×
Ad

ದಸರಾ ಉತ್ಸವ ನೆರವೇರಿಸುವವರು ಯಾರೆಂದು ಚಾಮುಂಡೇಶ್ವರಿ ನಿರ್ಧರಿಸುತ್ತಾಳೆ: ಎಚ್.ಡಿ.ಕುಮಾರಸ್ವಾಮಿ

Update: 2017-10-01 20:41 IST

ಬೆಂಗಳೂರು, ಅ. 1: ಮುಂದಿನ ವರ್ಷ ವಿಶ್ವ ವಿಖ್ಯಾತ ಮೈಸೂರು ದಸರಾ ಉತ್ಸವವನ್ನು ಯಾರು ನೆರವೇರಿಸಲಿದ್ದಾರೆ ಎಂದು ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ ತೀರ್ಮಾನಿಸಲಿದ್ದಾಳೆಂದು ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನುಡಿದಿದ್ದಾರೆ.

ರವಿವಾರ ಅಪೋಲೊ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶನಿವಾರ ಮೈಸೂರಿನಲ್ಲಿ ಮುಂದಿನ ಬಾರಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ನಾನೇ ದಸರಾ ಉತ್ಸವ ಉದ್ಘಾಟನೆ ಮಾಡುವೆ ಎಂದು ಹೇಳಿದ್ದ ಸಿಎಂ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

ಪುನರ್ ಜನ್ಮ: ನಗರದ ಅಪೋಲೊ ಆಸ್ಪತ್ರೆಯ ಡಾ.ಸತ್ಯಕಿ ನೇತೃತ್ವದ ತಜ್ಞ ವೈದ್ಯರ ತಂಡ ನನಗೆ ಎರಡನೆ ಜನ್ಮ ನೀಡಿದೆ ಎಂದ ಕುಮಾರಸ್ವಾಮಿ, ಅಮೇರಿಕಾದಲ್ಲಿ ಚಿಕಿತ್ಸೆ ಪಡೆದಿದ್ದರೆ ವಾಪಸ್ ಬರುತ್ತಿದ್ದೇನೆ ಏನೂ ಗೊತ್ತಿಲ್ಲ. ಆದರೆ, ಇಲ್ಲಿ ಎಲ್ಲರ ಹಾರೈಕೆಯಿಂದಾಗಿ ನಾನು ಚೇತರಿಸಿಕೊಂಡಿದ್ದೇನೆ ಎಂದರು.

ತಾನು ಈ ಹಿಂದೆ ಇಸ್ರೇಲ್‌ಗೆ ತೆರಳುವ ವೇಳೆ ಎದೆ ನೋವು ಕಾಣಿಸಿಕೊಂಡಿತ್ತು. ಮುಂಬೈ ವಿಮಾನ ನಿಲ್ದಾಣದಲ್ಲಿ ಎರಡು ಹೆಜ್ಜೆ ನಡೆಯಲು ಸಾಧ್ಯವಾಗಲಿಲ್ಲ. ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆಯೂ ಅದೇ ಸ್ಥಿತಿ ಇತ್ತು. ಆ ಬಳಿಕ ಇಸ್ರೇಲ್‌ನ ಆಸ್ಪತ್ರೆಯೊಂದರಲ್ಲಿ ತೋರಿಸಿದೆ. ಅಲ್ಲಿನ ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕೆಂದು ಸಲಹೆ ನೀಡಿದ್ದರು. ಆದರೆ, ತಾನು ಇದಕ್ಕೆ ಒಪ್ಪಲಿಲ್ಲ. ಇನ್ನೂ ಇಪ್ಪತ್ತೈದು ದಿನಗಳ ವರೆಗೆ ನನ್ನನ್ನು ಭೇಟಿ ಮಾಡಲು ಬರಬೇಡಿ ಎಂದು ಪಕ್ಷದ ಮುಖಂಡರು ಹಾಗೂ ಅಭಿಮಾನಿಗಳಿಗೆ ಮನವಿ ಮಾಡಿದ ಅವರು, ಆರೋಗ್ಯ ಸುಧಾರಿಸಿದ ಬಳಿಕ ನಾನು ನಿಮ್ಮ ಹಳ್ಳಿಗೆ ಬರುತ್ತೇನೆ ಎಂದು ತಿಳಿಸಿದರು.

ನನ್ನನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಕೃತಜ್ಞತೆ ಸಲ್ಲಿಸಿದ ಅವರು, ಸಿದ್ದರಾಮಯ್ಯನವರು ನನ್ನ ಭೇಟಿಗೆ ಬರುವ ಬದಲು ಸಂಕಷ್ಟದಲ್ಲಿರುವ ರಾಜ್ಯದ ಜನತೆಯ ಬಳಿಗೆ ತೆರಳಬೇಕಿತ್ತು ಎಂದು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News