ಗಾಂಧಿ ತತ್ವಾದರ್ಶಗಳಿಂದ ಪ್ರಜಾಸತ್ತೆಯ ಉಳಿವು: ಇಂಡಿಯನ್ ಸೋಶಿಯಲ್ ಫೋರಮ್

Update: 2017-10-02 07:26 GMT

ದಮ್ಮಾಮ್, ಅ.2:  'ಗಾಂಧೀ ಜಯಂತಿ' ಕೇವಲ ಸಾಂಕೇತಿಕ ಕಾರ್ಯಕ್ರಮವಾಗಿರದೆ ಪ್ರಜಾಪ್ರಭುತ್ವ ವ್ಯವಸ್ಥೆಯ ಉಳಿವಿಗಾಗಿ ಗಾಂಧಿ ತತ್ವಾದರ್ಶಗಳನ್ನು ದೇಶಾದ್ಯಂತ ಬಲಪಡಿಸಬೇಕಾದ ಅನಿವಾರ್ಯತೆ ಇದೆ ಎಂದು ಇಂಡಿಯನ್ ಸೋಶಿಯಲ್ ಫೋರಮ್  ಕರೆ ನೀಡಿದೆ.

ಸಮಗ್ರ ಕಲ್ಯಾಣ ರಾಜ್ಯದ ಕನಸು ಕಂಡಿದ್ದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಜಾತ್ಯತೀತ ಮೌಲ್ಯಗಳ ಪ್ರತಿಪಾದಕರಾಗಿದ್ದರು. ಅವರ ಹತ್ಯೆಯು ಜಾತ್ಯತೀತ ಸಿದ್ಧಾಂತಗಳನ್ನು ನಿರ್ಮೂಲನೆಗೊಳಿಸುವ ದೇಶದ್ರೋಹಿಗಳ ಯೋಜನೆಯ ಭಾಗವಾಗಿದೆ.  ಈ ಹಿನ್ನೆಲೆಯಲ್ಲಿ ಗಾಂಧೀಜಿ ಮತ್ತು ಅವರ ತತ್ವಾದರ್ಶಗಳನ್ನು ಸದಾ ಸ್ಮರಿಸುವುದರ ಜೊತೆಗೆ ಅವರ ಹಂತಕರ ಗುರುತು ಪರಿಚಯ, ಹಿನ್ನೆಲೆಯನ್ನೂ ಅರಿತುಕೊಳ್ಳಬೇಕಾಗಿದೆ. ಗಾಂಧಿ ಹತ್ಯೆಯೊಂದಿಗೆ ಆರಂಭಗೊಂಡ ಭಯೋತ್ಪಾದನಾ ಕೃತ್ಯಗಳು ಇಂದಿಗೂ ಮುಂದುವರಿದಿರುವುದು ಅತಿದೊಡ್ಡ ದುರಂತವಾಗಿದೆ. ಗಾಂಧಿ ಹಂತಕ ಗೋಡ್ಸೆಯ ಪ್ರತಿಮೆ ಪ್ರತಿಷ್ಠಾಪಿಸಿ ಮಂದಿರ ನಿರ್ಮಿಸಲು ಬಹಿರಂಗವಾಗಿ ಫ್ಯಾಶಿಷ್ಟ್ ಶಕ್ತಿಗಳು ಆಗ್ರಹಿಸುತ್ತಿರುವುದು ದೇಶದ ಸಾರ್ವಭೌಮತೆಗೆ ಅತಿದೊಡ್ಡ ಬೆದರಿಕೆಯಾಗಿದೆ. ಇಂತಹ ದೇಶದ್ರೋಹಿಗಳ ವಿರುದ್ಧ ಹೋರಾಟ ನಡೆಸುವುದೇ ಗಾಂಧಿವಾದವೆನಿಸಿಕೊಳ್ಳುತ್ತದೆ. ನಿಜಾರ್ಥದಲ್ಲಿ ಇಂತಹ ಹೋರಾಟಗಳೇ ನಿಜವಾದ ಗಾಂಧಿಜಯಂತಿ ಆಚರಣೆ ಎಂಬುದು ಇಂಡಿಯನ್ ಸೋಶಿಯಲ್ ಫೋರಮ್ ನ ನಂಬಿಕೆಯಾಗಿದೆ.

ಗಾಂಧೀಜಿ ಪ್ರತಿಪಾದಿಸಿದ್ದ ದೇಶದ ಅಭಿವೃದ್ಧಿಯ ಪರಿಕಲ್ಪನೆಯಲ್ಲಿ ರೈತರು, ಹಳ್ಳಿಪ್ರದೇಶ, ಅಲ್ಪಸಂಖ್ಯಾತ ಸಮುದಾಯ, ದಲಿತರು, ಬಡವರು ಸೇರಿದಂತೆ ಒಟ್ಟು ಭಾರತೀಯ ಸಮುದಾಯದ ಸಬಲೀಕರಣದ ಆಶಯವಿತ್ತು. ಇಂತಹ ಆಶಯಗಳಿಗೆ ಕೊಳ್ಳಿಯಿಟ್ಟು ಬಂಡವಾಳಶಾಹಿಗಳ, ಕಾರ್ಪೋರೇಟ್ ಕಂಪೆನಿಗಳ ಪರವಾದ ಅಭಿವೃದ್ಧಿ ಯೋಜನೆಗಳನ್ನು ದೇಶದಲ್ಲಿ ಜಾರಿಗೊಳಿಸಲಾಗುತ್ತಿದೆ. ದೇಶದ ವಿದೇಶಾಂಗ ನೀತಿಗಳು ಕೂಡ  ಗಾಂಧಿ ತತ್ವಕ್ಕೆ ವಿರುದ್ಧವಾಗಿ ಮಾರ್ಪಾಡುಗೊಂಡಿರುವುದನ್ನು ನಾವು ಮನಗಾಣಬೇಕಾಗಿದೆ. ಇಂತಹ ಸಂದರ್ಭದಲ್ಲಿ ದೇಶದ ಪ್ರಜಾತಂತ್ರ ವ್ಯವಸ್ಥೆಯನ್ನು ಉಳಿಸಿ ಬೆಳೆಸುವುದಕ್ಕಾಗಿ ಗಾಂಧೀಜಿಯ ಹೋರಾಟದ ಇತಿಹಾಸವನ್ನು ಪುನರಾವರ್ತಿಸುವ ಮೂಲಕ ಗಾಂಧೀಜಿಗೆ ಗೌರವ ಸಲ್ಲಿಸಬೇಕಾಗಿದೆ ಎಂದು ಇಂಡಿಯನ್ ಸೋಶಿಯಲ್ ಫೋರಮ್ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News