‘ವಿಶ್ವಲಿಪಿ’ಗಳ ರಾಣಿಯಾದ ಕನ್ನಡ ಲಿಪಿಗೆ ವಿದ್ಯುನ್ಮಾನ ಕಿರೀಟ ತೊಡಿಸಿದವರು

Update: 2017-10-07 11:14 GMT

ಆಚಾರ್ಯ ವಿನೋಬಾ ಭಾವೆಯವರು ಕನ್ನಡ ಲಿಪಿಯನ್ನು ‘ವಿಶ್ವಲಿಪಿಗಳ ರಾಣಿ’ ಎಂದು ಕರೆದಿದ್ದಾರೆ. ಕನ್ನಡ ಲಿಪಿತಂತ್ರಾಂಶ ಗಳನ್ನು ಸಿದ್ಧಪಡಿಸಿ, ಈ ಲಿಪಿಗಳ ರಾಣಿಗೆ ಕಂಪ್ಯೂಟರಿನಲ್ಲಿ ಸ್ಥಾನಮಾನ ಗಳನ್ನು ಕಲ್ಪಿಸುವ ಮೂಲಕ ಕಿರೀಟವನ್ನು ತೊಡಿಸಿದವರು ಅನೇಕರಿದ್ದಾರೆ. ಕಂಪ್ಯೂಟರ್ ತಂತ್ರಜ್ಞಾನವು ವಿದೇಶದಿಂದ ಬಂದದ್ದು. ಅಂತಾರಾಷ್ಟ್ರೀಯ ಭಾಷೆಯಾದ ಇಂಗ್ಲಿಷ್ ಸಹಜವಾಗಿಯೇ ಕಂಪ್ಯೂಟರಿನ ಬಳಕೆಯ ಭಾಷೆ ಆಗಿದೆ. ಕನ್ನಡದ ನಾಮನಿಶಾನೆಯೂ ಇಲ್ಲದಿದ್ದ ಅಂತಹ ತಂತ್ರಜ್ಞಾನ ದೊಳಗೆ ಕನ್ನಡವನ್ನು ಅಳವಡಿಸುವ ಸವಾಲುಗಳನ್ನು ಎದುರಿಸಿ ಯಶಸ್ವಿ ಕನ್ನಡ ಲಿಪಿತಂತ್ರಾಂಶಗಳನ್ನು ಆವಿಷ್ಕರಿಸಿದ ಕೀರ್ತಿ ನಮ್ಮ ಭಾರತೀಯ ತಂತ್ರಾಂಶ ತಯಾರಕರಿಗೇ ಸಲ್ಲಬೇಕು. ಕನ್ನಡಕ್ಕೂ ವಿದ್ಯುನ್ಮಾನ ಉಪಕರಣಗಳಲ್ಲಿ ಸ್ಥಾನಮಾನಗಳನ್ನು ಕಲ್ಪಿಸುವ ಮೂಲಕ ಆಧುನಿಕ ಬಳಕೆಗೆ ಕನ್ನಡವನ್ನು ಸಜ್ಜುಗೊಳಿಸಿದ ಅವರ ಸಾಧನೆ ಪ್ರಶಂಸಾರ್ಹ.

ಟ್ರೂ-ಟೈಪ್ ಫಾಂಟುಗಳು ಬಳಕೆಗೆ ಬಂದ ನಂತರ ಕಂಪ್ಯೂಟರ್ ಪರದೆಯಲ್ಲಿ ಏನನ್ನು ನೋಡುತ್ತೇವೋ ಅದನ್ನು ಯಥಾವತ್ತು ಮುದ್ರಿಸಿಕೊಳ್ಳುವ ಸೌಲಭ್ಯವು ದೊರೆಯಿತು. ಮುದ್ರಣ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಒಂದು ಮಹತ್ವದ ಕ್ರಾಂತಿ ಉಂಟಾಯಿತು. ಕಂಪ್ಯೂಟರ್ ಅಕ್ಷರಗಳನ್ನು ಚಿತ್ರರೂಪದಲ್ಲಿ ನಿರೂಪಿಸುವ ಫಾಂಟ್ ತಂತ್ರಜ್ಞಾನವು ಇಂಗ್ಲಿಷ್ ಭಾಷೆಯಲ್ಲಿ ಬಳಕೆಗೆ ಬಂದ ನಂತರದಲ್ಲಿ, ಕನ್ನಡಕ್ಕೂ ಸಹ ವಿವಿಧ ವಿನ್ಯಾಸದ ಅಕ್ಷರಶೈಲಿಗಳ (ರೂಪವಿನ್ಯಾಸ) ಫಾಂಟುಗಳನ್ನು ಸೃಷ್ಟಿಸಿ ಕನ್ನಡಿಗರ ಬಳಕೆಗೆ ತರುವಲ್ಲಿ ಭಾರತೀಯ ಭಾಷಾ ತಂತ್ರಾಂಶ ತಯಾರಕರು ಹಲವು ರೀತಿಯಲ್ಲಿ ತಮ್ಮ ಪರಿಶ್ರಮವನ್ನು ಹಾಕಿದ್ದಾರೆ.

ಅಂತಾರಾಷ್ಟ್ರೀಯ ತಂತ್ರಾಂಶ ತಯಾರಕರು ಭಾರತೀಯ ಭಾಷೆಗಳತ್ತ ಕಣ್ಣೆತ್ತಿಯೂ ನೋಡದಂತಹ ಕಾಲದಲ್ಲಿ, ನಮ್ಮ ದೇಶದ ರಾಷ್ಟ್ರೀಯ ಮತ್ತು ಸ್ಥಳೀಯ ತಂತ್ರಾಂಶ ತಯಾರಕರು ಹಲವು ಲಿಪಿತಂತ್ರಾಂಶಗಳನ್ನು ಸಿದ್ಧಪಡಿಸಿ ಬಳಕೆಗೆ ತಂದಿದ್ದಾರೆ. ಅವರಲ್ಲಿ ಖಾಸಗಿ ಕಂಪೆನಿಗಳು ಮತ್ತು ಸರಕಾರೀ ಸ್ವಾಮ್ಯದ ಸಂಸ್ಥೆಗಳು ಇವೆ ಹಾಗೂ ವ್ಯಕ್ತಿಗತ ನೆಲೆಯಲ್ಲಿಯೂ ಸಹ ತಂತ್ರಾಂಶ ಗಳು ಸಿದ್ಧಗೊಂಡಿವೆ. 1980ರ ದಶಕದಲ್ಲಿ ವೀಡಿಯೊ ಗ್ರಾಫಿಕ್ಸ್ ಅಡಾಪ್ಟರ್ (ವಿ.ಜಿ.ಎ) ಹೊಂದಿದ್ದ, ಕಪ್ಪು ಮತ್ತು ಬಿಳುಪಿನ ಕಂಪ್ಯೂಟರ್ ಮಾನಿಟರ್‌ಗಳಿದ್ದವು. ‘ಡಾಸ್’ ಎಂಬ ಹೆಸರಿನ ಆಪರೇಟಿಂಗ್ ಸಿಸ್ಟಂ ಬಳಕೆಯಲ್ಲಿತ್ತು. ಕಪ್ಪು ಪರದೆಯ ಮೇಲೆ ಬಿಳಿಯ ಅಕ್ಷರಗಳು ಮೂಡುತ್ತಿದ್ದವು. ಕಂಪ್ಯೂಟರಿಗೆ ಟೈಪ್ ಮಾಡುವ ಮೂಲಕ ಕಾರ್ಯಾದೇಶಗಳನ್ನು (ಕಮಾಂಡ್) ನೀಡಬೇಕಿತ್ತು. ಅದನ್ನು ‘ಕ್ಯಾರೆಕ್ಟರ್ ಯೂಸರ್ ಇಂಟರ್‌ಪೇಸ್ (ಸಿಯೂಐ)’ ಎಂದು ಕರೆಯಲಾಗುತ್ತಿತ್ತು. ಕನ್ನಡದ ಬಳಕೆಗಾಗಿ ಡಾಸ್ ಒ.ಎಸ್. ಮೇಲೆ ಕಾರ್ಯನಿರ್ವಹಿಸುವ ತಂತ್ರಾಂಶಗಳನ್ನು ಎಂಬತ್ತರ ದಶಕದಲ್ಲಿಯೇ ಸಿದ್ಧಪಡಿಸಲಾಯಿತು. ಕನ್ನಡ ಭಾಷಾ ಲಿಪಿವ್ಯವಸ್ಥೆಗೆ ಮಾರುಕಟ್ಟೆಯಲ್ಲಿರುವ ಇರುವ ಬೇಡಿಕೆಯನ್ನು ಅವಲಂಬಿಸಿ ಅಥವಾ ಬೇಡಿಕೆಯನ್ನು ಸೃಷ್ಟಿಸಿ ಮಾರಾಟವನ್ನು ಮಾಡುವ ಉದ್ದೇಶದಿಂದ ಅಂತಹ ತಂತ್ರಾಂಶವನ್ನು ತಯಾರಿಸಿದವರಲ್ಲಿ ಸಾಫ್ಟ್‌ವೇರ್ ರಿಸರ್ಚ್ ಗ್ರೂಪ್‌ನ ಶ್ರೀ ಟಿ.ಎಸ್.ಮುತ್ತುಕೃಷ್ಣನ್ ಮೊದಲಿಗರು. ಇವರು ‘ಶಬ್ದರತ್ನ’ ಎಂಬ ಎಡಿಟರ್‌ನ್ನು 1987ರಲ್ಲಿ ಮತ್ತು ‘ವೀನಸ್ ಪಬ್ಲಿಷರ್’ ಎಂಬ ಡಿ.ಟಿ.ಪಿ.ಗಾಗಿ ಬಳಸುವ ತಂತ್ರಾಂಶವನ್ನು ತಯಾರಿಸಿ 1989ರಲ್ಲಿ ಮಾರುಕಟ್ಟೆಗೆ ಬಿಡುಗಡೆಮಾಡಿದರು. ಶಬ್ದರತ್ನ ಸರಕಾರದ ವಿವಿಧ ಇಲಾಖೆಗಳ ಕಚೇರಿಗಳಲ್ಲಿ ಬಳಕೆಗೆ ಬಂದ ಮೊದಲ ಡಾಸ್‌ಆಧಾರಿತ ಕನ್ನಡ ತಂತ್ರಾಂಶ ಎಂಬ ಹೆಗ್ಗಳಿಕೆ ಪಡೆದು ಜನಪ್ರಿಯವಾಗಿತ್ತು. ನಂತರದಲ್ಲಿ, ಏಸಸ್ ಕನ್ಸಲ್‌ಟೆಂಟ್ಸ್‌ನ ಶ್ರೀ ಎಸ್.ಕೆ.ಆನಂದ್ ಭಾರತೀಯ ಭಾಷೆಗಳ ‘ಆಕೃತಿ’ ಹೆಸರಿನ ಡಾಸ್ ಆಧಾರಿತ ವರ್ಡ್ ಪ್ರೋಸೆಸರ್‌ನ್ನು 1990ರಲ್ಲಿ ಸಿದ್ಧಪಡಿಸಿದರು. ಅದಕ್ಕೂ ಮುನ್ನಾ 1988ರಲ್ಲಿ ‘ಆಸ್ಟೆರಿಕ್ ಪಬ್ಲಿಷಿಂಗ್ ಸಿಸ್ಟಂ’ ಎಂಬ ‘ಡಾಸ್’ ಆಧಾರಿತ ‘ವೆಂಚುರಾ (ಜೆಮ್)’ ಎಡಿಟರ್‌ನಲ್ಲಿ ಮೊದಲ ಬಾರಿಗೆ ಹಿಂದಿ ಲಿಪಿಯ ಫೋಟೊ ಕಂಪೋಸಿಂಗ್‌ಗಾಗಿ, ಪಿ.ಸಿ. ಆಧಾರಿತ ವ್ಯವಸ್ಥೆಯನ್ನು ನಿರ್ಮಿಸಿದರು. ನಂತರ, ಅದಕ್ಕೆ ಕನ್ನಡವನ್ನೂ ಸಹ ಅಳವಡಿಸಿದರು. 1993ರಲ್ಲಿ ಆ್ಯಪಲ್‌ಸಾಫ್ಟ್ ನ ಶ್ರೀ ಎನ್.ಅನ್ಬರಸನ್ ‘ಸುರಭಿ’ ಎಂಬ ಡಾಸ್ ಎನೇಬಲರ್‌ನ್ನು ಸಿದ್ಧಪಡಿಸಿದರು, ಇದು ಡಾಸ್ ಎಡಿಟರ್ ಆಗಿರದೆ, ಡಾಸ್ ವೇದಿಕೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಅನ್ವಯಿಕ ತಂತ್ರಾಂಶಗಳಲ್ಲಿ (ಅಪ್ಲಿಕೇಷನ್‌ಗಳಲ್ಲಿ) ಕನ್ನಡ ಲಿಪಿಯನ್ನು ಮೂಡಿಸುವ ವಿಶೇಷ ವ್ಯವಸ್ಥೆಯಾಗಿತ್ತು. ಸರಿಸುಮಾರು ಇದೇ ಸಮಯದಲ್ಲಿ ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯು ಸಹ ‘ಭಾಷಾ’ ಎಂಬ ಹೆಸರಿನಲ್ಲಿ ಡಾಸ್ ಎನೇಬಲರ್ ಮತ್ತು ಸ್ವತಂತ್ರವಾದ ಡಾಸ್ ಎಡಿಟರ್ ಸಹ ಅಭಿವೃದ್ಧಿಪಡಿಸಿತ್ತು. ಇವೆಲ್ಲವೂ ಪಾವತಿಸಿ ಬಳಸುವ ತಂತ್ರಾಂಶಗಳಾಗಿದ್ದವು. ಆ ಕಾಲಘಟ್ಟದಲ್ಲಿ ಕೆಲವು ತಂತ್ರಜ್ಞರು ಕನ್ನಡಕ್ಕಾಗಿ ತಂತ್ರಾಂಶಗಳನ್ನು ಸಿದ್ಧಪಡಿಸಿ ಉಚಿತವಾಗಿ ನೀಡಿದರು. ಅಮೆರಿಕದಲ್ಲಿ ನೆಲೆಸಿರುವ ತಂತ್ರಜ್ಞರಾದ ಶ್ರೀ ಜಗದೀಶ್ ಮತ್ತು ಶ್ರೀ ವೆಂಕಟೇಶ್‌ರವರು ‘ಕಲೆ’(KALE)  ಹೆಸರಿನಲ್ಲಿ, ನಾಡೋಜ ಡಾ.ಕೆ.ಪಿ.ರಾವ್‌ರವರ ‘ಸೇಡಿಯಾಪು’ ಹೆಸರಿನಲ್ಲಿ, ಡಾಸ್ ಆಧಾರಿತ ಲಿಪಿತಂತ್ರಾಂಶಗಳನ್ನು ಸಿದ್ಧಪಡಿಸಿ ಉಚಿತ ಬಳಕೆಗೆ ನೀಡಿದ್ದಾರೆ.

ಕಾಲಾನಂತರದಲ್ಲಿ, ಸೂಪರ್ ವೀಡಿಯೊ ಗ್ರಾಫಿಕ್ಸ್ ಅಡಾಪ್ಟರ್ (ಎಸ್.ವಿ.ಜಿ.ಎ) ಹೊಂದಿದ ವರ್ಣಮಯ ಕಂಪ್ಯೂಟರ್ ಮಾನಿಟರ್‌ಗಳು ಆವಿಷ್ಕಾರಗೊಂಡವು. ವಿಂಡೋಸ್ ಎಂಬ ಹೆಸರಿನ ಗ್ರಾಫಿಕಲ್ ಯೂಸರ್ ಇಂಟರ್‌ಫೇಸ್ (ಜಿ.ಯು.ಐ) ಇರುವ ಒ.ಎಸ್. ಬಳಕೆಗೆ ಬಂತು. ಕಮಾಂಡ್ ಟೈಪ್ ಮಾಡುವ ಪರಿಶ್ರಮವಿಲ್ಲದೆ, ಪರದೆಯಲ್ಲಿ ಕಾಣುವ ಸಣ್ಣ ಚಿತ್ರಿಕೆಗಳ (ಐಕಾನ್‌ಗಳ) ಮೇಲೆ ಕೇವಲ ಮೌಸ್ ಕ್ಲಿಕ್ ಮಾಡುವ ಮೂಲಕ ಕಂಪ್ಯೂಟರ್‌ಗೆ ಆದೇಶಗಳನ್ನು ನೀಡುವ ಕ್ರಮ ಬಂತು. ಕಂಪ್ಯೂಟ ರುಗಳ ಬಳಕೆ ವಿಶ್ವಾದ್ಯಂತ ಪಸರಿಸಿತು. ಆಗಲೇ ಚಿತ್ರರೂಪೀ (ಗ್ರಾಫಿಕಲ್) ಫಾಂಟ್ ತಂತ್ರಜ್ಞಾನವೂ ಸಹ ಆವಿಷ್ಕಾರಗೊಂಡಿತು. ಭಾರತೀಯ ಭಾಷೆಗಳಿಗಾಗಿ ‘ಆಕೃತಿ’ ಹೆಸರಿನ ಫಾಂಟುಗಳನ್ನು ತಯಾರಿಸಿದವರು ‘ಏಸಸ್ ಕನ್‌ಸಲ್‌ಟೆಂಟ್ಸ್,’ ಮಾಲಕರಾದ (ಇಂದಿನ ಸೈಬರ್‌ಸ್ಕೇಪ್ ಮಲ್ಟಿಮೀಡಿಯಾ ಲಿಮಿಟೆಡ್) ಶ್ರೀ ಎಸ್.ಕೆ.ಆನಂದ್. ಆಕೃತಿ ಪುಸ್ತಕ ಪ್ರಕಟನೆಗೆ ಹೆಚ್ಚು ಬಳಕೆಯಾಯಿತು. ಪುಣೆಯಲ್ಲಿರುವ ಮಾಡ್ಯುಲರ್ ಸಿಸ್ಟಂಸ್ (ಇಂದಿನ ಮಾಡ್ಯುಲರ್ ಇನ್‌ಫೋಟೆಕ್ ಪ್ರೈ.ಲಿ.) ಮಾಲಕರಾದ ಡಾ.ಎಂ.ಎನ್.ಕೂಪರ್ ‘ಶ್ರೀಲಿಪಿ’ ಹೆಸರಿನ ತಂತ್ರಾಂಶ ಸಿದ್ಧಪಡಿಸಿದರು, ಕನ್ನಡದ ಬಹುತೇಕ ಪತ್ರಿಕೆಗಳು ಇದನ್ನು ಬಳಸಿದವು. ಸಾಫ್ಟ್‌ವೇರ್ ರಿಸರ್ಚ್ ಗ್ರೂಪ್ (ಇಂದಿನ ಎಸ್.ಆರ್.ಜಿ.ಸಿಸ್ಟಂಸ್ ಪ್ರೈ.ಲಿ.) ಮಾಲಕರಾದ ಶ್ರೀ ಟಿ.ಎಸ್.ಮುತ್ತುಕೃಷ್ಣನ್ ‘ಶಬ್ದರತ್ನ, ‘ವೀನಸ್ ಪಬ್ಲಿಷರ್’ ಮತ್ತು ‘ವಿನ್‌ಕೀ’ ಇವುಗಳನ್ನು ತಯಾರಿಸಿದರು. ಸರಕಾರಿ ಕಚೇರಿಗಳಲ್ಲಿ ಇದು ಹೆಚ್ಚಾಗಿ ಬಳಕೆಯಾಯಿತು. ಸೊನಾಟಾ ಕಂಪೆನಿ ಲಿಮಿಟೆಡ್ ’ಪ್ರಕಾಶಕ್‌ನ್ನು ಅಭಿವೃದ್ಧಿಪಡಿಸಿತು. ಇದು ಪುಸ್ತಕ ಮತ್ತು ಪತ್ರಿಕಾ ಪ್ರಕಟನೆಯಲ್ಲಿ ಜನಪ್ರಿಯವಾಯಿತು. ಶ್ರೀ ಎನ್.ಅನ್ಬರಸನ್ ನೇತೃತ್ವದ ಆಪಲ್ ಸಾಫ್ಟ್ ಪ್ರೈ.ಲಿ. ‘ಸುರಭಿ’ ಹೆಸರಿನ ತಂತ್ರಾಂಶಗಳನ್ನು ಸಿದ್ಧಪಡಿಸಿತು. ಇದು ಕರ್ನಾಟಕ ಸರಕಾರದ ಸಚಿವಾಲಯದಲ್ಲಿ ಬಳಕೆಗೆ ಬಂದು ಜನಪ್ರಿಯವಾಯಿತು. ‘ಕೈರಳಿ’ ತಯಾರಿಸಿದದ್ದು ಶ್ರೀ ಬಿಯಾನ್ ಮ್ಯಾಥ್ಯು ನೇತೃತ್ವದ ‘ಬಿಯಾನ್ ಕಂಪ್ಯೂಟರ್ಸ್’; ಪುಣೆಯಲ್ಲಿರುವ, ಕೇಂದ್ರ ಸರಕಾರಿ ಸ್ವಾಮ್ಯದ ಸಿ-ಡ್ಯಾಕ್ ಸಂಸ್ಥೆಯು ‘ಐ-ಲೀಪ್’ ಹೆಸರಿನ ತಂತ್ರಾಂಶ ಬಿಡುಗಡೆ ಮಾಡಿದೆ. ಹೈದರಾಬಾದ್‌ನ ಶ್ರೀ ಎಸ್.ಮುರುಳಿ ಕೃಷ್ಣ ‘ಅನು’ ಫಾಂಟುಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಆಕರ್ಷಕ ಫಾಂಟುಗಳು ಇಂದಿಗೂ ಜಾಹಿರಾತು ಜಗತ್ತನ್ನು ಆಳುತ್ತಿವೆ. ಎಲ್ಲ ಕಂಪೆನಿಗಳು ಭಾರತೀಯ ಭಾಷಾ ಲಿಪಿತಂತ್ರಜ್ಞಾನದ ಹಲವು ಕಾಲಘಟ್ಟದಲ್ಲಿ ಕನ್ನಡ ತಂತ್ರಾಂಶಗಳನ್ನು ತಯಾರಿಸಿ ಮಾರುಕಟ್ಟೆಗೆ ಒದಗಿಸಿವೆ. ಈ ತಂತ್ರಾಂಶಗಳು ಮಾಲಕತ್ವದ ಮತ್ತು ಏಕಸ್ವಾಮ್ಯ ಹೊಂದಿದ ಮತ್ತು ಪಾವತಿಸಿ ಬಳಸುವ ತಂತ್ರಾಂಶಗಳಾಗಿವೆ.

 1998ರಲ್ಲಿ ಬಿಡುಗಡೆಗೊಂಡ ಅಮೆರಿಕ ನಿವಾಸಿ ಶ್ರೀ ಶೇಷಾದ್ರಿ ವಾಸುರವರ ‘ಬರಹ’ ತಂತ್ರಾಂಶವು ವ್ಯಕ್ತಿಗತ ನೆಲೆಯಿಂದ ತಯಾರಾದ ಕನ್ನಡದ ಉಚಿತ ಲಿಪಿತಂತ್ರಾಂಶವಾಗಿದೆ. ಕರ್ನಾಟಕ ಸರಕಾರದ ಅನುದಾನದೊಂದಿಗೆ ‘ಕನ್ನಡ ಗಣಕ ಪರಿಷತ್’ ಸಿದ್ಧಪಡಿಸಿದ ‘ನುಡಿ’ ತಂತ್ರಾಂಶವು ಸರಕಾರದ ಕಚೇರಿಗಳಲ್ಲಿ ಅಷ್ಟೇ ಅಲ್ಲದೆ, ವಿಶ್ವಾದ್ಯಂತ ವ್ಯಾಪಕವಾಗಿ ಬಳಕೆಗೆ ಬಂದಿದೆ. ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಮೂಲಕ ಸಿದ್ಧಗೊಂಡ ’ಕುವೆಂಪು ಕನ್ನಡ ತಂತ್ರಾಂಶ’ವನ್ನು ಹಾಸನದ ಮಾರುತಿ ತಂತ್ರಾಂಶ ಅಭಿವೃದ್ಧಿಗಾರರು ಸಿದ್ಧಪಡಿಸಿದ್ದಾರೆ. ‘ನುಡಿ’ ಮತ್ತು ‘ಕುವೆಂಪು ಕನ್ನಡ ತಂತ್ರಾಂಶ’ - ಇವುಗಳು ಸಾಂಸ್ಥಿಕ ನೆಲೆಯಿಂದ ತಯಾರಾದ ಕನ್ನಡದ ಉಚಿತ ಲಿಪಿ ತಂತ್ರಾಂಶಗಳಾಗಿವೆ.

 
 
 

   ಆನಂದ್ ಎಸ್.ಕೆ                           ಎನ್.ಎಂ. ಕೂಪರ್                  ಎನ್.ಅನ್ಬರಸನ್                        ಮುರಳೀಕೃಷ್ಣ 

   ಶ್ರೀಲಿಪಿ ಫಾಂಟು                             ಆಕೃತಿ ಫಾಂಟು                      ಸುರಭಿ ಫಾಂಟು                         ಅನು ಫಾಂಟು

 

ಶೇಷಾದ್ರಿ ವಾಸು                                 ಮುತ್ತುಕೃಷ್ಣ

ಬರಹ ಫಾಂಟು                                    ವಿನ್ ಕೀ

Writer - ಸತ್ಯನಾರಾಯಣ ಎ.

contributor

Editor - ಸತ್ಯನಾರಾಯಣ ಎ.

contributor

Similar News