ಭೋವಿ ನಿಗಮ ಲೋಕಾರ್ಪಣೆ, ಶಿಷ್ಟಾಚಾರ ಉಲ್ಲಂಘನೆ: ಆರೋಪ
ಬೆಂಗಳೂರು, ಅ.3: ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಅ.8 ರಂದು ಹಮ್ಮಿಕೊಂಡಿರುವ ಭೋವಿ ಅಭಿವೃದ್ಧಿ ನಿಗಮದ ಲೋಕಾರ್ಪಣೆ ಕಾರ್ಯಕ್ರಮವನ್ನು ಸರಕಾರದ ಶಿಷ್ಟಾಚಾರ ಉಲ್ಲಂಘಿಸಿ ನಡೆಸುತ್ತಿದ್ದಾರೆ ಎಂದು ಭಾರತೀಯ ಭೋವಿ ಸಮಾಜ ಸೇವಾ ಸಮಿತಿ ಆರೋಪಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಎಂ.ಜಗನ್ನಾಥ್, ಕಾರ್ಯಕ್ರಮದಲ್ಲಿ ಸರಕಾರದ ನಿಯಮಗಳನ್ನು ಮೀರಿ ಖಾಸಗಿ ವ್ಯಕ್ತಿಗಳ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸಿದ್ದಾರೆ. ಅಲ್ಲದೆ, ಸಚಿವ ಆಂಜನೇಯ ಅವರ ಜಿಲ್ಲೆಯ ಸ್ವಾಮೀಜಿಯನ್ನು ಮಾತ್ರ ಆಹ್ವಾನಿಸಿ, ಉಳಿದ ಭೋವಿ ಸಮುದಾಯದ ಸ್ವಾಮೀಜಿಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ದೂರಿದರು.
ಹಲವಾರು ವರ್ಷಗಳಿಂದ ಭೋವಿ ಸಮುದಾಯದ ಅಭಿವೃದ್ಧಿಗಾಗಿ ಒಂದು ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಹತ್ತಾರು ಸಂಘಟನೆಗಳು, ಮಠಗಳ ಸ್ವಾಮೀಜಿಗಳು, ವ್ಯಕ್ತಿಗಳು ಚಳವಳಿ ನಡೆಸಿದ್ದಾರೆ. ಆದರೆ, ಈಗ ನಿಗಮ ರಚಿಸಿದ್ದು, ಅದರ ಉದ್ಘಾಟನೆ ವೇಳೆ ಎಲ್ಲರನ್ನು ಪರಿಗಣಿಸಿಲ್ಲ. ಇದು ಭೋವಿ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ ಎಂದು ಹೇಳಿದರು.
ಭೋವಿ ಸಮುದಾಯದ ಅಭಿವೃದ್ಧಿಗಾಗಿ ರಾಜ್ಯ ಸರಕಾರ ನಿಗಮ ಮಂಡಳಿಯನ್ನು ಜಾರಿ ಮಾಡುತ್ತಿರುವುದು ಸ್ವಾಗತಾರ್ಹ. ಆದರೆ, ಈ ನಿಗಮದ ಅಧ್ಯಕ್ಷರನ್ನಾಗಿ ಸಾಮಾನ್ಯ ಜ್ಞಾನವಿಲ್ಲದ, ಸಮುದಾಯದ ಕುರಿತು ಅರಿವಿಲ್ಲದ ಒಬ್ಬ ವ್ಯಕ್ತಿಯನ್ನು ನೇಮಕ ಮಾಡಿದ್ದಾರೆ. ಇದರಿಂದಾಗಿ ಸಮುದಾಯಕ್ಕೆ ಯಾವುದೇ ರೀತಿಯ ಉಪಯೋಗವಾಗುವುದಿಲ್ಲ. ಆದುದರಿಂದ ಮುಖ್ಯಮಂತ್ರಿಗಳು ಅಧ್ಯಕ್ಷರನ್ನಾಗಿ ನೇಮಿಸಿರುವ ಸೀತಾರಾಮ್‌ರನ್ನು ವಜಾ ಮಾಡಿ, ಹೊಸಬರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.