×
Ad

ಸರಕಾರಿ ಆಸ್ಪತ್ರೆಗಳನ್ನು ವಿಧೇಯಕದ ವ್ಯಾಪ್ತಿಗೆ ಸೇರಿಸಬೇಕು: ವಿಶ್ವೇಶ್ವರ ಹೆಗಡೆ ಕಾಗೇರಿ

Update: 2017-10-03 22:11 IST

ಬೆಂಗಳೂರು, ಅ.3: ರಾಜ್ಯ ಸರಕಾರವು ಖಾಸಗಿ ವೈದ್ಯಕೀಯ ಸಂಸ್ಥೆಗಳ(ತಿದ್ದುಪಡಿ) ವಿಧೇಯಕದ ವ್ಯಾಪ್ತಿಗೆ ಸರಕಾರಿ ಆಸ್ಪತ್ರೆಗಳನ್ನು ಸೇರಿಸಬೇಕು ಎಂಬುದು ನಮ್ಮ ಪ್ರಮುಖ ಆಗ್ರಹವಾಗಿದೆ ಎಂದು ವಿಧೇಯಕದ ಜಂಟಿ ಪರಿಶೀಲನಾ ಸಮಿತಿಯ ಸದಸ್ಯ ಹಾಗೂ ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರಕಾರವು 2007ರ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಅಧಿನಿಯಮಕ್ಕೆ ತಿದ್ದುಪಡಿ ತರಲು ಉದ್ದೇಶಿಸಿತ್ತು. ಕಳೆದ ಜೂನ್‌ನಲ್ಲಿ ನಡೆದ ಅಧಿವೇಶನದಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ವಿಧೇಯಕದ ಪರಾಮರ್ಶೆಗೆ ಸದನ ಸಮಿತಿಗೆ ವಹಿಸಲಾಗಿತ್ತು ಎಂದರು.

ಮಧುಗಿರಿ ಕ್ಷೇತ್ರದ ಶಾಸಕ ಕೆ.ಎನ್.ರಾಜಣ್ಣ ಅಧ್ಯಕ್ಷತೆಯಲ್ಲಿ ಸದನ ಸಮಿತಿಯನ್ನು ರಚಿಸಲಾಗಿತ್ತು. ಆದರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ್‌ಕುಮಾರ್ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಿದ್ದಕ್ಕೆ ನಮ್ಮ ಆಕ್ಷೇಪಣೆಯಿತ್ತು. ಆದರೂ, ಸದನ ಸಮಿತಿಯ ಸಭೆಗಳಲ್ಲಿ ಭಾಗವಹಿಸಿ ಹಲವಾರು ಸಲಹೆಗಳನ್ನು ನೀಡಿದ್ದೇವೆ ಎಂದು ಅವರು ಹೇಳಿದರು.

ಜಂಟಿ ಸದನ ಸಮಿತಿಯು ಸಿದ್ಧಪಡಿಸಿರುವ ವರದಿಗೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದೇವೆ. ಈ ವಿಧೇಯಕ ವ್ಯಾಪ್ತಿಗೆ ಸರಕಾರಿ ಆಸ್ಪತ್ರೆಗಳನ್ನು ಸೇರಿಸಬೇಕು ಎಂಬುದು ನಮ್ಮ ಪ್ರಮುಖ ವಾದ. ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕೆ ಮುಂದಾಗಿ ಸರಕಾರಿ ಆಸ್ಪತ್ರೆಗಳ ಬಗ್ಗೆ ನಿಷ್ಕಾಳಜಿ ವ್ಯಕ್ತಪಡಿಸಲು ಸರಕಾರ ಮುಂದಾಗಿದೆ ಎಂದು ಕಾಗೇರಿ ಆರೋಪಿಸಿದರು.

2010ರಲ್ಲಿ ಕೇಂದ್ರ ಸರಕಾರ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ವಿಧೇಯಕ ಜಾರಿಗೆ ತಂದಿದೆ. ಅದರಲ್ಲಿ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳನ್ನು ಸೇರಿಸಲಾಗಿದೆ. ದೇಶದ 7-8 ರಾಜ್ಯಗಳು ಈ ವಿಧೇಯಕವನ್ನು ಒಪ್ಪಿ ಜಾರಿಗೊಳಿಸಿವೆ. ಹೀಗಾಗಿ ಅದನ್ನೆ ನಮ್ಮ ರಾಜ್ಯದಲ್ಲೂ ಜಾರಿಗೊಳಿಸಬಹುದಿತ್ತು ಎಂದರು.

ಆಸ್ಪತ್ರೆಗಳ ಗುಣಮಟ್ಟ ನಿಯಂತ್ರಣಕ್ಕೆ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಸೇರಿದಂತೆ ಹಲವಾರು ಸಂಸ್ಥೆಗಳಿವೆ. ಆಸ್ಪತ್ರೆಗಳ ವರ್ಗೀಕರಣವೂ ಸಮರ್ಪಕವಾಗಿ ಆಗಿಲ್ಲ. ದರ ನಿಗದಿಗೆ ಸರಕಾರ ಅನುಸರಿಸುವ ಮಾನದಂಡವೂ ಸಮರ್ಪಕವಾಗಿಲ್ಲ ಎಂದು ಕಾಗೇರಿ ದೂರಿದರು.

ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿ ಹಾಗೂ ವೈದ್ಯರಿಗೆ ಕಾರಾಗೃಹ ವಾಸ ಶಿಕ್ಷೆ ನೀಡುವುದಕ್ಕೆ ನಮ್ಮ ಸಮ್ಮತಿಯಿಲ್ಲ. ಜೊತೆಗೆ ನ್ಯಾ.ಸಂತೋಷ್‌ಹೆಗ್ಡೆಯಂತಹ ಪ್ರಮುಖರ ಸಲಹೆ ಪಡೆಯಲು ಸರಕಾರ ಸಿದ್ಧವಿಲ್ಲ. ಅನ್ಯ ರಾಜ್ಯಗಳಲ್ಲಿನ ಆಸ್ಪತ್ರೆ ನಿಯಂತ್ರಣ ಪರಿಶೀಲನೆ ಮಾಡಲು ಸರಕಾರ, ಸಚಿವರು ಒಪ್ಪುತ್ತಿಲ್ಲ ಎಂದು ಕಾಗೇರಿ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಡಾ.ಸಿ.ಎನ್.ಅಶ್ವಥನಾರಾಯಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News