ಶಿಕ್ಷಕಿಯರು, ವಿದ್ಯಾರ್ಥಿನಿಯರ ಪ್ರಯಾಣಕ್ಕೆ ಚಾಲಕಿಯರ ನೇಮಕ

Update: 2017-10-05 16:44 GMT

ರಿಯಾದ್ (ಸೌದಿ ಅರೇಬಿಯ), ಅ. 5: ಸೌದಿ ಅರೇಬಿಯದ ಮಹಿಳೆಯರು ವಾಹನ ಚಾಲನೆ ಮಾಡಲು ಆರಂಭಿಸಿದ ಬಳಿಕ, ಶಿಕ್ಷಕಿಯರು ಮತ್ತು ವಿದ್ಯಾರ್ಥಿನಿಯರನ್ನು ಕರೆದುಕೊಂಡು ಹೋಗುವುದು ಸೇರಿದಂತೆ ನಿರ್ದಿಷ್ಟ ಸಾಗಾಟ ಚಟುವಟಿಕೆಗಳನ್ನು ಮಹಿಳೆಯರಿಗೆ ವಹಿಸಿಕೊಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಸೌದಿ ಅರೇಬಿಯದ ಸಾರ್ವಜನಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷ ರುಮಯ್ಯ ಅಲ್ ರುಮಯ್ಯ ಹೇಳಿದ್ದಾರೆ.

2018ರ ಜೂನ್‌ನಲ್ಲಿ ಸೌದಿ ಅರೇಬಿಯದಲ್ಲಿ ಮಹಿಳೆಯರು ವಾಹನ ಚಾಲನೆ ಮಾಡುವ ಅಧಿಕಾರ ಪಡೆಯಲಿದ್ದಾರೆ. ಈ ಬಗ್ಗೆ ಸೌದಿ ದೊರೆ ಸಲ್ಮಾನ್ ಆದೇಶ ಹೊರಡಿಸಿದ್ದಾರೆ.

ಸಾರಿಗೆ ಚಟುವಟಿಕೆಗಳಲ್ಲಿ ಪುರುಷ ಮತ್ತು ಮಹಿಳೆಯರಿಬ್ಬರಿಗೂ ಅವಕಾಶ ಲಭಿಸುವುದು ಎಂದು ಹೇಳಿದ ಅವರು, ''ಮಹಿಳೆಯರಿಗೆ ಚಾಲನೆ ಮಾಡಲು ಅಧಿಕಾರ ಲಭಿಸಿದ ಬಳಿಕ ಹಾಗೂ ಚಾಲನಾ ಪರವಾನಿಗೆಗಳಿಗೆ ಅರ್ಜಿ ಸಲಿಸಿದ ಬಳಿಕ, ಸಂಬಂಧಿತ ಎಲ್ಲ ಚಟುವಟಿಕೆಗಳಲ್ಲಿ ಕೆಲಸ ಮಾಡಲು ಅವರಿಗೆ ಅಧಿಕಾರ ದೊರೆಯುವುದು'' ಎಂದರು.

 ''ಸಾರಿಗೆ ಕ್ಷೇತ್ರದಲ್ಲಿ ಸೌದೀಕರಣ ದರ ತುಂಬಾ ಕಡಿಮೆಯಿದ್ದರೂ, ವಿದೇಶಿ ಚಾಲಕಿಯರನ್ನು ನೇಮಿಸುವ ಉದ್ದೇಶವನ್ನು ಪ್ರಾಧಿಕಾರ ಹೊಂದಿಲ್ಲ. ಈ ಕ್ಷೇತ್ರದಲ್ಲಿ ಇರುವ ಏಕಸ್ವಾಮ್ಯವನ್ನು ಕೊನೆಗೊಳಿಸಲೂ ನಾವು ಉದ್ದೇಶಿಸಿದ್ದೇವೆ'' ಎಂದು ರುಮಯ್ಯ ನುಡಿದರು.

ಮಹಿಳೆಯರ ವಾಹನ ಚಾಲನೆಯಿಂದ ಆರ್ಥಿಕ ಅಭಿವೃದ್ಧಿ: ಪರಿಣತರು

ಸೌದಿ ಅರೇಬಿಯದಲ್ಲಿ ಮಹಿಳೆಯರಿಗೆ ವಾಹನ ಚಾಲನೆಗೆ ಅವಕಾಶ ನೀಡುವುದರಿಂದ ಆರ್ಥಿಕ ಪ್ರಗತಿಯುಂಟಾಗುತ್ತದೆ ಹಾಗೂ ದೇಶವು ವಿದೇಶಿ ಕಾರ್ಮಿಕರನ್ನು ಅವಲಂಬಿಸುವುದು ಕಡಿಮೆಯಾಗುತ್ತದೆ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

 ಸೌದಿ ಅರೇಬಿಯದಲ್ಲಿ ಸುಮಾರು 13 ಲಕ್ಷ ಮನೆಗಳಲ್ಲಿ ವಿದೇಶಿ ಚಾಲಕರು ದುಡಿಯುತ್ತಿದ್ದು, ಅವರಿಗೆ ವಾರ್ಷಿಕ 33 ಬಿಲಿಯ ಸೌದಿ ರಿಯಾಲ್ (57,324 ಕೋಟಿ ರೂಪಾಯಿ) ವೇತನ ನೀಡಲಾಗುತ್ತದೆ. ಹೆಚ್ಚಿನ ಮಹಿಳೆಯರು ಪ್ರತಿ ದಿನ ಕೆಲಸಕ್ಕೆ ಮತ್ತು ಅಂಗಡಿಗಳಿಗೆ ಹೋಗಲು ಈ ಚಾಲಕರನ್ನು ಅವಲಂಬಿಸಿದ್ದಾರೆ ಎಂದು ರಿಯಾದ್‌ನಲ್ಲಿ ನಡೆದ ವಿಚಾರ ಸಂಕಿರಣವೊಂದರಲ್ಲಿ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News