ಗಾಂಧೀಜಿಯ ಅಹಿಂಸೆ ಮತ್ತು ಕೋಮುವಾದದ ಕ್ರೌರ್ಯ

Update: 2017-09-30 17:55 GMT

ಗಾಂಧಿ ಹತ್ಯೆ ಆ ಕಾಲಕ್ಕೆ ಭಾರತದಲ್ಲಿ ನಡೆದ ಮೊತ್ತಮೊದಲ ಭಯೋತ್ಪಾದನೆ ಕೃತ್ಯವಾಗಿತ್ತು. ಗಾಂಧಿ ಹತ್ಯೆಯ ಬಳಿಕ ಅದರ ಆರೋಪಿ ಎಂದು ಅನುಮಾನಿಸಿ ಆರೆಸ್ಸೆಸ್‌ನ್ನು ನಿಷೇಧ ಮಾಡಲಾಗಿತ್ತು. 11, ಸೆಪ್ಟಂಬರ್, 1948ರಂದು ಆಗಿನ ಗೃಹಮಂತ್ರಿ ವಲ್ಲಭಭಾಯಿ ಪಟೇಲ್ ಅವರು ಆರೆಸ್ಸೆಸ್ ಮುಖ್ಯಸ್ಥ ಗೋಳ್ವಾಲ್ಕರ್ ಅವರಿಗೆ ಬರೆದ ಪತ್ರದಲ್ಲಿ ‘‘ಕಾಂಗ್ರೆಸ್ ವಿರೋಧಿ ಧೋರಣೆ ಪ್ರದರ್ಶಿಸುವಾಗ ಆರೆಸ್ಸೆಸ್ ಕಾರ್ಯಕರ್ತರು ಎಲ್ಲಾ ಘನತೆ, ಗೌರವಗಳನ್ನು ಗಾಳಿಗೆ ತೂರಿ ಜನಗಳ ನಡುವೆ ಅಶಾಂತಿ, ಆತಂಕ ತಂದಿಡುತ್ತಿದ್ದಾರೆ. ಅವರ ಭಾಷಣಗಳು ವಿಷಪೂರಿತ ವಾಗಿವೆ. ಈ ರೀತಿ ವಿಷಮಯ ವಾತಾವರಣವನ್ನು ಹಬ್ಬಿಸಿ ಹಿಂದೂಗಳನ್ನು ಪ್ರಚೋದಿಸುವುದು ಸರಿಯಲ್ಲ. ಈ ವಿಷಪೂರಿತ ವಾತಾವರಣದ ಫಲವಾಗಿ ಗಾಂಧೀಜಿಯವರ ಹತ್ಯೆಯಾಯಿತು. ಗಾಂಧೀಜಿ ಸಾವಿನ ಸಂದರ್ಭ ದಲ್ಲಿ ಆರೆಸ್ಸೆಸ್ ಕಾರ್ಯಕರ್ತರು ಸಂತಸದಿಂದ ಸಿಹಿ ಹಂಚಿದ್ದನ್ನು ಕಂಡು ದಿಗ್ಭ್ರಮೆಯಾಗುತ್ತದೆ. ಈ ವಾತಾವರಣದಲ್ಲಿ ಆರೆಸ್ಸೆಸ್ ವಿರುದ್ಧ ಕ್ರಮ ಕೈಗೊಳ್ಳುವುದು ಸರಕಾರಕ್ಕೆ ಅನಿವಾರ್ಯವಾಗಿದೆ’’ ಎಂದು ವಿವರಿ ಸುತ್ತಾರೆ. ಆದರೆ ಕಳೆದ 70 ವರ್ಷಗಳಿಂದ ಆರೆಸ್ಸೆಸ್ ನಾಥೂರಾಮ್ ಗೋಡ್ಸೆ ತಮ್ಮ ಸಂಘಟನೆಗೆ ಸೇರಿದವನಲ್ಲ, ಆತನಿಗೂ ನಮಗೂ ಸಂಬಂಧ ವಿಲ್ಲ ಎಂದು ಹೇಳುತ್ತಲೇ ಬಂದಿದೆ. ಆದರೆ ಗಾಂಧಿ ಹತ್ಯೆಯು ಹಿಂದುತ್ವ ರಾಜಕಾರಣದ ಚಿಂತನೆಗಳ ಪ್ರೇರಣೆಯಿಂದಲೇ ಆಗಿರುವುದು ಎನ್ನುವು ದರಲ್ಲಿ ಅನುಮಾನವೇ ಇಲ್ಲ.

ನಾಥೂರಾಮ್ ಗೋಡ್ಸೆ ಸೋದರ ಗೋಪಾಲ್ ಗೋಡ್ಸೆ (ಗಾಂಧಿ ಹತ್ಯೆ ಯಲ್ಲಿ ಆರೋಪಿಯಾಗಿ 15 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ) 28,ಜನವರಿ, 1994ರ ಫ್ರಂಟ್‌ಲೈನ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ‘‘ಗೋಡ್ಸೆ ಸಹೋದರರಾದ ನಾವೆಲ್ಲ ಆರೆಸ್ಸೆಸ್‌ನಲ್ಲಿ ಇದ್ದವರು. ನಾಥೂ ರಾಮ್, ದತ್ತಾತ್ರೇಯ, ನಾನು ಮತ್ತು ಗೋವಿಂದ. ನಿಮಗೆ ಹೇಳಬೇ ಕೆಂದರೆ ನಾವು ನಮ್ಮ ಮನೆಯಲ್ಲಿ ಬೆಳೆದದ್ದಕ್ಕಿಂತ ಹೆಚ್ಚಾಗಿ ಆರೆಸ್ಸೆಸ್‌ನಲ್ಲಿ ಬೆಳೆದೆವು. ಅದು ನಮಗೆ ಕುಟುಂಬದಂತಿತ್ತು. ನಾಥೂರಾಮ್ ಆರೆಸ್ಸೆಸ್ ನಲ್ಲಿ ಬೌದ್ಧಿಕ ಕಾರ್ಯಕರ್ತನಾಗಿದ್ದ. ನಂತರ ತಾನು ಆರೆಸ್ಸೆಸ್‌ತೊರೆದಿ ರುವುದಾಗಿ ಒಂದು ಹೇಳಿಕೆ ಕೊಟ್ಟಿದ್ದ. ಏಕೆ ಹಾಗೆ ಹೇಳಿದನೆಂದರೆ ಗಾಂಧಿ ಹತ್ಯೆಯ ನಂತರ ಗೋಲ್ವಲ್ಕರ್ ಮತ್ತು ಆರೆಸಸ್ ತುಂಬಾ ಒತ್ತಡದಲ್ಲಿ ದ್ದರು. ಆದರೆ ನಿಜ ಹೇಳಬೇಕೆಂದರೆ ನಾಥು ರಾಮ್ ಆರೆಸ್ಸೆಸ್ ತೊರೆದಿರಲಿಲ್ಲ’’ ಎಂದು ಹೇಳಿದ್ದ. ಆದರೆ ಸಂಘ ಪರಿವಾರ ಇಂದು ಗಾಂಧಿಯನ್ನು ಹೊಗಳುತ್ತಿದೆ. ಗಾಂಧಿ ಎನ್ನುವ ಐಕಾನ್ ಅನ್ನು ತನ್ನದಾಗಿಸಿಕೊಳ್ಳುತ್ತಿದೆ.

ಮೇಲ್ನೋಟಕ್ಕೆ ತಮ್ಮ ಚಿಂತನೆಗಳ ಮೂಲಕ ಸನಾತನ ವಾದಿ ಎಂಬಂತೆ ಕಂಡುಬರುತ್ತಿದ್ದ ಗಾಂಧೀಜಿ ಎಂದಿಗೂ ಪ್ರತ್ಯೇಕತಾವಾದಿಯಾಗಿರಲಿಲ್ಲ. ಎಲ್ಲರನ್ನೂ ಒಳಗೊಳ್ಳುವ ಮಾನವತಾವಾದಿಯಾಗಿದ್ದರು. ತಮ್ಮ ಅಹಿಂಸೆ ಸಿದ್ಧಾಂ ತದ ಮೂಲಕ ಸಂಘ ಪರಿವಾರದ ಹಿಂಸಾತ್ಮಕವಾದ ಬಹು ಸಂಖ್ಯಾತವಾದದ ನೀತಿಗಳಿಗೆ ಬಲು ದೊಡ್ಡ ಪೆಟ್ಟು ಕೊಟ್ಟಿದ್ದರು. ವರ್ಣಾಶ್ರಮದ ಕುರಿತಾದ ಸಾಂಪ್ರದಾಯಿಕ ಚಿಂತನೆಗಳು ಒಂದೆಡೆ, ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡ ಬಹುತ್ವದ ಚಿಂತನೆಗಳು ಮತ್ತೊಂದೆಡೆ ಗಾಂಧಿಯವರ ಈ ಸಂಕೀರ್ಣ ವ್ಯಕ್ತಿತ್ವ ಸಂಘ ಪರಿವಾರಕ್ಕೆ ಜೀರ್ಣಿ ಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಅಸ್ಗರ್ ಅಲಿಇಂಜಿನಿಯರ್ ಅವರು ‘‘ಗಾಂಧಿ ಒಬ್ಬ ಹಿಂದೂ ಸೂಫಿ’’ ಎಂದು ಬಣ್ಣಿಸುತ್ತಾರೆ. ರಾಜಕೀಯ- ಸಾಮಾಜಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಇಂದಿನ ಭಾರತಕ್ಕೆ ಗಾಂಧಿಯವರ ‘ಸತ್ಯ ಮತ್ತು ಅಹಿಂಸೆ’ ನೈತಿಕ ಬೆಂಬಲವನ್ನು ಕೊಡುತ್ತದೆ ಎನ್ನು ವುದು ಸತ್ಯ. ಆದರೆ ಹಿಂದುತ್ವದ ರಾಜಕಾರಣ ಮಾಡಲು ಸನ್ನದ್ಧರಾಗಿದ್ದ ಮತೀಯವಾದಿಗಳಿಗೆ ಗಾಂಧೀಜಿಯವರ ಬಹುತ್ವ ಚಿಂತನೆಗಳು ಬಲು ದೊಡ್ಡ ತಡೆಗೋಡೆಯಾಗಲಿಲ್ಲ.

‘‘ನೀನು ಹಿಂದೂ ಆಗಿದ್ದರೆ ಮಾತ್ರ ದೇಶಪ್ರೇಮಿ ಆಗಿರಲು ಸಾಧ್ಯ’’ ಎನ್ನುವ ಸಿದ್ಧಾಂತ ಇಂದು ಇಂಡಿಯಾದಲ್ಲಿ ಕಾಮನ್‌ಸೆನ್ಸ್ ರೂಪದಲ್ಲಿ ವಿಕೃತಿಯನ್ನು ಹುಟ್ಟು ಹಾಕಿದ್ದರೆ ಅದಕ್ಕೆ ಗಾಂಧಿಯವರ ಸಾಂಪ್ರದಾಯಿಕ ಹಿಂದೂಯಿಸಂ ತತ್ವಗಳು ಪ್ರತಿರೋಧ ರೂಪಿಸಬಲ್ಲದೇ ಅಥವಾ ಪೂರಕವಾಗಬಲ್ಲದೇ ಎನ್ನುವುದು ಯಕ್ಷ ಪ್ರಶ್ನೆ. ಏಕೆಂದರೆ ಜಗತ್ತಿನ ಎಲ್ಲಾ ಧರ್ಮಗಳಿಗೆ ಸಮಾನ ಗೌರವವನ್ನು ಕೊಡಬೇಕು ಎಂದು ಪ್ರತಿಪಾದಿಸಿದ ಗಾಂಧಿಯವರಿಗೆ ಭಾರತದಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಬಿಕ್ಕಟ್ಟುಗಳು ಧರ್ಮದ ನೆಲೆಯಲ್ಲಿ ಅರ್ಥವಾಗಲಿಲ್ಲ. ಈ ಧರ್ಮದ ಆಯಾಮವನ್ನು ಅಲ್ಪಸಂಖ್ಯಾತರ ಬದುಕಿನ ನೆಲೆಯಲ್ಲಿ ಅರ್ಥೈಸಲು ಹೊರಟು ಅನೇಕ ತೊಡಕುಗಳನ್ನು ಸೃಷ್ಟಿಸಿಕೊಂಡರು. ಗಾಂಧೀಜಿಯವರು ಭಾರತದಲ್ಲಿ ಹಿಂದುತ್ವದ ಬಹುಸಂಖ್ಯಾತವಾದವನ್ನು ತಿರಸ್ಕರಿಸಿ ಮುಸ್ಲಿಂ ಸಮುದಾಯದ ತಳಮಳವನ್ನು, ತಲ್ಲಣಗಳನ್ನು ವಾಸ್ತವ ನೆಲೆೆಗಟ್ಟಿನಲ್ಲಿ ಅರಿತುಕೊಂಡಿದ್ದರೆ ಇಂದಿನ ಚಿತ್ರಣವೇ ಬೇರೆಯದಾಗಿರುತ್ತಿತ್ತು. ಆದರೆ ತಾನು ಒಬ್ಬ ಹಿಂದೂ ಆಗಿಯೇ ಮುಸ್ಲಿಂರನ್ನು ಭಾವನಾತ್ಮಕವಾಗಿ ತಬ್ಬಿಕೊಂಡ ಗಾಂಧಿಯವರ ನಡೆ-ನುಡಿಯು ಫ್ಯಾಸಿಸಂ ಅನ್ನು ಹೆಡೆಮುರಿ ಕಟ್ಟಿ ಸೋಲಿಸಬಲ್ಲದೇ ಎನ್ನುವುದು ಚರ್ಚಾರ್ಹ. ಏಕೆಂದರೆ ಗಾಂಧಿವಾದ ಇಂದು ಕೋಮುವಾದದ ಕ್ರೌರ್ಯಕ್ಕೆ ಪ್ರತಿರೋಧವಾಗಲು ಸೋತಿದೆ. 70 ವರ್ಷಗಳ ಹಿಂದೆ ಅರ್ವೆಲ್ ಅವರು ಹೇಳಿದ ‘‘ಮುಕ್ತ ಸಮಾಜವಿಲ್ಲದ, ಮುಕ್ತ ಪ್ರಭುತ್ವವಿಲ್ಲದ, ಸರ್ವಾಧಿಕಾರದ ಆಡಳಿತ ಶೈಲಿ ಇರುವ ಕಡೆ ಗಾಂಧಿಯ ಸತ್ಯಾಗ್ರಹದ ಶೈಲಿಯ ಯಶಸ್ಸು ಅನುಮಾನಾಸ್ಪದವೇ. ಏಕೆಂದರೆ ಆಕ್ರಮಿತ ದೇಶದ ವಿರುದ್ಧದ ಹೋರಾಟಕ್ಕೂ ತಮ್ಮದೇ ಸರಕಾರದ ಸರ್ವಾಧಿಕಾರಿ ಆಡಳಿತದ ವಿರುದ್ಧದ ಹೋರಾಟಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎನ್ನುವ ಮಾತುಗಳು ಇಂದಿಗೂ ಸತ್ಯ’’. ಇಲ್ಲೇ ಗಾಂಧಿವಾದದ ಶಕ್ತಿ ಮತ್ತು ಮಿತಿಗಳು ಸ್ಪಷ್ಟವಾಗುತ್ತವೆ.

ತಾನು ಒಬ್ಬ ಧಾರ್ಮಿಕ ಹಿಂದೂ ಆಗಿ ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಯಾವ ರೀತಿ ತಡೆಗಟ್ಟಬಲ್ಲೆ ಎನ್ನುವ ಪ್ರಶ್ನೆಗೆ ಬಹುಶಃ ಗಾಂಧೀಜಿಯವರ ಬಳಿ ಉತ್ತರವಿರಲಿಲ್ಲ. ಆದರೆ ‘‘ನಾನು ಹಿಂದೂ ಆಗಿ ಸಾಯಲಾರೆ’’ ಎಂದು ಹೇಳಿದ ಅಂಬೇಡ್ಕರ್ ಬಳಿ ಉತ್ತರವಿತ್ತು.

Writer - ಬಿ. ಶ್ರೀಪಾದ ಭಟ್

contributor

Editor - ಬಿ. ಶ್ರೀಪಾದ ಭಟ್

contributor

Similar News