ಬಿಗಿಯಾದ ಕಾಲುಚೀಲಗಳನ್ನು ಧರಿಸುವುದು ಅಪಾಯಕಾರಿ ಏಕೆ?

Update: 2017-10-06 10:54 GMT

ಬಿಗಿಯಾದ ಕಾಲುಚೀಲಗಳನ್ನು ಧರಿಸುವುದು ಒಳ್ಳೆಯದಲ್ಲ. ಶೂಗಳನ್ನು ಮತ್ತು ಸಾಕ್ಸ್ ಅಥವಾ ಕಾಲುಚೀಲಗಳನ್ನು ಕಳಚುವುದು ಉದ್ಯೋಗದಿಂದ ಮನೆಗೆ ಮರಳಿದಾಗ ನಾವು ಮಾಡುವ ಮೊದಲ ಕೆಲಸವಾಗಿದೆ. ಕಾಲುಚೀಲಗಳಿಂದ ಬಿಡುಗಡೆ ದೊರಕಿದಾಗ ನಮ್ಮ ಕಾಲುಗಳಿಗೆ ಹಿತವಾದ ಅನುಭವವಾಗುತ್ತದೆ. ನಮ್ಮ ಕಾಲುಗಳ ಚರ್ಮಕ್ಕೆ ಸೆರೆವಾಸದಿಂದ ಮುಕ್ತಿ ಸಿಕ್ಕಂತಾಗುತ್ತದೆ. ನೀವೇನಾದರೂ ತುಂಬ ಬಿಗಿಯಾದ ಕಾಲುಚೀಲಗಳನ್ನು ಬಳಸುತ್ತಿದ್ದರೆ ಅವು ಕೊನೆಗೊಂಡ ಭಾಗದಲ್ಲಿ ಚರ್ಮದ ಮೇಲೆ ಊತವನ್ನು ನೀವು ಗಮನಿಸಿರಬಹುದು. ನಿಜ, ಸಡಿಲವಾದ ಕಾಲುಚೀಲಗಳು ಚೆನ್ನಾಗಿ ಕಾಣುವುದಿಲ್ಲ, ಆದರೆ ಅತ್ಯಂತ ಬಿಗಿಯಾದ ಕಾಲುಚೀಲಗಳನ್ನು ಧರಿಸುವುದು ಕೂಡ ಒಳ್ಳೆಯದಲ್ಲ.

ರಕ್ತ ಪರಿಚಲನೆಗೆ ತೊಡಕು

ಬಿಗಿಯಾದ ಕಾಲುಚೀಲಗಳು ನಮ್ಮ ಶರೀರದಲ್ಲಿ ರಕ್ತ ಪರಿಚಲನೆಗೆ ತೊಡಕನ್ನುಂಟು ಮಾಡುತ್ತವೆ. ಕಾಲುಗಳಲ್ಲಿ ರಕ್ತ ಸಂಚಾರಕ್ಕೆ ತಡೆಯುಂಟಾದಾಗ ಅದು ಸಮಸ್ಯೆಯಾಗಿ ಕಾಡುತ್ತದೆ. ಆ ಜಾಗದಲ್ಲಿ ಊತವೂ ಕಾಣಿಸಿಕೊಳ್ಳಬಹುದು. ಇದು ಬಿಗಿಯಾದ ಕಾಲುಚೀಲಗಳ ಮೊದಲ ದುಷ್ಪರಿಣಾಮಗಳಲ್ಲಿ ಒಂದಾಗಿದೆ.

ಉಬ್ಬಿದ ರಕ್ತನಾಳಗಳು

ಬಿಗಿಯಾದ ಕಾಲುಚೀಲಗಳು ಕಾಲುಗಳಲ್ಲಿ ವೆರಿಕೋಸ್ ವೇನ್ಸ್ ಅಥವಾ ಉಬ್ಬಿದ ರಕ್ತನಾಳಗಳು ಉಂಟಾಗುವ ಅಪಾಯವನ್ನು ಹೆಚ್ಚಿಸುತ್ತವೆ. ಈಗಾಗಲೇ ಉಬ್ಬಿದ ರಕ್ತನಾಳಗಳನ್ನು ಹೊಂದಿರುವವರು ಬಿಗಿಯಾದ ಕಾಲುಚೀಲಗಳನ್ನು ಧರಿಸಿದರೆ ಸ್ಥಿತಿ ಇನ್ನಷ್ಟು ಹದಗೆಡುತ್ತದೆ.

ಊತ ನಂಬಲು ಕಷ್ಟವಾದರೂ ಬಿಗಿಯಾದ ಕಾಲುಚೀಲಗಳು ಎಡೆಮಾ ಅಥವಾ ಚರ್ಮದ ಊತಕ್ಕೆ ಕಾರಣವಾಗುತ್ತವೆ. ದ್ರವಗಳು ಸಂಗ್ರಹಗೊಂಡು ಊತ ಕಾಣಿಸುವುದನ್ನು ವೈದ್ಯಕೀಯ ಭಾಷೆಯಲ್ಲಿ ಎಡೆಮಾ ಎಂದು ಕರೆಯಲಾಗುತ್ತದೆ. ಬಿಗಿಯಾದ ಕಾಲುಚೀಲ ಗಳು ಕಾಲುಗಳು ಮತ್ತು ಪಾದಗಳು ಊದಿಕೊಳ್ಳುವಂತೆ ಮಾಡುತ್ತವೆ.

ಮರಗಟ್ಟುವಿಕೆ

ಕಾಲುಗಳು ಮತ್ತು ಪಾದಗಳು ಮರಗಟ್ಟಿದಂತಾಗುವುದಕ್ಕೆ ಬಿಗಿಯಾದ ಕಾಲುಚೀಲಗಳು ಕಾರಣವಾಗುತ್ತವೆ. ತುಂಬ ಹೊತ್ತು ಕುಳಿತುಕೊಂಡೇ ಮಾಡಬೇಕಾದ ಕೆಲಸ ನಿಮ್ಮದಾ ಗಿದ್ದರೆ ಈ ಸಮಸ್ಯೆ ತೀವ್ರವಾಗುತ್ತದೆ.

ಅಥ್ಲೀಟ್ಸ್ ಫೂಟ್

ಫಂಗಸ್ ಅಥವಾ ಬೂಷ್ಟಿನಿಂದ ಉಂಟಾಗುವ ಸಾಂಕ್ರಾಮಿಕ ಸೋಂಕು ಹೆಚ್ಚಾಗಿ ಕ್ರೀಡಾಪಟುಗಳಲ್ಲಿ ಕಾಣಿಸಕೊಳ್ಳುವದರಿಂದ ಅದನ್ನು ಅಥ್ಲೀಟ್ಸ್ ಫೂಟ್ ಎಂದು ಕರೆಯಲಾಗುತ್ತದೆ. ಪಾದದ ಚರ್ಮಕ್ಕೆ ತಗಲುವ ಈ ಸೋಂಕು ಕಾಲ್ಬೆರಳುಗಳಿಗೆ ಮತ್ತು ಕೈಗಳಿಗೂ ಹರಡಬಹುದು. ಬಿಗಿಯಾದ ಶೂಗಳು ಅಥವಾ ಕಾಲುಚೀಲಗಳೂ ಈ ಸಮಸ್ಯೆಗೆ ಕಾರಣವಾಗಬಲ್ಲವು. ಏಕೆ ಗೊತ್ತೇ? ಅಥ್ಲೀಟ್ಸ್ ಫೂಟ್‌ಗೆ ಕಾರಣವಾಗುವ ಬೂಷ್ಟು ತೇವವಿದ್ದೆಡೆ ಹುಲುಸಾಗಿ ಬೆಳವಣಿಗೆಯಾಗುತ್ತದೆ. ಬಿಗಿಯಾದ ಶೂಗಳು ಮತ್ತು ಕಾಲುಚೀಲಗಳು ಬೆವರನ್ನು ಹಿಡಿದಿಟ್ಟುಕೊಳ್ಳುತ್ತವೆ ಮತ್ತು ಬೂಷ್ಟಿನ ಬೆಳವಣಿಗೆಗೆ ಸೂಕ್ತ ವಾತಾವರಣವನ್ನು ಸೃಷ್ಟಿಸುತ್ತವೆ.

ಚರ್ಮದ ಮೇಲೆ ಗೆರೆಗಳು

ಬಿಗಿಯಾದ ಕಾಲುಚೀಲಗಳು ಚರ್ಮದ ಮೇಲೆ ಸಾಕ್ ಬ್ಯಾಂಡ್ ಲೈನ್ಸ್ ಎಂದು ಕರೆಯಲಾಗುವ ಗೆರೆಗಳನ್ನು ಸೃಷ್ಟಿಸುತ್ತವೆ. ಕಾಲುಚೀಲಗಳು ಚರ್ಮವನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳುವ ಜಾಗದಲ್ಲಿ ಈ ಗೆರೆಗಳು ಉಂಟಾಗುತ್ತವೆ. ಇವುಗಳಿಂದಾಗಿ ಚರ್ಮವು ಕೆಂಪುಬಣ್ಣಕ್ಕೆ ತಿರುಗುತ್ತದೆ ಮತ್ತು ನೋವು ಉಂಟಾಗುತ್ತದೆ.

 ಈ ಸಮಸ್ಯೆಗಳಿಂದ ಪಾರಾಗಲು ಶೇ.100ರಷ್ಟು ಹತ್ತಿಯಿಂದ ತಯಾರಾದ ಕಾಲುಚೀಲಗಳನ್ನು ಬಳಸುವುದು ಅತ್ಯುತ್ತಮ ಮಾರ್ಗವಾಗಿದೆ. ಸಿಂಥೆಟಿಕ್ ಬಟ್ಟೆಗಳಿಂದ ತಯಾರಾದ ಕಾಲುಚೀಲಗಳನ್ನು ದೂರವೇ ಇಡಿ. ಕಾಲುಚೀಲಗಳು ನಿಮ್ಮ ಕಾಳುಗಳಿಗೆ ಸೂಕ್ತವಾಗಿರಲಿ. ಅವು ತುಂಬ ಬಿಗಿಯಾದರೆ ಚರ್ಮದ ಮೇಲೆ ಕೆಂಪು ಗೆರೆಗಳನ್ನು ಮೂಡಿಸುತ್ತವೆ. ಅಂತಹ ಗೆರೆಗಳು ಕಂಡುಬಂದರೆ ಕಾಲುಚೀಲಗಳನ್ನು ಎಳೆದು ಅವು ಸ್ಥಿತಿ ಸ್ಥಾಪಕತ್ವವನ್ನು ಕಳೆದುಕೊಳ್ಳುವಂತೆ ಮಾಡಿ, ಇದರಿಂದ ಅವು ಸಡಿಲಗೊಳ್ಳುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News