22 ಭಾರತೀಯ ಕೈದಿಗಳನ್ನು ಬಿಡುಗಡೆಗೊಳಿಸಿದ ಕುವೈತ್; 97 ಮಂದಿಯ ಶಿಕ್ಷೆ ಕಡಿತ

Update: 2017-10-02 05:55 GMT

ಕುವೈತ್,ಅ.2 :  ಕುವೈತ್ ನ ಅಮೀರ್ ಅವರು ಅರಬ್ ರಾಷ್ಟ್ರದ ಜೈಲುಗಳಲ್ಲಿರುವ 22 ಭಾರತೀಯ ಕೈದಿಗಳನ್ನು ಬಿಡುಗಡೆಗೊಳಿಸಿದ್ದು 97 ಮಂದಿ ಇತರರ ಶಿಕ್ಷೆಯ ಅವಧಿಯನ್ನು ಕಡಿತಗೊಳಿಸಿದ್ದಾರೆಂದು ಕುವೈತ್ ನಲ್ಲಿರುವ ಭಾರತೀಯ ದೂತಾವಾಸ ತಿಳಿಸಿದೆ.

ಕುವೈತ್ ಬಿಡುಗಡೆಗೊಳಿಸಿದ ಪಟ್ಟಿಯಲ್ಲಿ ಒಟ್ಟು 119 ಮಂದಿ ಭಾರತೀಯರ ಹೆಸರುಗಳಿದ್ದು ಇವುಗಳಲ್ಲಿ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇತ್ತೀಚೆಗೆ ಕಡಿತಗೊಳಿಸಲ್ಪಟ್ಟ  15 ಮಂದಿಯ ಹೆಸರಗಳೂ ಇವೆ. ಈ 15 ಮಂದಿ ಡ್ರಗ್ಸ್ ಸಂಬಂಧಿ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿದ್ದರು.

ಈ ಪಟ್ಟಿಯಲ್ಲಿರುವ  22 ಮಂದಿಯನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂಬ ಆದೇಶವಾಗಿದೆ ಎಂದು ಕುವೈತ್ ನಗರದಲ್ಲಿರುವ ಭಾರತೀಯ ದೂತಾವಾಸ  ತನ್ನ ಹೇಳಿಕೆಯಲ್ಲಿ ತಿಳಿಸಿದೆ. 53 ಮಂದಿ ಇತರರ ಜೀವಾವಧಿ ಶಿಕ್ಷೆಯ ಅವಧಿಯನ್ನು 20 ವರ್ಷಕ್ಕೆ ಇಳಿಸಲಾಗಿದೆ ಎಂದೂ ಮಾಹಿತಿ ನೀಡಲಾಗಿದೆ.

18 ಮಂದಿ ಭಾರತೀಯ ಕೈದಿಗಳ ಶಿಕ್ಷೆಯನ್ನು ಮುಕ್ಕಾಲು ಭಾಗ ಕಡಿತಗೊಳಿಸಲಾಗಿದ್ದರೆ, 25 ಮಂದಿಯ ಶಿಕ್ಷೆ ಅರ್ಧದಷ್ಟು ಹಾಗೂ ಒಬ್ಬರ ಶಿಕ್ಷೆಯನ್ನು ಕಾಲು ಭಾಗದಷ್ಟು ಕಡಿತಗೊಳಿಸಲಾಗಿದೆ. ಹೆಚ್ಚಿನವರು ಡ್ರಗ್ಸ್, ಕಳ್ಳತನ, ವಂಚನೆ ಪ್ರಕರಣಗಳಲ್ಲಿ ಬಂಧಿತರಾದವರಾಗಿದ್ದಾರೆ.

ಬಿಡುಗಡೆಗೊಂಡ ಭಾರತೀಯ ಕೈದಿಗಳು ಮರಳಿ ಭಾರತಕ್ಕೆ ಪ್ರಯಾಣಿಸಲು  ಭಾರತೀಯ ದೂತಾವಾಸವು ಸರ್ವ ರೀತಿಯ ಸಹಕಾರ ನೀಡಲಿದೆಯೆಂದು ಹೇಳಿದೆ. ತಮ್ಮ ಮುಂದಿನ ಶಿಕ್ಷೆಯ ಅವಧಿಯನ್ನು  ಭಾರತದಲ್ಲಿ ಪೂರೈಸಲು ಒಪ್ಪಿರುವ ಕೈದಿಗಳಿಗೂ ಸಹಾಯ ಮಾಡಲು ದೂತಾವಾಸ ನಿರ್ಧರಿಸಿದೆ.

ಕೈದಿಗಳನ್ನು ಬಿಡುಗಡೆಗೊಳಿಸುವ ಹಾಗೂ ಶಿಕ್ಷೆ ಕಡಿತಗೊಳಿಸುವ ಕುವೈತ್ ದೊರೆಯ ನಿರ್ಧಾರಕ್ಕೆ ಈಗಾಗಲೇ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಧನ್ಯವಾದ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News