ಕತರ್ ಇಂಡಿಯನ್ ಸೋಶಿಯಲ್ ಫೋರಮ್: ಕರ್ನಾಟಕ ಘಟಕದ ವತಿಯಿಂದ 'ಜನ ಜಾಗೃತಿ ಅಭಿಯಾನ'

Update: 2017-09-30 11:25 GMT

ಕತರ್, ಸೆ. 30: ಅನಿವಾಸಿ ಭಾರತೀಯ ಸಂಘಟನೆ ಕತರ್ ಇಂಡಿಯನ್ ಸೋಶಿಯಲ್ ಫೋರಮ್, ಕರ್ನಾಟಕ ಘಟಕದ ವತಿಯಿಂದ 'ಹಿಂಸಾಹತ್ಯೆಯನ್ನು ಖಂಡಿಸೋಣ', 'ನಮ್ಮ ಕಾಲ್ನಡಿಗೆ ಜನರ ಬಳಿಗೆ' ಎಂಬ ಧ್ಯೇಯದೊಂದಿಗೆ, ಜನ ಜಾಗೃತಿ ಅಭಿಯಾನವು, ಸುಮಾರು ಒಂದು ತಿಂಗಳ ಕಾಲ, ಕತರಿನ ವಿವಿಧ ಪ್ರದೇಶಗಳಲ್ಲಿ ನಡೆಯಿತು.

ಭಾರತದಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಅಮಾನವೀಯ ಹಲ್ಲೆಗಳು, ಅಲ್ಪಸಂಖ್ಯಾತರನ್ನು ಮತ್ತು ದಲಿತರನ್ನು ಗುರಿಯಾಗಿಸಿ ವ್ಯವಸ್ಥಿತವಾಗಿ ನಡೆಯುತ್ತಿರುವ ಮಾರಣ ಹೋಮಗಳು, ಆಹಾರ, ವಸ್ತ್ರಸಂಹಿತೆಯ ಹೆಸರಿನಲ್ಲಿ ಅಲ್ಪಸಂಖ್ಯಾತರನ್ನು ಭಯದ ವಾತಾವರಣದಲ್ಲಿ ಬದುಕುವಂತೆ ಮಾಡಿದ ಫ್ಯಾಸಿಸ್ಟರ ವ್ಯವಸ್ಥಿತ ಷಡ್ಯಂತ್ರದ ಬಗ್ಗೆ ಅನಿವಾಸಿ ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಂಡ ಕಾರ್ಯಕ್ರಮ ಎಂದು ತಿಳಿಸಿದರು.

ಲವ್ ಜಿಹಾದ್, ಭೇಟಿ ಬಚಾವೋ, ಟ್ರಿಪಲ್ ತಲಾಕ್ ಹೆಸರಿನಲ್ಲಿ ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸಿ, ಜನಸಾಮಾನ್ಯರು ಎದುರಿಸುತ್ತಿರುವ ನೈಜ ಸಮಸ್ಯೆಗಳನ್ನು ಮರೆಮಾಚಿ, ದೇಶದ ಗಮನವನ್ನು ಬೇರೆಡೆಗೆ ಸೆಳೆಯುವ ಕೋಮುವಾದಿಗಳ ಅಜೇಂಡಾಗಳ ಬಗ್ಗೆ ಕಾರ್ಯಕ್ರಮದಲ್ಲಿ ವಿಸ್ತಾರವಾಗಿ ವಿವರಿಸಲಾಯಿತು. 

ದೇಶದಲ್ಲಿ ಪ್ರಗತಿಪರರನ್ನು, ವಿಚಾರವಾದಿಗಳನ್ನು, ಸಾಹಿತಿಗಳನ್ನು, ವೈಚಾರಿಕ ಪ್ರತಿಪಾದಕರನ್ನು ಮತ್ತು ಸಾಮಾಜಿಕ ಹೋರಾಟಗಾರರನ್ನು ಭಯ ಪಡಿಸಲು ಅವರ ಕಗ್ಗೊಲೆ ಮಾಡುವುದನ್ನು ಖಂಡಿಸಿ, ಈ ಘಟನೆಗಳ ವಿರುದ್ಧ ಇಂದಿನ ಪರಿಸ್ಥಿತಿಯಲ್ಲಿ , ಜನಸಾಮಾನ್ಯರು ಒಂದಾಗಿ ಹೋರಾಟವನ್ನು ನಡೆಸುವ ಅಗತ್ಯತೆ  ಮತ್ತು ನಮ್ಮ ಸಂವಿಧಾನವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯ ಬಗ್ಗೆ ಕಾರ್ಯಕ್ರಮದಲ್ಲಿ ಜಾಗೃತಿ ಮೂಡಿಸಲಾಯಿತು 

ಈ ಕಾರ್ಯಕ್ರಮದ ನಿರ್ವಹಣೆಯನ್ನು ಇರ್ಷಾದ್ ಕುಳಾಯಿ, ಫಾರೂಕ್ ಮುಡಿಪ್ಪು, ಅಬು ಸಾಲಿ, ನಝೀರ್ ಕೆ. ಸಿ. ರೋಡ್ ಮತ್ತು ಬಶೀರ್ ಮಾಚಂಪಾಡಿ ವಹಿಸಿಕೊಂಡಿದ್ದರು. ನಿರ್ವಹಣಾ ತಂಡದ ಮೇಲ್ವಿಚಾರಣೆ ಮತ್ತು ನೇತೃತ್ವವನ್ನು ಝಮೀರ್ ಹಳೆಯಂಗಡಿ ಮತ್ತು ಖಲಂದರ್ ಜಲಸೂರ್ ನೆರವೇರಿಸಿದರು. 

ಒಂದು ತಿಂಗಳ ಕಾಲ ನಡೆದ ಅಭಿಯಾನದಲ್ಲಿ ಮುಖ್ಯ ಭಾಷಣಕಾರರಾಗಿ ಅಬ್ದುಲ್ ಲತೀಫ್ ಮಡಕೇರಿ, ಅನ್ವರ್ ಸಾದಾತ್ ಬಜತ್ತೂರ್ ಮತ್ತು ಹಮೀದ್ ಸವಣೂರ್ ಭಾಗವಹಿಸಿದ್ದರು.

Writer - ಖಲಂದರ್ ಜಾಲ್ಸೂರ್

contributor

Editor - ಖಲಂದರ್ ಜಾಲ್ಸೂರ್

contributor

Similar News