ಯಾರೊಂದಿಗೂ ಮೈತ್ರಿ ಇಲ್ಲ: ಎಚ್.ಡಿ. ದೇವೇಗೌಡ
ಬೆಂಗಳೂರು, ಅ. 2: ಜೆಡಿಎಸ್ ಪಕ್ಷಕ್ಕೆ ಪೂರ್ಣ ಬಹುಮತ ಬಂದರೆ ಆಡಳಿತ ನಡೆಸುತ್ತೇವೆ. ಒಂದು ವೇಳೆ ಬಹುಮತ ಸಿಗದಿದ್ದರೆ ವಿಪಕ್ಷ ಸ್ಥಾನದಲ್ಲಿ ಕೂರುತ್ತೇವೆ. ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಗಾಂಧಿ ಜಯಂತಿ ಅಂಗವಾಗಿ ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೊಗುತ್ತೇವೆ. ನವೆಂಬರ್ ಅಥವಾ ಡಿಸೆಂಬರ್ ಕೊನೆಯ ವೇಳೆಗೆ ಟಿಕೆಟ್ ಅಂತಿಮಗೊಳಿಸುತ್ತೇವೆ ಎಂದು ಹೇಳಿದರು.
ರಾಜಕೀಯ ಕ್ಷೇತ್ರದಲ್ಲಿ ಏಳು-ಬೀಳು ಸಹಜ. ಅದನ್ನು ಮೆಟ್ಟಿ ನಿಂತು ನಾವು ರಾಜಕಾರಣ ಮಾಡುತ್ತಿದ್ದೇವೆ. ಆದರೆ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಮ್ಮ ಪಕ್ಷವನ್ನು ಒಂದು ರೀತಿಯಲ್ಲಿ ಮಾರ್ಕೆಟ್ ಮಾಡುತ್ತಿವೆ ಎಂದು ಇದೇ ವೇಳೆ ಬೇಸರ ವ್ಯಕ್ತಪಡಿಸಿದರು.
ದುಂದು ವೆಚ್ಚ ಸಲ್ಲ: ಜನತೆಯ ತೆರಿಗೆ ಹಣವನ್ನು ಸರಕಾರಗಳು ದುಂದುವೆಚ್ಚ ಮಾಡಿ ಜಾಹೀರಾತು ನೀಡುತ್ತಿವೆ. ಜನರ ಬಡತನ ಇನ್ನೂ ಕಡಿಮೆಯಾಗಿಲ್ಲ. ಅವರ ಸಾಧನೆ ಕೇವಲ ಹತ್ತನೇ ಒಂದು ಭಾಗ ಮಾತ್ರ. ಅವರು ಹೇಳಿಕೊಂಡಷ್ಟು ಅಭಿವೃದ್ಧಿ ಮಾಡಿಲ್ಲ. ಜನರನ್ನು ಜಾಹೀರಾತು ಮೂಲಕ ಮರುಳು ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಪ್ರಧಾನಿ ಮೋದಿ ಅವರು ಮನ್ ಕೀ ಬಾತ್‌ಗೆ ವಿರುದ್ಧವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ 'ಕಾಮ್ ಕಿ ಬಾತ್'ಯೋಜನೆ ಆರಂಭಿಸಲು ಮುಂದಾಗಿದ್ದಾರೆ ಎಂದ ಅವರು, ಸಿದ್ದರಾಮಯ್ಯನವರು ಪ್ರಧಾನಿಗೆ ಸಡ್ಡು ಹೊಡೆಯಲು ಹೊರಟಿದ್ದಾರೆ ಎಂದರು.
ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಜೆಡಿಎಸ್ ಪ್ರಾದೇಶಿಕ ಪಕ್ಷ. ಇದನ್ನು ಉಳಿಸಿಕೊಂಡು ಹೋಗುವುದು ಕಷ್ಟ. ಆದರೆ, ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿವೆ. ರಾಷ್ಟ್ರೀಯ ಪಕ್ಷಗಳಿಗೆ ಅಲ್ಲಿ ಅವಕಾಶ ಕೊಟ್ಟಿಲ್ಲ. ಕೇರಳದಲ್ಲಿ ಕಾಂಗ್ರೆಸ್‌ಅನ್ನು ಹಿಂದೆ ಸರಿಸಲು ಎಡಪಕ್ಷಗಳು ಪ್ರಯತ್ನ ಮಾಡುತ್ತಿವೆ. ರಾಜ್ಯದ ಹಿತದೃಷ್ಟಿಯಿಂದ ಪ್ರಾದೇಶಿಕ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಅಪೇಕ್ಷೆಪಟ್ಟರು.
ಆ ಮಾರ್ಗದಲ್ಲಿ ನಡೆಯಬೇಕು: ಪ್ರತಿವರ್ಷ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಪಕ್ಷದ ಕಚೇರಿಯಲ್ಲಿ ಆಚರಿಸುತ್ತಿದ್ದು, ಮಹಾತ್ಮ ಗಾಂಧೀಜಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯುತ್ತಿದ್ದೇವೆ ಎಂದು ದೇವೇಗೌಡ ಸ್ಮರಿಸಿದರು.