ಬೆಂಗಳೂರು; ಪ್ರತ್ಯೇಕ ಅಪಘಾತ: ಐವರ ಸಾವು
ಬೆಂಗಳೂರು, ಸೆ.30: ನಗರದ ಕೆಂಗೇರಿ ಐದು ಕಡೆಗಳಲ್ಲಿ ನಡೆದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಐವರು ಮೃತಪಟ್ಟು, ವ್ಯಕ್ತಿಯೊಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.
ಕೆಂಗೇರಿಯ ನೈಸ್ ರಸ್ತೆಯ ವೃಷಭಾವತಿ ನದಿ ಸೇತುವೆ ರಸ್ತೆಯಲ್ಲಿ ಬೈಕ್‌ನಲ್ಲಿ ದುರ್ಗಾಪೂಜೆಗೆ ಹೋಗುತ್ತಿದ್ದ ದಂಪತಿಗೆ ಹಿಂದಿನಿಂದ ಬಂದ ಲಾರಿ ಢಿಕ್ಕಿ ಹೊಡೆದು ಪೀಣ್ಯಾದ ಜಯಶ್ರೀದಾಸ್(22) ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಜಯಶ್ರೀದಾಸ್ ಅವರ ಪತಿ ಪತ್ನಿಕ್ ಮೈಟಿ(27) ಆರ್‌ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಪಶ್ಚಿಮ ಬಂಗಾಳ ಮೂಲದ ಈ ದಂಪತಿ ಸೆ.28 ರಂದು ಮಧ್ಯಾಹ್ನ 1ರ ವೇಳೆ ಎಲೆಕ್ಟ್ರಾನಿಕ್ ಸಿಟಿಗೆ ದುರ್ಗಾಪೂಜೆಗಾಗಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಈ ಸಂಬಂಧ ಕೆಂಗೇರಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಶುಕ್ರವಾರ ರಾತ್ರಿ 7:30ರ ಸುಮಾರಿಗೆ ಜಾಲಹಳ್ಳಿಯ ಕಮ್ಮಗೊಂಡನಹಳ್ಳಿ ಮುಖ್ಯರಸ್ತೆಯಲ್ಲಿ ರಸ್ತೆಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಮೇಲೆ ಲಾರಿ ಹರಿದು ದೇವ(46) ಎಂಬಾತ ಮೃತಪಟ್ಟಿದ್ದಾರೆ. ಪೇಂಟರ್ ಕೆಲಸ ಮಾಡುತ್ತಿದ್ದ ದೇವ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಲಾರಿ ಚಾಲಕನನ್ನು ಬಂಧಿಸಿರುವ ಜಾಲಹಳ್ಳಿ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪೀಣ್ಯಾದ ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿ ಶುಕ್ರವಾರ ರಾತ್ರಿ 7:30ರ ಸುಮಾರಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ಅರುಣ್ ದಾಸ್(35) ಆಯತಪ್ಪಿಬಿದ್ದು ಮೃತಪಟ್ಟಿದ್ದಾರೆ. ಈ ಸಂಬಂಧ ಪೀಣ್ಯ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ರೈತ ಸಾವು: ದೊಡ್ಡಬಳ್ಳಾಪುರದ ಗುಮ್ಮನಹಳ್ಳಿಯಿಂದ ಆಯುಧ ಪೂಜೆ ಹಿನ್ನಲೆ ಬಾಳೆಕಂದುಗಳನ್ನು ಮಾರಾಟ ಮಾಡಲು ನಗರಕ್ಕೆ ಬಂದಿದ್ದ ರೈತ ನಾಗರಾಜ್(54) ವ್ಯಾಪಾರ ಮುಗಿಸಿ ಶುಕ್ರವಾರ 11.15ರ ವೇಳೆ ಮಾರಪ್ಪನಹಳ್ಳಿಯ ಮಾಂಡವಿ ಮೋಟಾರ್ಸ್ ಮುಂಭಾಗದ ರಸ್ತೆಯಲ್ಲಿ ಮಲಗಿದ್ದಾಗ ಲಾರಿ ಹರಿದು ಮೃತಪಟ್ಟಿದ್ದಾರೆ. ಪ್ರಕರಣ ಸಂಬಂಧ ಲಾರಿ ಚಾಲಕನನ್ನು ಬಂಧಿಸಿರುವ ಯಶವಂತಪುರ ಸಂಚಾರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಯುವಕ ಸಾವು: ಮಲ್ಲೇಶ್ವರಂ ಮಿಲ್ಕ್ ಕಾಲನಿಯಲ್ಲಿ ವೇಗವಾಗಿ ಬಂದ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಜಗನ್(28) ಎಂಬುವರು ಮೃತಪಟ್ಟಿದ್ದಾರೆ.ಶುಕ್ರವಾರ ಬೆಳಿಗ್ಗೆ 7:30ರ ವೇಳೆ ನಡೆದುಹೋಗುತ್ತಿದ್ದ ಜಗನ್‌ಗೆ ಬೈಕ್ ಢಿಕ್ಕಿ ಹೊಡೆದಿತ್ತು. ಗಾಯಗೊಂಡಿದ್ದ ಅವನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಮಲ್ಲೇಶ್ವರಂ ಸಂಚಾರ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.