ವಿಧವೆ ಈ ಶಬ್ದದ ಬಳಕೆ ಇನ್ನೆಷ್ಟು ದಿನ?

Update: 2017-10-05 18:33 GMT

ಇತ್ತೀಚೆಗೆ ನಿಧನರಾದ ಬಿ. ವಿ. ವೀರಭದ್ರಪ್ಪ  ನವರು ಕರ್ನಾಟಕದ ಅತ್ಯಂತ ಅಪರೂಪದ ವಿಚಾರವಾದಿಗಳಲ್ಲಿ ಒಬ್ಬರು. ದಾವಣಗೆರೆಯ ಕಾಲೇಜೊಂದರಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದ ವೀರಭದ್ರಪ್ಪ ನಾಡಿನ ಶೋಷಣೆ, ಬೌದ್ಧಿಕ ಗುಲಾಮಗಿರಿಯನ್ನು ತಮ್ಮ ಪ್ರಬುದ್ಧ, ವೈಚಾರಿಕ ನಿಲುವಿನಿಂದ ಖಂಡಿಸಿದವರು. ಈ ಲೇಖನವನ್ನು ಲಂಕೇಶ್‌ರ ‘ಪತ್ರಿಕೆ’ ಪ್ರಕಾಶನದಿಂದ ಪ್ರಕಟವಾದ ‘ವೇದಾಂತ ರೆಜಿಮೆಂಟ್ ಮತ್ತು ಇತರ ವೈಚಾರಿಕ ಬರಹ’ ಕೃತಿಯಿಂದ ಆಯ್ಕೆ ಮಾಡಲಾಗಿದೆ.

ವೇದಗಳು, ರಾಮಾಯಣ, ಮಹಾಭಾರತ, ಮನು, ಯಾಜ್ಞವಲ್ಕ, ಪರಾಶರ ಮುಂತಾದ ಕೃತಿಗಳ ವಸ್ತುನಿಷ್ಠ ಅಧ್ಯಯನ ಕಾಲಾನುಕ್ರಮವಾಗಿ ವಿಧವೆಯವರನ್ನು ಹೇಗೆ ಔನ್ನತ್ಯ ದಿಂದ ಅವನತಿಗೆ ತಳ್ಳಲಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.

ಋಗ್ವೇದ, ಒಬ್ಬ ಸ್ತ್ರೀಗೆ ಏಕಕಾಲದಲ್ಲಿ ಬಹುಜನ ಗಂಡಂದಿರು ಸಲ್ಲುವುದಿಲ್ಲ ಎಂದು ಮಾತ್ರ ಹೇಳುತ್ತದೆ. ಬಹುಪತಿತ್ವ ವಿವಾಹವನ್ನು ಮಾತ್ರ ವೇದ ನಿಷೇಧಿಸುವುದೇ ವಿನಃ ವಿಧವಾ ವಿವಾಹವನ್ನಾಗಲಿ, ಪುನರ್ವಿವಾಹವನ್ನಾಗಲಿ ಅದು ತಿರಸ್ಕರಿಸುವುದಿಲ್ಲ. ಗಂಡನ ಮರಣಾನಂತರ ವಿಧವೆಯು ತನ್ನ ಪತಿಯ ಸೋದರನನ್ನು ವಿವಾಹವಾಗುವುದು ಧಾರ್ಮಿಕ ವಿಧಿಯಾಗಿತ್ತು. ತನ್ನ ಪತಿಗೆ ಸೋದರರಿಲ್ಲದಿದ್ದರೆ ಅವಳು ಕುಟುಂಬದ ಹತ್ತಿರದ ಸಂಬಂಧಿಯನ್ನು ಮದುವೆಯಾಗಿ ಮಕ್ಕಳನ್ನು ಪಡೆಯ ಬಹುದಿತ್ತು.

ಮಹಾಭಾರತದಲ್ಲಿನ ಸ್ತ್ರೀ ಪುರುಷ ಸಂಬಂಧಗಳು ಅತ್ಯಂತ ವೈವಿಧ್ಯಪೂರ್ಣವಾಗಿವೆ. ಮಹಾಭಾರತದ ಕವಿಯು ಆರ್ಯ ಜನಾಂಗದ ಹಾಗೂ ಆರ್ಯಪೂರ್ವ ಭಾರತೀಯ ಜನಾಂಗಗಳ ಸಂಪ್ರದಾಯಗಳನ್ನು ನೈಜವಾಗಿ ಚಿತ್ರಿಸಿದ್ದಾನೆ. ಭಾರತದಲ್ಲಿ ನಿರೂಪಣೆಗೊಂಡ ಸಂಗತಿಗಳು ಐತಿಹಾಸಿಕವಾಗಿ ಸತ್ಯವಿರಬಹುದು, ಇಲ್ಲದಿರಬಹುದು. ಆದರೆ ಅಲ್ಲಿ ವಿವರಿಸಲಾದ ಸಾಮಾಜಿಕ ನೀತಿಗಳು ಬಹುಮಟ್ಟಿಗೆ ವಾಸ್ತವ ಎನ್ನಬಹುದು.

ಪ್ರಾಚೀನ ಭಾರತದಲ್ಲಿ ರೂಢಿಯಲ್ಲಿದ್ದ ‘ನಿಯೋಗ’ ಎಂಬ ಪದ್ಧತಿಯನ್ನು ಮಹಾಭಾರತ ಉಲ್ಲೇಖಿಸುತ್ತದೆ. ಪತಿ ಮಡಿದಾಗ ಇಲ್ಲವೆ ನಪುಂಸಕನಾದಾಗ ಅವನ ಮಡದಿಯು ಗೊತ್ತಾದ ಪುರುಷನಿಂದ ಮಕ್ಕಳನ್ನು ಪಡೆಯಬಹುದಾಗಿತ್ತು. ಆ ಮಕ್ಕಳು ಶಾಸ್ತ್ರರೀತ್ಯ ಗತಿಸಿದ ಮಕ್ಕಳೇ ಆಗಿ ಅವನ ಆಸ್ತಿಗೆ ಹಕ್ಕುದಾರರಾಗುತ್ತಿದ್ದರು. ಹೊಲದಲ್ಲಿ ಬಿತ್ತಿದ ಬೆಳೆಯು ಹೊಲದ ಒಡೆಯನಿಗೆ ಸಲ್ಲುತ್ತದೆ, ಬಿತ್ತಿದವನಿಗಲ್ಲ ಎಂಬ ನಂಬಿಕೆ ಇಂತಹ ಪದ್ಧತಿಗೆ ಪೋಷಕವಾಗಿತ್ತು.

ಮಡದಿಯಾದ ಅಂಬಿಕೆ ಮತ್ತು ಅಂಬಾಲಿಕೆಯರಿಗೆ ಪುತ್ರ ಸಂತಾನವಾಗುವ ಮೊದಲೇ ವಿಚಿತ್ರವೀರ್ಯನು ಗತಿಸಿದಾಗ ವಂಶದ ಕುಡಿಯನ್ನು ಬೆಳೆಸಬೇಕೆಂದು ಎಲ್ಲರೂ ವಿಚಿತ್ರವೀರ್ಯನ ಮಲಸೋದರನಾದ ಭೀಷ್ಮನತ್ತ ನೋಡುತ್ತಾರೆ; ಭೀಷ್ಮ ಬ್ರಹ್ಮಚರ್ಯ ವೃತವನ್ನು ಕೈಗೊಂಡಿರುವುದರಿಂದ ಅಂಬಿಕೆ ಮತ್ತು ಅಂಬಾಲಿಕೆಯರು ಮಕ್ಕಳನ್ನು ಪಡೆಯಬಹುದೆಂದು ಭೀಷ್ಮ ಮತ್ತು ಸತ್ಯವತಿಯರು ತೀರ್ಮಾನಿಸುತ್ತಾರೆ. ವ್ಯಾಸ ವಿಚಿತ್ರವೀರ್ಯನ ತಾಯಿಯಾದ ಸತ್ಯವತಿಗೆ ವಿವಾಹಪೂರ್ವದಲ್ಲಿ ಪರಾಶರ ಋಷಿಯಿಂದ ಜನಿಸಿದವನು. ಸತ್ಯವತಿ ಮತ್ತು ಭೀಷ್ಮರ ಪ್ರಾರ್ಥನೆ ಮನ್ನಿಸಿ ದ್ವೈಪಾಯನ ವ್ಯಾಸನು ಅಂಬಿಕೆ ಮತ್ತು ಅಂಬಾಲಿಕೆಯರನ್ನು ಕೂಡಿದುದರ ಫಲವಾಗಿ ಧೃತರಾಷ್ಟ್ರ ಮತ್ತು ಪಾಂಡು ಜನಿಸುತ್ತಾರೆ.

  ಮಹಾಭಾರತದ ಆದಿಪರ್ವದ 104ನೆ ಅಧ್ಯಾಯದಲ್ಲಿ ಬರುವ ದೀರ್ಘತಮ ಎಂಬ ಋಷಿಯ ಕಥೆ ಗಮನಾರ್ಹ. ಬೃಹಸ್ಪತಿಯ ಅಣ್ಣ ಉತಥ್ಯನೆಂಬ ಋಷಿಗೆ ದೀರ್ಘತಮನೆಂಬ ಮಗನಿದ್ದನು. ಅವನು ಹುಟ್ಟು ಕುರುಡನಾಗಿದ್ದನು. ಅವನು ಹುಟ್ಟು ಕುರುಡನಾದರೂ ಮಹಾ ವಿದ್ವಾಂಸ. ವಿವಾಹಿತನಾಗಿದ್ದರೂ ಅವನು ಪರಸ್ತ್ರೀಯರೊಡನೆ ಸ್ವೇಚ್ಛಾಚಾರದಿಂದ ವರ್ತಿಸುತ್ತಿದ್ದ. ಇದರಿಂದ ಬೇಸತ್ತ ಋಷಿಗಳು ಅವನಿಗೆ ಬಹಿಷ್ಕಾರ ಹಾಕಿದರು. ಅವನ ಮಡದಿಯಾದ ಪ್ರದ್ವೇಷಿಗೆ ಆ ವೇಳೆಗೆ ಮಕ್ಕಳಿದ್ದರು. ದೀರ್ಘತಮನು ಕುರಡನಾಗಿದ್ದರಿಂದ ಅವನಿಗೂ ಅವನ ಮಕ್ಕಳಿಗೂ ಪ್ರದ್ವೇಷಿಯೇ ದುಡಿದು ಹಾಕಬೇಕಾಗಿತ್ತು. ಪತಿಯ ದುರ್ವರ್ತನೆಯಿಂದ ಬೇಸತ್ತ ಅವಳು ‘‘ಇನ್ನು ನಾನು ದುಡಿದು ಹಾಕುವುದಿಲ್ಲ. ನೀನು ಮನಬಂದಲ್ಲಿ ಹೋಗು, ನಾನು ಮತ್ತೊಬ್ಬ ಗಂಡನನ್ನು ಮಾಡಿಕೊಳ್ಳುವೆ’’ ಎಂದು ಹೇಳಿದಳು. ಇದನ್ನು ಕೇಳಿದ ದೀರ್ಘತಮನು ಕೆರಳಿ ‘‘ಸ್ತ್ರೀಗೆ ಜೀವನಪರ್ಯಂತ ಒಬ್ಬನೇ ಗಂಡನಿರಬೇಕು. ಅವನು ಸತ್ತಿರಲಿ, ಬದುಕಿರಲಿ ಸ್ತ್ರೀಯು ಮತ್ತೊಬ್ಬ ಗಂಡನನ್ನು ಮಾಡಿಕೊಳ್ಳಕೂಡದೆಂದು ಇಂದಿನಿಂದ ನಾನು ಶಾಸನ ಮಾಡುತ್ತೇನೆ’’ ಎಂಬುದಾಗಿ ಗುಡುಗಿದ. ಅವನು ವಿದ್ವಾಂಸನಾದುದರಿಂದ ಅಂತಹ ಶಾಸನವನ್ನೂ ಮಾಡಿದ. ಇದರಿಂದ ಸ್ತ್ರೀಯ ಪುನರ್ವಿವಾಹದ ಅಥವಾ ವಿಧವಾ ವಿವಾಹದ ಹಕ್ಕಿಗೆ ಯಾವ ಸಂದರ್ಭದಲ್ಲಿ ಎಂತಹ ಪುರುಷರಿಂದ ಚ್ಯುತಿಯುಂಟಾಗಬಹುದೆಂದು ಊಹಿಸಬಹುದು.

ವೇನನೆಂಬ ರಾಜನ ಆಳ್ವಿಕೆಯಲ್ಲಿ ‘ನಿಯೋಗ’ ಮತ್ತು ‘ವಿಧವಾ ವಿವಾಹ ಪದ್ಧತಿ’ಗಳು ರೂಢಿಯಲ್ಲಿದ್ದುವೆಂದು ಮನುವೇ ಹೇಳುತ್ತಾನೆ. ಆದರೆ ಅವನೇ ಮುಂದುವರಿದು ‘ನಿಯೋಗ’ವು ಸಾಧು ಸಮ್ಮತವಲ್ಲ. ವಿಧವಾ ವಿವಾಹವು ಬುದ್ಧಿವಂತರಿಗೆ ಸಮ್ಮತವಲ್ಲ ಎನ್ನುತ್ತಾನೆ. ಇದು ಅವನ ಕಾಲಕ್ಕಾಗಲೇ ಸ್ತ್ರೀಯ ಸ್ವಾತಂತ್ರವನ್ನು ಮೊಟಕುಗೊಳಿಸುವ ಯತ್ನ ನಡೆದಿತ್ತು, ಅದಕ್ಕೆ ಮನುವಿನ ಸಮ್ಮತಿಯೂ ಇತ್ತು ಎಂಬುದನ್ನು ಸ್ಪಷ್ಟಪಡಿಸುತ್ತದೆ. ವೇನರಾಜನನ್ನು ‘ರಾಜರ್ಷಿಪ್ರವರ’ನೆಂದೂ, ಅವನು ವರ್ಣ ಸಂಕರಕ್ಕೆ ಕಾರಣನಾದನೆಂದೂ ಒಂದೇ ಉಸಿರಿನಲ್ಲಿ ಮನುವು ಉಚ್ಚರಿಸುವುದನ್ನು ನೋಡಿದರೆ ಯಾವ ದಿಕ್ಕಿನಲ್ಲಿ ಸಾಮಾಜಿಕ ವೌಲ್ಯಗಳು ಬದಲಾಗುತ್ತಿದ್ದುವೆಂಬುದು ಸ್ಪಷ್ಟವಾಗುತ್ತದೆ. ವಿಧವಾ ವಿವಾಹವು ಬುದ್ಧಿವಂತರಿಗೆ ಸಮ್ಮತವಲ್ಲ ಎಂದು ಮಾತ್ರ ಹೇಳುವುದನ್ನು ಗಮನಿಸಿದಾಗ ಮನುವಿನ ಕಾಲದಲ್ಲೂ ಅಂತಹ ಪದ್ಧತಿ ಜನಸಾಮಾನ್ಯರಲ್ಲಿ ರೂಢಿಯಲ್ಲಿದ್ದು, ಅದೊಂದು ಪಾಪಕೃತ್ಯವೆಂದು ಪರಿಗಣಿತವಾಗಿರಲಿಲ್ಲವೆಂದು ವೇದ್ಯವಾಗುತ್ತದೆ.

ಗಂಡ ಸತ್ತಮೇಲೆ ಹೆಂಡತಿಯು ಸಹಗಮನ ಅಥವಾ ಸತಿಹೋಗುವುದು ಬಹು ಪ್ರಾಚೀನ ಕಾಲದಿಂದ ರೂಢಿಯಲ್ಲಿದ್ದ ಪದ್ಧತಿಯೇನಲ್ಲ. ಮನುಸ್ಮತಿಯಲ್ಲಾಗಲಿ, ರಾಮಾಯಣ, ಮಹಾಭಾರತಗಳಲ್ಲಾಗಲಿ ಅಂತಹ ಆಚರಣೆಯ ವರ್ಣನೆ ಇಲ್ಲ. ಮಧ್ಯಯುಗದಲ್ಲಿ ರಾಜ ಸತ್ತಾಗ ಮಡದಿಯರು ಸಹಗಮನ ಆಚರಿಸಲು ತೊಡಗಿದರು, ಶತ್ರುಗಳ ಕೈಯಲ್ಲಿ ಸಿಕ್ಕು ಅವಮಾನಗೊಳ್ಳುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿಯೂ ಸ್ತ್ರೀಯರು ಸಹಗಮನ ಆಚರಿಸುತ್ತಿದ್ದರು. ಆದರೆ ‘ಸತಿ’ ಒಂದು ಕಡ್ಡಾಯವಾದ ಧಾರ್ಮಿಕ ವಿಧಿಯಾಗಲು ಸ್ತ್ರೀಯ ಮೇಲೆ ಪುರುಷನ ಕ್ರೌರ್ಯವೇ ಕಾರಣ.

ವೇದಗಳಲ್ಲಿ, ರಾಮಾಯಣ ಮಹಾಭಾರತಗಳಲ್ಲಿ ಹೆಂಡತಿ ಒಮ್ಮಮ್ಮೆ ಗಂಡನೊಡನೆ ಜೀವ ತ್ಯಾಗ ಮಾಡಿದ ಪ್ರಸಂಗ ಉಂಟು. ಆದರೆ ಅದು ಸತಿಯರ ನಿಯಮವಾಗಿರುವುದಕ್ಕಿಂತಲೂ ಅಪವಾದವಾಗಿರುವುದೇ ಹೆಚ್ಚು. ಋಗ್ವೇದದಲ್ಲಿ ದೊರೆಯುವುದೆಂದು ಹೇಳಲಾದ ‘ಸತಿ’ ತರವಾದ ಆಧಾರವು ಭ್ರಷ್ಟ ಪಂಡಿತರ ಹಸ್ತಕ್ಷೇಪವೆಂದು ಈಗ ದೃಢಪಟ್ಟಿದೆ. ದಶರಥನು ಮಡಿದಾಗ ಅವನ ಮೂವರು ಮಡದಿಯರಲ್ಲಿ ಯಾರೊಬ್ಬರೂ ಸಹಗಮನ ಮಾಡಲಿಲ್ಲ. ಪಾಂಡುವು ಮಡಿದಾಗ ಕುಂತಿಯೂ ಸಹಗಮನ ಮಾಡಲಿಲ್ಲ. ಆದರೆ ಮಾದ್ರಿಯು ಮಾಡಿದಳು. ಪಾಂಡುವನ್ನು ವ್ರತಭ್ರಷ್ಟನನ್ನಾಗಿ ಮಾಡಿ ದುರ್ಮರಣಕ್ಕೆ ತಳ್ಳಿದ ಪಾಪದ ಪ್ರಾಯಶ್ಚಿತಕ್ಕೆ ಮಾದ್ರಿಯು ಸಹಗಮನ ಮಾಡುತ್ತಾಳೆ. ಸುಮಾರು ಎಂಟನೆಯ ಶತಮಾನದವರೆಗಿನ ಕೃತಿಗಳಲ್ಲಿ ‘ಸತಿ’ ಧಾರ್ಮಿಕ ವಿಧಿಯಾಗಿರದೆ ವೈಯಕ್ತಿಕ ಕ್ರಿಯೆಯಾಗಿದೆ. ಅಲ್ಲಿಂದೀಚೆಗೆ ‘ಸತಿ’ ಪ್ರತಿಪಾದಕರು ಕಾಣಸಿಗುತ್ತಾರೆ. ಸತಿ ಹೋಗುವುದೊಂದೇ ವಿಧವೆಗಿರುವ ಧಾರ್ಮಿಕ ವಿಧಿ ಎಂದು ಅಂಗೀರಸ ಹೇಳಿದರೆ ಗಂಡನೊಡನೆ ಅಗ್ನಿಪ್ರವೇಶ ಮಾಡುವ ಸ್ತ್ರೀಯು ತನ್ನ ಗಂಡನ ಪಾಪಗಳನ್ನೆಲ್ಲಾ ನಿವಾರಿಸಿ, ಅವನೊಡನೆ ಸ್ವರ್ಗದಲ್ಲಿ ಮೂರೂವರೆ ಕೋಟಿ ವರ್ಷ ಕಾಲ ಸುಖದಿಂದ ಬಾಳುತ್ತಾರೆ ಎಂದು ಹಾರೀತನು ಸಾರಿದ್ದಾನೆ. ಸ್ತ್ರೀಯು ಸಚ್ಚಾರಿತ್ರಳಲ್ಲದಿದ್ದರೂ ಸ್ವಇಚ್ಛೆಯಿಂದಾಗಲಿ ಬಲವಂತದಿಂದಾಗಲಿ ಪತಿಯೊಡನೆ ಸುಡಲ್ಪಟ್ಟರೆ ಅಂಥಾ ಸ್ತ್ರೀಯು ಪತಿಯೊಡನೆ ಶಾಶ್ವತವಾಗಿ ಸ್ವರ್ಗಸುಖ ಅನುಭವಿಸುತ್ತಾಳೆ ಎಂದು ಪರಾಶರ ಸ್ಮತಿಯಲ್ಲಿ ಸೇರಿರುವ ಒಂದು ಪ್ರಕ್ಷಪ್ತ ಶ್ಲೋಕ ಘೋಷಿಸುತ್ತದೆ.

 1811ರಲ್ಲಿ ರಾಜಾರಾಮ ಮೋಹನರಾಯ್‌ರ ಅಣ್ಣ ಜಗನ್ಮೋಹನರಾಯ್ ಮಡಿದಾಗ ಅವರ ಮಡದಿಯನ್ನು ಅವಳ ಇಚ್ಛೆಗೆ ವಿರುದ್ಧವಾಗಿ ಗಂಡನ ಹೆಣದೊಡನೆ ಸುಡಲಾಯಿತು. ಅವಳು ಚೀರುತ್ತಾ ಸಾವಿನ ದವಡೆಯಿಂದ ತಪ್ಪಿಸಿಕೊಳ್ಳಲು ಚಿತೆಯಿಂದ ಹಾರಲು ಯತ್ನಿಸಿದಾಗ ಅವಳ ಚೀರಾಟ ಕೇಳದಂತೆ ಶಂಖ, ಜಾಗಟೆಗಳನ್ನು ಮೊಳಗಿಸಿ ಬೊಂಬುಗಳಿಂದ ಅವಳನ್ನು ಅದುಮಿ ಹಿಡಿಯಲಾಯಿತು. ಮುಂದೆ ರಾಜಾರಾಮ ಮೋಹನರಾಯ್ ‘ಸತಿ’ಯ ವಿರುದ್ಧ ಹೋರಾಡಲು ಕುಟುಂಬದಲ್ಲಿ ನಡೆದ ಈ ಘಟನೆ ಅವರ ಮೇಲೆ ತೀವ್ರ ಪರಿಣಾಮ ಬೀರಿರಬೇಕು. ರಾಯ್‌ನಂತಹ ಎಚ್ಚೆತ್ತ ಭಾರತೀಯರ ದೀರ್ಘ ಚಳುವಳಿಯ ಫಲವಾಗಿ ಲಾರ್ಡ್ ವಿಲಿಯಂ ಬೆಂಟಿಂಕನು 1829ರಲ್ಲಿ ’ಸತಿ’ ಪದ್ಧತಿಯನ್ನು ಕಾನೂನು ಬಾಹಿರವೆಂದು ಸಾರಿದನು. ಈಶ್ವರಚಂದ್ರ ವಿದ್ಯಾಸಾಗರ್ ಹಿಂದೂ ವಿಧವೆಯರ ಪುನರ್ವಿವಾಹದ ಪರವಾಗಿ ಈ ಚಳವಳಿಯನ್ನು ಮುಂದುವರಿಸಿದುದರ ಪರಿಣಾಮವಾಗಿ 1856ರಲ್ಲಿ ವಿಧವೆಯರ ವಿವಾಹವು ಶಾಸನಬದ್ಧವಾಯಿತು.

 ವಿಧವೆಯರು ಇಂಥವೇ ವೇಷಭೂಷಣಗಳನ್ನು ಧರಿಸಬೇಕೆಂದು ಪ್ರಾಚೀನ ಕೃತಿಗಳಲ್ಲಿ ಎಲ್ಲಿಯೂ ಹೇಳಿಲ್ಲ ಆದರೂ ಇಂದು ಹಿಂದೂ ವಿಧವೆಯರು ಬಳೆ, ಕುಂಕುಮ, ಹೂವು ಮುಂತಾದ ಸ್ತ್ರೀ ಸಹಜ ಶೃಂಗಾರ ಸಾಧನಗಳನ್ನು ವರ್ಜಿಸಬೇಕಾದುದು ಒಂದು ಆಚಾರವಾಗಿದೆ. ಕೆಲವು ವರ್ಗದ ವಿಧವೆಯರು ತಲೆಯನ್ನು ಆಗಾಗ ಬೋಳಿಸಿಕೊಂಡು, ಕುಪ್ಪಸ ತ್ಯಜಿಸಿ ಏಕವರ್ಣದ ಸೀರೆಯನ್ನು ಮಾತ್ರ ಧರಿಸಬೇಕಾಗಿದೆ. ಕ್ರಿ.ಶ. 17ನೆಯ ಶತಮಾನದವರೆಗೆ ವಿಧವೆಯರು ತಲೆಬೋಳಿಸಿಕೊಳ್ಳುವ ಬಗ್ಗೆ ಯಾವ ಶಾಸ್ತ್ರದ ಆಧಾರವೂ ದೊರೆಯುವುದಿಲ್ಲ. 1889ರಲ್ಲಿ ಧಾರವಾಡದ ವೆಂಕಟರಂಗೋ ಕಟ್ಟಿಯವರು ‘ವಿಧವೆಯರ ಮುಂಡನ ಅನಾಚಾರ’ ಎಂಬ ಕಿರುಹೊತ್ತಿಗೆಯನ್ನು ಪ್ರಕಟಿಸಿ ಅದರ ಕೊನೆಯಲ್ಲಿ ವಿಧವೆಯರು ತಲೆ ಬೋಳಿಸಿಕೊಳ್ಳುವ ಸಂಪ್ರದಾಯ ಕ್ರಿ.ಶ. 1530ರ ತರುವಾಯ ರೂಢಿಗೆ ಬಂದ ಅನಾಚಾರವೆಂದೂ ಅದಕ್ಕಿಂತ ಹಿಂದಿನ ಶಾಸ್ತ್ರಗ್ರಂಥಗಳಲ್ಲಿ ಮುಂಡ ಮೋಚುವುದಕ್ಕೆ ಪೋಷಕವಾಗಿ ಆಧಾರಗಳನ್ನು ತೋರಿಸಿಕೊಟ್ಟವರಿಗೆ ಒಂದು ಸಾವಿರ ರೂಪಾಯಿ ಇನಾಮು ಕೊಡುವುದಾಗಿ ಸಂಕುಚಿತ ಬುದ್ಧಿಯ ಪಂಡಿತರಿಗೆ ಸವಾಲು ಹಾಕಿದರು.

ಪರಾಶರ ಮತ್ತು ವೃದ್ಧ ಹಾರೀತರ ಸ್ಮತಿಗಳಲ್ಲಿ ಗೋವಧೆಯನ್ನು ಮಾಡಿದ ಪಾಪಕ್ಕೆ ಪ್ರಾಯಶ್ಚಿತವಾಗಿ ಕೇಶಮುಂಡನೆ ವಿಧಿಸ ಲಾಗಿದೆ. ಆದರೆ ಅದು ಪುರುಷರಿಗೆ ಮಾತ್ರ. ಅದೇ ಅಪರಾಧವನ್ನು ಸ್ತ್ರೀಯು ಮಾಡಿದರೆ ಅವಳಿಗೆ ಅಷ್ಟು ಶಿಕ್ಷೆಯಿಲ್ಲ ಅವಳ ಕೂದಲಿನ ತುದಿಯ ಎರಡು ಅಂಗುಲಗಳಷ್ಟನ್ನು ಮಾತ್ರ ಕತ್ತರಿಸಿ ಹಾಕಬೇಕು. ಅಪಸ್ತಂಬದಲ್ಲಿ ಮೂರು ಅಂಗುಲ ಎಂದು ಹೇಳಲಾಗಿದೆ. ಆದರೆ ಇದಕ್ಕೂ ವಿಧವೆಯರ ತಲೆಬೋಳಿಸುವ ಶಾಸ್ತ್ರಕ್ಕೂ ಸಂಬಂಧವಿಲ್ಲ.

ವಿಧವೆಯರು ಬ್ರಹ್ಮಚರ್ಯವನ್ನು ಪಾಲಿಸಬೇಕೆಂಬ ಮನುಸ್ಮತಿಯ ವಾಕ್ಯದ ಉಗ್ರ ಪ್ರತಿಪಾದನೆಯೇ, ಇದಕ್ಕೆ ಕಾರಣವಿರಬೇಕು. ಅರ್ವಾಚೀನ ಸ್ಮತಿಕಾರರ ಕೈಯಲ್ಲಿ ಈ ಘೋರ ಹಂತವನ್ನು ಮುಟ್ಟಿರಬೇಕು. ಜೈನ ಮತ್ತು ಬೌದ್ಧ ಭಿಕ್ಷುಕಿಯರ ಬೋಳು ತಲೆಯ ವೇಷವನ್ನು ಹಿಂದೂ ವಿಧವೆಯರಿಗೆ ವಿಧಿಸಲಾಯಿತೇನೋ !

ವೇನನೆಂಬ ರಾಜನ ಆಳ್ವಿಕೆಯಲ್ಲಿ ‘ನಿಯೋಗ’ ಮತ್ತು ‘ವಿಧವಾ ವಿವಾಹ ಪದ್ಧತಿಗಳು’ ರೂಢಿಯಲ್ಲಿದ್ದುವೆಂದು ಮನುವೇ ಹೇಳುತ್ತಾನೆ. ಆದರೆ ಅವನೇ ಮುಂದುವರಿದು ‘ನಿಯೋಗ’ವು ಸಾಧು ಸಮ್ಮತವಲ್ಲ. ವಿಧವಾ ವಿವಾಹವು ಬುದ್ಧಿವಂತರಿಗೆ ಸಮ್ಮತವಲ್ಲ ಎನ್ನುತ್ತಾನೆ. ಇದು ಅವನ ಕಾಲಕ್ಕಾಗಲೇ ಸ್ತ್ರೀಯ ಸ್ವಾತಂತ್ರವನ್ನು ಮೊಟಕುಗೊಳಿಸುವ ಯತ್ನ ನಡೆದಿತ್ತು, ಅದಕ್ಕೆ ಮನುವಿನ ಸಮ್ಮತಿಯೂ ಇತ್ತು ಎಂಬುದನ್ನು ಸ್ಪಷ್ಟಪಡಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News