ಕನ್ನಡಕ್ಕೆ ವರದಾನವಾಗಿ ಬಂದ ಕಂಪ್ಯೂಟರ್ ಫಾಂಟ್ ತಂತ್ರಜ್ಞಾನ

Update: 2017-09-30 14:04 GMT

ಕಂಪ್ಯೂಟರ್ ಲಿಪಿತಂತ್ರಜ್ಞಾನದ ವಿಕಾಸದ ಹಾದಿಯಲ್ಲಿ ಪಠ್ಯ ಪ್ರದರ್ಶನಕ್ಕಾಗಿ ಆವಿಷ್ಕಾರಗೊಂಡ ‘ಫಾಂಟ್ ತಂತ್ರಜ್ಞಾನ’ ಒಂದು ಮಹತ್ವದ ಮೈಲಿಗಲ್ಲಾಗಿದೆ. ಈ ತಂತ್ರಜ್ಞಾನದಿಂದಾಗಿ ಭಾಷಾ ಪಠ್ಯವನ್ನು ಸುಂದರವಾಗಿ ಪರದೆಯಲ್ಲಿ ಪ್ರದರ್ಶಿಸಲು ಮತ್ತು ಅದನ್ನು ಮುದ್ರಿಸಿ ಪಡೆ ಯಲು ವಿವಿಧ ರೀತಿಯ ಫಾಂಟ್‌ಗಳು (ವಿವಿಧ ವಿನ್ಯಾಸದ ಅಕ್ಷರ ರೂಪಗಳು) ಲಭ್ಯವಾದವು. ವಿಶ್ವವಿಖ್ಯಾತ ತಂತ್ರಾಂಶ ತಯಾರಿಕಾ ಕಂಪೆನಿ ಯಾದ ‘ಅಡೋಬ್’ ಫಾಂಟ್ ತಂತ್ರಜ್ಞಾನವನ್ನು ಆವಿಷ್ಕರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿತು. ಮೊದಲಿಗೆ ಅಡೋಬ್ ಟೈಪ್ ಮ್ಯಾನೇಜರ್ (ಎ.ಟಿ.ಎಂ.) ಎಂಬ ಪ್ರತ್ಯೇಕ ತಂತ್ರಾಂಶವನ್ನು ಒ.ಎಸ್ (ಆಪರೇಟಿಂಗ್ ಸಿಸ್ಟಂ) ಮೇಲೆ ಅಳವಡಿಸುವ ಮೂಲಕ ವಿವಿಧ ಗಾತ್ರದ ಮತ್ತು ರೂಪದ, ವಿನ್ಯಾಸದ ಪಠ್ಯವನ್ನು ಮಾನಿಟರ್‌ನಲ್ಲಿ ಮೂಡಿಸಲು ಅಗತ್ಯವಾದ ತಂತ್ರಾಂಶವನ್ನು ಅಡೋಬ್ ಕಂಪೆನಿಯು ಒದಗಿಸಿತು. ಇದರಿಂದಾಗಿ, ಕಂಪ್ಯೂಟರ್ ಪರದೆಯಲ್ಲಿ ಪಠ್ಯವು ಯಾವ ರೀತಿ ಕಾಣುತ್ತದೆಯೋ, ಅದೇ ರೀತಿಯಲ್ಲಿ, ಅಂದರೆ, ರೂಪ, ಗಾತ್ರ, ವಿನ್ಯಾಸ ಇವುಗಳಲ್ಲಿ ಯಾವುದೇ ವ್ಯತ್ಯಾಸ ಇಲ್ಲದಂತೆ, ಮುದ್ರಣವನ್ನೂ ಸಹ ಅದೇ ರೀತಿಯಲ್ಲಿ ಪಡೆದುಕೊಳ್ಳುವ ಸೌಲಭ್ಯ ದೊರೆಯಿತು. ಇದರಿಂದಾಗಿ ಪದಸಂಸ್ಕರಣಾ ತಂತ್ರಾಂಶಗಳಲ್ಲಿ ಕ್ರಾಂತಿಕಾರಕ ಬದಲಾವಣೆ ಕಂಡುಬಂತು. ನಂತರ, ಟ್ರೂಟೈಪ್ ಫಾಂಟ್‌ಗಳು ಆವಿಷ್ಕಾರಗೊಂಡವು. ಪಠ್ಯಲಿಪಿಯನ್ನು ಯಾವುದೇ ಗಾತ್ರಕ್ಕೆ (ಒಂದರಿಂದ ಆರಂಭಿಸಿ ಒಂದು ಸಾವಿರದವರೆಗಿನ ಪ್ರಮಾಣದ ದೊಡ್ಡಗಾತ್ರಕ್ಕೆ) ವಿಸ್ತರಿಸಿಕೊಳ್ಳಬಹುದಾದ ಕಾರಣ ಇವುಗಳನ್ನು ‘ಸ್ಕೇಲಬಲ್ ಫಾಂಟ್‌ಗಳು’ ಎಂದೂ ಸಹ ಕರೆಯಲಾಗಿದೆ. ವಿಂಡೋಸ್‌ನ ಟೆಕ್ಸ್ಟ್‌ಎಡಿಟರ್‌ಗಳಾದ ‘ನೋಟ್‌ಪ್ಯಾಡ್’ ಮತ್ತು ‘ವರ್ಡ್‌ಪ್ಯಾಡ್’ಗಳಲ್ಲಿ ಅಷ್ಟೇ ಅಲ್ಲದೆ, ವಿಂಡೋಸ್ ಮೇಲೆ ಕಾರ್ಯನಿರ್ವಹಿಸುವ ‘ಆಫೀಸ್ ಸೂಟ್’ಗಳಲ್ಲಿ (ಉದಾ.: ಮೈಕ್ರೋಸಾಪ್ಟ್ ವರ್ಡ್, ಎಕ್ಸೆಲ್, ಪವರ್‌ಪಾಯಿಂಟ್ ಇತ್ಯಾದಿ) ಮತ್ತು ಪೂರ್ಣಪ್ರಮಾಣದ ಡಿ.ಟಿ.ಪಿ. ಪ್ಯಾಕೇಜ್‌ಗಳಲ್ಲಿಯೂ ಸಹ ಇಂತಹ ಫಾಂಟ್‌ಗಳನ್ನು ಬಳಸಬಹುದಾದ ಅತ್ಯುತ್ತಮ ಸೌಕರ್ಯಗಳಿಂದಾಗಿ, ‘ಕಂಪ್ಯೂಟರ್ ಲಿಪಿ ವ್ಯವಸ್ಥೆ’ಯು ಉತ್ತಮವಾಗಿ ಸುಧಾರಿಸಿದೆ.

ಫಾಂಟ್ ತಂತ್ರಜ್ಞಾನದಿಂದಾಗಿ ಕನ್ನಡದ ಅಕ್ಷರಭಾಗಗಳನ್ನು (ಗ್ಲಿಫ್‌ಸೆಟ್) ಕಂಪ್ಯೂಟರ್‌ಗಳಲ್ಲಿ ಬಳಸುವುದು ಸುಲಭವಾಯಿತು. ಇದರಿಂದ ಕಂಪ್ಯೂಟರಿನಲ್ಲಿ ಕನ್ನಡವನ್ನು ಯಶಸ್ವಿಯಾಗಿ ಅಳವಡಿಸಲು ಸಾಧ್ಯವಾ ಯಿತು. ಇಂಗ್ಲಿಷ್ ತಂತ್ರಾಂಶಗಳಲ್ಲಿನ ರೆಂಡರಿಂಗ್ ವಿಧಾನಗಳನ್ನೇ ಕನ್ನಡಕ್ಕೂ ಅಳವಡಿಸಿಕೊಂಡು, ಹಲವು ಕೀಲಿಯೊತ್ತುಗಳನ್ನು ಆಧರಿಸಿ, ಒಂದಕ್ಕಿಂತ ಹೆಚ್ಚಿನ ಅಕ್ಷರಭಾಗಗಳನ್ನು ಸಂಯೋಜಿಸಿ ಪೂರ್ಣಾಕ್ಷರಗಳನ್ನು ಪ್ರದರ್ಶಿಸುವಲ್ಲಿ ಸ್ಥಳೀಯ ತಂತ್ರಾಂಶ ತಯಾರಕರು ಯಶಸ್ವಿಯಾದರು. ಕನ್ನಡಕ್ಕೆ ಕಾರ್ಯಾಚರಣೆ ವ್ಯವಸ್ಥೆಯ ಮಟ್ಟದಲ್ಲಿಯೇ ಸ್ಥಾನಮಾನಗಳು ಇರದಿದ್ದ ಕಾರಣ ಹಲವು ಬಳಸು ಮಾರ್ಗಗಳಲ್ಲಿ ಕನ್ನಡದ ಲಿಪಿವ್ಯವಸ್ಥೆ ಯನ್ನು ಕಂಪ್ಯೂಟರ್‌ಗೆ ಅಳವಡಿಸಬೇಕಾದ ಸವಾಲುಗಳನ್ನು ಅವರು ಯಶಸ್ವಿಯಾಗಿ ಎದುರಿಸಿದರು.

ಫಾಂಟ್‌ಗಳ ಬಳಕೆಯಿಂದ ವಿಂಡೋಸ್‌ನ ಎಲ್ಲ ಅಪ್ಲಿಕೇಷನ್ ತಂತ್ರಾಂಶ ಗಳಲ್ಲಿ ಕನ್ನಡದ ಬಳಕೆ ಸುಲಭವಾದ ಕಾರಣ ಕಚೇರಿಗಳಲ್ಲಿ ಕನ್ನಡದದಸ್ತಾವೇಜುಗಳ (ಡಾಕ್ಯುಮೆಂಟ್‌ಗಳು) ತಯಾರಿಕೆಯು ಸುಲಭ ಗೊಂಡಿತು. ಅಂತಾರಾಷ್ಟ್ರೀಯ ತಂತ್ರಾಂಶ ತಯಾರಕರ ಬಹುಸೌಲಭ್ಯ ಉಳ್ಳ ವರ್ಡ್, ಲೋಟಸ್ ಆಮಿಪ್ರೋ, ಪೇಜ್-ಮೇಕರ್, ವೆಂಚುರಾ,ಕೋರಲ್-ಡ್ರಾ, ಇನ್‌ಡಿಸೈನ್, ಕ್ವಾರ್ಕ್-ಎಕ್ಸ್‌ಪ್ರೆಸ್ ಇತ್ಯಾದಿ ಪದ ಸಂಸ್ಕರಣ ತಂತ್ರಾಂಶಗಳಲ್ಲಿ ಕನ್ನಡ ಲಿಪಿ ಮೂಡಿಕೆ ಸುಲಭ ಸಾಧ್ಯವಾದ ಕಾರಣದಿಂದ ಕನ್ನಡದ ಪದಸಂಸ್ಕರಣೆ ಕಾರ್ಯವು ಬಹಳಷ್ಟು ಆಧುನೀಕ ರಣಗೊಂಡಿದೆ. ಶ್ರೀಲಿಪಿ, ಪ್ರಕಾಶಕ್, ಆಕೃತಿ, ಸುರಭಿ, ವಿನ್‌ಕೀ - ಇವುಗಳು ಮಾರುಕಟ್ಟೆಯಲ್ಲಿ ಲಭ್ಯವಿರುವ ಫಾಂಟ್ ಆಧಾರಿತ ಕನ್ನಡ ಲಿಪಿ ತಂತ್ರಾಂಶಗಳಾಗಿವೆ. ಬರಹ, ನುಡಿ, ಕುವೆಂಪು ತಂತ್ರಾಂಶ ಮತ್ತು ‘ಪದ’ - ಇವುಗಳು ಉಚಿತ ಬಳಕೆಗೆ ಲಭ್ಯವಿರುವ ಫಾಂಟ್ ಆಧಾರಿತ ಕನ್ನಡ ಲಿಪಿತಂತ್ರಾಂಶಗಳಾಗಿವೆ. ಕನ್ನಡದ ಫಾಂಟ್‌ಗಳು ಮಾರುಕಟ್ಟೆಯಲ್ಲಿ ಮಾತ್ರವೇ ಲಭ್ಯವಿದ್ದ ಸಂದ ರ್ಭದಲ್ಲಿ, ಕಂಪ್ಯೂಟರ್‌ನಲ್ಲಿ ಕನ್ನಡವೂ ಸಹ ಬೆಳೆದು ಉಳಿಯಲಿ ಎಂಬ ಸದುದ್ದೇಶದಿಂದ ಕನ್ನಡದ ಫಾಂಟ್ ಲಿಪಿತಂತ್ರಾಂಶವನ್ನು ತಯಾರಿಸಿ ಉಚಿತ ಬಳಕೆಗೆ ನೀಡಿದವರಲ್ಲಿ ಅಮೆರಿಕದಲ್ಲಿರುವ ಕನ್ನಡಿಗ ಶ್ರೀ ಶೇಷಾದ್ರಿ ವಾಸುರವರು ಮೊದಲಿಗರು. ಇವರು ‘ಬರಹ’ ಎಂಬ ಹೆಸರಿನ ಕನ್ನಡ ಲಿಪಿ ತಂತ್ರಾಂಶವನ್ನು ಸಿದ್ಧಪಡಿಸಿ ವಿಶ್ವದ ಎಲ್ಲೆಡೆ ಇರುವ ಕನ್ನಡಿಗರಿಗೆ ಅಂತರ್ಜಾ ಲದ ಮೂಲಕ ತಂತ್ರಾಂಶವನ್ನು ವಿತರಿಸಿದರು. ಕನ್ನಡ ಗಣಕ ಪರಿಷತ್ತು ಕರ್ನಾಟಕ ಸರಕಾರದ ಅನುದಾನದ ಬೆಂಬಲದೊಂದಿಗೆ ಯುನಿಕೋಡ್ ಫಾಂಟ್‌ಗಳ ಸಹಿತ ಹೆಚ್ಚಿನ ಸೌಲಭ್ಯಗಳೊಂದಿಗೆ ‘ನುಡಿ-6’ ಬಿಡುಗಡೆಗೆ ಸಿದ್ಧಗೊಂಡಿದೆ. ಕನ್ನಡದ್ದೇ ಯೂಸರ್ ಇಂಟರ್‌ಪೇಸ್ ಉಳ್ಳ ವಿಂಡೋಸ್‌ನ ವರ್ಡ್‌ಪ್ಯಾಡ್ ರೀತಿಯ ಒಂದು ಸರಳವಾದ ಟೆಕ್ಸ್ಟ್‌ಎಡಿಟರ್‌ನ್ನು ಇದರಲ್ಲಿ ನೀಡಲಾಗಿದೆ. ಹಂಪಿ ಕನ್ನಡ ವಿಶ್ವವಿದ್ಯಾನಿಲಯವೂ ಸಹ ‘ಕುವೆಂಪು ತಂತ್ರಾಂಶ’ ಎಂಬ ಹೆಸರಿನ ಕನ್ನಡ ಲಿಪಿತಂತ್ರಾಂಶವನ್ನು ಸಿದ್ಧಪಡಿಸಿ ಸಾರ್ವಜನಿಕ ಬಳಕೆಗೆ ಉಚಿತವಾಗಿ ಬಿಡುಗಡೆ ಮಾಡಿದೆ.

ಅಂತಾರಾಷ್ಟ್ರೀಯ ತಂತ್ರಾಂಶ ತಯಾರಕರು ಇಂಗ್ಲಿಷ್ ಲಿಪಿಯ ಅಕ್ಷರಗಳ ನೋಟವನ್ನು, ಅಂದರೆ, ಮಾನಿಟರ್‌ನ ಮೇಲಿನ ಪ್ರದರ್ಶನ ರೂಪವನ್ನು ಬದಲಿಸಿಕೊಳ್ಳಲು ನೀಡಿರುವ ಅವಕಾಶದಿಂದಾಗಿ, ಇಂಗ್ಲಿಷ್‌ನ ಸುಂದರ ಮತ್ತು ವಿವಿಧ ರೂಪದ (ಫಾಂಟ್‌ಪೇಸ್), ವಿನ್ಯಾಸದ ಅಕ್ಷರಗಳನ್ನು ಪರದೆಯಲ್ಲಿ ನೋಡುವುದು ಮತ್ತು ಅದೇ ರೀತಿಯಲ್ಲಿ ಮುದ್ರಿಸಿಕೊಳ್ಳುವುದು ಸಾಧ್ಯವಾಯಿತು. ಈ ರೀತಿಯ ಹೊಸ ‘ಫಾಂಟ್ ಪ್ರದರ್ಶನ ತಂತ್ರಜ್ಞಾನ’ವೇ ಕನ್ನಡವೂ ಸೇರಿದಂತೆ ಇತರ ಭಾರತೀಯ ಭಾಷೆಗಳಿಗೆ ವರದಾನವಾಯಿತು. ಎಲ್ಲೆಲ್ಲಿ ಫಾಂಟ್‌ಗಳನ್ನು ಬದಲಿಸಿಕೊಳ್ಳುವ ಅವಕಾಶ ಇದೆಯೋ, ಅಲ್ಲೆಲ್ಲಾ, ಕನ್ನಡದ ಲಿಪಿಯನ್ನೂ ಸಹ ಮೂಡಿಸಲು ಸಾಧ್ಯವಾಯಿತು.

Writer - ಸತ್ಯನಾರಾಯಣ ಎ.

contributor

Editor - ಸತ್ಯನಾರಾಯಣ ಎ.

contributor

Similar News