×
Ad

ಯುವತಿಯ ಅಕ್ರಮ ಬಂಧನ: ಸಿಡಬ್ಲ್ಯುಸಿ ಅಧ್ಯಕ್ಷೆ ಸೇರಿ ನಾಲ್ವರಿಗೆ 10 ಸಾವಿರ ದಂಡ

Update: 2017-10-03 22:05 IST

ಬೆಂಗಳೂರು, ಅ.3: ಯುವತಿಯೊಬ್ಬಳನ್ನು ವಿನಾಕಾರಣ ಮೂರು ದಿನ ಸರಕಾರಿ ಬಾಲಕಿಯರ ಮಂದಿರದಲ್ಲಿ ಅಕ್ರಮ ಬಂಧನದಲ್ಲಿಟ್ಟ ಕಾರಣಕ್ಕೆ ರಾಜ್ಯ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲುಸಿ) ಅಧ್ಯಕ್ಷೆಯಾಗಿದ್ದ ಕೆ.ಅನಿತಾ ಶಿವಕುಮಾರ್ ಹಾಗೂ ಸದಸ್ಯರಾಗಿದ್ದ ಟಿ.ಎಸ್. ವಿಶಾಲಾಕ್ಷಿ, ವಿದ್ಯಾ ಐತಾಳ್ ಮತ್ತು ಶ್ರೀನಿವಾಸ್ ಅವರಿಗೆ ಹೈಕೊರ್ಟ್ ತಲಾ 10 ಸಾವಿರ ದಂಡ ವಿಧಿಸಿದೆ.

ರಾಜ್ಯ ಮಕ್ಕಳ ಕಲ್ಯಾಣ ಸಮಿತಿಯು (ಸಿಡಬ್ಲುಸಿ) ತಮ್ಮ ಮಗಳು ಸುಭಾಷಿಣಿಯನ್ನು ಅಕ್ರಮವಾಗಿ ಬಂಧನದಲ್ಲಿರಿಸಿದೆ ಎಂದು ತಿಳಿಸಿ ಚಿಂತಾಮಣಿ ನಿವಾಸಿ ಶ್ರೀರಾಮ ರೆಡ್ಡಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಮಳೀಮಠ ಮತ್ತು ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರಿದ್ದ ವಿಭಾಗೀಯ ಪೀಠ, ಈ ನಾಲ್ವರಿಗೆ ತಲಾ 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿತು.

ವಿಚಾರಣೆಗೆ ಹಾಜರಾಗಿದ್ದ ಕೆ.ಅನಿತಾ ಶಿವಕುಮಾರ್ ಹಾಗೂ ಟಿ.ಎಸ್. ವಿಶಾಲಾಕ್ಷಿ, ವಿದ್ಯಾ ಐತಾಳ್ ಮತ್ತು ಶ್ರೀನಿವಾಸ್ ಅವರು 10 ಸಾವಿರ ರೂ. ದಂಡವನ್ನು ಕೋರ್ಟ್‌ಗೆ ಪಾವತಿಸಿದರು. ನ್ಯಾಯಪೀಠವು, ಕೂಡಲೇ ಈ ದಂಡ ಮೊತ್ತವನ್ನು ಶ್ರೀರಾಮ ರೆಡ್ಡಿಗೆ ಪರಿಹಾರವಾಗಿ ನೀಡಿತು. ನಂತರ ಸುಭಾಷಿಣಿಯನ್ನು ತಂದೆಯ ವಶಕ್ಕೆ ನೀಡಲಾಗಿದೆ. ಯುವತಿಯನ್ನು ಅಕ್ರಮ ಬಂಧನದಲ್ಲಿರಿಸಿದ್ದಕ್ಕೆ ಅನಿತಾ ಶಿವಕುಮಾರ್ ಹಾಗೂ ಇತರೆ ಮೂವರ ಸಿಡಬ್ಲ್ಯಸಿ ಸದಸ್ಯತ್ವವನ್ನು ಸರಕಾರ ರದ್ದುಪಡಿಸಿದೆ. ಹೀಗಾಗಿ ಅರ್ಜಿ ವಿಚಾರಣೆ ಮುಂದುವರಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟ ಪೀಠ, ಪ್ರಕರಣ ಮುಕ್ತಾಯಗೊಳಿಸಿತು.ವಿಚಾರಣೆ ವೇಳೆ ಅನಿತಾ ಶಿವಕುಮಾರ್ ಹಾಗೂ ಇತರೆ ಮೂವರ ಸಿಡಿಬ್ಲೂಸಿ ಸದಸ್ಯತ್ವ ರದ್ದುಪಡಿಸಿದ ಆದೇಶವನ್ನು ಸರಕಾರ ಕೋರ್ಟ್‌ಗೆ ಸಲ್ಲಿಸಿತ್ತು.

ಪ್ರಕರಣವೇನು: ಸುಭಾಷಿಣಿ 10ನೆ ತರಗತಿಯಲ್ಲಿ ಮೂರು ಬಾರಿ ಅನುತ್ತೀರ್ಣಗೊಂಡಿದ್ದರು. ಇದರಿಂದ ತಂದೆ ಶ್ರೀರಾಮ ರೆಡ್ಡಿ, ಸುಭಾಷಣಿಯನ್ನು ಬೆಂಗಳೂರಿನ ಯಲಹಂಕದಲ್ಲಿರುವ ತಮ್ಮ ಸಂಬಂಧಿಕರಾದ ಡಾ. ಅನಿತಾ ಮತ್ತು ಡಾ. ಅಶೋಕ್ ದಂಪತಿ ಮನೆಯಲ್ಲಿಟ್ಟಿದ್ದರು. ಬಿಡುವಿನ ವೇಳೆ ವೈದ್ಯ ದಂಪತಿ ಯುವತಿಗೆ ಪಾಠ ಹೇಳಿಕೊಡುತ್ತಿದ್ದರು. ಆದರೆ, ಸುಭಾಷಿಣಿ ಅಪ್ರಾಪ್ತೆ. ಆಕೆಯನ್ನು ವೈದ್ಯ ದಂಪತಿಯು ತಮ್ಮ ಮನೆಯಲ್ಲಿ ಕೆಲಸಕ್ಕಿಟ್ಟುಕೊಂಡಿದ್ದಾರೆ ಎಂದು ಹೇಳಿ ಆ.29ರಿಂದ ಸೆ.1ರವರೆಗೆ ಆಕೆಯನ್ನು ಸರಕಾರಿ ಬಾಲಕಿಯರ ಬಾಲ ಮಂದಿರದಲ್ಲಿಡಲು ಸಿಡಬ್ಲ್ಯುಸಿ ಅಧ್ಯಕ್ಷೆಯಾಗಿದ್ದ ಅನಿತಾ ಶಿವಕುಮಾರ್ ಆದೇಶಿಸಿದ್ದರು.

ಇದರಿಂದ ಶ್ರೀರಾಮ ರೆಡ್ಡಿ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಸೆ.1ರಂದು ಸುಭಾಷಿಣಿಯನ್ನು ತಂದೆಯ ವಶಕ್ಕೆ ಒಪ್ಪಿಸಿತ್ತು. ಯುವತಿಯನ್ನು ಅಕ್ರಮ ಬಂಧನದಲ್ಲಿರಿಸಿದ ತಪ್ಪಿಗೆ ಸಿಡಿಬ್ಲೂಸಿ ನಾಲ್ವರು ಸದಸ್ಯರ ವಿರುದ್ಧ ಕ್ರಮ ಜರುಗಿಸಲು ಸೆ.7ರಂದು ಸರಕಾರಕ್ಕೆ ನ್ಯಾಯಪೀಠ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News