ಸುರೇಶ್ ನಾಗಲಮಡಕೆಯವರ ಕಾಣ್ಕೆ ಮತ್ತು ಕಣ್ಕಟ್ಟು

Update: 2017-09-30 17:06 GMT

ಇತ್ತೀಚಿನ ಬರಹಗಾರರಲ್ಲಿ ಸುರೇಶ್ ನಾಗಲ ಮಡಕೆರವರ ಹೆಸರು ಮುಖ್ಯವಾದುದು. ಮುತ್ತು ಬಂದಿದೆ ಕೇರಿಗೆ, ತಕ್ಕ ಮಣ್ಣಿನ ತೇವ ಕ್ಕಾಗಿ, ಜನಪದ ಲೋಕದೃಷ್ಟಿಯ ಮುಖೇನ ಕನ್ನಡ ಸಾಹಿತ್ಯ,ಇವು ಅವರ ಪ್ರಕಟಿತ ಕೃತಿಗಳು ಕಾಣ್ಕೆ ಮತ್ತು ಕಣ್ಕಟ್ಟು ಅವರ ಹೊಸ ವಿಮರ್ಶಾ ಸಂಕಲನ.

ತಾತ್ವಿಕತೆ, ಕಾವ್ಯ, ಕೃತಿ ಪರಿಚಯ ಇವುಗಳ ಶೀರ್ಷಿಕೆಯಲ್ಲಿ ಕನ್ನಡದ ವಿವಿಧ ಕಾಲಘಟ್ಟಗಳ ವಿಮರ್ಶೆಯನ್ನು ಇದರಲ್ಲಿ ಕಾಣಬಹುದು.

ಪುಸ್ತಕದ ಶೀರ್ಷಿಕೆಯೇ ಹೇಳುವಂತೆ ಕಾಣಿಕೆಗಳು ಮತ್ತು ಕಣ್ಕಟ್ಟುಗಳು ಗುರುತಿಸುವ ಪ್ರಯತ್ನದ ಜೊತೆಗಿನ ವಿಮರ್ಶೆ. ‘‘ಪಂಪನ ನುಡಿಗಣಿ’’, ಪಿವಿಎನ್ ರವರ ಶಬ್ದಕೋಶದ ರಚನಾ ಕ್ರಮ ಮತ್ತು ಅನುಸರಿಸಿರುವ ವಿಧಾನವನ್ನು ಕುರಿತು ಚರ್ಚಿಸಿದ್ದಾರೆ ಶಬ್ದದ ಬಳಕೆ ಮತ್ತು ಪ್ರಯೋಗದ ದೃಷ್ಟಿಯಿಂದ ಪಂಪನ ನುಡಿಗಣಿಯನ್ನು ವಿವರಿಸಿರುವ ಜೊತೆಗೆ ಇಂತಹದ್ದೇ ರೀತಿಯಲ್ಲಿ ಬರಬೇಕಾಗಿರುವ ವಿವಿಧ ಬಗೆಯ ಶಬ್ದಕೋಶಗಳ ಆವಶ್ಯಕತೆಯನ್ನು ತಿಳಿಸಿದ್ದಾರೆ.

ಯಾವುದೇ ಪೂರ್ವಾಗ್ರಹಗಳಿಗೆ ಒಳಗಾಗದೆ. ಸಿದ್ಧ್ದಮಾದರಿಗಳ ಬೆನ್ನೇರದೆ ಇವರ ವಿಮರ್ಶೆ ಇರುವುದನ್ನು ಕಾಣಬಹುದು. ಲಿಂಗಧ್ಯಾನಿ ಸಿದ್ದರಾಮೇಶ್ವರ, ಹರಿದಾಸ ಪಂಥ ಒಂದುನೋಟ, ಕಾಡಿನ ಹುಡುಗ ಸುಬ್ರಹ್ಮಣ್ಯ ಈ ಲೇಖನಗಳನ್ನು ಲೇಖಕರು ನೋಡಿರುವ ಕ್ರಮ ಬಹಳ ಮುಖ್ಯವಾದುದು. ದೇಸೀ ಚಿಂತನೆಯನ್ನು ಗುರುತಿಸುವ ಹುಡುಕಾಟ ಈ ಲೇಖನಗಳಲ್ಲಿ ಕಾಣಬಹುದು. ನೈಜವಾದದ್ದು ಜನರ ಆಚರಣೆಗಳಿಂದ ದೂರವಾಗುವ ಬಗೆ, ಕಣ್ಕಟ್ಟುಗಳು ಆವರಿಸಿಕೊಳ್ಳುವ ವಿಧಾನಗಳನ್ನು ಈ ಲೇಖನಗಳಲ್ಲಿ ಕಾಣಬಹುದು.

ಹರಿದಾಸ ಪಂಥ ಒಂದು ನೋಟ ಈ ಲೇಖನದಲ್ಲಿ ಕನಕ ಮತ್ತು ಪುರಂದರ ಕಾಲದ ಸಾಮಾಜಿಕ ಪರಿಸ್ಥಿತಿ, ದಾಸ ಸಾಹಿತ್ಯದ ಕ್ರಿಯಾಶೀಲತೆ, ಪ್ರತಿಭಟನಾತ್ಮಕ ಸ್ವರೂಪದಲ್ಲಿಯೂ ಕಾಣಬಹುದಾದ ಧಾರ್ಮಿಕ ನಿಯಂತ್ರಣ ಅವರ ಸಾಹಿತ್ಯದ ಮೇಲೆ ಪರಿಣಾಮ ಬೀರಿರುವುದರ ಬಗ್ಗೆ ವಿವರಿಸಿರುವುದನ್ನು ಕಾಣಬಹುದು.

ಮತ್ತೊಂದು ಗಮನಿಸಬೇಕಾಗಿರುವ ಅಂಶವೆಂದರೆ ಸಾಹಿತ್ಯ ರಚನಾ ಕ್ರಮವನ್ನು ಲೇಖಕರು ಗುರುತಿಸಿರುವುದು. ಹರಿದಾಸರ ಮೌಖಿಕ ಸಾಹಿತ್ಯದ ರೂಪದ ಜೊತೆಗೆ ವಸಹಾತುಶಾಹಿ ಸಂದರ್ಭದಲ್ಲಿ ಸಾಹಿತ್ಯ ಪ್ರಕಾರಗಳು ಹೇಗೆ ವಿಕಸನಗೊಂಡವು ಎಂಬುದನ್ನು ಇವರ ಒಟ್ಟಾರೆ ಲೇಖನಗಳಲ್ಲಿ ಗುರುತಿಸಬಹುದು. ಕನ್ನಡ ಸಾಹಿತ್ಯ ಲೋಕದ ಗದ್ಯ ಪ್ರಕಾರ ಬೆಳವಣಿಗೆ ಹೊಂದಿದ ಹಿನ್ನೆಲೆ ಹಾಗೂ ಆ ಸಂದರ್ಭದಲ್ಲಿ ಅದರ ಆವಶ್ಯಕತೆ ಹಾಗೆಯೇ ಇಂದು ಅವುಗಳು ಸಾಂಸ್ಕೃತಿಕ ಪಠ್ಯಗಳ ರೀತಿಯಲ್ಲಿ ಗ್ರಹಿಸಬಹುದಾದ ಹೊಸ ಒಳನೋಟದ ಸಾಧ್ಯತೆಯನ್ನು ಲೇಖಕರು ನೀಡಿ ದ್ದಾರೆ. ಅಮರೇಶ ನುಗಡೋಣಿ, ಹಾಲಗೇರಿ, ಹನುಮಂತಯ್ಯ ರವರ ಸಾಹಿತ್ಯದ ಹಿನ್ನೆಲೆಯನ್ನು ತಿಳಿಸಿದ್ದಾರೆ. ದಲಿತ ಸಾಹಿತ್ಯದ ಇಂದಿನ ಸಮಸ್ಯೆ ಗಳು, ಆ ಸಮಸ್ಯೆಯನ್ನು ವ್ಯಕ್ತ ಪಡಿಸುವಿಕೆಯಲ್ಲಿನ ಸೃಜನಶೀಲತೆ, ವಾಸ್ತವವನ್ನು ದಲಿತಪ್ರಜ್ಞೆ ಮುಖಾ ಮುಖಿ ಆಗುವ,ಎದುರುಗೊಳ್ಳುವ ವಿಧಾನಗಳನ್ನು ಇವರ ಕತೆಗಳ ಮೂಲಕ ಚರ್ಚಿಸಿದ್ದಾರೆ..

ಈ ಕತೆಗಳ ಮೂಲಕ ಒಟ್ಟಾರೆ ಒಂದು ಸಮು ದಾಯದ ಸಾಂಸ್ಕೃತಿಕ ವಿಶ್ಲೇಷಣೆ, ಸಾಮಾಜಿಕ ಆರ್ಥಿ ಕ ಪರಿಸ್ಥಿತಿಯ ನ್ನೊಳಗೊಂಡ ಚರ್ಚೆಯನ್ನು ನುಗ ಡೋಣಿ, ಹಾಲಗೇರಿ ಕತೆಗಳಲ್ಲಿ ಬೆಳೆಸುತ್ತಾರೆ ಲೇಖಕರು...

ಕಾವ್ಯ ಹಾಗೂ ಕಾವ್ಯ ತತ್ವದ ಕುರಿತಾದ ಇವರ ಆಲೋಚನೆ ಇಂದಿನ ಕವಿಗಳಿಗೆ ಕಾವ್ಯದ ಗಂಭೀರ ಯೋಚನೆಯನ್ನು ಮಾಡುವಲ್ಲಿ ಸಹಕಾರಿ ಯಾಗಬಹುದು. ಇವರು ಆಯ್ದುಕೊಂಡಿರುವ ಮಂಜುನಾಥ್ ಎಸ್, ಹನುಮಂತಯ್ಯ, ಆರೀಫ್ ರಾಜ, ಲಕ್ಷ್ಮೀಪತಿ ಕೋಲಾರ ರವರ ಕವಿತೆಗಳು ಮತ್ತು ಅವುಗಳ ವಿಶ್ಲೇಷಣೆ ಚೆನ್ನಾಗಿದೆ. ಕವಿಯಾದವನು ಕವಿತೆಯಲ್ಲಿ ಪ್ರತಿಕ್ರಿಯಿಸಬೇಕಾದ ಅಂಶಗಳಾವುವು? ಪ್ರಸ್ತುತದ್ದೋ ಅಥವಾ ತನ್ನೊಳಗಿನದ್ದೋ ಎಂಬ ಚರ್ಚೆ ಗೌಣವಾಗಿದೆ. ಕಾವ್ಯ ತತ್ವ ಹಾಗೂ ಕಾವ್ಯದ ಸೃಜನಶೀಲತೆ, ಕಾವ್ಯದ ಗಂಭೀರತೆ ಕುರಿತಾಗಿ ವಿವರಿಸಿದ್ದಾರೆ. ಕಾವ್ಯದ ಅಭಿವ್ಯಕ್ತಿ ಕ್ರಮ ವಿವಿಧ ಕವಿಗಳಲ್ಲಿ ಭಿನ್ನವಾಗಿರುವುದು, ಅವರ ದೃಷ್ಟಿಕೋನ, ರೂಪಕ ಇವುಗಳನ್ನು ಅವರವರ ಸಮಗ್ರ ಕಾವ್ಯಗಳ ಹಿನ್ನೆಲೆಯಲ್ಲಿ ವಿವರಿಸಿದ್ದಾರೆ. ಆರೀಫ್ ರಾಜ, ಲಕ್ಷ್ಮೀಪತಿ ಕೋಲಾರ, ಮಂಜುನಾಥ್ ಎಸ್ ವಿಠಲ ದಳವಾಯಿಕವನಗಳ ಕುರಿತಾಗಿ ಕನ್ನಡದ ಭವಿಷ್ಯದ ಕಾವ್ಯ ಲೋಕಕ್ಕೆ ಉತ್ತಮ ಕವಿಗಳು ಸಿಗಬಹುದೆಂಬ ಭರವಸೆಯನ್ನು ಲೇಖಕರು ತಿಳಿಸಿದ್ದಾರೆ.

ಕೊನೆಯ ಭಾಗದಲ್ಲಿ ಕೃತಿ ವಿಮರ್ಶೆ ಶೀರ್ಷಿಕೆ ಯಡಿ ಬಸವರಾಜ ಕಲ್ಗುಡಿ, ಸಿ.ಯು. ಮಂಜುನಾಥ್,ರಂಗನಾಥ ಕಂಟನಕುಂಟೆ ಇವರ ಸಂಶೋಧನಾ ಕೃತಿಗಳ ವಿಚಾರವನ್ನು ವಿವರಿಸಿದ್ದಾರೆ. ಹಾಗೆಯೇ ಕಾಮ ರೂಪಿಯವರ ಕತೆಗಳು ಮತ್ತು ಝಿಯಾವುದ್ದೀನ್ ಸರ್ದಾರ್ ರವರ ಕೃತಿಗಳ ಕುರಿತು ವಿಶ್ಲೇಷಿಸಿದ್ದಾರೆ.

ಸಂಸ್ಕೃತಿ, ಸಾಹಿತ್ಯ, ಭಾಷೆ ಕುರಿತಾದ ಸಂಶೋಧನಾ ವಿಚಾರವನ್ನು ಹಾಗೂ ಮುಂದುವರಿಯಬಹುದಾದ ದಿಕ್ಕನ್ನು ಎದುರಿಸುತ್ತಿರುವ ಮಿತಿಗಳನ್ನು ಲೇಖಕರು ತಿಳಿಸಲು ಪ್ರಯತ್ನಿಸಿದ್ದಾರೆ. ಕಾಮರೂಪಿ ಕತೆಗಳಲ್ಲಿ ಕಥನ ತಂತ್ರದ ಕುರಿತಾದ ಚರ್ಚೆ ಬೆಳೆಸಿದ್ದಾರೆ. ಕಥನ ಕಾರನು ಹೇಳಬೇಕಾಗಿರುವ ವಿಷಯ ಮತ್ತು ಕಥನ ತಂತ್ರದ ಕುರಿತಾದ ಚರ್ಚೆ ಇನ್ನೂ ಬೆಳೆಸಬಹುದಿತ್ತು ಅನಿಸುತ್ತದೆ.

ಒಟ್ಟಾರೆ ಕಾಣ್ಕೆ ಮತ್ತು ಕಣ್ಕಟ್ಟು ಪ್ರಸ್ತುತ ವಿಮ ರ್ಶಾಲೋಕದ ಪರಿಸರಕ್ಕೆ ಸುರೇಶ್ ನಾಗಲಮಡಿಕೆಯವರಂತಹ ಉತ್ತಮ ಯೋಚನೆ ಉಳ್ಳ ಹಾಗೂ ಸರಳ ಶೈಲಿಯಲ್ಲಿ ಗಂಭೀರ ವಿಚಾರವನ್ನು ಹೇಳಬಲ್ಲ ಉತ್ತಮ ಬರಹಗಾರರನ್ನು ನೀಡಿದೆ.

   

ನಾನು ಓದಿದ ಪುಸ್ತಕ 

ಗೋಪಾಲಕೃಷ್ಣ.ಆರ್.

Writer - ಗೋಪಾಲಕೃಷ್ಣ.ಆರ್.

contributor

Editor - ಗೋಪಾಲಕೃಷ್ಣ.ಆರ್.

contributor

Similar News