ನಮ್ಮ ಸಾವಿನ ನಂತರ ನಮ್ಮ ಸೋಷಿಯಲ್ ಮೀಡಿಯ ಖಾತೆಗಳ ಗತಿಯೇನು...?

Update: 2017-09-30 17:54 GMT

ಇಂದು ಸಾಮಾಜಿಕ ಮಾಧ್ಯಮಗಳು ನಮ್ಮ ಜೀವನದಲ್ಲಿ ಪ್ರಮುಖ ಪಾತ್ರಗಳನ್ನು ಹೊಂದಿವೆ. ನಾವು ಖುದ್ದಾಗಿ ನಮ್ಮ ಖಾತೆಗಳನ್ನು ನಿರ್ವಹಿಸುತ್ತಿರುವಾಗ ಸಾಮಾಜಿಕ ಮಾಧ್ಯಮಗಳೊಂದಿಗಿನ ಬದುಕು ಒಳ್ಳೆಯದೇ. ಆದರೆ ನಾವು ಸತ್ತ ಬಳಿಕ ನಮ್ಮ ಖಾತೆಗಳೇನಾಗುತ್ತವೆ ಎನ್ನುವುದನ್ನು ಎಂದಾದರೂ ಯೋಚಿಸಿದ್ದೀರಾ?

ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಸಂಬಂಧಿಸಿದಂತೆ ಈ ಪ್ರಶ್ನೆಗೆ ಉತ್ತರವು ಆಯಾ ವೇದಿಕೆಗಳು ಹೊಂದಿರುವ ಖಾಸಗಿತನ ನೀತಿಯನ್ನು ಅವಲಂಬಿಸಿರುತ್ತದೆ.

ಫೇಸ್‌ಬುಕ್‌ನಿಂದ ಹಿಡಿದು ಟ್ವಿಟರ್‌ವರೆಗೆ ಸಾವಿನ ಬಳಿಕ ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಯನ್ನು ಯಾರು ನಿರ್ವಹಿಸುತ್ತಾರೆ ಎಂಬ ಕುರಿತು ಮಾಹಿತಿಗಳು ಇಲ್ಲಿವೆ, ಓದಿಕೊಳ್ಳಿ.......

  ಫೇಸ್‌ಬುಕ್

ಫೇಸ್‌ಬುಕ್ ಅತಿ ಹೆಚ್ಚಾಗಿ ಬಳಕೆಯಾಗುತ್ತಿರುವ ಸಾಮಾಜಿಕ ಮಾಧ್ಯಮಗಳಲ್ಲೊಂದಾಗಿದೆ. ಮೃತರಿಗಾಗಿ ಅದು ಕೆಲವು ವಿಶೇಷ ನಿಯಮಗಳನ್ನು ರೂಪಿಸಿಕೊಂಡಿದೆ. ಖಾತೆದಾರನ ಸಾವಿನ ಬಳಿಕ ಖಾತೆಯನ್ನು ಶಾಶ್ವತವಾಗಿ ತೆಗೆದು ಹಾಕಬಹುದು ಇಲ್ಲವೇ ಸ್ಮರಣಾರ್ಥ ಖಾತೆಯನ್ನಾಗಿ ಉಳಿಸಿಕೊಳ್ಳಬಹುದು.

ಖಾತೆದಾರ ತನ್ನ ಸ್ಮರಣಾರ್ಥ ಖಾತೆಯು ನಿರ್ವಹಣೆಯಾಗಬೇಕೆಂಬ ಆಯ್ಕೆಯನ್ನು ಮಾಡಿಕೊಂಡರೆ ಮೃತ ಖಾತೆದಾರನ ಹೆಸರಿನ ಮುಂದೆ ‘ರಿಮೆಂಬರಿಂಗ್’ ಎಂಬ ಶಬ್ದವನ್ನು ತೋರಿಸಲಾಗುತ್ತದೆ. ಅಲ್ಲದೆ ಸಾವಿನ ಬಳಿಕ ತನ್ನ ಖಾತೆಯನ್ನು ನಿರ್ವಹಿಸುವ ವ್ಯಕ್ತಿಯ ಹೆಸರು ಮತ್ತು ಸಂಬಂಧವನ್ನು ಉಲ್ಲೇಖಿಸಿ ಲೀಗಲ್ ಕಾಂಟ್ರಾಕ್ಟ್‌ನ್ನು ಫೇಸ್‌ಬುಕ್‌ಗೆ ಕಳುಹಿಸುವುದು ಅಗತ್ಯವಾಗಿದೆ. ಮರಣ ಪ್ರಮಾಣಪತ್ರ ಒಮ್ಮೆ ಸಲ್ಲಿಕೆಯಾಯಿತೆಂದರೆ ಫೇಸ್‌ಬುಕ್ ಈ ಕಾಂಟ್ರಾಕ್ಟ್‌ನಲ್ಲಿ ಉಲ್ಲೇಖಿಸಿರುವ ಸೂಚನೆಗಳನ್ನು ಅನುಸರಿಸುತ್ತದೆ.

ಯು ಟ್ಯೂಬ್

ವ್ಯಕ್ತಿಯೋರ್ವ ತನ್ನ ಖಾತೆಯ ಭವಿಷ್ಯವನ್ನು ನಿರ್ಧರಿಸಲು ಯು ಟ್ಯೂಬ್ ಅವಕಾಶ ಕಲ್ಪಿಸಿದೆ. ಇದು ವಿಶೇಷವಾಗಿ ತಮ್ಮ ಚಾನೆಲ್‌ಗಳ ಮೂಲಕ ಲಕ್ಷಾಂತರ ರೂ.ಗಳನ್ನು ಗಳಿಸುತ್ತಿರುವ ಯು ಟ್ಯೂಬಿಗರಿಗೆ ಲಾಭದಾಯಕವಾಗಿದೆ. ನಮ್ಮ ಸಾವಿನ ನಂತರ ನಮ್ಮ ಚಾನೆಲ್‌ನ್ನು ನಿರ್ವಹಿಸುವ ವ್ಯಕ್ತಿಯ ಹೆಸರನ್ನು ಉಲ್ಲೇಖಿಸಿ ಕಾನೂನು ಪತ್ರವನ್ನು ಯು ಟ್ಯೂಬ್‌ಗೆ ಕಳುಹಿಸಬಹುದಾಗಿದೆ. ನಾವು ಈ ಆಯ್ಕೆಯನ್ನು ಮಾಡಿಕೊಳ್ಳದಿದ್ದರೆ ಮತ್ತು ನಿರ್ದಿಷ್ಟ ಅವಧಿಯವರೆಗೆ ನಮ್ಮ ಖಾತೆ ನಿಷ್ಕ್ರಿಯವಾಗಿದ್ದರೆ ಯು ಟ್ಯೂಬ್ ಅದನ್ನು ಶಾಶ್ವತವಾಗಿ ಬಂದ್ ಮಾಡುತ್ತದೆ. ಗೂಗಲ್‌ನ ನಿಷ್ಕ್ರಿಯ ಖಾತೆ ಮ್ಯಾನೇಜರ್ ಸಂಪರ್ಕವನ್ನು ನೀವು ನಿಮ್ಮ ನಂಬಿಗಸ್ಥ ವ್ಯಕ್ತಿಗೆ ನೀಡಬಹುದಾಗಿದೆ.

ಇನ್‌ಸ್ಟಾಗ್ರಾಂ

ಇನ್‌ಸ್ಟಾಗ್ರಾಂ ನೀತಿಯು ಹೆಚ್ಚುಕಡಿಮೆ ತನ್ನ ಮಾತೃಸಂಸ್ಥೆ ಫೇಸ್‌ಬುಕ್‌ನಂತೆಯೇ ಇದೆ. ಖಾತೆಯನ್ನು ಸ್ಮರಣಾರ್ಥವಾಗಿಸಬಹುದು ಅಥವಾ ಶಾಶ್ವತವಾಗಿ ಮುಚ್ಚಬಹುದು. ಆದರೆ ಇದು ನಿಮ್ಮ ಕೈಯಲ್ಲಿಲ್ಲ. ಮರಣ ಪ್ರಮಾಣಪತ್ರದೊಂದಿಗೆ ಸಾವಿನ ಮಾಹಿತಿಯನ್ನು ಇನ್‌ಸ್ಟಾಗ್ರಾಂಗೆ ಸಲ್ಲಿಸುವ ವ್ಯಕ್ತಿಯು ಖಾತೆಯನ್ನು ಮುಚ್ಚುವ ಅಥವಾ ಅದನ್ನು ಸ್ಮರಣಾರ್ಥವಾಗಿಸುವ ಬಗ್ಗೆ ನಿರ್ಧರಿಸಬೇಕಾಗುತ್ತದೆ.

ಟ್ವಿಟರ್

ಖಾತೆದಾರನ ಸಾವಿನ ಕುರಿತು ತನಗೆ ಮಾಹಿತಿ ನೀಡುವ ಬಗ್ಗೆ ಟ್ವಿಟರ್ ಯಾವುದೇ ನಿಯಮವನ್ನು ಹೊಂದಿಲ್ಲ. ಆದರೆ ಮೃತ ಖಾತೆದಾರನ ಕುಟುಂಬದ ಸದಸ್ಯ ಖಾತೆಯನ್ನು ತೆಗೆದು ಹಾಕುವಂತೆ ಕೋರಲು ಟ್ವಿಟರ್‌ನ ನೀತಿಯು ಅವಕಾಶ ಕಲ್ಪಿಸಿದೆ. ಇದಕ್ಕೆ ಖಾತೆದಾರನ ಮರಣ ಪ್ರಮಾಣಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

ಕೋರಾ

ಕೋರಾ ಕೇವಲ ಎರಡು ವರ್ಷಗಳಲ್ಲಿ ಜನಪ್ರಿಯ ಸಾಮಾಜಿಕ ಮಾಧ್ಯಮ ತಾಣವಾಗಿ ಪ್ರಗತಿಯನ್ನು ಹೊಂದಿದೆ. ಕೋರಿಕೆಯ ಮೇರೆಗೆ ನಿಮ್ಮ ಪ್ರೊಫೈಲ್‌ನ್ನು ಸ್ಮರಣಾರ್ಥ ಪುಟವನ್ನಾಗಿ ಪರಿವರ್ತಿಸಬಹುದಾದ ನೀತಿಯನ್ನು ಕೋರಾ ಅಳವಡಿಸಿ ಕೊಂಡಿದೆ. ಇಲ್ಲಿಯೂ ಮರಣಪ್ರಮಾಣ ಪತ್ರ ಸಲ್ಲಿಕೆ ಅಗತ್ಯ.

ಯೂಸರ್ ನೇಮ್‌ಗಳೇನಾಗುತ್ತವೆ?

ಲಿಂಕ್ಡ್‌ಇನ್ ಮತ್ತು ಫೇಸ್‌ಬುಕ್ ಇತರರು ನಿಮ್ಮ ಯೂಸರ್ ನೇಮ್ ಪಡೆದು ಕೊಳ್ಳಲು ಅವಕಾಶ ನೀಡುತ್ತವೆ. ಆದರೆ ಇನ್‌ಸ್ಟಾಗ್ರಾಂ, ಟ್ವಿಟರ್ ಮತ್ತು ಗೂಗಲ್‌ನಂತಹ ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳು ನಿಮ್ಮ ಯೂಸರ್ ನೇಮ್‌ಗಳನ್ನು ಇತರ ರೊಂದಿಗೆ ಹಂಚಿಕೊಳ್ಳುವುದಿಲ್ಲ.

ಸಾವಿನ ಬಳಿಕ ಖಾತೆಯ ಕ್ರಿಯಾಶೀಲತೆ

ಯಾರಾದರೂ ಖಾತೆದಾರನ ಸಾವಿನ ಬಗ್ಗೆ ಫೇಸ್‌ಬುಕ್‌ಗೆ ಮಾಹಿತಿ ನೀಡುವವರೆಗೂ ಆತನ ಖಾತೆ ಕ್ರಿಯಾಶೀಲವಾಗಿರುತ್ತದೆ. ಸಾವು ವರದಿಯಾದ ತಕ್ಷಣ ಲಿಂಕ್ಡ್‌ಇನ್ ಖಾತೆಯನ್ನು ಮುಚ್ಚಬಹುದಾಗಿದೆ. ಪಿಂಟರೆಸ್ಟ್ ಖಾತೆಯನ್ನು ಎಂದಿಗೂ ನಿಷ್ಕ್ರಿಯಗೊಳಿ ಸಲು ಸಾಧ್ಯವಿಲ್ಲ. ಟ್ವಿಟರ್ ಖಾತೆಯನ್ನು ಆರು ತಿಂಗಳ ಬಳಿಕ ನಿಷ್ಕ್ರಿಯಗೊಳಿಸಬಹುದು. ಗೂಗಲ್ ಖಾತೆದಾರನ ಸಾವಿನ ಮಾಹಿತಿ ತನಗೆ ತಲುಪಿದ ತಕ್ಷಣ ಖಾತೆಯನ್ನು ಬಂದ್ ಮಾಡುತ್ತದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News