ಏಷ್ಯನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಕೂಟ: 4 ಪದಕ ಗೆದ್ದ 76ರ ಹರೆಯದ ಶಿವನಾಥ್‌

Update: 2017-10-05 09:36 GMT

ಹೊಸದಿಲ್ಲಿ, ಅ.5: ಇತ್ತೀಚೆಗೆ ಚೀನಾದ ರುಗಾವೊದಲ್ಲಿ ಕೊನೆಗೊಂಡ 20ನೆ ಆವೃತ್ತಿಯ ಏಷ್ಯನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅಲಹಾಬಾದ್‌ನ 76ರ ಪ್ರಾಯದ ಅಂತಾರಾಷ್ಟ್ರೀಯ ಅಥ್ಲೀಟ್ ಶಿವನಾಥ್ ನಾಲ್ಕು ಕಂಚು ಜಯಿಸಿ ಗಮನ ಸೆಳೆದಿದ್ದಾರೆ.
 ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡ 37 ಚಿನ್ನ, 43 ಬೆಳ್ಳಿ ಹಾಗೂ 66 ಕಂಚು ಸಹಿತ ಒಟ್ಟು 146 ಪದಕಗಳನ್ನು ಜಯಿಸುವ ಮೂಲಕ ಪದಕ ಪಟ್ಟಿಯಲ್ಲಿ ಎರಡನೆ ಸ್ಥಾನ ಪಡೆದಿದೆ. ಆತಿಥೇಯ ಚೀನಾ ಮೊದಲ ಸ್ಥಾನದಲ್ಲಿದೆ.
ಸೆ.24ರಿಂದ 28ರ ತನಕ ನಡೆದ ಚಾಂಪಿಯನ್‌ಶಿಪ್‌ನಲ್ಲಿ 20 ದೇಶಗಳು ಭಾಗವಹಿಸಿದ್ದವು. ಭಾರತದ 200 ಕ್ರೀಡಾಪಟುಗಳು ಭಾಗವಹಿಸಿದ್ದು, ಉತ್ತರಪ್ರದೇಶದ ನಾಲ್ವರು ಅಥ್ಲೀಟ್‌ಗಳು ಭಾಗವಹಿಸಿದ್ದರು. ನಾಲ್ವರು ಸ್ಪರ್ಧಿಗಳು 2 ಚಿನ್ನ ಸಹಿತ ಏಳು ಪದಕಗಳನ್ನು ಜಯಿಸಿದ್ದಾರೆ.

 ಶಿವನಾಥ್ 2000 ಮೀ. ಹರ್ಡಲ್ಸ್, 80 ಮೀ. ಹರ್ಡಲ್ಸ್, 4-100 ಮೀ.ರಿಲೇ ಹಾಗೂ 4-400 ಮೀ. ರಿಲೇ ರೇಸ್‌ನಲ್ಲಿ ಕಂಚು ಜಯಿಸಿದ್ದಾರೆ. ಗೋರಖ್‌ಪುರದ 70ರ ಪ್ರಾಯದ ಪಿ.ಎನ್.ಮಿಶ್ರಾ ಹ್ಯಾಮರ್ ಎಸೆತದಲ್ಲಿ ಚಿನ್ನ ಜಯಿಸಿದ್ದಾರೆ. 35ರ ಹರೆಯದ ಸಿದ್ದಾರ್ಥ್ ಕೃಷ್ಣ 5,000 ಮೀ. ನಡಿಗೆ ಸ್ಪರ್ಧೆಯಲ್ಲಿ ಕಂಚು ಹಾಗೂ ಕಾನ್ಪುರದ ಲಾಲ್‌ಬಹದ್ದೂರ್ ಯಾದವ್(35ವರ್ಷ) ಹ್ಯಾಮರ್ ಎಸೆತದಲ್ಲಿ ಚಿನ್ನ ಜಯಿಸಿದ್ದಾರೆ.

ಭಾರತೀಯ ವಾಯು ದಳದ(ಐಎಎಫ್)ಮಾಜಿ ಅಧಿಕಾರಿ ಶಿವನಾಥ್ ಕ್ರಮವಾಗಿ 2013 ಹಾಗೂ 2014ರಲ್ಲಿ ಬೆಂಗಳೂರು ಹಾಗೂ ಕೊಯಮತ್ತೂರಿನಲ್ಲಿ ನಡೆದಿದ್ದ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಸ್ಟೀಪಲ್‌ಚೇಸ್‌ನಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು. 2000ರಲ್ಲಿ ಇಂದಿರಾ ಮ್ಯಾರಥಾನ್‌ನಲ್ಲಿ ಭಾಗವಹಿಸುವ ಮೂಲಕ ಕ್ರೀಡೆಗೆ ಪಾದಾರ್ಪಣೆಗೈದಿದ್ದ ಶಿವನಾಥ್ ಈವರೆಗೆ ಹಲವಾರು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News