ಜನರು ಆಹಾರವನ್ನು ತಿನ್ನುತ್ತಾರೆಯೇ ವಿನಃ ನೋಟುಗಳನ್ನಲ್ಲ..

Update: 2017-10-06 18:55 GMT

ಪಡಿತರ ವ್ಯವಸ್ಥೆಯಲ್ಲಿ ಆಹಾರಧಾನ್ಯಗಳ ಬದಲಿಗೆ ನಗದು ವರ್ಗಾವಣೆ ವ್ಯವಸ್ಥೆಯನ್ನು ಜಾರಿಗೆ ತರುವ ಪದ್ಧತಿಯು ಅಪೌಷ್ಟಿಕತೆಯ ನಿಯಂತ್ರಣಕ್ಕಾಗಿ ನಡೆಯುತ್ತಿರುವ ಪ್ರಯತ್ನಗಳಿಗೆ ಅಡ್ಡಿಯುಂಟುಮಾಡುತ್ತದೆ.


ಕೇಂದ್ರದಲ್ಲಿ ಅಧಿಕಾರ ಹಿಡಿದ ಪ್ರತೀ ಸರಕಾರವು ರಿಯಾಯತಿ ದರದಲ್ಲಿ ಬಡವರಿಗೆ ಆಹಾರ ಧಾನ್ಯಗಳನ್ನು ಒದಗಿಸುವ ಯೋಜನೆಯನ್ನು ರದ್ದು ಮಾಡಿ ಅದರ ಸ್ಥಾನದಲ್ಲಿ ನಿರ್ದಿಷ್ಟ ಫಲಾನುಭವಿ ವರ್ಗಗಳಿಗೆ ಈ ಯೋಜನೆಯ ಲಾಭ ದಕ್ಕುವಂತೆ ಮಾಡಲು ಫಲಾನುಭವಿಗಳ ಖಾತೆಗೆ ಹಣವನ್ನು ನೇರವಾಗಿ ವರ್ಗಾವಣೆ (ಡೈರೆಕ್ಟ್ ಬೆನಿಫಿಟ್ ಟ್ರಾನ್ಸಫರ್-ಡಿಬಿಟಿ) ಮಾಡುವ ಯೋಜನೆಯನ್ನು ಜಾರಿಗೆ ತರಲು ಪ್ರಯತ್ನಿಸುತ್ತಲೇ ಇವೆ. 2016-17ರ ಆರ್ಥಿಕ ಸಮೀಕ್ಷೆಯ ಸಂಪುಟ 1ರಲ್ಲಿನ ‘ಸಾರ್ವತ್ರಿಕ ಕನಿಷ್ಟ ಆದಾಯ’ ಎಂಬ ಅಧ್ಯಾಯದಲ್ಲೂ ಸಹ ಇದರ ಪ್ರತಿಧ್ವನಿ ಇದೆ.

ತೀರಾ ಇತ್ತೀಚೆಗೆ ನೀತಿ ಅಯೋಗವು ಹೊರತಂದ ‘ಭಾರತದ ಪೋಷಣೆ-ರಾಷ್ಟ್ರೀಯ ಪೌಷ್ಟಿಕಾಂಶ ಯೋಜನೆ’ (ನರಿಷಿಂಗ್ ಇಂಡಿಯಾ: ನ್ಯಾಷನಲ್ ನ್ಯೂಟ್ರಿಷನ್ ಸ್ಟ್ರಾಟೆಜಿ) ಎಂಬ ಹೊತ್ತಿಗೆಯಲ್ಲಿ ಸಮಗ್ರ ಶಿಶು ಅಭಿವೃದ್ಧಿ ಸೇವೆ (ಐಸಿಡಿಎಸ್)ಗಳ ಯೋಜನೆಯಡಿಯಲ್ಲಿ ಈಗಿರುವಂತೆ ಆಹಾರಧಾನ್ಯಗಳನ್ನು ಮನೆಗೆ ಕೊಂಡೊಯ್ಯುವ ಯೋಜನೆಯ ಬದಲಿಗೆ ನಗದು ವರ್ಗಾವಣೆ ಮಾಡುವ ಪ್ರಸ್ತಾಪವನ್ನು ಮಾಡಲಾಗಿದೆ. ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹಾಗೂ ಹಾಲುಣಿಸುವ ತಾಯಂದಿರಿಗೆ ಕೊಡಮಾಡುತ್ತಿದ್ದ ಪೌಷ್ಟಿಕ ಖಾದ್ಯಗಳ ಬದಲಿಗೆ ತಾಯಂದಿರ ಜನಧನ್ ಖಾತೆಗೆ ನೇರವಾಗಿ ಹಣವನ್ನು ಜಮಾ ಮಾಡುವ ಸಲಹೆಯನ್ನು ಅಂಗೀಕರಿಸಿದೆ ಎಂಬ ವರದಿಗಳು ಕೇಳಿಬರುತ್ತಿವೆ.

ಈ ಬದಲಾವಣೆಯನ್ನು ಮೊದಲು ಶಿಶು ಪೌಷ್ಟಿಕತೆಯ ವಿಷಯಗಳಲ್ಲಿ ಅತ್ಯಂತ ಹಿಂದುಳಿದಿರುವ ಜಿಲ್ಲೆಗಳಲ್ಲಿ ಜಾರಿಗೊಳಿಸಿ ನಂತರದಲ್ಲಿ ಉಳಿದ ಕಡೆಗೂ ವಿಸ್ತರಿಸಲಾಗುವುದು. ಈ ನಗದು ವರ್ಗಾವಣೆ ಯೋಜನೆಯು ಹಾಲಿ ಕೇಂದ್ರ ಸರಕಾರದ ಬಡತನ ನಿರ್ಮೂಲನೆ ಯೋಜನೆಗಳ ಕೇಂದ್ರಭಾಗವಾಗಿರುವ ಜೆ.ಎ.ಎಂ (ಜಧನ್-ಆಧಾರ್-ಮೊಬೈಲ್) ವ್ಯೆಹತಂತ್ರವನ್ನು ಆಧರಿಸಿದೆ. ಕೇಂದ್ರದ ಕಲ್ಯಾಣ ಯೋಜನೆಗಳನ್ನು ಈ ನೇರ ನಗದು ವರ್ಗಾವಣೆ ಯೋಜನೆಗೆ ಬದಲಾಯಿಸುವ ಮೊದಲ ಗಂಭೀರ ಪ್ರಯತ್ನ ಪ್ರಾರಂಭವಾದದ್ದು ಈ ದೇಶದ ಶೇ.67ರಷ್ಟು ಜನತೆಗೆ ರಿಯಾಯತಿ ದರದಲ್ಲಿ ಆಹಾರ ಧಾನ್ಯಗಳನ್ನು ಪೂರೈಸುವ ಸಾರ್ವಜನಿಕ ಪಡಿತರ ಯೋಜನೆ (ಪಿಡಿಎಸ್)ಯಲ್ಲಿ.

ಎಲ್ಲಾ ರಾಜ್ಯ ಸರಕಾರಗಳು ತಮ್ಮ ಪಿಡಿಎಸ್ ಯೋಜನೆಗಳನ್ನು ಈ ಡಿಬಿಟಿ ವ್ಯವಸ್ಥೆಯಾಗಿ ಬದಲಿಸಿಕೊಳ್ಳಬೇಕೆಂದು ಕೇಂದ್ರ ಸರಕಾರವು ಸೂಚನೆಯನ್ನು ಕೊಟ್ಟಿದ್ದು ಈಗಾಗಲೇ ಮೂರು ಕೇಂದ್ರಾಡಳಿತ ಪ್ರದೇಶಗಳಾದ ಪುದುಚೇರಿ, ಚಂಡಿಗಡ ಮತ್ತು ದಾದ್ರ ಹಾಗೂ ನಗರ ಹವೇಲಿಗಳಲ್ಲಿ ಪ್ರಯೋಗಾತ್ಮವಾಗಿ ಚಾಲ್ತಿಗೆ ತರಲಾಗಿದೆ. ಈಗಿರುವ ಪದ್ಧತಿಯಲ್ಲಿ ಕಳಪೆ ಗುಣಮಟ್ಟದ ಧಾನ್ಯಗಳು, ಸೋರಿಕೆ, ಭ್ರಷ್ಟಾಚಾರಗಳು ತಾಂಡವವಾಡುತ್ತಿರುವುದರಿಂದ ನೇರ ನಗದು ವರ್ಗಾವಣೆ ಪದ್ಧತಿಯನ್ನು ಜಾರಿಗೆ ತರಲಾಗುತ್ತಿದೆಯೆಂದು ಈ ಬದಲಾವಣೆಯನ್ನು ಸರಕಾರವು ಸಮರ್ಥಿಸಿಕೊಳ್ಳುತ್ತಿದೆ. ಆದರೆ ರಾಜಕೀಯ ಇಚ್ಛಾಶಕ್ತಿಯೊಂದಿಗೆ ಸೂಕ್ತ ಆಡಳಿತಾತ್ಮಕ ಸುಧಾರಣೆಗಳನ್ನು ಜಾರಿಗೆ ತಂದಲ್ಲಿ ಈ ಎಲ್ಲಾ ಯೋಜನೆಗಳಲ್ಲೂ ಮಹತ್ತರ ಬದಲಾವಣೆಗಳನ್ನು ತರಬಹುದೆಂಬುದು ಈಗಾಗಲೇ ಸಾಬೀತಾಗಿದೆ.

ಉದಾಹರಣೆಗೆ ಮೇಲೆ ಉಲ್ಲೇಖಿಸಲಾದ ಆರ್ಥಿಕ ಸಮೀಕ್ಷೆಯು ಸಹ ತನ್ನ ವರದಿಯಲ್ಲಿ 2004-05 ಮತ್ತು 2011-12ರ ನಡುವೆ ಪಿಡಿಎಸ್ ಮೂಲಕ ಕೌಟುಂಬಿಕ ಆಹಾರ ಧಾನ್ಯ ಖರೀದಿಗಳು ಶೇ.117ರಷ್ಟು ಏರಿಕೆ ಕಂಡಿತೆಂದೂ ಮತ್ತು ಅದೇ ಅವಧಿಯಲ್ಲಿ ಸೋರಿಕೆಯ ಪ್ರಮಾಣ ಶೇ.54ರಿಂದ ಶೇ.35ಕ್ಕೆ ಇಳಿಯಿತೆಂದೂ ದಾಖಲಿಸಿದೆ. ನಂತರದ ಅವಧಿಯಲ್ಲಿ ಸೋರಿಕೆಯನ್ನು ತಡೆಗಟ್ಟುವಲ್ಲಿ ಸಾಕಷ್ಟು ತಂತ್ರಜ್ಞಾನವನ್ನು ಬಳಸಲಾಗುತ್ತಿದೆ ಮತ್ತು ಪಿಡಿಎಸ್ ವ್ಯಾಪ್ತಿಯನ್ನು ಹಿಗ್ಗಿಸಲಾಗಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಗಣನೆಗೆ ತೆಗೆದುಕೊಳ್ಳದೇ ಕೇವಲ 2011ರ ಅಂಕಿಅಂಶಗಳನ್ನು 2016ಕ್ಕೆ ಉಬ್ಬರಿಸಿ ಲೆಕ್ಕಹಾಕುವುದಾದರೂ ಸೋರಿಕೆಯು ಶೇ.20.8ಕ್ಕೆ ಇಳಿದಿರುತ್ತದೆಂದು ನಿರೀಕ್ಷಿಸಬಹುದು. ಅಲ್ಲದೆ ಮೇಲೆ ಹೇಳಿದ ಆ ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ನೇರ ನಗದು ವರ್ಗಾವಣೆ ಯೋಜನೆಯು ಜಾರಿಗೆ ಬಂದಿದ್ದರೂ ನಿಜವಾದ ಫಲಾನುಭವಿಗಳೆಲ್ಲರಿಗೂ ತಲುಪಿದೆಯೆಂಬ ಖಾತರಿಯೇನೂ ಇಲ್ಲ. ಈ ಬಗ್ಗೆ ನೀತಿ ಆಯೋಗದ ಆಶ್ರಯದಲ್ಲಿ 2017ರಲ್ಲಿ ನಡೆದ ಸಮೀಕ್ಷೆಯೊಂದರ ಪ್ರಕಾರ ತಲುಪಲುದ್ದೇಶಿಸಿದ್ದ ನಿರ್ದಿಷ್ಟ ಫಲಾನುಭವಿಗಳಲ್ಲಿ ಶೇ.35ರಷ್ಟು ಜನರ ಖಾತೆಗಳಲ್ಲಿ ಯಾವ ನಗದೂ ಜಮೆಯಾಗಿರಲಿಲ್ಲ.

ಸ್ಪಷ್ಟವಾಗಿ ಕಾಣುವಂತೆ ನೇರ ನಗದು ವರ್ಗಾವಣೆಯಲ್ಲೂ ಸೋರಿಕೆಯು ಸಾಧ್ಯವಿರುವುದರಿಂದ ನೇರ ನಗದು ವರ್ಗಾವಣೆಯು ವಿತರಣೆ ಪದ್ಧತಿಯ ಸುಧಾರಣೆಗೆ ಸಿದ್ಧೌಷದಿಯೆಂಬುದು ನಿಜವಲ್ಲ. ಐಸಿಡಿಎಸ್ ಎಂಬುದು ಒಂದು ಪೂರಕ ಪೌಷ್ಟಿಕಾಂಶ ಘಟಕ ಯೋಜನೆಯಾಗಿರುವುದರಿಂದ ಆ ಯೋಜನೆಗೆ ಸದಾ ಹಣಕಾಸು ಕೊರತೆ ಇರುತ್ತದೆ. ಹಾಲೀ ಇರುವ ಯೋಜನೆಗಳ ಪ್ರಕಾರ ಗರ್ಭಿಣಿ ಮಹಿಳೆ ಮತ್ತು ನವಜಾತ ಶಿಶುಗಳು 45 ತಿಂಗಳುಗಳ ಕಾಲ ಮಾಹೆಯಾನ 158 ಗುಣಾಂಕಗಳಂತೆ ಒಟ್ಟಾರೆ 7,125 ಗುಣಾಂಕಗಳಷ್ಟು ಮನೆಗೆ ಕೊಂಡೊಯ್ಯುವ ಪಡಿತರವನ್ನು (ಟೇಕ್ ಹೋಮ್ ರೇಷನ್- ಟಿಎಚ್‌ಆರ್)ಪಡೆಯಲು ಅರ್ಹರಾಗಿರುತ್ತಾರೆ. ಆದರೆ ಇದನ್ನು 2011-12ರ ಬೆಲೆಗಳ ಆಧಾರದಲ್ಲಿ ನಿಷ್ಕರ್ಷೆ ಮಾಡಲಾಗಿದ್ದು ಈವರೆಗೆ ಅದನ್ನು ಪುನರ್ವಿಮರ್ಶಿಸಲಾಗಿಲ್ಲ.

ನೀತಿ ಆಯೋಗವು ಈ ಪ್ರಮಾಣವನ್ನು ಬಳಕೆದಾರರ ಸೂಚ್ಯಂಕಕ್ಕೆ ಅನುಗುಣವಾಗಿ ಪುನರ್ವಿಮರ್ಶಿಸಬೇಕೆಂದು ಸಲಹೆ ನೀಡಿದೆ. ಹೀಗಾಗಿ ಈಗ 6-72 ತಿಂಗಳ ಮಗುವಿಗೆ ಮಾಹೆಯಾನ 8 ಗುಣಾಂಕಗಳಷ್ಟು ಮತ್ತು ಗರ್ಭಿಣಿಯರಿಗೆ ಮತ್ತು ಹಾಲುಣಿಸುವ ತಾಯಂದಿರಿಗೆ 9.5 ಗುಣಾಂಕಗಳಷ್ಟು ದರವನ್ನು ನಿಗದಿಪಡಿಸಲಾಗಿದೆ. ಈ ಯೋಜನೆಗೆ ನೀಡಲಾಗಿರುವ ಈ ಪೂರಕ ಸಂಪನ್ಮೂಲಗಳು ಮತ್ತು ದರವನ್ನು ಹಣದುಬ್ಬರಕ್ಕೆ ತಕ್ಕಂತೆ ಪುನರ್ವಿಮರ್ಶಿಸಬೇಕೆಂಬ ತೀರ್ಮಾನಗಳು ಟಿಎಚ್‌ಆರ್ ಪಡಿತರ ವಿತರಣೆಯ ಯೋಜನೆಗೆ ಸುಧಾರಣೆ ತರುವಲ್ಲಿ ಒಂದು ಒಳ್ಳೆಯ ಹೆಜ್ಜೆಯಾಗಿದೆ. ಆದರೆ ಈ ಟಿಎಚ್‌ಆರ್ ಅನ್ನು ಸರಕಾರಿ ರಿಯಾಯಿತಿ ದರದಲ್ಲಿ ಪಡೆದುಕೊಂಡಾಗ ಮಾತ್ರ ಹೆಚ್ಚಿನ ಧಾನ್ಯಗಳು ದಕ್ಕಲು ಸಾಧ್ಯ; ಆದರೆ ಇಷ್ಟೇ ಧಾನ್ಯಗಳನ್ನು ಮಾರುಕಟ್ಟೆಯ ದರದಲ್ಲಿ ಕೊಂಡುಕೊಳ್ಳಬೇಕೆಂದರೆ ಈ ಹೆಚ್ಚುವರಿ ಹಣವೂ ಸಹ ಏನೇನೂ ಸಾಲುವುದಿಲ್ಲ. ಇದರ ಜೊತೆಗೆ ನೇರ ನಗದು ವರ್ಗಾವಣೆಯ ಯೋಜನೆಯು ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡುವ ಮತ್ತು ಖಾತೆ ತೆಗೆಯುವ ಹೊರೆಯನ್ನೂ ಮತ್ತು ಹೆಚ್ಚುವರಿ ವೆಚ್ಚವನ್ನೂ ಭರಿಸುವಂತೆ ಮಾಡುತ್ತದೆ.

ಐಸಿಡಿಎಸ್ ಯೋಜನೆಯಡಿಯಲ್ಲಿ ಹಲವಾರು ರಾಜ್ಯಗಳು ಟಿಎಚ್‌ಆರ್ ಗಿಂತ ಉತ್ತಮವಾದ ಬಿಸಿಯೂಟದ ಯೋಜನೆಯನ್ನು ಅಳವಡಿಸಿಕೊಂಡಿವೆ. ಕೆಲವು ರಾಜ್ಯಗಳಲ್ಲಿ ಈ ಟಿಎಚ್‌ಆರ್‌ಗಳ ಉತ್ಪಾದನೆ ಮತ್ತು ವಿತರಣೆಗಳನ್ನು ಮಹಿಳಾ ಮಂಡಲ ಮತ್ತು ಸ್ತ್ರೀ ಸ್ವಸಹಾಯ ಗುಂಪುಗಳ ಮೂಲಕ ವಿಕೇಂದ್ರೀಕೃತವಾಗಿ ಮಾಡಿಸಲಾಗುತ್ತಿದೆ. ಅದೇನೇ ಇದ್ದರೂ ಈಗಲೂ ಈ ಯೋಜನೆಯು ಹೆಚ್ಚು ಕೇಂದ್ರೀಕೃತವಾಗಿಯೇ ಇದ್ದು ಭ್ರಷ್ಟಾಚಾರಗಳಿಗೆ ಪಕ್ಕಾಗಿದೆ. ಈ ಯೋಜನೆಗಳಲ್ಲಿ ರಾಜಕಾರಣಿ-ಗುತ್ತಿಗೆದಾರ-ಅಧಿಕಾರಿ ತ್ರಿವಳಿಗಳ ಕೂಟದಿಂದ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಸೋರಿಕೆಗಳ ವರದಿಗಳು ಬಹಿರಂಗವಾದ ನಂತರದಲ್ಲಿ ಸುಪ್ರೀಂ ಕೋರ್ಟು ಐಸಿಡಿಎಸ್ ಯೋಜನೆಗಳಲ್ಲಿ ಆಹಾರ ಸರಬರಾಜಿನಲ್ಲಿ ಖಾಸಗಿ ಗುತ್ತಿಗೆದಾರರ ಬಳಕೆಯನ್ನು 2004ರಲ್ಲಿ ನಿಷೇಧಿಸಿತು. ಹೀಗಿದ್ದರೂ ಈಗಲೂ ಹಲವು ರಾಜ್ಯಗಳು ಆಹಾರ ಸರಬರಾಜಿಗೆ ಖಾಸಗಿ ಗುತ್ತಿಗೆದಾರರನ್ನು ನಿಯೋಜಿಸಿಕೊಂಡಿವೆ.

ಪಿಡಿಎಸ್ ನಂತೆ ಐಸಿಡಿಎಸ್ ಯೋಜನೆಗಳ ಆಹಾರ ವಿತರಣೆಯೂ ಸಹ ರಾಜಕೀಯ ಮತ್ತು ಆಡಳಿತವರ್ಗದ ಗಮನವನ್ನು ಕೇಳುತ್ತದೆ. ಪ್ರತೀ ಮೂರು ಮಕ್ಕಳಲ್ಲಿ ಒಂದು ಮಗು ಅಪೌಷ್ಟಿಕತೆಯಿಂದ ಕೂಡಿರುವ ನಮ್ಮಂಥ ದೇಶಗಳಲ್ಲಿ ಆಹಾರದ ಬದಲಿಗೆ ನಗದನ್ನು ನೀಡುವ ಪದ್ಧತಿಗೆ ಅವಸರವಸರದಿಂದ ಬದಲಾಗುವುದರ ಮೂಲಕ ಯಾರಿಗೆ ಪೌಷ್ಟಿಕಾಂಶದ ಅತಿಹೆಚ್ಚು ಅಗತ್ಯವಿದೆಯೋ ಅಂಥವರನ್ನು ವಂಚಿಸಿದಂತಾಗುತ್ತದೆ. ಐಸಿಡಿಎಸ್ ಯೋಜನೆಯು ಮಕ್ಕಳಿಗೆ ಅತ್ಯಗತ್ಯವಿರುವ ಪೌಷ್ಟಿಕಾಂಶಗಳನ್ನು ಪೂರೈಸುತ್ತಲಿದೆ. ಅಂಗನವಾಡಿಗಳು ಪೌಷ್ಟಿಕಾಂಶ ಸಂಬಂಧೀ ಸಲಹೆಗಳನ್ನೂ, ಅಭಿವೃದ್ಧಿಯ ಉಸ್ತುವಾರಿಯನ್ನೂ ಮತ್ತು ಶಿಶು ಆರೈಕೆ ಮತ್ತು ಲಸಿಕೆ ಪೂರೈಕೆಯಂಥ ಆರೋಗ್ಯ ಸೇವೆಗಳನ್ನೂ ನೀಡುತ್ತವೆ. ಇದೀಗ ರಾಷ್ಟ್ರೀಯ ಪೌಷ್ಟಿಕತೆ ಅಭಿಯಾನವೂ ಪ್ರಾರಂಭಗೊಂಡಿದ್ದು ದೇಶದಲ್ಲಿರುವ ಅಪೌಷ್ಟಿಕತೆಯನ್ನು ನಿವಾರಿಸಲು ಬಹುಕ್ಷೇತ್ರೀಯ ಮಧ್ಯಪ್ರವೇಶದ ಬಗ್ಗೆ ಒಂದು ಚೌಕಟ್ಟನ್ನು ಒದಗಿಸುತ್ತದೆ. ಇದರಿಂದ ಐಸಿಡಿಎಸ್ ಅನ್ನು ಬಲಪಡಿಸಲು ಮತ್ತು ಅದು ಪ್ರಯೋಜನಕಾರಿಯಾಗುವಂತೆ ಮಾಡಲು ಒಂದು ಅವಕಾಶವು ಒದಗಿದೆ. ನಗದು ವರ್ಗಾವಣೆಯು ಮಕ್ಕಳಿಗೆ ಅತ್ಯಗತ್ಯವಿರುವ ಆಹಾರ ದೊರಕುವುದನ್ನು ಖಂಡಿತಾ ಖಾತರಿಪಡಿಸುವುದಿಲ್ಲ. ಈ ವಾಸ್ತವವೇ ಭವಿಷ್ಯದ ನೀತಿಗೆ ಮಾರ್ಗದರ್ಶನ ಮಾಡಬೇಕು. 

ಕೃಪೆ: Economic and Political Weekly

Writer - ಅನು: ಶಿವಸುಂದರ್

contributor

Editor - ಅನು: ಶಿವಸುಂದರ್

contributor

Similar News