×
Ad

ಇಷ್ಟಾರ್ಥ ಸಿದ್ಧಿಗಾಗಿ ಯಡಿಯೂರಪ್ಪರಿಂದ ನಾಗಸಾಧುಗಳ ಗುಪ್ತ ಭೇಟಿ

Update: 2017-10-02 21:38 IST

ಬೆಂಗಳೂರು, ಅ. 2: ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಇಷ್ಟಾರ್ಥ ಸಿದ್ಧಿಗಾಗಿ ಉತ್ತರ ಪ್ರದೇಶದ ವಾರಣಾಸಿಯಿಂದ ಆಗಮಿಸಿದ್ದ ‘ನಾಗ ಸಾಧು’ಗಳನ್ನು ಭೇಟಿ ಮಾಡಿ ಸೋಮವಾರ ಆಶೀರ್ವಾದ ಪಡೆದುಕೊಂಡಿದ್ದಾರೆ.

ಸೋಮವಾರ ಬೆಳಗ್ಗೆ ಇಲ್ಲಿನ ಡಾಲರ್ಸ್‌ ಕಾಲನಿಯಲ್ಲಿದ್ದ ನಿವಾಸಕ್ಕೆ ನಾಗ ಸಾಧುಗಳು ಆಗಮಿಸಿದ್ದ ಹಿನ್ನೆಲೆಯಲ್ಲಿ ದೇವನಹಳ್ಳಿಯಲ್ಲಿ ಬಿಜೆಪಿ ವಿಸ್ತಾರಕ ಕಾರ್ಯಾಗಾರದಲ್ಲಿದ್ದ ಬಿ.ಎಸ್.ಯಡಿಯೂರಪ್ಪ, ಕೂಡಲೇ ತನ್ನ ನಿವಾಸಕ್ಕೆ ದೌಡಾಯಿಸಿದರು. ಅಲ್ಲದೆ, ಸಮಾರು 20 ನಿಮಿಷಗಳಿಗೂ ಹೆಚ್ಚು ಕಾಲ ನಾಗಸಾಧುಗಳೊಂದಿಗೆ ಸಮಾಲೋಚನೆ ನಡೆಸಿದರು ಎಂದು ತಿಳಿದು ಬಂದಿದೆ.

‘ನೀವು ಕರ್ನಾಟಕ ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗುತ್ತೀರಿ, ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಒಳ್ಳೆಯ ಮಳೆ-ಬೆಳೆಯಾಗುತ್ತದೆ’ ಎಂದು ಯಡಿಯೂರಪ್ಪರಿಗೆ, ನಾಗ ಸಾಧುಗಳು ಆಶೀರ್ವದಿಸಿದ್ದಾರೆ. ಸಾಧುಗಳ ಭೇಟಿಯ ಬಳಿಕ ಬಿಎಸ್‌ವೈ ವಿಶೇಷ ಪೂಜೆ ಸಲ್ಲಿಸಲು ತಂಜಾವೂರಿಗೆ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು, ದೂರದ ಉತ್ತರ ಪ್ರದೇಶದಿಂದ ಆಗಮಿಸಿದ್ದ ನಾಗ ಸಾಧುಗಳನ್ನು ಗುಪ್ತವಾಗಿ, ದಿಢೀರ್ ಭೇಟಿ ಮಾಡಿ ಸಮಾಲೋಚನೆ ನಡೆಸಿರುವುದು ಬಿಜೆಪಿ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಹಾಗೂ ಕುತೂಹಲ ಸೃಷ್ಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News