‘ಮತಾಂತರ’ವೆಂಬ ತಪ್ಪು ಪ್ರಚಾರ

Update: 2017-10-06 18:51 GMT

ಭಾಗ -2

ಧರ್ಮಕ್ಕೆ ಸಂಬಂಧಿಸಿದಂತೆ 2011ರ ಜನಗಣತಿ ದತ್ತಾಂಶವನ್ನು ಅಂಕಿಸಂಖ್ಯೆಗಳನ್ನು ಸರಕಾರ 2015ರಲ್ಲಿ ಬಿಡುಗಡೆ ಮಾಡಿದಾಗ ವರ್ತಮಾನ ಪತ್ರಿಕೆಗಳು ಒಡಿಶಾದಲ್ಲಿ ಕಳೆದ 50 ವರ್ಷಗಳಲ್ಲಿ ಕ್ರಿಶ್ಚಿಯನ್ನರ ಜನಸಂಖ್ಯೆ ಶೇ. 47.8 ಮತ್ತು ಮುಸ್ಲಿಮರ ಜನಸಂಖ್ಯೆ 32.3ರಷ್ಟು ಹೆಚ್ಚಾಗಿದೆ ಎಂದು ಗಾಬರಿಗೊಳಿಸುವಂತಹ ಕತೆಗಳನ್ನು ಪ್ರಕಟಿಸಿದವು. ಈ ಪ್ರತಿಶತಕ್ಕೆ ಬದಲಾಗಿ ಹಿಂದೂಗಳ ಜನಸಂಖ್ಯೆ ಶೇ. 13.0 ರಷ್ಟು ಏರಿಕೆ ಕಂಡಿವೆ ಎಂದು ಹೇಳಿದವು. ಶೇ. 47.8ದಷ್ಟು ಏರಿಕೆಯಾಗಿದ್ದಾಗಲೂ ಕ್ರಿಶ್ಚಿಯನ್ನರು ಇವತ್ತು ಒಡಿಶಾದ ಒಟ್ಟು ಜನಸಂಖ್ಯೆಯ ಕೇವಲ ಶೇ. 2.77ರಷ್ಟಿದ್ದಾರೆ. 1961ರಲ್ಲಿದ್ದ ಅವರ ಜನಸಂಖ್ಯೆ ಶೇ. 1.15 ಮಾತ್ರ ಎಂದು ಯಾರು ದಪ್ಪ ಅಕ್ಷರಗಳ ಸುದ್ದಿ ಪ್ರಕಟಿಸುತ್ತಾರೆ? (ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರು ಶೇ. 2.17 ಮತ್ತು ಹಿಂದೂಗಳು ಶೇ. 93.63ರಷ್ಟು ಇದ್ದಾರೆ.)

2001 ಮತ್ತು 2011 ನಡುವೆ ಒಡಿಶಾದ ಹಿಂದೂ ಜನಸಂಖ್ಯೆ ಶೇ. 0.72ರಷ್ಟು ಕಡಿಮೆಯಾಯಿತು. 1961ರಲ್ಲಿ ಹಿಂದೂಗಳ ಜನಸಂಖ್ಯೆ ರಾಜ್ಯದ ಜನಸಂಖ್ಯೆಯ ಶೇ. 97.57 ಇತ್ತು. ಇವರನ್ನು ಯಾರೂ ಜನಸಂಖ್ಯೆಯಲ್ಲಿ ಹಿಂದಿಕ್ಕುವ ಸಾಧ್ಯತೆಯೇ ಇಲ್ಲ. ಒಡಿಶಾದ ಎಲ್ಲ ಜಿಲ್ಲೆಗಳು ಹಿಂದೂ ಬಹುಸಂಖ್ಯಾತರಿರುವ ಜಿಲ್ಲೆಗಳು. ಅಲ್ಲಿಯ ಕೇವಲ ಮೂರು ಜಿಲ್ಲೆಗಳಲ್ಲಿ ಮಾತ್ರ ಕ್ರಿಶ್ಚಿಯನ್ನರ ಜನಸಂಖ್ಯೆ ಶತಾಂಶಗಳ ಲೆಕ್ಕದಲ್ಲಿ ಎರಡಂಕಿಗಳನ್ನು ದಾಟಿದೆ. ಇವುಗಳು ಸುಂದರ್‌ಗಡ (ಶೇ. 18.39) ಕಂಧಮಾಲ್ (ಶೇ. 20.31) ಮತ್ತು ಗಜಪತಿ (ಶೇ. 37.98) ‘ಇತರ ಧರ್ಮಗಳು’ ಕೆಟಗರಿಯಲ್ಲಿ ರಾಜ್ಯದ ಒಟ್ಟು ಜನಸಂಖ್ಯೆಯ ಕೇವಲ ಶೇ. 1.14ರಷ್ಟು ಜನಸಂಖ್ಯೆ ಇದೆ.

ಮಿಶನರಿಗಳು ಆದಿವಾಸಿಗಳನ್ನು ಮತಾಂತರಿಸುತ್ತಾರೆ ಎಂದು ಗುಲ್ಲು ಎಬ್ಬಿಸಲಾಗಿರುವ ಛತ್ತೀಸ್‌ಗಢ ರಾಜ್ಯದಲ್ಲಿ 2011ರ ಜನಗಣತಿ ವೇಳೆ 18 ಜಿಲ್ಲೆಗಳಲ್ಲಿ ತುಂಬಿತುಳುಕುವ ಹಿಂದೂ ಬಹುಸಂಖ್ಯೆ (ಮೆಜಾರಿಟಿ) ಇತ್ತು. (2012ರಲ್ಲಿ ಅಲ್ಲಿ ಒಂಬತ್ತು ಹೊಸ ಜಿಲ್ಲೆಗಳನ್ನು ರಚಿಸಲಾಯಿತು.) ಅಲ್ಲಿ ರಾಜ್ಯದ ಜನಸಂಖ್ಯೆಯಲ್ಲಿ ಕ್ರಿಶ್ಚಿಯನ್ನರು ಕೇವಲ ಶೇ. 1.92, ಮುಸ್ಲಿಮರು ಶೇ. 2.02 ಮತ್ತು ಹಿಂದೂಗಳು ಶೇ. 92.25 ಇದ್ದಾರೆ. ಜಶ್‌ಪುರ ಜಿಲ್ಲೆಯೊಂದರಲ್ಲಿ ಮಾತ್ರ ಶೇ. 22.26 ಕ್ರಿಶ್ಚಿಯನ್ ಜನಸಂಖ್ಯೆ ಇದೆ. ಉಳಿದ 17 ಜಿಲ್ಲೆಗಳಲ್ಲಿ ಒಂದೇ ಒಂದು ಜಿಲ್ಲೆಯಲ್ಲೂ ಶೇ. 5ಕ್ಕಿಂತ ಹೆಚ್ಚು ಕ್ರಿಶ್ಚಯನ್ನರಿಲ್ಲ. ನಿಜ ಹೇಳಬೇಕೆಂದರೆ, ಈ ಜಿಲ್ಲೆಗಳ ಪೈಕಿ 11 ಜಿಲ್ಲೆಗಳಲ್ಲಿ ಕ್ರಿಶ್ಚಿಯನ್ನರು ಜಿಲ್ಲೆಯ ಜನಸಂಖ್ಯೆಯ ಶೇ.1ಕ್ಕಿಂತಲೂ ಕಡಿಮೆ ಇದ್ದಾರೆ. ಹಿಂದೂಗಳನ್ನು ಮತಾಂತರಿಸುತ್ತಿರುವಾಗ ಕ್ರಿಶ್ಚಿಯನ್ ಮಿಶನರಿಗಳು ಬಂಧಿಸಲ್ಪಟ್ಟರು ಎಂಬ ಕಥೆಗಳನ್ನು ಕೇಳಿದರೆ ಮಧ್ಯಪ್ರದೇಶದಲ್ಲಿ ರಾಜ್ಯದ ಕ್ರಿಶ್ಚಿಯನೀಕರಣ ಭರದಿಂದ ಸಾಗುತ್ತಿದೆ ಎಂದು ಯಾರಾದರೂ ತಿಳಿದಾರು. ಆದರೆ, ವಾಸ್ತವದಲ್ಲಿ ಅಲ್ಲಿ ರಾಜ್ಯದ ಒಟ್ಟು ಜನಸಂಖ್ಯೆಯ ಕೇವಲ ಶೇ. 0.29ರಷ್ಟು ಮಾತ್ರ ಕ್ರಿಶ್ಚಿಯನ್ನರಿದ್ದಾರೆ. 2011ರ ಜನಗಣತಿಯ ಪ್ರಕಾರ ಮಧ್ಯಪ್ರದೇಶದ 50 ಜಿಲ್ಲೆಗಳ ಪೈಕಿ 48 ಜಿಲ್ಲೆಗಳಲ್ಲಿ ಶೇ. 1ಕ್ಕಿಂತಲೂ ಕಡಿಮೆ ಕ್ರಿಶ್ಚಿಯನ್ನರ ಜನಸಂಖ್ಯೆ ಇದೆ.

ಉಳಿದ ಎರಡು ಜಿಲ್ಲೆಗಳಲ್ಲಿ ಶೇ. 4ಕ್ಕಿಂತಲೂ ಕಡಿಮೆ ಕ್ರಿಶ್ಚಿಯನ್ನರಿದ್ದಾರೆ. (ಜಬುವಾ ಶೇ. 3.78 ಮತ್ತು ಮಾಂಡಾ ಶೇ. 1.18) (2013ರಲ್ಲಿ ಅಲ್ಲಿ 51ನೆ ಜಿಲ್ಲೆಯನ್ನು ರಚಿಸಲಾಯಿತು.) ಹಿಮಾಚಲ ಪ್ರದೇಶದಲ್ಲಿ ಶೇ. 95.17 ಹಿಂದೂಗಳು, ಶೇ. 2.18 ಮುಸ್ಲಿಮರು ಮತ್ತು ಕೇವಲ ಶೇ. 0.18 ಕ್ರಿಶ್ಚಿಯನ್ನರಿದ್ದಾರೆ. ರಾಜ್ಯದ 12 ಜಿಲ್ಲೆಗಳ ಪೈಕಿ 11ರಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದಾರೆ. ಜನಸಂಖ್ಯೆಯ ಶೇ. 2.01 ಬೌದ್ಧರಿರುವ ಲಹೌಲ್ ಮತ್ತು ಸ್ಪಿತಿ ಜಿಲ್ಲೆಗಳಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದಾರೆ. ಕಾಂಗ್ರೆಸ್ ಸರಕಾರವು 2007ರಲ್ಲಿ ಮತಾಂತರ ವಿರೋಧಿ (ನಿಷೇಧ) ಕಾಯ್ದೆಯನ್ನು ಜಾರಿ ಮಾಡಿದ ಒಂದೇ ಒಂದು ರಾಜ್ಯವೆಂದರೆ ಹಿಮಾಚಲ ಪ್ರದೇಶ. ಹಾಗೆಯೇ ನರೇಂದ್ರ ಮೋದಿಯವರು ಮುಖ್ಯಮಂತ್ರಿಯಾಗಿದ್ದಾಗ 2003ರಲ್ಲಿ ಯಾವ ಗುಜರಾತ್‌ನಲ್ಲಿ ಮತಾಂತರ ವಿರೋಧಿ ಕಾನೂನನ್ನು ಜಾರಿ ಮಾಡಲಾಯಿತೋ ಅಲ್ಲಿ ಕೂಡ ಕ್ರಿಶ್ಚಿಯನ್ನರು ರಾಜ್ಯದ ಜನಸಂಖ್ಯೆಯ ಕೇವಲ ಶೇ. 0.52ರಷ್ಟು ಇದ್ದಾರೆ. (ಮುಸ್ಲಿಮರು ಶೇ. 9.67 ಮತ್ತು ಹಿಂದೂಗಳು ಶೇ. 88.57 ಇದ್ದಾರೆ.) 2011ರ ಜನಗಣತಿಯ ಪ್ರಕಾರ ಗುಜರಾತಿನ 26 ಜಿಲ್ಲೆಗಳು ಹಿಂದೂಗಳು ಬಹುಸಂಖ್ಯಾತರಾಗಿರುವ ಜಿಲ್ಲೆಗಳು. (2013ರಲ್ಲಿ ಅಲ್ಲಿ ಇನ್ನೂ 7 ಜಿಲ್ಲೆಗಳನ್ನು ರಚಿಸಲಾಯಿತು.) ತಾಪಿಯಲ್ಲಿ ಶೇ. 6.77 ಮತ್ತು ದಾಂಗ್‌ಗಳಲ್ಲಿ ಶೇ. 8.77 ಹೊರತು ಪಡಿಸಿದರೆ, ರಾಜ್ಯದ ಬೇರೆ ಯಾವುದೇ ಜಿಲ್ಲೆಯಲ್ಲಿ ಕ್ರಿಶ್ಚಿಯನ್ನರ ಜನಸಂಖ್ಯೆ ಶೇ. 2ಕ್ಕಿಂತ ಹೆಚ್ಚು ಇಲ್ಲ.

ಈ ಅಂಕಿ ಸಂಖ್ಯೆಗಳಿಂದ ಒಂದೋ ಕ್ರಿಶ್ಚಿಯನ್ ಮಿಶನರಿಗಳು ಮತಾಂತರದ ಬಗ್ಗೆ ಬಹಳ ಉತ್ಸುಕವಾಗಿ ಏನೂ ಇಲ್ಲ ಅಥವಾ ಕೇಸರಿವಾದಿಗಳು ತಿಳಿದಿರುವಂತೆ ಜನರು ಮತಾಂತರಕ್ಕೆ ಬಹಳ ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲವೆಂಬುದು ಸಾಬೀತಾಗುತ್ತದೆ.

ಅಪಪ್ರಚಾರ

ಮಿಶನರಿಗಳ ವಿರುದ್ಧ ಎಬ್ಬಿಸಲಾಗಿರುವ ಬೊಬ್ಬೆ, ಮಸ್ಕರೆನ್ಹಸ್ ಹೇಳಿರುವಂತೆ ಕೇಸರೀಕರಣದ ಉದ್ದೇಶಕ್ಕಾಗಿ ಜನರನ್ನು ಒಂದುಗೂಡಿಸಲು, ಧ್ರುವೀಕರಿಸಲು ನಡೆಸಿರುವ ತಪ್ಪು ಪ್ರಚಾರ, ಅಪಪ್ರಚಾರವಲ್ಲದೆ ಬೇರೇನೂ ಅಲ್ಲ. ಈ ಒಂದುಗೂಡಿಸುವಿಕೆಯು ಮಿಶನರಿಗಳ ವಿರುದ್ಧ ದ್ವೇಷ ಹರಡುವುದನ್ನು ಮತ್ತು ಆದಿವಾಸಿಗಳನ್ನು ಅವರ ನಂಬಿಕೆಯ ನೆಲೆಯಲ್ಲಿ ವಿಭಜಿಸುವುದನ್ನು ಅವಲಂಬಿಸಿದೆ. ಗಣಿಗಳನ್ನು ವಿರೋಧಿಸಲು ಕಾರ್ಖಾನೆಗಳನ್ನು ಸ್ಥಾಪಿಸಲು ಮತ್ತು ಅರಣ್ಯಗಳ ಶೋಷಣೆಯನ್ನು ಪ್ರತಿಭಟಿಸಲು ಆದಿವಾಸಿಗಳು ಒಂದಾಗದಂತೆ ತಡೆಯಲು ಆದಿವಾಸಿಗಳ ದನಿ ಅಡಗಿಸಲು ಇಂತಹ ಒಂದುಗೂಡಿಸುವಿಕೆ ಕೇಸರಿವಾದಿಗಳಿಗೆ ಆವಶ್ಯಕವಾಗಿದೆ. ಧಾರ್ಮಿಕ ಅಲ್ಪಸಂಖ್ಯಾತರಿಗೆ ಗಾಳಹಾಕಲು ಹೊಂಚು ಹಾಕುತ್ತಿರುವ ಏಕೈಕ ಪಕ್ಷವಾಗಿರುವ ಬಿಜೆಪಿಯು ಕ್ರಿಶ್ಚಿಯನ್ ಆದಿವಾಸಿಗಳು ಮತ್ತು ಹಿಂದೂಗಳಾಗಿ ಪರಿವರ್ತಿಸಲಾಗಿರುವವರು ಅಥವಾ ಸ್ಥಳೀಯ ನಂಬಿಕೆಗಳನ್ನು ಅನುಸರಿಸುವವರು ಇವರ ಮಧ್ಯೆ ಏರ್ಪಡುವ ಧ್ರುವೀಕರಣದಿಂದ ರಾಜಕೀಯವಾಗಿ ಲಾಭ ಮಾಡಿಕೊಳ್ಳುವ ಲೆಕ್ಕಾಚಾರ ಹಾಕುತ್ತಿದೆ.

ಇಂತಹ ಧ್ರುವೀಕರಣದ ಸಮಸ್ಯೆಗಳನ್ನು ಗಮನಿಸುತ್ತಿರುವ ಸರ್ಣ ನಾಯಕರು ತಾವು ರಾಜ್ಯದ ಮತಾಂತರ ವಿರೋಧಿ ಕಾನೂನಿನ ವಿವರಗಳನ್ನು ಅಭ್ಯಸಿಸಿ ಅದೇ ವೇಳೆ ಸರ್ಣರಿಗೆ ಒಂದು ಪ್ರತ್ಯೇಕ ಧರ್ಮ ಕೋಡ್‌ಗಾಗಿ ಹಕ್ಕೊತ್ತಾಯ ಮಾಡುವುದಾಗಿ ಹೇಳಿದ್ದಾರೆ. ಆದರೆ ರಘುವರ್ ದಾಸ್ ಸೇರಿದಂತೆ ಹಿಂದೂ ನಾಯಕರು ಈ ಹಕ್ಕೊತ್ತಾಯದ ಬೇಡಿಕೆಯ ಬಗ್ಗೆ ವೌನವಹಿಸಿದ್ದಾರೆ. ಯಾಕೆಂದರೆ ಈ ಬೇಡಿಕೆಯನ್ನು ಒಪ್ಪಿಕೊಳ್ಳುವುದು ಕ್ರಿಶ್ಚಿಯನ್ನೇತರರನ್ನು ಮತ್ತು ಮುಸ್ಲಿಮೇತರರನ್ನು ಹಿಂದುತ್ವದ ಕಾನೂನಿನೊಳಗೆ ತಂದು ಒಂದುಗೂಡಿಸಿ ಅವರನ್ನು ಹಿಂದೂಗಳೆಂದು ಪರಿಗಣಿಸುವ ಹಿಂದುತ್ವದ ಮೂಲ ವಿಚಾರವನ್ನೇ ಅಮುಖ್ಯಗೊಳಿಸುವುದಕ್ಕೆ ಸಮನಾಗುತ್ತದೆ.

ಇನ್ನೊಂದು ವಿಷಯ: ಬೌದ್ಧ ಹಾಗೂ ಜೈನ್ ಧರ್ಮದ ಹಾಗೆ ಸರ್ಣರನ್ನು ಒಂದು ಪ್ರತ್ಯೇಕ ಧರ್ಮವೆಂದು ಒಪ್ಪಿಕೊಂಡಲ್ಲಿ ಆಗ ತಾವು ಹಿಂದೂಗಳಲ್ಲವೆಂದು ಹೇಳುತ್ತಿರುವ, ತಮ್ಮದು ಒಂದು ಪ್ರತ್ಯೇಕ ಲಿಂಗಾಯತ ಧರ್ಮವೆಂದು ವಾದಿಸುತ್ತಿರುವ ಲಿಂಗಾಯತರ ಬೇಡಿಕೆಗಳಿಗೆ ಏನು ಹೇಳುವುದು? ಅಥವಾ 2010ರಲ್ಲಿ ತಾವು ಒಂದು ಪ್ರತ್ಯೇಕ ಧರ್ಮವೆಂದು ಘೋಷಿಸಿಕೊಂಡ ರವಿದಸೈಯಾರವರ ಕತೆ ಏನು? ಸರ್ಣರನ್ನು ಒಂದು ಪ್ರತ್ಯೇಕ ಧರ್ಮವೆಂದು ಮನ್ನಣೆ ನೀಡುವುದರಿಂದ ಹಿಂದೂ ಧರ್ಮದಲ್ಲಿ ಪ್ರತ್ಯೇಕತಾವಾದಿ ಪ್ರವೃತ್ತಿಗಳಿಗೆ ಚಾಲನೆ ನೀಡಿದಂತಾಗುವುದು.

ಒಂದು ಪ್ರತ್ಯೇಕ ಧಾರ್ಮಿಕ ಆಸ್ಮಿತೆಗಾಗಿ ನಡೆಯುವ ಚಳವಳಿಗಳನ್ನು ಹಿಂದುಗಳನ್ನು ಕ್ರಿಶ್ಚಿಯನ್ನರಾಗಿ ಅಥವಾ ಮುಸ್ಲಿಮರಾಗಿ ಮತಾಂತರಿಸಲು ನಡೆಯುತ್ತಿರುವ ಒಂದು ಒಳಸಂಚು ಎಂದು ವಾದಿಸಿ ಹತ್ತಿಕ್ಕಲಾಗುತ್ತಿದೆ. ಈ ಸಮುದಾಯಗಳ ವಿರುದ್ಧ ಆಗಾಗ ನಡೆಯುವ ಹಿಂಸೆಯು ಹಿಂದೂ ಸಮುದಾಯವನ್ನು ಒಂದುಗೂಡಿಸಲು ನೆರವಾಗುತ್ತದೆ. ಎಷ್ಟೆಂದರೂ ಸಮುದಾಯಗಳು ರಾಷ್ಟ್ರಗಳ ಹಾಗೆಯೇ ಸಂಘರ್ಷದ ವೇಳೆಯಲ್ಲಿ ತಮ್ಮ ಭಿನ್ನತೆಗಳನ್ನು ಮರೆಯುತ್ತವೆ. ಇದು ಭಾರತದಲ್ಲಿರುವ ಶೇ. 80 ಹಿಂದೂಗಳನ್ನು ಒಂದು ಏಕರೂಪದ ರಾಜಕೀಯ ಕ್ಷೇತ್ರವಾಗಿ ಪರಿವರ್ತಿಸಲು ಕೇಸರೀಕರಣ ಅಭಿಯಾನಕ್ಕೆ ಬಹಳ ಮುಖ್ಯವಾಗಿದೆ. ಇದೇ ಕಾರಣಕ್ಕಾಗಿ ಕೇಸರಿವಾದಿಗಳು ಕ್ರಿಶ್ಚಿಯನ್ ಮಿಶನರಿಗಳು ಮತಾಂತರ ಮಾಡುತ್ತಿದ್ದಾರೆಂಬ ಗುಲ್ಲೆಬ್ಬಿಸಿದ್ದಾರೆ.

ಆದಿವಾಸಿಗಳ ರಾಜ್ಯವು ಮುಂದಿನ ಕನಿಷ್ಠ ಕೆಲವು ಶತಮಾನಗಳವರೆಗೆ ಕ್ರಿಶ್ಚಿಯನ್ ದೇಶವಾಗುವ ಸಾಧ್ಯತೆ ಇಲ್ಲವೇ ಇಲ್ಲವೆಂಬ ವಿಷಯ ಬೇರೆ. ಇದು ಗೊತ್ತಿದ್ದರೂ ಮತಾಂತರದ ಹೆಸರಿನಲ್ಲಿ ಬೊಬ್ಬೆಹೊಡೆಯಲಾಗುತ್ತಿದೆ.

ಕೃಪೆ: scroll.in

Writer - ಎಜಾಝ್ ಅಶ್ರಫ್

contributor

Editor - ಎಜಾಝ್ ಅಶ್ರಫ್

contributor

Similar News