ವಿಶ್ವಕಪ್‌ನಿಂದ ಹೊರಬೀಳುವ ಭೀತಿಯಲ್ಲಿ ಅರ್ಜೆಂಟೀನ

Update: 2017-10-07 18:33 GMT

ಬ್ಯುನಸ್ ಐರಿಸ್, ಅ.7: ಪೆರು ತಂಡದ ವಿರುದ್ಧ ಗೋಲುರಹಿತ ಡ್ರಾಗೊಳಿಸಿರುವ ಅರ್ಜೆಂಟೀನ ತಂಡ 2018ರಲ್ಲಿ ರಶ್ಯದಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್‌ನಿಂದ ಹೊರಗುಳಿಯುವ ಭೀತಿಯಲ್ಲಿದೆ. ತವರುನೆಲದಲ್ಲಿ ಆಡಿರುವ ಲಿಯೊನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನ ತಂಡ ಪೆರು ವಿರುದ್ಧ ಗೋಲು ಬಾರಿಸಲು ವಿಫಲವಾಗಿದ್ದು, 1970ರ ಬಳಿಕ ವಿಶ್ವಕಪ್‌ನಿಂದ ಹೊರಗುಳಿಯುವ ಸ್ಥಿತಿಗೆ ತಲುಪಿದೆ. ಈಕ್ವೆಡಾರ್ ವಿರುದ್ಧ ಅದರದೇ ನೆಲದಲ್ಲಿ ವಿಶ್ವಕಪ್‌ನ ಕೊನೆಯ ಅರ್ಹತಾ ಪಂದ್ಯವನ್ನು ಆಡಲಿರುವ ಅರ್ಜೆಂಟೀನ ವಿಶ್ವಕಪ್‌ಗೆ ಅರ್ಹತೆ ಪಡೆಯಬೇಕಾದರೆ ಇತರ ತಂಡಗಳ ಫಲಿತಾಂಶವನ್ನು ನಿರೀಕ್ಷಿಸಬೇಕಾಗಿದೆ.

ಒಟ್ಟು 38 ಅಂಕ ಗಳಿಸಿರುವ ಬ್ರೆಝಿಲ್ ಈಗಾಗಲೇ ವಿಶ್ವಕಪ್‌ಗೆ ಅರ್ಹತೆ ಪಡೆದಿರುವ ಮೊದಲ ದಕ್ಷಿಣ ಅಮೆರಿಕ ತಂಡವಾಗಿದೆ. ಉರುಗ್ವೆ(28), ಚಿಲಿ(26), ಕೊಲಂಬಿಯಾ(26), ಪೆರು(25), ಅರ್ಜೆಂಟೀನ(25) ಹಾಗೂ ಪರಾಗ್ವೆ(24) ನಂತರದ ಸ್ಥಾನದಲ್ಲಿವೆ. ದಕ್ಷಿಣ ಅಮೆರಿಕದ ಅಗ್ರ ನಾಲ್ಕು ತಂಡಗಳು ವಿಶ್ವಕಪ್‌ಗೆ ನೇರ ಪ್ರವೇಶ ಪಡೆಯುತ್ತವೆ. 5ನೆ ಸ್ಥಾನ ಪಡೆಯುವ ತಂಡ ನ್ಯೂಝಿಲೆಂಡ್ ವಿರುದ್ಧ ಪ್ಲೇ-ಆಫ್ ಪಂದ್ಯ ಆಡಲಿದೆ.

6ನೆ ಸ್ಥಾನದಲ್ಲಿರುವ ಅರ್ಜೆಂಟೀನ ತಂಡ ತನ್ನ ಕೊನೆಯ ಲೀಗ್ ಪಂದ್ಯವನ್ನು ಜಯಿಸಿದರೆ ಪ್ಲೇ-ಆಫ್ ಸ್ಥಾನವನ್ನು ಖಚಿತಪಡಿಸಲಿದೆ. ಅಗ್ರ-4 ಸ್ಥಾನ ಪಡೆಯುವ ಸಾಧ್ಯತೆಯಿಲ್ಲ. ಉಳಿದ 3 ಸ್ಥಾನಗಳಿಗೆ 5 ತಂಡಗಳ ನಡುವೆ ತೀವ್ರ ಪೈಪೋಟಿ ಕಂಡುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News