ರೊಹಿಂಗ್ಯಾ: ಕೇಂದ್ರ ಸರ್ಕಾರದ ನಿಲುವು ತಿರಸ್ಕರಿಸಿದ ಸುಪ್ರೀಂಕೋರ್ಟ್

Update: 2017-10-04 03:50 GMT

ಹೊಸದಿಲ್ಲಿ, ಅ.4: ರೊಹಿಂಗ್ಯಾ ಮುಸ್ಲಿಮ್ ನಿರಾಶ್ರಿತರನ್ನು ಗಡೀಪಾರು ಮಾಡುವ ಎನ್‌ಡಿಎ ಸರ್ಕಾರದ ನಿರ್ಧಾರವನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ನ್ಯಾಯಾಂಗ ವ್ಯವಸ್ಥೆ ಆಡಳಿತಾತ್ಮಕ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡಬಾರದು, ಆದರೆ ಸರ್ಕಾರದ ನಿರ್ಧಾರವನ್ನು ಪರಾಮರ್ಶಿಸುವ ಹಕ್ಕು ನ್ಯಾಯಾಂಗಕ್ಕಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದ್ದು, ಈ ಸಂಬಂಧ ಸಲ್ಲಿಸಿದ್ದ ಅರ್ಜಿ ಸ್ವೀಕಾರಾರ್ಹವಲ್ಲ ಎಂದು ಸ್ಪಷ್ಟಪಡಿಸಿದೆ. ಇಂಥ ಅರ್ಜಿಗಳು ಸಲ್ಲಿಕೆಯಾದಾಗ, ಸುಪ್ರೀಂಕೋರ್ಟ್‌ನ ಅಧಿಕಾರ ವ್ಯಾಪ್ತಿಯ ವಿಚಾರದಲ್ಲಿ ಸ್ವಲ್ಪ ನಿಧಾನದಿಂದ ಇರಬೇಕು ಎನ್ನುವುದು 40 ವರ್ಷಗಳ ಅನುಭವ ಎಂದು ಸ್ಪಷ್ಟಪಡಿಸಿದರು.

ಈ ಸಂಬಂಧ ಕೇಂದ್ರದ ಹೇಳಿಕೆ ಸಮರ್ಥನೀಯ ಎಂಬ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ವಾದಕ್ಕೆ ನ್ಯಾಯಮೂರ್ತಿಗಳು ಮೇಲಿನಂತೆ ಪ್ರತಿಕ್ರಿಯಿಸಿದರು.

ಕಾರ್ಯಾಂಗ ಈ ನಿರ್ಧಾರಕ್ಕೆ ಬರುವ ಮುನ್ನ ಹಲವು ಮಾನದಂಡಗಳನ್ನು ಅನುಸರಿಸಿದೆ. ಇದು ರಾಜತಾಂತ್ರಿಕ ನಿರ್ಧಾರ. ಒಂದು ದೇಶ ನಿರಾಶ್ರಿತರನ್ನು ಉಳಿಸಿಕೊಳ್ಳಬಹುದೇ, ಅವರಿಗೆ ಆಶ್ರಯ ನೀಡುವುದರಿಂದ ಸ್ಥಳೀಯ ಜನರ ಮೇಲೆ ಯಾವ ಪರಿಣಾಮವಾಗುತ್ತದೆ ಎನ್ನುವುದನ್ನು ಸರ್ಕಾರ ಪರಿಗಣಿಸಿದೆ ಎಂದು ಮೆಹ್ತಾ ವಾದಿಸಿದ್ದರು. ಈ ಬಗೆಗಿನ ಆಡಳಿತಾತ್ಮಕ ನಿರ್ಧಾರವನ್ನು ಸರ್ಕಾರಕ್ಕೆ ಬಿಟ್ಟುಬಿಡಬೇಕು ಎಂದು ಕೋರಿದರು.

ಇದಕ್ಕೂ ಮುನ್ನ ಹಿರಿಯ ವಕೀಲ ಫಾಲಿ ಎಸ್. ನಾರಿಮನ್ ಅವರು 2011ರಲ್ಲಿ ರೊಹಿಂಗ್ಯಾ ನಿರಾಶ್ರಿತರಿಗೆ ರಕ್ಷಣೆ ನೀಡುವ ಸಂಬಂಧ ಯುಪಿಎ ಸರ್ಕಾರ ರೂಪಿಸಿದ ಮಾರ್ಗಸೂಚಿಯನ್ನು ನ್ಯಾಯಾಲಯದ ಗಮನಕ್ಕೆ ತಂದರು. ಎನ್‌ಡಿಎ ಸರ್ಕಾರದ ನಿರ್ಧಾರ ಅಂತರರಾಷ್ಟ್ರೀಯ ಬದ್ಧತೆಗೆ ವಿರುದ್ಧವಾದದ್ದು ಎಂದು ಅವರು ವಾದಿಸಿದರು. ಮೆಹ್ತಾ ಅವರ ವಾದವನ್ನು ಗಮನಿಸುವಂತೆ ನ್ಯಾಯಮೂರ್ತಿ, ಮೆಹ್ತಾ ಅವರಿಗೆ ಸಲಹೆ ಮಾಡಿದರು. ಮಹಿಳೆಯರು ಮತ್ತು ಮಕ್ಕಳ ಭವಿಷ್ಯದ ಬಗ್ಗೆ ಅವರು ಕಳಕಳಿ ವ್ಯಕ್ತಪಡಿಸಿದ್ದಾರೆ. ಈ ಸಮುದಾಯವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಭಾರತದ ಬದ್ಧತೆಯನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಸೂಚಿಸಿ ಪ್ರಕರಣವನ್ನು ಅಕ್ಟೋಬರ್ 13ಕ್ಕೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News