2013ರಲ್ಲಿ ತನ್ನ 300 ಕೋಟಿ ಇ-ಮೇಲ್ ಖಾತೆಗಳೂ ಹ್ಯಾಕ್ ಆಗಿತ್ತು ಎಂದ ಯಾಹೂ!

Update: 2017-10-04 06:47 GMT

ಸ್ಯಾನ್ ಫ್ರಾನ್ಸಿಸ್ಕೋ, ಅ.4: ತನ್ನ ಎಲ್ಲಾ 300 ಕೋಟಿ ಇ-ಮೇಲ್ ಖಾತೆಗಳು 2013ರಲ್ಲಿ ಹ್ಯಾಕ್ ಆಗಿತ್ತು ಎಂದು ಯಾಹೂ ಹೇಳಿದೆ. ಈ ಹಿಂದೆ ಯಾಹೂ ಈ ಬಗ್ಗೆ ಉಲ್ಲೇಖಿಸಿದ ಸಂಖ್ಯೆಯಿಂದ ಇದು ಮೂರು ಪಟ್ಟು ಅಧಿಕವಾಗಿದ್ದು, ಇದರಿಂದ ಕಂಪೆನಿಯ ಹೊಸ ಮಾಲಕ ಸಂಸ್ಥೆ ವೆರಿಝೋನ್ ಕಮ್ಯುನಿಕೇಶನ್ಸ್ ಇಂಕ್ ಹಲವಾರು ಕಾನೂನು ತೊಡಕುಗಳನ್ನು ಎದುರಿಸುವ ಸಾಧ್ಯತೆಯಿದೆ.

ಈ ಸಂಬಂಧ ಯಾಹೂ ಈಗಾಗಲೇ 41 ಪ್ರಕರಣಗಳನ್ನು ಅಮೆರಿಕದ ವಿವಿಧ ಕೋರ್ಟುಗಳಲ್ಲಿ ಎದುರಿಸುತ್ತಿದೆ. ಈ ಹ್ಯಾಕಿಂಗ್ ನಿಂದ ಬಾಧಿತರಾದ ಕೆಲವು ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರು ಖಾತೆದಾರರ ಆರೋಪಗಳನ್ನು ಸಮರ್ಥಿಸುವಂತಹ ಹೆಚ್ಚುವರಿ ಮಾಹಿತಿಗಳನ್ನೂ ಕೇಳಿದ್ದರು ಎಂದು ಯಾಹೂ ಖಾತೆದಾರರ ಪರವಾಗಿ ವಾದಿಸುತ್ತಿರುವ ಜಾನ್ ಯಂಚುನಿಸ್ ಎಂಬ ವಕೀಲರು ಹೇಳಿದ್ದಾರೆ. ‘‘ಇದೀಗ ಹೆಚ್ಚಿನ ಮಾಹಿತಿ ದೊರಕಿದಂತಾಗಿದೆಯಾದರೂ ಅದನ್ನು ಯೋಚಿಸುವಾಗಲೇ ಆತಂಕವಾಗುತ್ತದೆ’’ಎಂದು ವಕೀಲರು ಹೇಳುತ್ತಾರೆ.

ತನ್ನ 100 ಕೋಟಿಗೂ ಅಧಿಕ ಖಾತೆಗಳು 2013ರಲ್ಲಿ ಹ್ಯಾಕ್ ಆಗಿವೆ ಎಂದು ಯಾಹೂ ಕಳೆದ ಡಿಸೆಂಬರ್ ತಿಂಗಳಿನಲ್ಲಿ ಹೇಳಿತ್ತಲ್ಲದೆ, ಈ ಬೆಳವಣಿಗೆಯ ನಂತರ ತನ್ನ ಆಸ್ತಿಪಾಸ್ತಿಗಳ ಮೌಲ್ಯದಲ್ಲಿ ಕಡಿತಗೊಳಿಸಿ ವೆರಿಝಾನ್ ಗೆ ಕಂಪೆನಿಯ ಮಾರಾಟವಾಗುವಂತೆ ನೋಡಿಕೊಂಡಿತ್ತು.

ಆದರೆ ತನಗೀಗ ಹೊಸ ಗುಪ್ತಚರ ಮಾಹಿತಿ ಲಭ್ಯವಾಗಿದ್ದು, ಎಲ್ಲಾ ಖಾತೆಗಳೂ ಬಾಧಿತವಾಗಿತ್ತು ಎಂದು ಯಾಹೂ ಮಂಗಳವಾರ ತಿಳಿಸಿದೆ ಆದರೆ ಕಳವಾದ ಮಾಹಿತಿಯಲ್ಲಿ ಪಾಸ್‌ವರ್ಡ್, ಟೆಕ್ಸ್ಟ್, ಪೇಮೆಂಟ್ ಕಾರ್ಡ್ ಡಾಟಾ ಅಥವಾ ಬ್ಯಾಂಕ್ ಖಾತೆ ಮಾಹಿತಿ ಸೇರಿರಲಿಲ್ಲ ಎಂದೂ ಕಂಪೆನಿ ಸ್ಪಷ್ಟ ಪಡಿಸಿದೆ.

ಹಲವಾರು ಯಾಹೂ ಖಾತೆದಾರರ ಬಳಿ ಒಂದಕ್ಕಿಂತ ಹೆಚ್ಚು ಖಾತೆಯಿದ್ದುದರಿಂದ ಈ ಇ-ಮೇಲ್ ಹ್ಯಾಕಿಂಗ್ ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಹ್ಯಾಕಿಂಗ್ ಆಗಿದೆ.

ಕಂಪೆನಿ ಎರಡು ದೊಡ್ಡ ಸೈಬರ್ ದಾಳಿಗಳಿಗೆ ತುತ್ತಾದ ಕಾರಣ ಯಾಹೂ ಆಸ್ತಿಪಾಸ್ತಿಗಳಿಗೆ ತನ್ನ ಮೂಲ ಆಫರ್ ಬೆಲೆಯನ್ನು 350 ಮಿಲಿಯನ್ ಡಾಲರ್ ಗೆ ವೆರಿಝಾನ್ ಫೆಬ್ರವರಿಯಲ್ಲಿ ಇಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News