ಬೆಂಗಳೂರನ್ನು ಕಾಡುತ್ತಿರುವ ವಾಮಾಚಾರ ಮೌಢ್ಯ
ಬೆಂಗಳೂರು,ಅ. 8: ವಿಜ್ಞಾನ ಎಷ್ಟೇ ಮುಂದುವರೆದರೂ ಜನರಲ್ಲಿರುವ ಮೌಢ್ಯಗಳು ಇನ್ನು ಜೀವಂತವಾಗಿವೆ ಎಂಬುವುದಕ್ಕೆ ಪೀಪಲ್ ಟ್ರೀ ಮಾರ್ಗ ಸಂಸ್ಥೆ ನಡೆಸಿದ ಮಾನಸಿಕ ಆರೋಗ್ಯ ಕುರಿತ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ.
21ನೆ ಶತಮಾನದಲ್ಲಿದ್ದರೂ ಜನರು ವಾಮಾಚಾರ, ಮಾಟ ಮಂತ್ರದಿಂದ ಮಾನಸಿಕ ಸಮಸ್ಯೆ ಉಂಟಾಗಲಿದೆ ಎಂದು ಶೇ.12ರಷ್ಟು ರಾಜ್ಯ ರಾಜಧಾನಿ ಬೆಂಗಳೂರು ನಗರ ವಾಸಿಗಳು ಸಮೀಕ್ಷೆಯಲ್ಲಿ ಒಪ್ಪಿಕೊಂಡಿದ್ದಾರೆ.
ವಾಮಚಾರ, ಮಾಟ ಮಂತ್ರಗಳ ಸತ್ಯಾಸತ್ಯತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಹಲವು ಕಾರ್ಯಕ್ರಮಗಳು ನಡೆದರೂ ಬೆಂಗಳೂರಿನ ಸಾಕಷ್ಟು ಮಂದಿ ಇನ್ನೂ ಮಾಟ ಮಂತ್ರಗಳ ಮೇಲೆ ನಂಬಿಕೆ ಇರಿಸಿದ್ದಾರೆ. ಯಾರೇ ಆದರೂ ಅವರ ಮೇಲೆ ಮಾಟ ಪ್ರಯೋಗ ಮಾಡಿಸಿದರೆ ಮಾನಸಿಕ ಅಸ್ವಸ್ಥತೆಗೆ ತುತ್ತಾಗಲಿದ್ದಾರೆ ಎಂದು ನಂಬಿದ್ದಾರೆ.
ಪೀಪಲ್ ಟ್ರೀ ಮಾರ್ಗ ಇತ್ತೀಚಿಗೆ 300 ಜನರನ್ನು ಅವರ ಮಾನಸಿಕ ಸಮಸ್ಯೆಗಳ ಮೇಲೀನ ನಿಲುವುಗಳನ್ನು ಕುರಿತಾಗಿ ಅಧ್ಯಯನ ನಡೆಸಿತು. ಅಧ್ಯಯನದ ಪ್ರಕಾರ ಶೇ.12ರಷ್ಟು ಮಂದಿ ತಮಗೆ ಮಾಟದಲ್ಲಿ ನಂಬಿಕೆ ಇದೆ. ಅದರಿಂದ ಮಾನಸಿಕ ಅಸ್ವಸ್ಥತೆ ಉಂಟಾಗುತ್ತದೆ ಹಾಗೂ ಅದಕ್ಕೆ ಯಾವುದೇ ರೀತಿಯ ಚಿಕಿತ್ಸೆ ಇಲ್ಲ ಎಂದು ಉತ್ತರಿಸಿದ್ದಾರೆ.
ಶೇ.10ರಷ್ಟು ಮಂದಿಗೆ ಸಾಮಾನ್ಯ ಮಾನಸಿಕ ಸಮಸ್ಯೆಗಳು, ಖಿನ್ನತೆ ಕಾಡಲಿದೆ. ಶೇ.30ಕ್ಕೂ ಹೆಚ್ಚು ಮಂದಿ ಭಂಗಿ ವ್ಯಸನಿಗಳಾಗುವುದು ಮತ್ತು ಗಂಭೀರ ಮಾನಸಿಕ ಸಮಸ್ಯೆ ಕಂಡುಬಂದರೂ ಯಾವುದೇ ಮಾನಸಿಕ ಹಾನಿ ಆಗುವುದಿಲ್ಲ ಎಂದು ಹೇಳಿದ್ದಾರೆ.
ಶೇ.30ರಷ್ಟು ಮಂದಿ ಸೈಕೋಸಿಸ್ ಅಥವಾ ಸ್ಕಿಝೋಫ್ರೇನಿಯಾ ಮತ್ತು ಭ್ರಾಂತಿ ಕುರಿತು ಏನೂ ತಿಳಿದಿಲ್ಲ. ಶೇ.40ರಷ್ಟು ಮಂದಿ ಮಾನಸಿಕ ಸಮಸ್ಯೆಗಳು ಹಿಂಸೆಯೊಂದಿಗೆ ಸಂಬಂಧ ಹೊಂದಿವೆ ಎಂದು ನಂಬಿದ್ದಾರೆ. ವಾಸ್ತವವಾಗಿ ವೈಯಕ್ತಿಕ ಸಂಕಷ್ಟಗಳಿಲ್ಲದೆ ಹೋದಲ್ಲಿ ಹಿಂಸೆಯ ಸಂಭವನೀಯತೆ ಇರುವುದಿಲ್ಲ. ಶೇ.30ರಷ್ಟು ಮಂದಿ ಮಾನಸಿಕ ರೋಗ ಅನುವಂಶೀಯವಾಗಿ ಬಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಸಮೀಕ್ಷೆಯಿಂದ ಸುಶಿಕ್ಷಿತರು ಮೌಢ್ಯ, ವಾಮಾಚಾರಗಳ ಬಗ್ಗೆ ನಂಬಿಕೆ ಇಟ್ಟಿರುವುದು ಆತಂಕಕಾರಿ ಎಂದು ಪೀಪಲ್ ಟ್ರೀ ಮಾರ್ಗದ ನಿರ್ದೇಶಕ ಮತ್ತು ಸೀನಿಯರ್ ಕನ್ಸಲ್ಟೆಂಟ್ ಸೈಕಿಯಾಟ್ರಿಸ್ಟ್ ಡಾ.ಸತೀಶ್ ರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.