸಮಸ್ಯೆಗಳೇನು? ಮೊದಲನೆಯದು ಟವೆಲ್‌ನ ನೇಯ್ಗೆಯು ಬ್ಯಾಕ್ಟೀರಿಯಾಗಳನ್ನು ತನ್ನೊಳಗೆ ಹಿಡಿದಿಟ್ಟುಕೊಳ್ಳುತ್ತದೆ. ಎರಡನೆಯದು ಹೆಚ್ಚಿನ ಟವೆಲ್ ಗಳು ದಿನದ ಹೆಚ್ಚಿನ ಸಮಯ ಒದ್ದೆಯಾಗಿಯೇ ಇರುತ್ತವೆ. ಇದು ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಉತ್ತಮ ವಾತಾವರಣವನ್ನು ಸೃಷ್ಟಿಸುತ್ತದೆ. ಈ ಬ್ಯಾಕ್ಟೀರಿಯಾಗಳಿಂದ ಒಬ್ಬ ವ್ಯಕ್ತಿಗೆ ಸೋಂಕು ತಗುಲಿದರೆ ಮತ್ತು ಅದೇ ಟವೆಲ್‌ನ್ನು ಮನೆಮಂದಿ ಬಳಸಿದರೆ ಎಲ್ಲರಿಗೂ ಈ ಸೋಂಕು ಹರಡುತ್ತದೆ.

ಅಧ್ಯಯನಗಳೇನು ಹೇಳುತ್ತವೆ? ನೀವು ಬಾತ್‌ರೂಮಿನಲ್ಲಿ ಬಳಸುವ ಶೇ.90ರಷ್ಟು ಟವೆಲ್‌ಗಳು ಮಾರಣಾಂತಿಕ ಬ್ಯಾಕ್ಟೀರಿಯಾಗಳನ್ನು ಒಳಗೊಂಡಿರುತ್ತವೆ ಎಂದು ನೂತನ ಅಧ್ಯಯನವೊಂದು ಬೆಟ್ಟುಮಾಡಿದೆ. ಕಾಲಿಫಾರ್ಮ್ ಬ್ಯಾಕ್ಟೀರಿಯಾಗಳು ಸಾಮಾನ್ಯವಾಗಿ ಮಾನವನ ಮಲದಲ್ಲಿ ಕಂಡು ಬರುತ್ತವೆ. ಬಾತ್‌ರೂಮ್‌ಗಳಲ್ಲಿಯ ಟವೆಲ್‌ಗಳಲ್ಲಿ ಇವೇ ಬ್ಯಾಕ್ಟೀರಿಯಾಗಳಿರುವುದು ಪತ್ತೆಯಾಗಿದೆ.

ಪ್ರಯೋಗಾಲಯದಲ್ಲಿ ಕೆಲವು ಬಾತ್ ಟವೆಲ್‌ಗಳನ್ನು ಪರೀಕ್ಷೆಗೊಳಪಡಿಸಿದಾಗ ಶೇ.14ರಷ್ಟು ಟವೆಲ್‌ಗಳಲ್ಲಿ ಇ ಕಾಲಿಫಾರ್ಮ್ ಬ್ಯಾಕ್ಟೀರಿಯಾಗಳು ಕಂಡು ಬಂದಿವೆ. ಈ ಬ್ಯಾಕ್ಟೀರಿಯಾಗಳು ಸೋಂಕನ್ನುಂಟು ಮಾಡುತ್ತವೆ.

 ಹೆಚ್ಚಿನ ಸಂದರ್ಭಗಳಲ್ಲಿ ಈ ಬ್ಯಾಕ್ಟೀರಿಯಾಗಳ ದುಷ್ಪರಿಣಾಮದಿಂದ ನಾವು ಪಾರಾಗುತ್ತೇವೆ. ಆದರೆ ನಮ್ಮ ಶರೀರದ ರೋಗ ನಿರೋಧಕ ಶಕ್ತಿಯು ದುರ್ಬಲಗೊಂಡಿ ದ್ದಾಗ ಬಾತ್ ಟವೆಲ್‌ಗಳಲ್ಲಿಯ ಬ್ಯಾಕ್ಟೀರಿಯಾಗಳು ನಮ್ಮ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತವೆ ಮತ್ತು ಸೋಂಕಿಗೆ ಕಾರಣವಾಗುತ್ತವೆ.

ಎಂದಿಗೂ ಬಾತ್ ಟವೆಲ್‌ನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಬೇಡಿ. ನಿಮಗೆ ಅಥವಾ ನಿಮ್ಮ ಸ್ನೇಹಿತನಿಗೆ ಗಾಯವೇನಾದರೂ ಆಗಿದ್ದರೆ ಬ್ಯಾಕ್ಟೀರಿಯಾಗಳು ನೀವು ಹಂಚಿಕೊ ಳ್ಳುವ ಟವೆಲ್‌ನ ಮೂಲಕ ಶರೀರವನ್ನು ಪ್ರವೇಶಿಸುತ್ತವೆ.

ಬಾತ್ ಟವೆಲ್‌ಗಳನ್ನು ನಿಯಮಿತವಾಗಿ ಒಗೆದು ಸ್ವಚ್ಛಗೊಳಿಸುವುದು ಉತ್ತಮ ಅಭ್ಯಾಸವಾಗಿದೆ. ಇದು ಟವೆಲ್‌ಗಳಲ್ಲಿಯ ಬ್ಯಾಕ್ಟೀರಿಯಾಗಳ ಪ್ರಮಾಣವನ್ನು ಕನಿಷ್ಠ ಮಟ್ಟಕ್ಕೆ ತಗ್ಗಿಸಲು ಏಕೈಕ ಮಾರ್ಗವಾಗಿದೆ. ಟವೆಲ್‌ಗಳನ್ನು ಎಂದೂ ಒದ್ದೆಯಾಗಿಡಬೇಡಿ, ಅವುಗಳನ್ನು ಬಿಸಿಲಿನಲ್ಲಿ ಒಣಗಿಸಿ.

ಬಾತ್ ಟವೆಲ್‌ಗಳನ್ನು ಪ್ರತಿ ಎರಡು ದಿನಗಳಿಗೊಮ್ಮೆ ಒಗೆಯಬೇಕು. ಪ್ರತಿ ಬಾರಿಯೂ ಬಳಸಿದ ಬಳಿಕ ನೀವು ಅದನ್ನು ಒಗೆಯುವಿರಾದರೆ ತುಂಬ ಒಳ್ಳೆಯದು. ಅಲ್ಲದೆ ನೀವು ಬಳಸುವಾಗ ಟವೆಲ್ ಸಂಪೂರ್ಣವಾಗಿ ಒಣಗಿದ್ದರೆ ಬ್ಯಾಕ್ಟೀರಿಯಾಗಳಿಂದ ಸೋಂಕು ತಗಲುವ ಸಾಧ್ಯತೆಗಳು ಕಡಿಮೆಯಾಗುತ್ತವೆ.

ನಿಮ್ಮ ಟವೆಲ್ ದುರ್ನಾತವನ್ನು ಬೀರುತ್ತಿದ್ದರೆ ಅದನ್ನೆಂದೂ ಬಳಸಲೇಬೇಡಿ. ದುರ್ನಾತವು ಬ್ಯಾಕ್ಟೀರಿಯಾಗಳು ಬೆಳೆಯುತ್ತಿವೆ ಎನ್ನುವುದರ ಸಂಕೇತವಾಗಿದೆ. ಸಾರ್ವಜನಿಕ ಬಾತರೂಮ್‌ಗಳಲ್ಲಿಯ ಅಥವಾ ಹೋಟೆಲ್‌ಗಳಲ್ಲಿಯ ಟವೆಲ್‌ಗಳನ್ನು ಅಪ್ಪಿತಪ್ಪಿಯೂ ಬಳಸುವ ಗೋಜಿಗೆ ಹೋಗಬೇಡಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News