ಲಿಂಗಾಯತ ಧರ್ಮವನ್ನೇ ಸ್ವೀಕರಿಸುತ್ತಿದ್ದೆ ಎಂದಿದ್ದ ಅಂಬೇಡ್ಕರ್: ಮಲ್ಲಿಕಾರ್ಜುನ ಖರ್ಗೆ
ಬೆಂಗಳೂರು,ಅ.1: ಬಸವಣ್ಣನ ವಚನಗಳನ್ನು ಓದಿರಲಿಲ್ಲ. ವಚನ, ಬಸವಣ್ಣನವರ ಬಗ್ಗೆ ಮೊದಲೇ ತಿಳಿದಿದ್ದರೆ ಲಿಂಗಾಯತ ಧರ್ಮವನ್ನೇ ಸ್ವೀಕರಿಸುತ್ತಿದ್ದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ನುಡಿದಿದ್ದರು ಎಂದು ಲೋಕಸಭೆ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಕಲಬುರಗಿ ನಗರದ ಬುದ್ಧ ವಿಹಾರದಲ್ಲಿ ನಡೆದ ಧಮ್ಮ ಚಕ್ರ ಪ್ರವರ್ತನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನಾರೋಗ್ಯದ ಕಾರಣ ಅಂಬೇಡ್ಕರ್ ಅವರಿಗೆ ಧಾರವಾಡದಲ್ಲಿ ಕೆಲಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ಮಾಡಿದ್ದರು. ಅದರಂತೆ ಧಾರವಾಡದಲ್ಲಿ ಕೆಲ ದಿನ ತಂಗಿದ್ದರು. ಈ ವೇಳೆ ಕನ್ನಡದ ವಿದ್ವಾಂಸರೊಬ್ಬರು ಅಂಬೇಡ್ಕರ್ ಅವರಿಗೆ ವಚನಗಳು, ಶರಣರು ಹಾಗೂ ಬಸವಣ್ಣನವರು ಬಗ್ಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಮೊದಲೇ ತಿಳಿದಿದ್ದರೆ ನಾನು ಶರಣರ ಧರ್ಮವನ್ನೇ ಸ್ವೀಕಾರ ಮಾಡುತ್ತಿದ್ದೆ ಎಂದು ಅಂಬೇಡ್ಕರ್ ತಿಳಿಸಿದ್ದರು ಎಂದು ತಿಳಿಸಿದರು.
ಬಸವಣ್ಣ ಹಾಗೂ ಅವರ ತತ್ವಗಳ ಬಗ್ಗೆ ಹೆಚ್ಚಿನ ಪ್ರಚಾರ ಆಗಿಲ್ಲ. ಇದರಿಂದಾಗಿ ಹೊರ ಜಗತ್ತಿಗೆ ಅವರ ಬಗ್ಗೆ ಪರಿಚಯ ಇಲ್ಲ. ಇನ್ನಾದರೂ ಪ್ರಚಾರ ಕಾರ್ಯ ಕೈಗೊಳ್ಳುವಂತೆ ಅಂಬೇಡ್ಕರ್ ಸಲಹೆ ಮಾಡಿದ್ದರು ಎಂದ ಅವರು, ಮೌಢ್ಯ ನಿಷೇಧ ಮಸೂದೆ ಮಂಡನೆ ಬಗ್ಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ. ಈ ಮಸೂದೆಗೆ ಎಲ್ಲ ಪಕ್ಷಗಳ ಬೆಂಬಲ ನೀಡಬೇಕಾಗಿದೆ ಎಂದು ಅವರು ಹೇಳಿದರು.