ಭಾರತೀಯರಿಗೆ ಸಂವಿಧಾನವೇ ಧರ್ಮಗ್ರಂಥ: ನಾಗಮೋಹನದಾಸ್
ಬೆಂಗಳೂರು, ಅ.2: ಸಂವಿಧಾನವನ್ನು ಧರ್ಮಗ್ರಂಥವನ್ನಾಗಿ ಸ್ವೀಕರಿಸಿದರೆ ನಾವೆಲ್ಲರೂ ಭಾರತೀಯರೆಂಬ ಪ್ರಜ್ಞೆ ಮೂಡುತ್ತದೆ ಎಂದು ರಾಜ್ಯ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ನಗರದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಡಿವೈಎಫ್‌ಐ ಆಯೋಜಿಸಿದ್ದ ಉದ್ಯೋಗ ಅಭಿವೃದ್ಧಿ ಹಾಗೂ ಸಾಮರಸ್ಯ ಕಾರ್ಯಕ್ರಮದಲ್ಲಿ ಸಂವಿಧಾನದ ಕನಸುಗಳು ಕುರಿತು ಉಪನ್ಯಾಸ ನೀಡಿ ಮಾತನಾಡಿದ ಅವರು, ಭಾರತ ಜಾತ್ಯತೀತ ರಾಷ್ಟ್ರವಾಗಿದ್ದು, ಸಂವಿಧಾನವನ್ನೆ ಧರ್ಮಗ್ರಂಥವನ್ನಾಗಿ ಸ್ವೀಕರಿಸಿದರೆ ನಾವೆಲ್ಲರೂ ಭಾರತೀಯರೆಂಬ ಪ್ರಜ್ಞೆ ಮೂಡುತ್ತದೆ ಎಂದು ಅಭಿಪ್ರಾಯಪಟ್ಟರು.
ಅಹಿಂದ ಜನಾಂಗಕ್ಕೆ ಈಗಾಗಲೇ ರಾಜಕೀಯ ಶಕ್ತಿ ಸಿಕ್ಕಿದ್ದರೂ ಆರ್ಥಿಕ ಹಾಗೂ ಸಾಮಾಜಿಕ ಶಕ್ತಿಯಿಂದ ದೂರ ಉಳಿದಿದ್ದಾರೆ. ಆ ಆರ್ಥಿಕ ಹಾಗೂ ಸಾಮಾಜಿಕ ಶಕ್ತಿ ಸಿಗಬೇಕಾದರೆ ಉದ್ಯೋಗ ಹಾಗೂ ಸಾಮಾಜಿಕ ಸ್ಥಾನಮಾನಗಳು ಹೆಚ್ಚೆಚ್ಚು ಸಿಗಬೇಕೆಂದು ಹೇಳಿದರು.
ಹದಿನಾರನೆ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರಲ್ಲಿ 178 ಜನರು ಕ್ರಿಮಿನಲ್ ಹಿನ್ನೆಲೆಯುಳ್ಳವರಿದ್ದಾರೆ. ಶೇ.80ರಷ್ಟು ಕೋಟ್ಯಾಧೀಶರು, ಶೇ.50ರಷ್ಟು ಜನರು ಕುಟುಂಬ ರಾಜಕೀಯ ಹಿನ್ನೆಲೆಯುಳ್ಳವರು ಹಾಗೂ ಉಳಿದವರು ರಿಯಲ್ ಎಸ್ಟೇಟ್ ದಂಧೆ ಮಾಡುವವರಿದ್ದಾರೆ. ಹೀಗಾಗಿಯೇ ಲೋಕಸಭೆಯಲ್ಲಿ ಕಾರ್ಮಿಕ ಪ್ರತಿನಿಧಿಗಳು, ರೈತರ ಪ್ರತಿನಿಧಿಗಳು ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬರೀ ಪ್ರತಿಭಾವಂತ ಮಕ್ಕಳಿಂದ ದೇಶವನ್ನು ಕಟ್ಟಲು ಸಾಧ್ಯವಿಲ್ಲ. ಪ್ರತಿಭೆಯ ಜೊತೆಗೆ ಮಕ್ಕಳು ವೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಈ ದೇಶವನ್ನು ಕಟ್ಟಲು ಹಾಗೂ ಸಂವಿಧಾನವನ್ನು ರಕ್ಷಿಸಲು ಸಾಧ್ಯವಿದೆ. ಈ ಕೆಲಸ ಆದಷ್ಟು ತುರ್ತಾಗಿ ಆಗಬೇಕಾಗಿದೆ. ಅಲ್ಲದೆ, ಜನರು ಮತ ನೀಡದೆ ಇದ್ದರೆ ರಾಜಕಾರಣಿಗಳು ಗೆಲ್ಲಲ್ಲ. ಆದರೆ, ಮಠಾಧೀಶರು ಮತದಾರರಲ್ಲಿ ಮನವಿ ಮಾಡಿಕೊಂಡು ಗೆಲ್ಲದ ಅಭ್ಯರ್ಥಿಗಳನ್ನೆ ಗೆಲ್ಲುವಂತೆ ಮಾಡುತ್ತಾರೆ. ಇದರಿಂದ, ಅಭಿವೃದ್ಧಿ ಕಾರ್ಯಗಳು ಹಿಂದೆ ಬೀಳುತ್ತವೆ ಎಂದು ಹೇಳಿದರು.
ಯುವಕರಿಗೆ ಉದ್ಯೋಗ ನೀಡದಿದ್ದರೆ ಯುವಕರು ಭಯೋತ್ಪಾದನೆ, ಅಪರಾಧ ಕೃತ್ಯ, ಡ್ರಗ್ಸ್ ಮಾಫಿಯಾದಂತಹ ಚಟಗಳಿಗೆ ಬಿದ್ದು ಹಾಳಾಗುತ್ತಾರೆ. ಹೀಗಾಗಿ, ಉದ್ಯೋಗ ಸೃಷ್ಟಿ ಹಾಗೂ ಸಾಮಾಜಿಕ ನ್ಯಾಯವೇ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ನಾವೆಲ್ಲರೂ ನಡೆಯೋಣ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ರಾಜ್ಯ ಕಾರ್ಯದರ್ಶಿ ಬಿ.ರಾಜಶೇಖರ್‌ಮೂರ್ತಿ ಉಪಸ್ಥಿತರಿದ್ದರು.