ದೇವರ ದಯೆಯಿಂದ ತಾಯ್ನಾಡಿಗೆ ಮರಳಿದೆ: ಫಾ.ಟಾಮ್ ಉಯನ್ನಾಲಿಲ್
ಬೆಂಗಳೂರು, ಸೆ.30: ಎಲ್ಲ ದೇವರುಗಳ ದಯೆಯಿಂದಲೇ ತಾನು ಉಗ್ರರಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದೆ. ನನಗಾಗಿ ಪ್ರಾರ್ಥಿಸಿದ ಎಲ್ಲ ವರ್ಗದ ಜನರಿಗೆ ಕೃತಜ್ಞತೆ ಎಂದು ಕೇರಳ ಮೂಲದ ಪಾದ್ರಿ ಫಾದರ್ ಟಾಮ್ ಉಯನ್ನಾಲಿಲ್ ಹೇಳಿದರು.
ಶನಿವಾರ ನಗರದ ಡಾನ್ ಬೋಸ್ಕೋ ಕಟ್ಟಡದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2016ರ ಮಾರ್ಚ್ 4ರಂದು ಯೆಮನ್‌ನ ವೃದ್ಧಾಶ್ರಮದ ಮೇಲೆ ದಾಳಿ ನಡೆದ ಸಂದರ್ಭದಲ್ಲಿ 16 ಮಂದಿಯನ್ನು ಹತ್ಯೆಗಯ್ಯಲಾಗಿತ್ತು. ಬಳಿಕ ಐಸಿಸ್ ಭಯೋತ್ಪಾದಕರು ನನ್ನನ್ನು ಕರೆದುಕೊಂಡು ಹೋಗಿದ್ದರು.
ಸತತ ನಾಲ್ಕು ಬಾರಿ ಸ್ಥಳ ಬದಲಾವಣೆ ಮಾಡಿದ ಉಗ್ರರು, ಒಂದು ಚಿಕ್ಕ ಕೊಠಡಿಯಲ್ಲಿ ಕೂಡಿ ಹಾಕಿದ್ದರು. ಅಲ್ಲಿ ಯಾರಿಗೂ ಅರಬಿಕ್ ಭಾಷೆ ಬಿಟ್ಟು ಬೇರೆ ಯಾವುದೇ ಭಾಷೆ ಗೊತ್ತಿರಲಿಲ್ಲ. ನನಗೆ ಮಧುಮೇಹ ರೋಗ ಇದ್ದ ಬಗ್ಗೆ ಮಾಹಿತಿ ಪಡೆದು ಕೆಲ ಚಿಕಿತ್ಸೆಯನ್ನು ಉಗ್ರರು ನೀಡುತ್ತಿದ್ದರು ಎಂದು ಟಾಮ್ ಉಯನ್ನಾಲಿಲ್ ತಿಳಿಸಿದರು.
ನನ್ನನ್ನು ಬಿಡುಗಡೆಗೊಳಿಸಿದ ಸಂದರ್ಭದಲ್ಲಿ ಮೂವರು ಉಗ್ರರು ಕಾರಿನಲ್ಲಿ ಕರೆದುಕೊಂಡು ಯಮೆನ್‌ನಲ್ಲಿ ಬಿಟ್ಟು ಹೋದರು. ಬಳಿಕ ವೈದ್ಯರೊಬ್ಬರ ಸಹಾಯದಿಂದ ರೋಮ್‌ಗೆ ಬಂದು, ತದನಂತರ ಹೊಸದಿಲ್ಲಿಗೆ ಬಂದೆ. ಅಲ್ಲದೆ, ಭಾಷೆ ಗೊತ್ತಿಲ್ಲದ ಕಾರಣ ಉಗ್ರರೊಂದಿಗೆ ಯಾವುದೇ ರೀತಿ ಮಾತುಕತೆ ನಡೆಸಿಲ್ಲ ಎಂದು ಅವರು ಹೇಳಿದರು.
ವಿಚಾರಣೆ ಇಲ್ಲ: ಉಗ್ರರಿಂದ ಬಿಡುಗಡೆಯಾದ ನಂತರ ಭಾರತದ ಯಾವುದೇ ತನಿಖೆ ಸಂಸ್ಥೆಯೂ ನನ್ನನ್ನು ವಿಚಾರಣೆ ನಡೆಸಿಲ್ಲ. ಈ ಬಗ್ಗೆ ಅವರು ಪ್ರಶ್ನಿಸಿದರೆ, ನಾನೂ ಉತ್ತರಿಸಲು ಸಿದ್ದವಾಗಿದ್ದೇನೆ ಎಂದು ಅವರು ಹೇಳಿದರು.
ಕರ್ನಾಟಕದ ಕೆಜಿಎಫ್,ಹಾಸನ,ಭದ್ರಾವತಿ,ಬೆಂಗಳೂರಿನಲ್ಲಿ ಹತ್ತಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ.ಉಗ್ರರಿಂದ ಬಿಡುಗಡೆ ಬಂದಿರುವುದು ಒಂದು ಸಾಹಸ ಅಷ್ಟೇ ಅಲ್ಲದೆ, ಎಲ್ಲ ಧರ್ಮಿಯರು ನನಗಾಗಿ ಪ್ರಾರ್ಥಿಸಿದ್ದರು ಎಂದು ಫಾದರ್ ಟಾಮ್ ಉಯನ್ನಾಲಿಲ್ ನುಡಿದರು.
ಹಣ ನೀಡಿಲ್ಲ
‘ಐಸಿಸ್ ಉಗ್ರರಿಂದ ನನಗೆ ಮುಕ್ತಿ ದೊರಕಲು ಹಣ ನೀಡಿದ್ದಾರೆ ಎನ್ನುವ ಮಾತು ಸುಳ್ಳು. ಅಲ್ಲದೆ, ಈ ಬಗ್ಗೆ ನನಗೆ ಯಾವುದೇ ರೀತಿಯ ಮಾಹಿತಿ ಇಲ್ಲ’
-ಫಾದರ್ ಟಾಮ್ ಉಯನ್ನಾಲಿಲ್