ಜನಪ್ರಜ್ಞೆಯ ಹಿತ ಚಿಂತಕ "ಹಿ.ಶಿ.ರಾಮಚಂದ್ರೇ ಗೌಡ"

Update: 2017-10-07 11:41 GMT

ಡಾ. ಹಿ.ಶಿ.ರಾಮಚಂದ್ರೇಗೌಡರ ಬದುಕು ಮತ್ತು ಬರಹಗಳ ಯಾವುದೇ ಮಗ್ಗುಲನ್ನು ನೋಡಿದರೂ ಅವು ಸಾಮಾಜಿಕ ಚಳವಳಿಗಳ ಜೊತೆಗೆ ಬೆಸೆದುಕೊಂಡಿವೆ. ವಿಶ್ವವಿದ್ಯಾನಿಲಯದಲ್ಲಿ ಒಬ್ಬ ಅಧ್ಯಾಪಕ, ಜಾನಪದ ವಿದ್ವಾಂಸ, ವೈಚಾರಿಕ ಚಿಂತಕ ಹೀಗೆ ಎಲ್ಲಿಯೇ ನಿಂತು ಅವರನ್ನು ವಿವರಿಸಲು ತೊಡಗಿದರೆ ಸಾಮಾಜಿಕ ಚಳವಳಿಗಳಿಂದ ಬಿಡಿಸಿ ಅವರ ವ್ಯಕ್ತಿತ್ವವನ್ನು ಕಟ್ಟಿಕೊಡಲು ಸಾಧ್ಯವಿಲ್ಲ. ಕಟು ಪ್ರಜಾಪ್ರಭುತ್ವವಾದಿಯಾದ ರಾಮಚಂದ್ರೇಗೌಡರು ಅನ್ಯಾಯಕ್ಕೊಳಗಾದ ಜನರ ತುಡಿತವಾಗಿ ಬದುಕಿದವರು. ಇವರ ಬಗೆಗೆ ಬರೆಯುವುದೆಂದರೆ ನಮ್ಮ ಸಂದರ್ಭದ ಸಾಹಿತ್ಯ, ಸಂಸ್ಕೃತಿ, ಸಾಮಾಜಿಕ ಹೋರಾಟಗಳಲ್ಲಿ ಪ್ರಾಮಾಣಿಕತೆ ಹಾಗೂ ಬದ್ಧತೆಗಳನ್ನು ಮರುಸ್ಥಾಪಿಸುವ ಯತ್ನ ಮತ್ತು ಸಮೂಹ ಪ್ರಜ್ಞೆಯನ್ನು ವಿಸ್ತರಿಸುವ ತಿಳಿವು ಎಂದೇ ಅರ್ಥ. ತಮ್ಮ ಬದುಕಿನ ಯಾವ ಹಂತದಲ್ಲಿಯೂ ರಾಜಿಗೊಳಗಾಗದ, ಇವರು ತಮ್ಮ ಅಭಿಪ್ರಾಯ ತುಂಬಾ ಒರಟೆನಿಸಿದರೂ ಅದನ್ನು ಮುಲಾಜಿಲ್ಲದೆ ದಾಖಲಿಸುವ ಜಾಯಮಾನದವರು ಹಾಗೂ ಸದಾ ಜನಪ್ರಜ್ಞೆಯ ನೆಲೆಯಲ್ಲಿ ಚಿಂತಿಸುವವರು. ಡಾ. ಹಿ.ಶಿ.ರಾ ಅವರ ಈ ಬಗೆಯ ವ್ಯಕ್ತಿತ್ವದ ಬೆಳಕಲ್ಲಿ ನಮ್ಮ ಸಂದರ್ಭದ ಸಾಹಿತ್ಯ ಅಭಿವ್ಯಕ್ತಿ ಹಾಗೂ ಸಾಮಾಜಿಕ ಚಳವಳಿಗಳ ವಿನ್ಯಾಸಗಳ ಕಡೆಗೊಮ್ಮೆ ನೋಡುವುದು ಅಗತ್ಯವೆನಿಸುತ್ತದೆ. ಯಾಕೆಂದರೆ, ಇವರನ್ನು ನೆಪವಾಗಿಟ್ಟುಕೊಂಡು ಸಾಹಿತ್ಯ ಮತ್ತು ಸಾಮಾಜಿಕ ಚಳವಳಿಗಳಲ್ಲಿ ಸಮಾನವಾಗಿರುವ ಅವರ ಒಡನಾಟದ ವಿಶಿಷ್ಟ ಮಾದರಿಯೊಂದು ನಮಗೆ ಕಾಣಿಸುತ್ತಾ ಹೋಗುತ್ತದೆ. ಇಂತಹ ವ್ಯಕ್ತಿತ್ವ ಅವರ ಬದುಕಿನ ಕ್ರಮ ಮತ್ತು ಬರಹಗಳಲ್ಲಿದೆ. ವರ್ತಮಾನದ ಸಾಹಿತ್ಯ ಪರಿಸರ ನೋಡಲು ತುಂಬಾ ಆಕರ್ಷಕವಾಗಿದೆ.

ಎಲ್ಲ ವರ್ಗಗಳಿಂದಲೂ ಸಾಹಿತ್ಯವನ್ನು ಅಭಿವ್ಯಕ್ತಿಯಾಗಿಸಿಕೊಂಡು ಬರಹದಲ್ಲಿ ತೊಡಗಿರುವವರು ಇಂದು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಇದು ಈ ಕಾಲದ ಭರವಸೆಯನ್ನು ಮೂಡಿಸುವಂಥದ್ದು. ಸಾಮಾಜಿಕ ಜಾಲತಾಣಗಳು ಸಾಹಿತ್ಯ ಕೃಷಿಗೆ ವೇದಿಕೆಗಳಾಗಿ ಪರಿಣಮಿಸಿರುವುದು ಏಕಕಾಲದಲ್ಲಿ ಅವಕಾಶವೂ ಅಪಾಯವೂ ಆಗಿದೆ. ಸಾಹಿತ್ಯವನ್ನು ಒಳಗೊಂಡು, ಯಾವುದೇ ಇನ್ನಿತರ ಕಲೆಗಳಿರಬಹುದು, ಒಟ್ಟಾರೆಯಾಗಿ ಇವುಗಳಿಗೆ ಬದುಕು ಮತ್ತು ಸಾಮಾಜಿಕ ಪ್ರಸ್ತುತತೆಯನ್ನು ಕುರಿತು ಮಾತನಾಡುವಾಗ ಅದಕ್ಕೊಂದು ಒಳಗಣ್ಣಿರಬೇಕಾಗುತ್ತದೆ. ಆಗ ಮಾತ್ರ ಸಾಮುದಾಯಿಕ ಪ್ರಜ್ಞೆಯು ಅದರೊಳಗೆ ಮೂಡಲು ಸಾಧ್ಯ. ಆದರೆ ಇಂದಿನ ಸಾಹಿತ್ಯಾಭಿವ್ಯಕ್ತಿಯ ಸ್ವರೂಪ ಮಾತ್ರ ವೈಯಕ್ತಿಕವಾದ ನೆಲೆಯಲ್ಲೇ ನಿಂತುಬಿಟ್ಟಂತೆ ತೋರುತ್ತದೆ. ನಿರೂಪಣೆಗಳಲ್ಲಿ ಸಾಮಾಜಿಕ ಹೊಣೆಗಾರಿಕೆಯನ್ನು ಪ್ರಕಟಿಸುವಂತೆ ಕಾಣುವ ನಮ್ಮ ಕಾಲದ ಸಾಹಿತ್ಯ ಅದರ ಒಳದನಿಯಲ್ಲಿ ವ್ಯಕ್ತಿಗತವಾದ ನಿವೇದನೆಗಳ ಕಾಯಿಲೆಗೆ ಬಿದ್ದಿದೆ. ಹಾಗಾಗಿಯೇ ಸಾಂಸ್ಕೃತಿಕ ವಾಗ್ವಾದಗಳನ್ನು ಬೆಳೆಸುವ ಬರಹಗಳಿಗಿಂತಲೂ ವಿವಾದಗಳನ್ನು ಸೃಷ್ಟಿಸುವ ಬರಹಗಳು ಇಂದು ಹೆಚ್ಚು. ಇದು ಕನ್ನಡ ಸಾಹಿತ್ಯ ಪರಂಪರೆಯ ವಿರುದ್ಧದ ಯುದ್ಧ. ಜೀವವಿರೋಧಿಯಾದ ಸಾಮಾಜಿಕ ವ್ಯವಸ್ಥೆಯ ಜೊತೆಗೆ ನಿರಂತರ ಸಂಘರ್ಷವನ್ನು ನಡೆಸುತ್ತಾ ಜೀವಪರತೆಯನ್ನು ಪ್ರತಿಪಾದಿಸುತ್ತಾ ಬಂದಿರುವ ಕನ್ನಡದ ಸಾಹಿತ್ಯ ಅಭಿವ್ಯಕ್ತಿ ಪರಂಪರೆಯ ಈ ಧ್ವನಿಯನ್ನು ನಾವಿಂದು ಅಪ್ರಸ್ತುತಗೊಳಿಸುತ್ತಿದ್ದೇವೆ.

ಇನ್ನು ಸಾಮಾಜಿಕ ಹೋರಾಟಗಳು ತುಂಬಾ ಭಿನ್ನವಾಗಿಯೇನೂ ಇಲ್ಲ. ಇಲ್ಲಿಯೂ ಹೊಸ ಭರವಸೆಗಳಿವೆ. ಆದರೆ ಅವುಗಳನ್ನು ವಾಸ್ತವಾತೀತ ನೆಲೆಯಲ್ಲಿ ಆಕರ್ಷಣೀಯಗೊಳಿಸುತ್ತಾ ಆತ್ಮರತಿಗೆ ನೂಕಲಾಗಿದೆ. ನಾವು ಇಂದು ಇಡುವ ಹೆಜ್ಜೆ ಎತ್ತಕಡೆಗೆ ಕೊಂಡೊಯ್ಯಬಹುದು ಎಂಬ ದೂರದೃಷ್ಟಿ ಕುರುಡಾಗಿದೆ. ಈ ಸನ್ನಿವೇಶಗಳನ್ನು ರೂಪಕಾತ್ಮಕವಾಗಿ ಹೀಗೆ ವಿವರಿಸಬಹುದು ಹಾಗೂ ಹಿರಿಯರೊಬ್ಬರು ಒಂದು ರೂಪಕಾತ್ಮಕ ಪ್ರಮೇಯವೊಂದನ್ನು ಜನಪ್ರಿಯಗೊಳಿಸುತ್ತಿದ್ದಾರೆ. ಅದೇನೆಂದರೆ, ‘ಇದು ರಿಲೇ ಆಟವಿದ್ದಂತೆ; ನಾವು ಬ್ಯಾಟನ್ ಹಿಡಿದು ಇಷ್ಟು ದೂರ ಓಡಿ ನಿಮಗೆ ಕೊಡುತ್ತಿದ್ದೇವೆ. ನೀವು ಅದನ್ನು ಹಿಡಿದು ಇನ್ನಷ್ಟು ದೂರ ಓಡಿ ನಿಮ್ಮ ಮುಂದಿನವರಿಗೆ ನೀಡುತ್ತೀರಿ. ನಾಲ್ಕು ಹೆಜ್ಜೆ ಹಾಕುವುದು ಕೂಡ ಇಲ್ಲಿ ಮುಖ್ಯವೇ’ ಎಂಬ ಪ್ರಮೇಯದ ರೂಪದಲ್ಲಿ ನಮ್ಮ ಹಿರಿಯರು ವಿವರಿಸುತ್ತಿದ್ದಾರೆ. ಇದು ಎಷ್ಟು ಅಸೂಕ್ಷ್ಮವಾದದ್ದೆಂದರೆ ನಮ್ಮ ಹೋರಾಟಗಳನ್ನು ಸ್ಪರ್ಧಾ ಮನೋಭಾವದೊಂದಿಗೆ ಹೋಲಿಸುವುದೇ ಶೋಚನೀಯವಾದದ್ದು. ಸಾಮಾಜಿಕ ಚಳವಳಿಗಳನ್ನು ರೂಪಿಸುವಾಗ ಬ್ಯಾಟನ್ ಹಿಡಿದು ಓಡುವುದಷ್ಟೇ ಮುಖ್ಯವಲ್ಲ; ಎಷ್ಟು ವೇಗವಾಗಿ ಓಡಿದೆ ಎಂಬುದೂ ಅಲ್ಲ; ಅಷ್ಟಕ್ಕೂ ಇದು ಓಟವಲ್ಲ. ಇದೊಂದು ನಡಿಗೆ. ಓಟದಲ್ಲಿ ನಮ್ಮ ಕಣ್ಣಿಗೆ ಏನೇನೂ ಗೋಚರಿಸದು. ನಮ್ಮ ಇಂದಿನ ಸಾಮಾಜಿಕ ಚಳವಳಿಗಳೂ ಈಗ ಈ ಓಟದ ಮಾದರಿಯನ್ನೇ ಅನುಸರಿಸುತ್ತಿವೆ ಎನಿಸುತ್ತಿದೆ. ಹಿ.ಶಿ.ರಾಮಚಂದ್ರೇಗೌಡರ ಮಾದರಿ ನಮಗೆ ಮುಖ್ಯವೆನಿಸುವುದು ಇಲ್ಲಿಯೇ. ಅವರು ನಿರಂತರ ನಡಿಗೆಯ ಮಾದರಿಯವರು. ಹೀಗೆ ನಡೆವ ಅವರ ನಡೆಯ ಆಳ ಅಗಲಗಳ ವಿಸ್ತಾರ ದೊಡ್ಡದು. ಅದು ಜನರ ವಿವೇಕವನ್ನು ಎದೆಯೊಳಗಿಟ್ಟುಕೊಂಡು ಮುನ್ನಡೆಯುವ ಮಾದರಿ.

ತಾವೊಬ್ಬ ಸಮಾಜವಾದಿ ಚಿಂತನೆಯ ಬರಹಗಾರ ಎಂದು ಹೇಳಿಕೊಳ್ಳುವ ಹಿ.ಶಿ.ರಾ ಅವರು ಅಷ್ಟಕ್ಕೆ ಸೀಮಿತವಾದವರಲ್ಲ. ಮಾರ್ಕ್ಸ್, ಅಂಬೇಡ್ಕರ್, ಗಾಂಧಿ, ಬುದ್ಧ, ಬಸವ ಹಾಗೂ ಕುವೆಂಪು ಚಿಂತನೆಗಳ ಬೆಳಕಲ್ಲಿ ನಾನು ಮೂಡಿದವನು; ಒಂದು ವ್ಯಕ್ತಿತ್ವವಾಗಿ ರೂಪಿಸಿಕೊಂಡವನು ಎಂಬುದನ್ನು ಅವರೇ ಹೇಳುತ್ತಾರೆ. ಅವರ ಚಿಂತನೆಯ ವಿಸ್ತಾರ ಎಷ್ಟು ವ್ಯಾಪಕವಾದದ್ದು ಎಂಬುದನ್ನು ತಿಳಿಯಬೇಕಾದರೆ ಬಂಜಗೆರೆ ಜಯಪ್ರಕಾಶರು ಹಿ.ಶಿ.ರಾ ಅವರ ಅಭಿನಂದನಾ ಗ್ರಂಥವಾದ ವಜ್ರಮುಖಿಯಲ್ಲಿ ಆಡಿರುವ ಮಾತುಗಳನ್ನು ನೆನೆಯಬೇಕು. ಹಿ.ಶಿ.ರಾ ‘‘ಮಾರ್ಕ್ಸ್ ವಾದಿ ಸಿದ್ಧಾಂತವನ್ನು ಮೆಚ್ಚಿಕೊಂಡು ಓಡಾಡುತ್ತಿದ್ದ ಯುವಕರ ಜೊತೆ ಅದಕ್ಕೆ ಸಿಗಬೇಕಾದ ದೇಸೀ ತಳಹದಿಯ ಬಗ್ಗೆ ವಾದಿಸುತ್ತಾ; ಗ್ರಾಮಮುಖಿಯಾಗಿ ಮಾತ್ರ ಮಾತನಾಡುತ್ತಿದ್ದ ಲೋಹಿಯಾವಾದಿ ಹುಡುಗರ ಜೊತೆ ಭಿನ್ನ ಭಿನ್ನ ವರ್ಗಗಳ ಹಿತಾಸಕ್ತಿಯ ಪ್ರಶ್ನೆಯನ್ನು ಗಮನದಲ್ಲಿಟ್ಟುಕೊಳ್ಳಬೇಕಾದ ‘ವರ್ಗ ಜಾಗೃತಿ’ಯ ಬಗ್ಗೆ ವಾದಿಸುತ್ತಾ; ಜಾತಿ ಪ್ರಶ್ನೆಯನ್ನು ಅತ್ಯಂತ ಪ್ರಧಾನ ಪ್ರಶ್ನೆಯಾಗಿ ವಾದಿಸುತ್ತಿದ್ದ ಅಂಬೇಡ್ಕರ್‌ವಾದಿಗಳ ಜೊತೆ ಇಡೀ ಗ್ರಾಮ ಸಮುದಾಯವೇ ಹೊಸ ಆರ್ಥಿಕ ಸಂರಚನೆಯಲ್ಲಿ ‘ಸೇವೆ ಸಲ್ಲಿಸಬೇಕಾದ’ ಜೀತಗಾರರಂತಾಗಿರುವುದನ್ನು ನೆನಪಿಸುತ್ತಾ; ಜಾತಿ ಸೂಕ್ಷ್ಮಗಳನ್ನು ಗಮನಿಸದೆ, ಗ್ರಾಮೀಣ ಕುಲ ಕಸುಬುಗಳ ಪುನರುಜ್ಜೀವನದ ಬಗ್ಗೆ ಚಿಂತಿಸುತ್ತಿದ್ದ ಗಾಂಧಿವಾದಿಗಳ ಜೊತೆ, ಕಸುಬುಗಳು ಜಾತಿಗಳ ಮೇಲೆ ಹೇರಲಾಗಿರುವ ಚಾಕರಿಗಳಂತಾಗಿರುವುದನ್ನು ಚರ್ಚೆಗಿಡುತ್ತಾ’’ ಬಂದಿರುವ ಈ ಕಾಲಕ್ಕೆ ಬೇಕಾಗಿರುವ ವ್ಯಕ್ತಿತ್ವವನ್ನು ಪರಿಚಯಿಸುತ್ತಾರೆ. ಈ ಪ್ರಜ್ಞೆ ಹಿ.ಶಿ.ರಾ ಅವರಿಗೆ ಸಾಧ್ಯವಾದದ್ದು ಹೇಗೆ ಎಂದು ನೋಡಿದರೆ ಅವರ ಕಡುಬಡತನದ ಬಾಲ್ಯ ಹಾಗೂ ಶಿಕ್ಷಣ ಪಡೆಯುವಾಗ ಅವರು ಅನುಭವಿಸಿದ ಅವಮಾನಗಳ ಅರಿವು ಅವರನ್ನು ಗಾಢವಾಗಿ ಕಾಡುತ್ತಾ ಸಮಾಜಮುಖಿಯಾಗಲು ಪ್ರಭಾವಿಸುತ್ತಾ ಬಂದಿರುವುದನ್ನು ಮತ್ತೆ ಮತ್ತೆ ಅವರು ನೆನಪು ಮಾಡಿಕೊಳ್ಳುತ್ತಾರೆ.

1947ರ ನವೆಂಬರ್ 15ರಂದು ಹಾಸನ ಜಿಲ್ಲೆಯ ರಂಗನಾಥಪುರದಲ್ಲಿ ಬಡ ಕುಟುಂಬದಲ್ಲಿ ಹುಟ್ಟಿದ ಹಿ.ಶಿ.ರಾಮಚಂದ್ರೇಗೌಡರು ಬೆಳೆದದ್ದು ತಾಯಿಯ ನೆರಳಲ್ಲಿ. ಕಂಡವರ ಮನೆಯಲ್ಲಿ ಕೂಲಿ ಮಾಡಿ ಇಲ್ಲವೇ ಸಂತೆಯಲ್ಲಿ ಚಿಲ್ಲರೆ ವ್ಯಾಪಾರ ಮಾಡಿ ಸಾಕಿದ ತಾಯಿಯಿಲ್ಲದೆ ‘ನಾನು ಬರಿಸೊನ್ನೆ’ ಎನ್ನುತ್ತಲೇ ಆ ತಾಯ್ತನವನ್ನು ತಮ್ಮ ವ್ಯಕ್ತಿತ್ವವಾಗಿಸಿಕೊಂಡವರು ಹಿ.ಶಿ.ರಾ ಅವರು. ಏಳನೆ ಕ್ಲಾಸು ಪಾಸಾದ ಮೇಲೆ ಓದುವ ಮಾರ್ಗವಿಲ್ಲದಾಗ ಅವರ ಪ್ರೀತಿಯ ಅವ್ವ ಕಣ್ಣಲ್ಲಿ ನೀರು ತುಂಬಿಕೊಂಡು ‘ನಾಯಿ ಹೆತ್ತು ನಾಡಿನ ಮೇಲೆ ಎಸೆದಂತೆ ಮಾಡಿದೆ ಹಣೆಬರಹ. ಅನಾದ್ರಿಗೆ ಆಕಾಶವೇ ಕಾವಲು. ನಿನ್ನ ದಾರಿ ನೋಡಿಕೊ ಮಗ, ಎಲ್ಲಿಗಾದರೂ ಹೋಗು ದೇವರು ದಾರಿ ತೋರಿಸುತ್ತಾನೆ. ಬಡವಿಯ ಮಗ ಅಂತ ಹೇಳು. ದೈವದ ನ್ಯಾಯ ಇದ್ದರೆ ಯಶವಂತನಾಗುತ್ತೀಯೆ’ ಎಂದ ಅವ್ವನ ಮಾತು ಕೇಳಿ ಅಲೆಮಾರಿಯಾಗಿ ಅಲೆದು ಅವಮಾನಗಳನ್ನು ಅನುಭವಿಸಿ ಶಿಕ್ಷಣ ಪಡೆದರು. ಆನಂತರ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಕನ್ನಡ ಅಧ್ಯಾಪಕರಾಗಿ, ಜಾನಪದ ವಿದ್ವಾಂಸರೆನಿಸಿಕೊಂಡು ಅಷ್ಟಕ್ಕೆ ತೃಪ್ತಿಪಡದೆ ಚಳವಳಿಗಳೊಂದಿಗಿನ ನಡಿಗೆಯನ್ನೇ ತಮ್ಮ ಬದುಕಾಗಿಸಿಕೊಂಡರು.

 ‘ನೀವು ಹಳ್ಳಿಯಿಂದ ಬಂದಿರಿ ಎಂದು ಬೀಗಿದರೆ ಸಾಲದು. ಮುಗ್ಧ ಹಳ್ಳಿಯ ಹಿರಿಯರು ನಿಮಗೆ ವಿದ್ಯಾಭ್ಯಾಸ ಕೊಡಿಸಿದ್ದಾರೆ, ಅವರ ಋಣವನ್ನು ನೀವು ತೀರಿಸಬೇಕು. ನಿಮಗೆ ಹಣ ಕೊಡಲು ಆಗುವುದಿಲ್ಲ, ಅವರಿಗೊಂದು ಮನಸ್ಸು ಕೊಡಿ. ನಿಮಗೆ ವಿದ್ಯೆ ಕಲಿಸಿ ಅವರು ನಿಮಗೆ ಮನಸ್ಸು ಕೊಟ್ಟಿದ್ದಾರೆ. ನೀವು ಅವರಿಗೆ ಬಿಡುಗಡೆಯ ಚಿಂತನೆಯನ್ನು ನೀಡಿ’ ಎಂದು ಹೇಳಿದ ಕುವೆಂಪು ಅವರ ಮಾತುಗಳಿಂದ ಪ್ರಭಾವಿತರಾಗಿ ರೈತ ಚಳವಳಿಗೆ ಬಂದ ಹಿ.ಶಿ.ರಾ ತಮ್ಮ ರೈತಗೀತೆಗಳ ಮೂಲಕ ರೈತಚಳವಳಿಗೆ ಒಂದು ಸಾಂಸ್ಕೃತಿಕ ವ್ಯಕ್ತಿತ್ವವನ್ನು ಕೊಟ್ಟರು. ಅವರ ‘ಬಾ ತಂಗಿ ಬಾರವ್ವ, ಬಾರೆ ರೈತನ ಮಗಳೆ’ ಎಂಬ ಹಾಡು ರೈತ ಚಳವಳಿಗೆ ಹೆಣ್ಣುದನಿಯ ಹೊಸ ವ್ಯಕ್ತಿತ್ವವನ್ನು ನೀಡಿತು. ರೈತರ ವಿರುದ್ಧವಿದ್ದ ರಾಜಕಾರಣಿ, ದಲ್ಲಾಳಿಗಳು, ಅಧಿಕಾರಿಗಳಿಂದ ಹಿಡಿದು ಜಾಗತೀಕರಣದ ಮೂಲಕ ವ್ಯಾಪಿಸುತ್ತಿರುವ ಸಾಮ್ರಾಜ್ಯಶಾಹಿಗಳನ್ನೆಲ್ಲ ತಮ್ಮ ಹಾಡುಗಳ ಮೂಲಕ ಉಡಾಯಿಸಿದರು. ‘ಎಲ್ಯವನೆಲ್ಯವನೆ? ನಮ್ಮ ಭತ್ತ ರಾಗಿಯ ತಿಂದ ಕತ್ತೆ ಸೂಳೆಮಗ’, ‘ದಲ್ಲಾಳಿ ನೋಡೋ ಇವನ ದವಲತ್ತುಗಾರ’, ‘ಕಂಡ ಕಂಡವರ ರಕ್ತ ಕುಡಿದು ಗುಂಡಿಗೆಯ ಬೆಳೆಸುತಾನೆ’, ‘ಮೋಜು ನೋಡಿರಣ್ಣ ಇವ್ರ ಮೋಜು ನೋಡಿರೊ, ಗಾಜಿನ ಮನೆಯಲಿ ಕೂತ ಇವರ ಮೋಜು ನೋಡಿರೊ’, ‘ಪಾಪು ಪುಟಾಣಿ ಬಾರೊ ಹಾವು ಹಿಡಿಯೋಣ ಬಾರೊ ’ ರೈತನ ಮಗನೆ ಹಲ್ಲು ಕೀಳೋಣ ಬಾರೊ’ ಎಂದು ರೈತ ಸಮುದಾಯವನ್ನು ಎಚ್ಚರಿಸಿ ಹೋರಾಟಕ್ಕೆ ಹೊಸ ಶಕ್ತಿಯನ್ನು ತುಂಬಿದರು. ಹಿ.ಶಿ.ರಾ ಅವರ ರೈತ ಗೀತೆಗಳು ದಿಕ್ಕೆಟ್ಟ ರೈತ ಸಮೂಹವನ್ನು ಎಚ್ಚರಿಸಿ ಅವರೊಳಗೆ ಆತ್ಮವಿಶ್ವಾಸವನ್ನು ಗಟ್ಟಿಗೊಳಿಸುತ್ತವೆೆ. ರೈತರ ಸರಣಿ ಆತ್ಮಹತ್ಯೆಗಳು) ಎಗ್ಗಿಲ್ಲದೆ ನಡೆಯುತ್ತಿವೆ ಅಲ್ಲದೆ ನಮ್ಮ ಸಂಘಟನೆಗಳು ಪ್ರಸ್ತಾಪಿಸುತ್ತಿದ್ದ ಸಮಸ್ಯೆಗಳು ಅಂದಿಗಿಂತಲೂ ಇಂದು ಹೆಚ್ಚು ಬಿಗಡಾಯಿಸಿವೆ. ಈ ಹೊತ್ತಿನಲ್ಲಿ ರಾಮಚಂದ್ರೇಗೌಡರ ರೈತಗೀತೆಗಳು ಹೊಸ ಹುರುಪು ಮತ್ತು ನೈತಿಕ ಬಲವನ್ನು ತುಂಬಬಲ್ಲವು.

ಮನೆಯಲ್ಲಿ ಸದಾ ರೈತಸಂಘದ ಕಾರ್ಯಕರ್ತರು, ಲೇಖಕ ಬರಹಗಾರರು, ವಿದ್ಯಾರ್ಥಿಗಳು, ಭಿನ್ನ ವೈಚಾರಿಕ ಚಿಂತಕರು ತುಂಬಿರುತ್ತಿದ್ದುದನ್ನು ಹಿ.ಶಿ.ರಾ ಅವರು ಬರೆದುಕೊಂಡದ್ದು ಒಂದೆಡೆಯಾದರೆ, ಅವರ ಬಗೆಗೆ ಮಾತನಾಡು ವವರ ಮಾತುಗಳು ಅದನ್ನು ಸಾಕ್ಷಿಯಾಗಿ ನುಡಿಯುತ್ತವೆ. ಲೆಕ್ಕವಿಲ್ಲದಷ್ಟು ಸರಳ ಮತ್ತು ಅಂತರ್ಜಾತಿ ಮದುವೆಗಳನ್ನು ಮಾಡಿಸಿ ಸುಮ್ಮನಾಗದೆ ಅವರ ಬದುಕನ್ನು ನೇರ್ಪುಗೊಳಿ ಸುವಲ್ಲಿ ನೆರವಾದ ಕತೆಗಳು ನೂರಾರಿವೆ. ನಾವು ಕಲಿಯಬೇಕಾದ ಪಾಠ ಇಲ್ಲಿದೆ ಎನಿಸುತ್ತದೆ.

Writer - ಡಿ.ಆರ್. ದೇವರಾಜ್

contributor

Editor - ಡಿ.ಆರ್. ದೇವರಾಜ್

contributor

Similar News