ಇಬ್ಬರು ನಟವರರು

Update: 2017-10-07 11:23 GMT

ಕನ್ನಡ ರಂಗಭೂಮಿಯ ನಿರ್ಮಾತೃಗಳಲ್ಲಿ ಒಬ್ಬರಾದ ದಿವಂಗತ ವರದಾಚಾರ್ಯರ ಬದುಕು ಹಾಗೂ ವ್ಯಕ್ತಿತ್ವ ಕುರಿತು ಕೆ. ವಾಸುದೇವಾಚಾರ್ಯರು 1960ರ ಕಾಲದಲ್ಲಿ ದಾಖಲಿಸಿರುವ ಒಂದು ವ್ಯಕ್ತಿಚಿತ್ರಣ.

ಕನ್ನಡ ರಂಗಭೂಮಿಯ ಇತಿಹಾಸದಲ್ಲಿ ವರದಾಚಾರ್ಯರ ಸ್ಥಾನ ಬಹು ದೊಡ್ಡದು. ನಾಟಕಕಲೆಯೇ ಮೂರ್ತಿವೆತ್ತಿತ್ತು ಅವರಲ್ಲಿ ಎಂದರೆ ಅತಿಶಯೋಕ್ತಿಯಲ್ಲ. ಮೋಹಕರೂಪ. ಭವ್ಯವಾದ ಶರೀರ, ಉತ್ತಮವಾದ ರಾಗಜ್ಞಾನ, ಖಚಿತವಾದ ತಾಳಜ್ಞಾನ. ಮಾತಿನ ಶೈಲಿ ಬಹು ಗಂಭೀರ, ಬಿಗಿ, ವಿದ್ಯಾವಂತರು. ಯಾವ ನಾಟಕದಲ್ಲಿ ಯಾವ ಪಾತ್ರ ಮಾಡಿದರೂ ಒಂದೇ ವಿಧವಾದ ಸೊಗಸು ಸಹಜತೆ ಎದ್ದು ಕಾಣುತ್ತಿದ್ದವು. ನಾಟಕಗಳನ್ನು ಚೆನ್ನಾಗಿ ಓದಿ ಪಾತ್ರದ ಭಾವವಿಶೇಷಗಳನ್ನು, ವೈಶಿಷ್ಟ್ಯವನ್ನು ವಿಶದವಾಗಿ ಅರ್ಥಮಾಡಿಕೊಂಡು ನಾಟಕವಾಡುವಾಗ ತಮ್ಮನ್ನು ತಾವೇ ಮರೆತು ಪಾತ್ರದೊಡನೆ ಸಂಪೂರ್ಣ ಬೆರೆಯುತ್ತಿದ್ದರು. ಸುಖಾಂತ ನಾಟಕಗಳಾಗಲೀ ವಿಷಾದಾಂತ ನಾಟಕಗಳಾಗಲೀ ಎರಡನ್ನೂ ಅತೀ ದಕ್ಷತೆಯಿಂದ ನಿರ್ವಹಿಸುತ್ತಿದ್ದರು. ವಿಷಾದಾಂತ ನಾಟಕಗಳಲ್ಲಿ ಪ್ರೇಕ್ಷಕರನ್ನು ದುಃಖ ಸಮುದ್ರದಲ್ಲಿ ಮುಳುಗಿಸುತ್ತಿದ್ದಂತೆ ಸುಖಾಂತ ನಾಟಕಗಳಲ್ಲಿ ಸಂತೋಷ ಸಂಭ್ರಮ ವಿಲಾಸಗಳಲ್ಲಿ ತೇಲಾಡಿಸುತ್ತಿದ್ದರು. ಅವರ ಪಾತ್ರಾಭಿನಯ ಅವರಿಗೇ ಸಮರ್ಪಕವೆನಿಸಿದ ಹೊರತು ಅವರು ಸಂತುಷ್ಟರಾಗುತ್ತಿರಲಿಲ್ಲ ಎಂಬುದಕ್ಕೆ ಒಂದು ನಿದರ್ಶನವನ್ನು ಕೊಡಬಹುದು. ಶೂರಸೇನ ನಾಟಕವನ್ನು ಆಡಬೇಕೆಂದು ಸಾವಿರಾರು ರೂಪಾಯಿ ವೆಚ್ಚಮಾಡಿ ಹೊಸ ಹೊಸ ವೇಷಭೂಷಣಗಳು ಪರದೆ ಮುಂತಾದ ಸಲಕರಣೆಗಳನ್ನು ಸಿದ್ಧಮಾಡಿಸಿದ್ದರು. ತಿಂಗಳುಗಟ್ಟಲೆ ನಾಟಕದ ಅಭ್ಯಾಸ ನಡೆದಿತ್ತು. ಕೊನೆಗೆ ನಾಟಕವನ್ನು ಆಡುವ ದಿನವನ್ನೂ ನಿರ್ಧಾರ ಮಾಡಿದ್ದಾಯಿತು. ‘ನಾಳೆ ದಿನ ರಾತ್ರಿ ಶೂರಸೇನ ಚರಿತ್ರೆ’ ಎಂದು ಬೋರ್ಡನ್ನು ಬರೆಸಿಟ್ಟು ಮನೆಗೆ ಹೋಗಿ ಕಡೆಯ ಘಳಿಗೆಯಲ್ಲಿ ಮನಸ್ಸನ್ನು ಬದಲಿಸಿ ಬೋರ್ಡನ್ನು ತೆಗೆದು ಒಳಗಿಡುವಂತೆ ಆಳಿನ ಸಂಗಡ ಹೇಳಿ ಕಳುಹಿಸಿದ್ದೂ ಉಂಟು. ಒಂದಲ್ಲ ಎರಡಲ್ಲ ನಾಲ್ಕಾರು ಸಲ ಹೀಗೆ ಮಾಡಿದ್ದರು ವರದಾಚಾರ್ಯರು ಈ ನಾಟಕದ ವಿಷಯದಲ್ಲಿ. ಕುತೂಹಲ ಕೆರಳಿ ಒಮ್ಮೆ ನಾನೇ ವರದಾಚಾರ್ಯರಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದೆ. ಆಚಾರ್ಯ, ‘ಶೂರಸೇನ ನಾಟಕವನ್ನು ಆಡಬೇಕೆಂದು ಬಹು ದಿನದಿಂದಲೂ ನನಗೆ ಆಸೆ. ಆದರೆ ನಾಟಕದ ಸುಬ್ಬಣ್ಣ ಈ ನಾಟಕದಲ್ಲಿ ಮಾಡುತ್ತಿದ್ದ ಅಯಾಗೋ ಪಾತ್ರ ನನ್ನ ಕಣ್ಣುಮುಂದೆ ನಿಂತಾಗ ಆ ಮಟ್ಟದಲ್ಲಿ ನಾನು ಆ ಪಾತ್ರವನ್ನು ನಿರ್ವಹಿಸಬಲ್ಲೆನೇ ಎಂಬ ಸಂದೇಹ ನನ್ನನ್ನು ಆವರಿಸುತ್ತದೆ. ಸುಬ್ಬಣ್ಣನವರ ಕಲಾಕೌಶಲ್ಯವನ್ನು ಕಂಡ ಜನ ಸಹಜವಾಗಿ ನನ್ನಿಂದಲೂ ಅದೇ ಮಟ್ಟದ ಪಾತ್ರಪೋಷಣೆಯನ್ನು ನಿರೀಕ್ಷಿಸುತ್ತಾರೆ. ಆದ್ದರಿಂದ ಆ ನಾಟಕದ ಗೊಡವೆಯೇ ಬೇಡ ಎಂದು ತೀರ್ಮಾನಿಸಿದೆ’ ಎಂದರು. ಕೊನೆಗೂ ಆ ನಾಟಕವನ್ನು ವರದಾಚಾರ್ಯರು ಆಡಲೇ ಇಲ್ಲ. ‘ಇಷ್ಟು ನಾಟಕಗಳನ್ನು ನೀವು ಆಡುತ್ತಿದ್ದೀರಷ್ಟೆ. ಅವುಗಳಲ್ಲಿ ಯಾವುದು ನಿಮಗೆ ತುಂಬ ಮೆಚ್ಚುಗೆಯಾದುದು?’ ಎಂದು ವರದಾಚಾರ್ಯರನ್ನು ಯಾರೋ ಒಮ್ಮೆ ಪ್ರಶ್ನಿಸಿದಾಗ ವರದಾಚಾರ್ಯರು ‘‘ನಾನು ನೂರಾರು ಸಲ ಶಾಕುಂತಲ ನಾಟಕದಲ್ಲಿ ದುಷ್ಯಂತನ ಪಾತ್ರ ವಹಿಸಿದ್ದೀನಿ. ಒಂದೊಂದು ಸಾರಿ ಆ ಪಾತ್ರವನ್ನು ಮಾಡುವಾಗಲೂ ಒಂದೊಂದು ನವ್ಯತೆ ನನ್ನ ಅನುಭವಕ್ಕೆ ಬರುತ್ತದೆ. ನನ್ನ ಆಯುಷ್ಯದಲ್ಲಿ ಒಮ್ಮೆಯಾದರೂ ಆ ಪಾತ್ರವನ್ನು ತೃಪ್ತಿಕರವಾಗಿ ಪೂರೈಸಬಲ್ಲೆನೇ ಎಂದು ಎನ್ನಿಸುತ್ತದೆ ನನಗೆ’’ ಎಂದು ಹೇಳಿದುದು ಈಗಲೂ ನನಗೆ ನೆನಪಿನಲ್ಲಿದೆ.

ಜ್ಯೋತಿಷ್ಯದಲ್ಲಿ ವರದಾಚಾರ್ಯರಿಗೆ ಬಹಳ ನಂಬಿಕೆ. ಕೂತರೆ ನಿಂತರೆ ಮೀನ ಮೇಷ ಎಣಿಸುತ್ತಿದ್ದರು. ಎರಡು ಸಲ ಹೆಚ್ಚಾಗಿ ತೇಗು ಬಂದರೂ ಜ್ಯೋತಿಷ್ಯರಿಗೆ ಹೇಳಿಕಳುಹಿಸುವಷ್ಟು ನಚ್ಚು.

ವರದಾಚಾರ್ಯರು ಉದಾರಿಗಳು. ಮದುವೆ ಮುಂಜಿ ಮುಂತಾದ ಕಾರಣ ಗಳನ್ನು ಮುಂದಿಟ್ಟುಕೊಂಡು ಬಂದ ನೂರಾರು ಮಂದಿಗೆ ಸಹಾಯಾರ್ಥ ನಾಟಕಗಳನ್ನಾಡಿ ಉಪಕಾರ ಮಾಡಿದ್ದರು.

ವರದಾಚಾರ್ಯರಲ್ಲಿ ಒಂದು ವಿಶೇಷವನ್ನು ಕಂಡು ಎಷ್ಟೋ ಬಾರಿ ನನ್ನಲ್ಲಿ ನಾನೇ ಅಚ್ಚರಿಪಟ್ಟಿದ್ದೇನೆ. ರಂಗಭೂಮಿಯ ಮೇಲೆ ಎಲ್ಲೂ ಇಲ್ಲದ ಹುಮ್ಮಸ್ಸು ಉತ್ಸಾಹ ಅವರನ್ನು ಆವರಿಸುತ್ತಿತ್ತು. ಕಂದ ವೃತ್ತಗಳನ್ನು ಹಾಡುವಾಗ್ಗೆ ತಾನೇ ತಾನಾಗಿ ಪ್ರವಹಿಸುತ್ತಿತ್ತು ಮನೋಧರ್ಮ. ಮಟ್ಟುಗಳನ್ನು ಹಾಡುವಾಗ ಬಗೆಬಗೆಯ ಸಂಗತಿಗಳು ತಾಳದ ಚಮತ್ಕಾರಗಳು ನಿರರ್ಗಳವಾಗಿ ಒದಗಿಬರುತ್ತಿದ್ದವು. ಮಾತು ಗಳನ್ನಾಡುವಾಗಲೂ ಅಷ್ಟೆ. ಶಾರದೆಯೇ ನಾಲಗೆಯ ಮೇಲೆ ಪ್ರತ್ಯಕ್ಷಳಾಗಿದ್ದಾಳೋ ಅನ್ನುವಂತಿರುತ್ತಿತ್ತು. ರಂಗಭೂಮಿಯನ್ನು ಅರೆಕ್ಷಣ ಬಿಟ್ಟು ಬಂದರೆ ಎಲ್ಲಿ ಮಾಯವಾಗುತ್ತಿದ್ದವೋ ಈ ಎಲ್ಲ ವರವಿಶೇಷಗಳು ಅನ್ನಿಸುತ್ತಿತ್ತು. ನಾಟಕದ ಮಾತುಗಳಲ್ಲದೇ ಬೇರೆ ಯಾವುದಾದರೂ ನಾಲ್ಕು ಮಾತುಗಳನ್ನು ಆಡಬೇಕಾದರೂ ಕೃಷ್ಣಮೂರ್ತಿರಾಯರನ್ನು ಮುಂದೆ ಬಿಡುತ್ತಿದ್ದರು. ಒಮ್ಮೆ ವೀಣೆ ಶೇಷಣ್ಣನವರ ಮನೆಗೆ ವರದಾಚಾರ್ಯರು ದಯಮಾಡಿಸಿದ್ದರು. ‘ಏನಾದರೂ ಸ್ವಲ್ಪ ಹಾಡಿ ವರದಾಚಾರ್ಯರೇ’ ಎಂದರು ಶೇಷಣ್ಣ. ಬಹಳ ಒತ್ತಾಯ ಮಾಡಿದ ಮೇಲೆ ವರದಾಚಾರ್ಯರು ಜುಂಜೋಟಿ ರಾಗವನ್ನು ಸ್ವಲ್ಪ ಹಾಡಿ ಒಂದು ಮಟ್ಟನ್ನು ಹಾಡಿದರು. ಅದೇ ರಾಗ ಅದೇ ಮಟ್ಟನ್ನು ಅವರು ನಾಟಕದಲ್ಲಿ ಹಾಡಿದ್ದನ್ನು ಕೇಳಿದ್ದ ನನಗೆ ಆಶ್ಚರ್ಯವಾಯಿತು. ರಂಗಸ್ಥಳದಲ್ಲಿ ಅಮೃತಧಾರೆಯಂತೆ ಹರಿಯುತ್ತಿದ್ದ ಅವರ ಗಾನಲಹರಿ ಅಂದು ಏಕೆ ಹಾಗೆ ಬತ್ತಿ ಬರಿದಾಗಿತ್ತೋ ಎಂಬ ಸಮಸ್ಯೆ ಇನ್ನೂ ಸಮಸ್ಯೆಯಾಗಿಯೇ ಉಳಿದಿದೆ ನನ್ನ ಪಾಲಿಗೆ !

ಒಮ್ಮೆ ಹೆಸರಾಂತ ಚಿತ್ರಗಾರ ರಾಜಾರವಿವರ್ಮ ವರದಾಚಾರ್ಯರ ನಾಟಕವನ್ನು ನೋಡಿ ಆನಂದಪರವಶನಾಗಿ ವರದಾಚಾರ್ಯರ ಕೈಕುಲುಕುತ್ತ ‘ಮೈ ಮರೆಸುವಂತಹ ಗಾಯನ ನಿಮ್ಮದು, ನಾಟಕಕ್ಕೆ ಬಹಳ ಹೆಚ್ಚು, ಸಂಗೀತ ಕಛೇರಿಗೆ ಸ್ವಲ್ಪ ಕಡಿಮೆ’ ಎಂದು ಹೇಳಿದ್ದು ಬಹಳ ಸರಿ, ಎಂದೆನಿಸಿತು ನನಗೆ.

        

ಹುಟ್ಟು ನಗೆಗಾರ ಕೃಷ್ಣಮೂರ್ತಿರಾಯರು. ವರದಾಚಾರ್ಯರು ಮತ್ತು ಕೃಷ್ಣಮೂರ್ತಿರಾಯರ ಜೋಡಿ ಎಂದರೆ ಒಂದು ಅಪೂರ್ವ ಸಂಗಮ. ಒಬ್ಬರನ್ನು ಬಿಟ್ಟು ಒಬ್ಬರು ಶೋಭಿಸುತ್ತಿರಲಿಲ್ಲ. ಒಂದೇ ನಾಟಕದ ಒಂದೇ ಪಾತ್ರವನ್ನು ಮಾಡುವಾಗ ಒಂದು ದಿವಸ ಹಾರಿಸಿದ ಹಾಸ್ಯ ಚಟಾಕಿಯನ್ನು ಇನ್ನೊಂದು ದಿವಸ ಬಳಸುತ್ತಿರಲಿಲ್ಲವಾದುದರಿಂದ ಅವರ ಹಾಸ್ಯಮಧು ಎಂದೂ ತಂಗಳಾದದ್ದೇ ಇಲ್ಲ. ‘ನಿನ್ನ ತುಟಿಯ ಮೇಲೆ ನಗು ಸರ್ವದಾ ಮೂಡಿರಲಿ, ಹಾಸ್ಯವೇ ನಿನ್ನ ಬಾಳ ಉಸಿರಾಗಲಿ’ ಎಂದು ಕಾಳಿಕಾದೇವಿ ತೆನಾಲಿರಾಮಕೃಷ್ಣನಿಗೆ ವರವಿತ್ತಿದ್ದಳೋ ಇಲ್ಲವೋ ನಮಗೆ ತಿಳಿಯದು. ಆದರೆ ಕೃಷ್ಣಮೂರ್ತಿರಾಯರಲ್ಲಿ ಆ ವರಪ್ರಸಾದವಿದ್ದುದನ್ನು ಮಾತ್ರ ಪ್ರತ್ಯಕ್ಷವಾಗಿ ನೋಡಿದ್ದೆ. ಅವರ ಸಹವಾಸದಲ್ಲಿ ಹೆಜ್ಜೆ ಹೆಜ್ಜೆಗೂ ವಿನೋದ, ನಗೆಯ ತುಂತುರು.

ಒಂದು ದಿನ ಸುಮಾರು ಬೆಳಗ್ಗೆ ಹತ್ತು ಗಂಟೆ ಸಮಯ. ಬೆಂಗಳೂರಿನ ಮಲ್ಲೇಶ್ವರಂ ರಸ್ತೆಯಲ್ಲಿ ಯಾವುದೋ ಕಾರ್ಯಗೌರವದ ನಿಮಿತ್ತ ಹೋಗುತ್ತಿದ್ದೆ. ಕಾಫಿ ತಿಂಡಿಯನ್ನು ಮುಗಿಸಿಕೊಂಡು ಸಂದಿಯ ಹೊಟೇಲೊಂದರಿಂದ ಹೊರಬಿದ್ದ ಕೃಷ್ಣಮೂರ್ತಿರಾಯರು ನನ್ನನ್ನು ಸೇರಿಕೊಂಡರು. ಇಬ್ಬರೂ ಸ್ವಲ್ಪ ದೂರ ಹೋಗುವಷ್ಟರಲ್ಲಿ ಎದುರುಗಡೆಯಿಂದ ಬರುತ್ತಿದ್ದ ನಮ್ಮಿಬ್ಬರಿಗೂ ಪರಿಚಿತರಾದ ಮಿತ್ರರೊಬ್ಬರ ಭೇಟಿಯಾಯಿತು. ‘ಏನು ಸ್ವಾಮಿ ! ಎಲ್ಲಿಂದ ಬರೋಣವಾಗುತ್ತಿದೆ ಸವಾರಿ?’ ಎಂದು ಕೃಷ್ಣಮೂರ್ತಿರಾಯರು ಆ ಮಿತ್ರರನ್ನು ಪ್ರಶ್ನಿಸಿದರು. ‘ಇಲ್ಲೆ, ಕರ್ಪೂರ ಶ್ರೀನಿವಾಸರಾಯರ ಬಳಿ ಸ್ವಲ್ಪ ಕೆಲಸವಿತ್ತು. ಹೋಗಿದ್ದೆ ಎಂದು ಉತ್ತರಿಸಿ ತಾವು?’ ಎಂದರು. ಒಡನೆಯೇ ನುಡಿದರು, ಕೃಷ್ಣ ಮೂರ್ತಿರಾಯರು: ‘ಇಲ್ಲೆ ಸ್ವಲ್ಪ ಸಾಂಬ್ರಾಣಿ ಹನುಮಂತರಾಯನನ್ನು ನೋಡಬೇಕಾಗಿದೆ’ ಎಂದು. ರಸ್ತೆಯಲ್ಲಿ ನಿಂತಿದ್ದೇವೆ ಎಂಬ ಪರಿವೆ ಸಹ ಇಲ್ಲದೆ ಆ ಮಿತ್ರರೂ ನಾನೂ ಗಟ್ಟಿಯಾಗಿ ನಕ್ಕೆವು !

 ಇನ್ನೊಂದು ಸಲ ನಾನೂ ಕೃಷ್ಣಮೂರ್ತಿರಾಯರೂ ನಂಜನಗೂಡು ಶ್ರೀಕಂಠಶಾಸ್ತ್ರಿಗಳ ಬಳಿಗೆ ಹೋಗುವ ಸಂದರ್ಭ ಬಂದಿತು. ಆಗಲೂ ಹೀಗೆಯೆ. ದಾರಿಯಲ್ಲಿ ನನಗೂ ಕೃಷ್ಣಮೂರ್ತಿರಾಯರಿಗೂ ಅನಿರೀಕ್ಷಿತ ಭೇಟಿ. ಕೃಷ್ಣಮೂರ್ತಿರಾಯರು ನನ್ನನ್ನೂ ಸಂಗಡ ಬರಬೇಕೆಂದು ಒತ್ತಾಯ ಮಾಡಿದರು. ಯಾವುದೋ ಒಂದು ನಾಟಕದ ಹಾಡು ಪೂರ್ತಿಯಾಗಿ ಬರೆದಿರಲಿಲ್ಲವಂತೆ ಶಾಸ್ತ್ರಿಗಳು. ಶಾಸ್ತ್ರಿಗಳನ್ನು ಕಂಡು ‘ರಚನೆ ಪೂರ್ತಿಯಾಗಿದ್ದರೆ ತೆಗೆದುಕೊಂಡು ಬನ್ನಿ ಎಂದು ಯಜಮಾನರ ಅಪ್ಪಣೆಯಾಗಿದೆ ಶಾಸ್ತ್ರಿಗಳೇ’ ಎಂದರು ರಾಯರು. ‘ಇನ್ನೂ ಇಲ್ಲ ಕೃಷ್ಣಮೂರ್ತಿರಾಯರೇ! ಏಕೋ ಏನೋ ಪ್ರಾಸಗಳೇ ಸರಿಬರುತ್ತಿಲ್ಲ’ ಎಂದರು ಶಾಸ್ತ್ರಿಗಳು. ‘ಪ್ರಾಸಕ್ಕೆ ಇಷ್ಟು ಪ್ರಯಾಸವೇ?’ ಎಂದು ಕೃಷ್ಣಮೂರ್ತಿರಾಯರು ಪ್ರಾಸಬದ್ಧವಾಗಿಯೇ ನಕ್ಕರು. ‘ರಾಯರೇ ! ಕವಿತ್ವವೆಂದರೆ ನೀವು ಹೇಳುವಷ್ಟು ಸುಲಭವಲ್ಲ. ಪ್ರಾಸ ಯತಿ ಗಣ ಎಲ್ಲ ಸಮರ್ಪಕವಾಗಿ ಒದಗಿಬರಬೇಕು’ ಎಂದು ಸ್ವಲ್ಪ ಬಿರುಸಾಗಿಯೇ ನುಡಿದರು ಶಾಸ್ತ್ರಿಗಳು. ‘ಅದೇನು ಮಹಾ, ಶಾಸ್ತ್ರಿಗಳೇ. ಈಗ ಬೇಕಾದರೆ ನಿಂತ ಹಾಗೆಯೇ ಒಂದು ಪದ್ಯ ಹೇಳಲೇ!’ ಎಂದು ರಾಯರು ಸವಾಲು ಹಾಕುತ್ತ ‘ಭರ್ಜರಿಯಿಂದಲಿ ಗರ್ಜನೆ ಮಾಳ್ಪುದು ದರ್ಜಿಯ ಮನೆಯಲಿ ಮಾರ್ಜಾಲ!’....ಎಂದು ಪ್ರಾಸಬದ್ಧವಾಗಿ ಹೇಳುತ್ತ ‘ಹೇಗಿದೆ ಶಾಸ್ತ್ರಿಗಳೇ?’ ಎಂದರು. ಮೂವರೂ ಬಿದ್ದುಬಿದ್ದು ನಕ್ಕೆವು !

ಊಟ ತಿಂಡಿ ಎಂದರೆ ಕೃಷ್ಣಮೂರ್ತಿರಾಯರಿಗೆ ಊರಗಲವಾಗುತ್ತಿತ್ತು ಬಾಯಿ. ತಿನ್ನುವುದರಲ್ಲಿ ಬಲು ಸುಖಿ. ಹೊತ್ತುಗೊತ್ತು ಎನ್ನುವುದೇ ಇಲ್ಲ. ಹಣ್ಣುಹಂಪಲು ಸದಾ ಇದ್ದೇ ಇರುತ್ತಿತ್ತು ಮನೆಯಲ್ಲಿ. ದ್ವಾದಶಿಯ ದಿನ ಬೆಳಗ್ಗೆ ಆರು ಗಂಟೆಗೆಲ್ಲ ಪಾರಣೆಯನ್ನು ಮುಗಿಸಿಕೊಂಡು ಏಳು ಗಂಟೆಯ ಹೊತ್ತಿಗೆ ದೋಸೆ ಪಲ್ಯವನ್ನು ತಿನ್ನಲು ಹೊಟೇಲಿನಲ್ಲಿ ಸಿದ್ಧವಾಗಿರುತ್ತಿದ್ದರು. ಮಧ್ಯರಾತ್ರಿ ಒಂದು ಗಂಟೆಯಲ್ಲಿ ಎದ್ದು ಕುಳಿತು, ಸ್ಟೌವ್ ಹೊತ್ತಿಸಿ, ಸಾಂಗೋಪಾಂಗವಾಗಿ ಸಣ್ಣ ರವೆ ಉಪ್ಪಿಟ್ಟನ್ನು ಮಾಡಿ ತಿಂದು ತೇಗಿ ಸಮಾಧಾನಚಿತ್ತದಿಂದ ಮಲಗುತ್ತಿದ್ದುದನ್ನು ನೋಡಿದ್ದೇನೆ !

‘ನಾನು ಪ್ರಾಣಬಿಡುವುದೂ ಒಂದೇ ಕೃಷ್ಣಮೂರ್ತಿಯನ್ನು ಬಿಟ್ಟಿರುವುದೂ ಒಂದೇ. ಹೀಗಿದ್ದರೂ ಸಹ ಈಗ ಅವರನ್ನು ಕಂಪೆನಿಯಿಂದ ತೆಗೆಯಲೇ ಬೇಕಾಗಿದೆ. ಇದೊಂದು ವಿಷಯದಲ್ಲಿ ಮಾತ್ರ ನನ್ನನ್ನು ಬಲವಂತಪಡಿಸಬೇಡಿ’ ಎಂದು ವರದಾಚಾರ್ಯರು ಶೇಷಣ್ಣ ಸುಬ್ಬಣ್ಣನವರ ಸಂಗಡ ನಾನು ಅವರ ಬಳಿಗೆ ಹೋದಾಗ ನುಡಿದುದು ಒಂದು ದಾರುಣ ಸನ್ನಿವೇಶದಲ್ಲಿ.

ನಾಲ್ವಡಿ ಕೃಷ್ಣರಾಜ ಒಡೆಯರು ಅರಮನೆ ಕಂಪೆನಿಯನ್ನು ಅರಮನೆಯ ಆಡಳಿತದಿಂದ ಪ್ರತ್ಯೇಕಿಸಿ ಒಂದು ಟ್ರಸ್ಟನ್ನು ಸ್ಥಾಪಿಸಿ ಕಂಪೆನಿಯನ್ನು ಆ ಟ್ರಸ್ಟಿಗೆ ಒಪ್ಪಿಸಿದರು. ಈ ಟ್ರಸ್ಟಿನ ವ್ಯವಸ್ಥಾಪಕರಿಗೂ ಸುಬ್ಬಣ್ಣ ರಾಚಪ್ಪನವರಿಗೂ ನಡುವೆ ಸ್ವಲ್ಪ ಭಿನ್ನಾಭಿಪ್ರಾಯಗಳು ತಲೆದೋರಿ ಸುಬ್ಬಣ್ಣ ಮತ್ತು ರಾಚಪ್ಪ ಕಂಪೆನಿಯಿಂದ ಹೊರಬಿದ್ದರು. ಸರದಾರ್ ಗೋಪಾಲರಾಜೇ ಅರಸನವರಿಗೆ ಇವರಿಬ್ಬರಲ್ಲಿ ತುಂಬ ವಿಶ್ವಾಸ ಸ್ನೇಹ. ಇವರಿಗೋಸ್ಕರವಾಗಿ ಬೇರೆ ಒಂದು ಕಂಪೆನಿಯನ್ನಾದರೂ ಕಟ್ಟಲು ಸಿದ್ಧರಾಗಿದ್ದರು. ಈ ಸಂದರ್ಭದಲ್ಲಿ ಯಾವುದೋ ಒಂದು ಧರ್ಮ ಕೆಲಸಕ್ಕಾಗಿ ಮುಂದಾಳುಗಳಾಗಿ ಹೊರಟಿದ್ದ ಸಾಧುಗಳೊಬ್ಬರು ಗೋಪಾಲರಾಜೇ ಅರಸನವರನ್ನು ಕಂಡು ಸಹಾಯ ಮಾಡಬೇಕೆಂದು ಕೇಳಿಕೊಂಡಿದ್ದರು. ಸುಬ್ಬಣ್ಣ ಮತ್ತು ರಾಚಪ್ಪನವರ ಜತೆಗೆ ವರದಾಚಾರ್ಯರ ಕಂಪೆನಿಯಿಂದ ಕೃಷ್ಣಮೂರ್ತಿರಾಯರು ಮೊದಲಾದ ನಾಲ್ಕೈದು ಮಂದಿ ನಟರನ್ನು ಕರೆದುಕೊಂಡು ಕೆಲವು ನಾಟಕಗಳಿಂದ ಸ್ವಾರಸ್ಯವಾದ ಭಾಗಗಳನ್ನು ಆರಿಸಿಕೊಂಡು ಮದ್ರಾಸಿನಲ್ಲಿ ಪ್ರದರ್ಶಿಸಿದರೆ ತುಂಬ ಹಣವನ್ನು ಸಂಪಾದಿಸಬಹುದು, ಸಾಧುಗಳಿಗೂ ಸಹಾಯ ಮಾಡಬಹುದು ಎಂದು ಅರಸನವರು ಯೋಚಿಸಿದರು. ಮಿತ್ರರಾದ ಮುನಿವೆಂಕಟಪ್ಪನವರ ಮುಂದೆ ತಮ್ಮ ಸಲಹೆ ಯನ್ನಿತ್ತರು. ‘ಅತ್ಯುತ್ತಮವಾದ ಆಲೋಚನೆ’ ಎಂದು ಬೆಂಬಲವಿತ್ತರು ಮುನಿ ವೆಂಕಟಪ್ಪನವರು. ಸರಿ ಗೋಪಾಲರಾಯರೇ ಅರಸಿನವರೂ ಮುನಿವೆಂಕಟಪ್ಪನವರೂ ವರದಾಚಾರ್ಯರ ಬಳಿಗೆ ಹೋಗಿ ತಮ್ಮ ಉದ್ದೇಶವನ್ನು ವಿವರಿಸಿ ಕಂಪೆನಿಯ ನಾಲ್ಕೈದು ಮಂದಿ ನಟರನ್ನೂ ಅವರಿಗೆ ಬೇಕಾದ ಬಟ್ಟೆ ಬರೆ ಮುಂತಾದ ಸಲಕರಣೆಗಳನ್ನೂ ಉಪಯೋಗಿಸಿಕೊಳ್ಳಲು ಅನುಮತಿ ಕೊಡಬೇಕೆಂದು ಪ್ರಾರ್ಥಿಸಿದರು. ಅಗತ್ಯವಾಗಿ ಆಗಬಹುದೆಂದು ವರದಾಚಾರ್ಯರು ಒಪ್ಪಿಕೊಂಡರು. ಕೃಷ್ಣಮೂರ್ತಿರಾಯರು, ಶ್ಯಾಮರಾಯರು ಮುಂತಾದ ನಾಲ್ಕೈದು ಮಂದಿ ನಟರು ಯಜಮಾನರ ಅಪ್ಪಣೆ ಪಡೆದು ಮದ್ರಾಸಿಗೆ ತೆರಳಿದರು. ‘ಮದ್ರಾಸಿಗೆ ಹೋಗಲು ನಮ್ಮನ್ನು ಚುನಾಯಿಸಿಕೊಳ್ಳಲಿಲ್ಲವಲ್ಲ’ ಎಂದು ಉಳಿದವರಿಗೆ ಒಳಗೊಳಗೇ ಅಸಮಾಧಾನ. ಅವರಲ್ಲಿ ಮುಖ್ಯರಾದ ಒಬ್ಬಿಬ್ಬರು ವರದಾಚಾರ್ಯರ ಮನಸ್ಸಿಗೆ ಹುಳಿ ಹಿಂಡಲು ಹವಣಿಸಿದರು.

‘ವರದಾಚಾರ್ಯರು ತಮ್ಮ ಕಂಪೆನಿಯಲ್ಲಿ ಇದುವರೆಗೂ ಬ್ರಾಹ್ಮಣರಲ್ಲದೆ ಬೇರೆ ಯಾವ ಜಾತಿಯ ನಟರಿಗೂ ಅವಕಾಶ ಕೊಡದಿದ್ದವರು ಈಗ ಕಂಪೆನಿಯ ಕೆಲವು ಆಟಗಾರರಿಗೆ ಬ್ರಾಹ್ಮಣೇತರರೊಡನೆ ಬೆರೆತು ಆಡಲು ಅವಕಾಶ ಕೊಟ್ಟಿದ್ದಾರೆ. ಇದು ಪರಮ ಅನ್ಯಾಯ’ ಎಂದು ಊರಲ್ಲೆಲ್ಲ ಸಾರಿ ವರದಾಚಾರ್ಯರ ಬಂಧುಮಿತ್ರರ ಮೂಲಕ ಅವರ ನಿರ್ಧಾರವನ್ನು ಬದಲಾಯಿಸಲು ವಿಶ್ವಪ್ರಯತ್ನ ನಡೆಸಿದರು. ಮೊದಮೊದಲು ವರದಾಚಾರ್ಯರು ಯಾರ ಮಾತಿಗೂ ಕಿವಿಗೊ ಡಲಿಲ್ಲ. ಆದರೆ ಬರುಬರುತ್ತ ಸುತ್ತಮುತ್ತಲಿದ್ದವರ ಒತ್ತಾಯ ಬಲವಾಯಿತು. ವರದಾಚಾರ್ಯರ ಮನಸ್ಸು ಸಡಿಲವಾಯಿತು. ‘ನಾಟಕದಲ್ಲಿ ಪಾರ್ಟಿ ಮಾಡ ಕೂಡದು. ಒಡನೆಯೇ ಮೈಸೂರಿಗೆ ಹಿಂದಿರುಗತಕ್ಕದ್ದು’ ಎಂದು ಮದ್ರಾಸಿಗೆ ಟೆಲಿಗ್ರಾಮನ್ನು ಕಳುಹಿಸಿಯೇಬಿಟ್ಟರು !

ವರದಾಚಾರ್ಯರು ಇಷ್ಟಾದರೂ ಹಿಡಿದ ಪಟ್ಟನ್ನು ಬಿಡಲೇ ಇಲ್ಲ. ಆಡಿದ ಮಾತಿನಂತೆ ಗೋಪಾಲರಾಜೇ ಅರಸಿನವರೂ ಮುನಿವೆಂಕಟಪ್ಪನವರೂ ಹೊಸ ನಾಟಕ ಸಂಸ್ಥೆಯನ್ನು ಕಟ್ಟುವ ಉದ್ಯಮದಲ್ಲಿ ತೊಡಗಿದರು. ‘ಶ್ರೀ ಚಾಮುಂಡೇಶ್ವರೀ ಕರ್ನಾಟಕ ನಾಟಕ ಸಭೆ’ ಎಂಬ ಲಿಮಿಟೆಡ್ ಕಂಪೆನಿಯ ರಚನೆಯಾಯಿತು.

ವರದಾಚಾರ್ಯರ ಕಂಪೆನಿಯ ಕಡೆಯ ದಿನಗಳು ಈ ವೇಳೆಗಾಗಲೇ ಕಣ್ಣಿಗೆ ಕಾಣಿಸತೊಡಗಿದವು. ಶಾರದಾ ಥಿಯೇಟರ್ಸ್‌ ಕಂಪೆನಿಯೆಂಬ ಇನ್ನೊಂದು ಲಿಮಿಟೆಡ್ ಸಂಸ್ಥೆಯನ್ನು ಪ್ರಾರಂಭಿಸಿ ಅಳಿದುಳಿದಿದ್ದ ವರದಾಚಾರ್ಯರ ಕಂಪೆನಿಯನ್ನು ಅದರಲ್ಲಿ ಸೇರಿಸಿಕೊಂಡರು. ಈ ಹೊಸ ಲಿಮಿಟೆಡ್ ಕಂಪೆನಿ ಆಶ್ರಯದಲ್ಲಿ ಮದ್ರಾಸಿನಲ್ಲಿ ಕೆಲವು ನಾಟಕಗಳಾದುವು. ಕಂಪೆನಿಗೆ ಬಹಳ ನಷ್ಟವಾಗಿ ಹುಟ್ಟಿದ ಕೆಲವೇ ದಿನಗಳಲ್ಲಿ ಶಾರದಾ ಥಿಯೇಟರ್ಸ್‌ ಕಂಪೆನಿಯೂ ಅಳಿದುಹೋಯಿತು. ಇದಾದ ತರುಣದಲ್ಲೇ ಶ್ರೇಷ್ಠ ಕಲಾವಿದ ವರದಾಚಾರ್ಯರು ಕಣ್ಮರೆಯಾದರು.

Writer - ಕೆ. ವಾಸುದೇವಾಚಾರ್ಯ

contributor

Editor - ಕೆ. ವಾಸುದೇವಾಚಾರ್ಯ

contributor

Similar News