ಅನಂತ ಮೂರ್ತಿ ಕಣ್ಣಲ್ಲಿ ಕಾರಂತರು

Update: 2017-10-09 18:30 GMT

ಭಾಗ 1

ಇಂದು ಕನ್ನಡ ಸಾಹಿತ್ಯ ಲೋಕದ ಮೇರು ವ್ಯಕ್ತಿತ್ವ

ಡಾ. ಶಿವರಾಮ ಕಾರಂತರ ಜನ್ಮದಿನ. ಈ ಹಿನ್ನೆಲೆಯಲ್ಲಿ ಕನ್ನಡದ ಮತ್ತೊಬ್ಬ ಹಿರಿಯ ಚಿಂತಕರಾದ

ಡಾ. ಯು. ಆರ್. ಅನಂತಮೂರ್ತಿ

ಅವರ ಲೇಖನದ ಆಯ್ದ ಭಾಗವನ್ನು ಇಲ್ಲಿ ನೀಡಲಾಗಿದೆ.


ನಾನು ಬರೆಯಲು ಪ್ರಾರಂಭಿಸಿದ ದಿನಗಳಲ್ಲಿ ಕಾರಂತರ ಕೃತಿಗಳು ನನಗೆ ದೀಪವೂ ಆಗಿದ್ದವು. ಕನ್ನಡಿಯೂ ಆಗಿದ್ದುವು. ಅದರ ಬೆಳಕಿನಲ್ಲಿ ನನಗೆ ಬೇಕಾದ್ದನ್ನು ನಾನು ಹುಡುಕಿಕೊಂಡೆ; ಅದರ ಕನ್ನಡಿಯಲ್ಲಿ ಕಾಣಬೇಕೆನ್ನಿಸಿದಂತೆ ಕಾಣಲು ಪ್ರಯತ್ನಿಸಿದೆ. ಅವರಿಂದ ನಡೆಯುವುದನ್ನು ಕಲಿತು, ಬೇರೆ ದಿಕ್ಕಿಗೆ ಹೊರಳಲು ಯತ್ನಿಸದಿದ್ದರೆ ಅವರನ್ನೆ ಕಾಪಿ ಹೊಡೆಯುತ್ತ ಇರುತ್ತಿದ್ದೆ; ಅಥವಾ ಮೆಚ್ಚಿಕೆಯಲ್ಲಿ ಅವರಿಂದ ಪರವಶನಾಗಿ ಇದ್ದು ಬಿಡುತ್ತಿದ್ದೆ. ಅವರ ದಟ್ಟ ಜೀವನಾನುಭವದಿಂದ ಹುಟ್ಟಿದ ನಿಷ್ಠುರವಾದ ದೃಷ್ಟಿಯನ್ನು ಇನ್ನೂ ಗಳಿಸಿಕೊಳ್ಳದ ನನ್ನಂಥ ಲೇಖಕರಿಗೆ ಎರಡನೆಯದೂ ವಿನಯಪೂರ್ವಕವಾಗಿ ಒಪ್ಪಿಕೊಳ್ಳಬಹುದಾದ ಪರ್ಯಾಯವಾಗಿಯೇ ಉಳಿದಿದೆ. ನನ್ನ ಪೀಳಿಗೆಯವರ ಹಿಂದೆ ಕಾರಂತರಂತಹ ಒಬ್ಬ ಲೇಖಕರಿದ್ದಾಗ ಅವರನ್ನು ಅರಗಿಸಿಕೊಂಡು ಬೇರೆಯಾಗುವುದು ಅಷ್ಟೇನೂ ಸುಲಭದ ಸಂಗತಿಯಲ್ಲ. ನಾನು ಈಚೆಗೆ ಓದಿದ ‘Anxiety of influence'ಎಂಬ ಗ್ರಂಥದಲ್ಲಿ ತಮ್ಮ ಹಿಂದಿನ ಪ್ರತಿಭಾವಂತರಿಂದ ಸೃಜನ ಪ್ರೇರಣೆಗಳನ್ನು ಪಡೆಯಲು ಅವರನ್ನು ಅಸಮರ್ಪಕವಾಗಿ ಅರ್ಥ ಮಾಡಿಕೊಳ್ಳುವುದೂ ಒಂದು ಬಗೆಯೆಂದು ಹೆರಾಲ್ಡ್ ಬ್ಲೂಮ್ ಹೇಳುತ್ತಾನೆ. ನಮಗೆ ಬೇಕಾದ್ದನ್ನು ಮಾತ್ರ ಆಯ್ದು, ಅದನ್ನು ಹಿಗ್ಗಿಸಿ, ಇನ್ನೊಂದು ರೂಪಕ್ಕದನ್ನು ತಂದು ಬಳಸುವ ಲೂಟಿ ಜಗತ್ತಿನ ಸಾಹಿತ್ಯದಲ್ಲೆಲ್ಲ ಉಂಟೆಂಬುದನ್ನು ಅವನು ತೋರಿಸುತ್ತಾನೆ. ಹೆಚ್ಚು ಕಡಿಮೆ ಅವರ ಕೃತಿಗಳು ಕಾಣಿಸುವ ಪರಿಸರವನ್ನು ಬಾಲ್ಯದಲ್ಲಿ ಪಡೆದಿದ್ದ ನನಗೆ ಕಾರಂತರಿಂದ ಕಲಿಯುವುದು ಬಹಳ ಇತ್ತು - ಈ ಕಲಿಕೆಯೂ ಅಪ್ರಜ್ಞಾಪೂರ್ವಕವಾದಾಗ ಮಾತ್ರ ಸೃಜನಕ್ರಿಯೆಗೆ ಸಹಾಯವಾಗುತ್ತದೆ. ಆದ್ದರಿಂದಲೇ ತಪ್ಪು ಗ್ರಹಿಕೆ, ಫೋಕಸ್ಸಿನ ಬದಲಾವಣೆ, ಅವರಲ್ಲಿ ತೆಳುವಾದ್ದನ್ನು ತುಂಬಿ ಸ್ವಂತದ್ದಾಗಿ ಮಾಡಿಕೊಳ್ಳುವ ಹವಣಿಕೆ ಇವೆಲ್ಲವೂ ದೊಡ್ಡ ಲೇಖಕನೊಬ್ಬನಿಂದ ಬೇರೆಯಾಗಿ ನಿಲ್ಲುವುದರಲ್ಲಿ ಕಿರಿಯ ಲೇಖಕನಿಗೆ ಒದಗುವ ಉಪಾಯಗಳು ಎನ್ನಬಹುದು.
ಮೇಲಿನದಕ್ಕೆ ಪೂರಕವಾಗಿ ಇನ್ನಷ್ಟು ಹೇಳುವೆ. ನಾನು ಬೆಳೆದ ಪರಿಸರದಲ್ಲಿ ಕಾರಂತರು ನನ್ನ ಹಿರಿಯರಿಗೆ ಹೇಗೆ ಕಾಣುತ್ತಿದ್ದರೆಂಬುದೂ, ಈ ಹಿರಿಯರ ಲೋಕ ದೃಷ್ಟಿಯಿಂದ ಒಡೆದು ನಿಲ್ಲಲು ಯತ್ನಿಸುತ್ತಿದ್ದ ನನಗೆ ಮುಖ್ಯವಾಗಿರಬೇಕು. ನಮ್ಮ ಅಗ್ರಹಾರದಲ್ಲಿ ಕಥೆ ಪುಸ್ತಕಗಳನ್ನು ಓದುತ್ತಿದ್ದ ಮಠದ ಶಾನುಭೋಗರೊಬ್ಬರು ಇದ್ದರು. ಮೊದಲಿಗೆ ಗಳಗನಾಥ. ವೆಂಕಟಾಚಾರ್ಯರನ್ನು ಓದುತ್ತಿದ್ದ ನನ್ನ ಕೈಗೆ ಕಾರಂತರ ಪುಸ್ತಕವನ್ನು ಕೊಡುವಾಗ ಈ ಹಿರಿಯ ರಸಿಕರು ಮುಗುಳ್ನಗುತ್ತ ಹೇಳಿದ್ದು ನನಗಿನ್ನೂ ನೆನಪಿದೆ. ಅವರು ಹೇಳಿದ ಮಾತುಗಳೇ ಈಗಿಲ್ಲಿ ಬೇಡ. ಕಾರಂತರನ್ನು ಪ್ರತಿಭಾಶಾಲಿ ಎಂದು ಮೆಚ್ಚಿದ ಅವರು, ಆದರೆ ಮಾತ್ರ ಇವರೊಬ್ಬ ‘ಹಿಂಡಗಲಿದ ಪುಂಡು ಆನೆ’ ಎಂಬಂತೆ ಮಾತಾಡಿದ್ದರು. ನೇಮನಿಷ್ಠೆಗಳಿಲ್ಲದ ಈ ಬ್ರಾಹ್ಮಣ ಲೇಖಕ ಅವರಿಗೆ ಕುತೂಹಲ ಹುಟ್ಟಿಸಿದ್ದು ಮಾತ್ರವಲ್ಲ. ನನ್ನ ಆವರಣದಿಂದ ನಾನು ಬೇರೆಯಾಗುವಂತೆ ಕಾರಂತರು ನನಗೆ ಕಲಿಸುವುದನ್ನೂ ಸಾಧ್ಯಮಾಡಿತ್ತು.
                                                                         ***

ಹಿಂದೆ ನಾನು ಓದಿದ್ದ ‘ಮರಳಿ ಮಣ್ಣಿಗೆ’ಯನ್ನು ಮತ್ತೆ ನಾನು ಈಗ ಓದುವಾಗ ನಾಗವೇಣಿ ಕಾದಂಬರಿಯ ಕಲ್ಪನಾ ರಾಜ್ಯದಲ್ಲಿ ಶರಣು ಹೋಗುವ ಸಂದರ್ಭ ಕುತೂಹಲಕರವಾಗಿ ತೋರಿತು. ಅವಳು ಓದುತ್ತಿದ್ದ ಕಾದಂಬರಿಗಳು ಎಂಥವೋ! ಅಂತೂ ಅವು ಅವಳ ಸುಪ್ತ ಬಯಕೆಗಳನ್ನು ಕೆದರುತ್ತವೆ. ತಾನೀಗ ಗಂಡನಿಲ್ಲದೆ ಒಂಟಿಯಾಗಿ ಬದುಕುವ ಇಪ್ಪತ್ತೈದು ವಯಸ್ಸಿನವಳು ಎಂಬುದರ ಅರಿವಾಗುತ್ತದೆ. ಅವಳಿಗೆ ಪ್ರಾಯಶಃ ಓದಲು ಸಿಗುತ್ತಿದ್ದುದು ರಂಜಕ ಕಥೆಗಳೇ ಇರಬಹುದು. ಅಂಥ ಕಥೆಗಳ ನಂತರವೇ ನನ್ನ ವಾರಿಗೆಯವರೆಲ್ಲ ಕಾರಂತರನ್ನು ತಲ್ಪಿದ್ದು ಎನ್ನಬಹುದು. ಕಾರಂತರ ನಂತರ ಅನಕೃಗೆ ಕೊಂಚ ಕಾಲವಾದರೂ ಪರವಶರಾಗಿದ್ದು, ಆನಂತರ ಅಲ್ಲಿಂದ ಬಿಡುಗಡೆಯನ್ನು ನಮ್ಮಲ್ಲಿ ಹಲವರು ಪಡೆದದ್ದು.
ನಾನು ನಿತ್ಯ ನೋಡುತ್ತಿದ್ದುದನ್ನು ಕಾರಂತರ ಕೃತಿಗಳು ಕಾಂತಿಯುಕ್ತವಾಗಿ ಮಾಡಿ ಇನ್ನೊಂದು ಬಗೆಯಲ್ಲಿ ನೋಡುವಂತೆ ಮಾಡಿದವು. ಅಗ್ರಹಾರದ ಪರಿಸರದಲ್ಲಿ ನನ್ನ ಬಾಲ್ಯವನ್ನು ನನ್ನ ಹದಿನಾರು ತುಂಬುವ ತನಕ ಕಳೆದ ನನಗಂತೂ ‘ಮರಳಿ ಮಣ್ಣಿಗೆ’, ‘ಬೆಟ್ಟದ ಜೀವ’, ‘ಚೋಮನ ದುಡಿ’ಗಳು ಕ್ರಾಂತಿಕಾರಕ ಕೃತಿಗಳಾದವು. ‘ಚೋಮನ ದುಡಿ’, ಅಸ್ಪಶ್ಯತೆಯ ಬಗ್ಗೆ ಮಡಿವಂತ ಪರಿಸರದಲ್ಲಿ ಬೆಳೆದ ನನ್ನ ದೃಷ್ಟಿಯನ್ನೇ ಬದಲು ಮಾಡಿಬಿಟ್ಟಿತು. ಪ್ರಾಯಶಃ ಈ ದಿಸೆಯಲ್ಲಿ ಕನ್ನಡ ಕಾದಂಬರಿ ಲೋಕದಲ್ಲಿ ಇದೊಂದು ಅಪೂರ್ವ ಕೃತಿ. ಕಾರಂತರ ಬ್ರಾಹ್ಮಣ ಪಾತ್ರಗಳು ಆ ವರ್ಗದ ಎಲ್ಲರಿಗೂ ಸಾಮಾನ್ಯವಾದ ಲಕ್ಷಣಗಳನ್ನು ಪಡೆದವಾಗಿ ಪ್ರಾತಿನಿಧಿಕವಾದರೆ, ಚೋಮ ಮಾತ್ರ ಅಸಾಧಾರಣ ಭಾವ ತುಮುಲಗಳನ್ನು ಪಡೆದ. ನಾನು ಆಗ ಕಂಡ ಯಾವ ಅಸ್ಪಶ್ಯನಂತೆಯೂ ಇಲ್ಲದ, ಅಸಾಮಾನ್ಯನಾದ್ದರಿಂದಲೇ ಪಂಚಮರೆಲ್ಲರಲ್ಲಿ ಸುಪ್ತವಾದದ್ದನ್ನು ಪ್ರತಿನಿಧಿಸಬಲ್ಲ ಪಾತ್ರವಾಗುತ್ತಾನೆ. ಕಾರಂತರು ಈ ಪಾತ್ರ ರಚನೆಯಲ್ಲಿ ಬಳಸುವ ಕೃತಿ ನಿರ್ಮಾಣದ ಬಗೆ - ಅಂದರೆ ಪ್ರಕಟವಾಗಬೇಕಾದ ಸತ್ಯಕ್ಕಾಗಿ ವಾಸ್ತವದ ಮೂಲಾಂಶಗಳನ್ನು ಮಾತ್ರ ಹಿಡಿದು ಉತ್ಕಟಗೊಳಿಸುವ ಬಗೆ - ನನ್ನ ಬರವಣಿಗೆಗೆ ಮುಖ್ಯ ಪ್ರೇರಣೆ ಕೊಟ್ಟ ಕೃತಿಯಾಗಬಹುದು. ಜೀವನವನ್ನು ದಟ್ಟ ವಿವರಗಳಲ್ಲಿ ಹಿಡಿಯುವುದೊಂದು ಬಗೆಯಾದರೆ, ’ಚೋಮನ ದುಡಿ’ಯದು ರೂಪಕ ಪ್ರತಿಭೆಯ ದಿಟ್ಟ ನೆಗೆತದ ಇನ್ನೊಂದು ಕ್ರಮ. ವಿಶೇಷವಾದ್ದರ ಮುಖಾಂತರ ಪ್ರಕಟವಾದ್ದನ್ನೂ ಸುಪ್ತವಾದ್ದನ್ನೂ ಒಟ್ಟಿಗೇ ಧ್ವನಿಸಬಹುದೆಂದೂ, ಒಂದರ ಮುಖಾಂತರ ಹಲವನ್ನು ಒಳಗೊಳ್ಳಲು ಇಂತಹ ವಿಶೇಷ ಪಾತ್ರರಚನೆ ಅಗತ್ಯವೆಂಬುದನ್ನೂ ‘ಚೋಮನ ದುಡಿ’ಯಲ್ಲಿ ನಾನು ಕಂಡುಕೊಂಡೆ. ಚೋಮ, ನಾವು ಕಂಡಿರಬಹುದಾದ ಯಾವ ಒಬ್ಬ ಅಸ್ಪಶ್ಯನಲ್ಲದಿದ್ದರೂ, ಎಲ್ಲಾ ಕಾಲದ ಎಲ್ಲಾ ದೇಶದ ದಲಿತನ ನೋವನ್ನು ಪ್ರಕಟಿಸಬಲ್ಲವನಾಗುತ್ತಾನೆ. ಯಾಕೆಂದರೆ ಅವನು ವಿಶೇಷ ವ್ಯಕ್ತಿಯಾದ್ದರಿಂದ. ‘ಸಂಸ್ಕಾರ’ದ ಪ್ರಾಣೇಶಾಚಾರ್ಯ. ‘ಪ್ರಕೃತಿ’ಯ ಸಂಕಪ್ಪಯ್ಯ, ‘ವೌನಿ’ಯ ಕುಪ್ಪಣ್ಣ ಭಟ್ಟರಂಥವರ ಸೃಷ್ಟಿಯಲ್ಲಿ ಇಂಥ ಒಂದು ಉದ್ದೇಶ -ಎಷ್ಟು ಯಶಸ್ವಿಯಾಗಿದೆಯೋ ತಿಳಿಯದು-ಕೆಲಸ ಮಾಡಿದೆಯೆಂದು ನಾನು ತಿಳಿದಿದ್ದೇನೆ. ಇಂಥಲ್ಲಿ ಕಣ್ಣಿಗೆ ಕಾಣುವ ಪರಿಚಿತ ವಾಸ್ತವವನ್ನು ಭೇದಿಸಿ ಅದರ ಒಳತಿರುಳನ್ನು ತಿಳಿಯಲೆಂದು ಕಲ್ಪನೆ ವಾಸ್ತವದ ಜೊತೆ ಸ್ವಾತಂತ್ರದಿಂದ ವರ್ತಿಸುತ್ತದೆ. ಚೋಮನ ಕೈಯಲ್ಲಿ ಕಾರಂತರು ಪಿಟೀಲನ್ನು ಕೊಡಲಾರರು -ಅಷ್ಟರಮಟ್ಟಿಗೆ ವಾಸ್ತವವನ್ನು ಅವರು ಮೀರಲಾರರು. ಆದರೆ ಮುಖದ ಕಾಂತಿಯನ್ನು ಹಿಡಿಯಲೆಂದು ರೇಖಾಚಿತ್ರಕಾರ ಮುಖವನ್ನು ಕೊಂಚ ಸೊಟ್ಟಗೋ ಚೂಪಾಗಿಯೊ ಮಾಡಿಯಾನು. ವಾಲೇಸ್ ಸ್ಟೀವನ್ನಿನ ಪದ್ಯ ಒಂದರಲ್ಲಿ ಆಗುವಂತೆ ಅಡ್ಡಾದಿಡ್ಡಿಯಾಗಿ ಬೆಳೆದ ಕಾನನದ ನಡುವಿರುವ ಬೆಟ್ಟದ ಮೇಲೊಂದು ಜಾರನ್ನು ಇಟ್ಟದ್ದೇ, ಆ ಜಾರಿನ ಸುತ್ತ ಬೆಟ್ಟವೂ, ಬೆಟ್ಟದ ಸುತ್ತ ಕಾಡು ಪೊದೆಗಳೂ ರೂಪಧಾರಣೆ ಮಾಡುತ್ತದೆ. ಆದರೆ ಜಾರ್ ಕೃತಕ. ಪೊದೆಗಳಿಗೆ ರೂಪ ಕೊಟ್ಟ ಅದು ಕುರುಚಲು ಪೊದೆಯಂತೆ ಹಕ್ಕಿಗಳು ಹುದುಗಿಸಿಟ್ಟುಕೊಂಡಿಲ್ಲ.
ವಾಸ್ತವಕ್ಕೆ ತನ್ನ ಸ್ವಧರ್ಮದಿಂದಲೇ ಗಂಟುಬಿದ್ದ ಕಾದಂಬರಿ ಪ್ರಕಾರ ಒಂದು ದೃಷ್ಟಿಯಿಂದ ಪತ್ರಿಕಾ ವ್ಯವಸಾಯ ಮತ್ತು ಕಾವ್ಯಗಳಿಗೆ ಹುಟ್ಟಿದ ಹಡಬೆ; ಆದರೂ ಅದು ಅಡ್ಡಾದಿಡ್ಡಿ ಬೆಳೆದ ಪೊದೆಗಳ ನಡುವೆ ಎಲ್ಲಿಡಬೇಕೊ ಅಲ್ಲೊಂದು ಜಾರನ್ನು ಇಟ್ಟು ನಮ್ಮ ಅರಿವನ್ನು ಬದಲಾಯಿಸುತ್ತದೆ. ಎಲ್ಲ ಅರಿವಿನಲ್ಲೂ ಕಂಡದ್ದರ ಆಚೆಗಿನ ನೆಗೆತವಿದ್ದೇ ಇದೆ. ಜೀವನದಂತೆಯೇ ಇದೆ ಎನ್ನಿಸುವ, ಎಲ್ಲೆಂದರಲ್ಲಿ ಬೆಳೆಯುತ್ತ ಹೋದ ಸಹಜ ವ್ಯಾಪಾರವೆನಿಸುವ ‘ಮರಳಿ ಮಣ್ಣಿಗೆ’ಯಲ್ಲೂ ಡಿಸೈನ್ ಇದೆ. ಮತ್ತೆ ಮತ್ತೆ ಯಾಕೆ ಮದುವೆಗಳ ವರ್ಣನೆ ಬರಲೇಬೇಕು ಎಂಬ ಡಿ.ಎಲ್.ಎನ್. ಪ್ರಶ್ನೆಗೆ ಉತ್ತರ ಕೊಡುವಾಗ ಗಿರಡ್ಡಿ ಗೋವಿಂದರಾಜರು ಇದನ್ನು ಸಮರ್ಥವಾಗಿ ತೋರಿಸಿದ್ದಾರೆ. ಇಂಥ ಡಿಸೈನನ್ನು ಕಾಣುವಂತೆ ನಮ್ಮನ್ನು ಪ್ರೇರೇಪಿಸುವ ಶಕ್ತಿಯನ್ನು ‘ಮರಳಿ ಮಣ್ಣಿಗೆ’ ಪಡೆಯುವುದು ಕೂಡ ಕಾರಂತರು ತಾವು ಮೆಚ್ಚುವ ಮುದುಕಿಯರಿಗೆ ಇಚ್ಛಾ ಮರಣದಂತಹ ಅಪೂರ್ವ ಸಾವನ್ನು ಕೊಡುವ ಧೈರ್ಯ ಮಾಡಿದಾಗ; ರಾಮ ಮತ್ತು ನಾಗವೇಣಿಯವರ ಕೈಯಲ್ಲಿ ಪಿಟೀಲು ಕೊಟ್ಟು ಕಡಲೆದುರು ಅವರನ್ನು ಕೂರಿಸಿದಾಗ; ಅಥವಾ ಬಣ್ಣದ ಜಾಪೆಯ ಮೇಲೆ ಕೂತು ಮರುಮದುವೆಯಾದ ಐತಾಳ ಬಿಲ್ವಪತ್ರೆಯ ನಸ್ಯದ ಡಬ್ಬಿಯ ಬದಲು ಬೆಳ್ಳಿ ಕಟ್ಟಿದ ಬುರುಡೆಯನ್ನು ಮಯ್ಯನಿಗೆ ಒಡ್ಡಿ ಅವನಿಗೆ ಆ ಘಟನೆಯೊಂದು ಕನಸಿನಲ್ಲೂ ಕಾಡುವಗೀಳಾಗುವಂತೆ ಮಾಡಿದಾಗ; ಅಥವಾ ಸರಸೋತಿ ಕಾಡಿನಿಂದ ಉಪ್ಪಿನ ಕಾಯಿಗೆ ಮಾವಿನ ಮಿಡಿ ತರುವಾಗ.
ಉಬ್ಬರವಿಲ್ಲದ ಜೀವನದ ನಿರಂತರ ದೈನಿಕದ ಚಿತ್ರಕೂಡ ಇಂಥ ಉತ್ಕಟ ಕ್ಷಣಗಳನ್ನು ಬೇಡುತ್ತವೆ. ನಾವು ಓದಲೆಂದು ಪುಸ್ತಕವನ್ನೆತ್ತಿಕೊಳ್ಳುವುದೇ ಇಲ್ಲಿ ಏನೋ ಆಗುತ್ತದೆಯೆಂಬ ನಿರೀಕ್ಷೆಯಲ್ಲಿ ಅಲ್ಲವೆ ? ಅಂದರೆ ಓದುವುದು ಕೂಡ ಬದುಕಲು ಹೊರಟಂತೆಯೇ.
   ಕೃತಿಗೆ ತತ್ತ್ವವನ್ನು ಹುಟ್ಟುಹಾಕುವ ಸಾಮರ್ಥ್ಯವಾಗಲೀ, ನಮ್ಮ ಅರಿವನ್ನು ಹಿಗ್ಗಿಸುವ ಕಾಂತಿಯಾಗಲೀ ಬರುವುದು, ‘ಹಳೆ ಒಡಂಬಡಿಕೆ’ , ‘ಮಹಾಭಾರತ’ ಗಳಲ್ಲಿಯಂತೆ ರೂಪಕ ಪ್ರತಿಭೆ ಕಥನ ಕ್ರಿಯೆಯನ್ನೇ ಚಿಂತನಾಕ್ರಿಯೆಯನ್ನಾಗಿಯೂ ಮಾಡಬಲ್ಲ ಪುನರ್ ಸೃಷ್ಟಿಯ ಬೀಸಿನಲ್ಲಿ ಕೆಲಸ ಮಾಡಿದಾಗ, ಇಂಥದಕ್ಕೆ ಕಾರಂತರು ಹಿಂಜರಿಯುತ್ತಲೇ ಮುಂದುವರಿಯುತ್ತಾರೆಂಬುದು ಅವರ ಕೃತಿಗಳಲ್ಲಿರುವ ಆಕರ್ಷಕ ಅಂಶ. ಅವರ ಈ ಹಿಂಜರಿತದ ಬಗ್ಗೆ ನಾನೀಗಾಗಲೇ ಕಾರಂತರ ‘ಅಥೆಂಟಿಕ್ ಪ್ರಪಂಚ ’ವೆಂಬ ನನ್ನ ಲೇಖನವೊಂದರಲ್ಲಿ ಬರೆದಿದ್ದೇನೆ. ಸ್ವತಃ ಒಬ್ಬ ಕೃತಿಕಾರನಾಗಿ ಬರೆದ ಲೇಖನ ಅದೆಂದು ನಾನು ಆಗ ಪ್ರತ್ಯಕ್ಷವಾಗಿ ಒಪ್ಪಿಕೊಂಡು ಹೊರಟಿದ್ದರೆ ನನ್ನ ನಿಲುವು ಇನ್ನಷ್ಟು ಸ್ಪಷ್ಟವಾಗುತ್ತಿತ್ತು. ನಾನು ಎಲ್ಲಿ ಬೇರೆಯಾಗಲು ಹವಣಿಸುತ್ತಿದ್ದೇನೆಂಬ ವಿಚಾರ ಈ ಲೇಖನದಲ್ಲಿ ಪರೋಕ್ಷವಾಗಿ ಸೇರಿಕೊಂಡದ್ದು ಕಾಣದೆ ಅದೊಂದು ತೀರಾ ವಸ್ತುನಿಷ್ಠ ವಿಶ್ಲೇಷಣೆಯೆಂಬ ಭ್ರಮೆಯನ್ನುಂಟು ಮಾಡಬಹುದು. ಆದರೆ ಈಗ ಬರೆಯುತ್ತಿರುವುದರಲ್ಲಿ ನಾನು ಸಂಕೋಚವಿಲ್ಲದೆ ನನ್ನನ್ನೂ ಎದುರಿಗಿಟ್ಟುಕೊಂಡಿರುವುದರಿಂದ ಕಾರಂತರನ್ನು ನಾನು ನೋಡುವ ದೃಷ್ಟಿಕೋನದಲ್ಲಿ ವಸ್ತುನಿಷ್ಠತೆಯ ದರ್ಪವಿರುವುದಿಲ್ಲವ್ಲೆಂದು ಭಾವಿಸುವೆ.
ಒಟ್ಟಿನಲ್ಲಿ ಎಲ್ಲ ಕಲಾಕೃತಿಯ ಹಿಂದಿರುವ ಪ್ರಶ್ನೆ ನೆಗೆತದ್ದೇ, ಆದರೆ ‘ಕಾಣ್ಕೆ ಕಣ್ಕಟ್ಟುಗಳ ನಡುವೆ ಗೆರೆ ಬಲುತೆಳುವು’ ಆದ್ದರಿಂದ ಇದು ಪರಿಚಿತರ ಅಂಚಿನಲ್ಲಿ ನಿಂತು ನಿಜವಾಗಿ ನೆಗೆದದ್ದೋ ಅಥವಾ ನಿಂತಲ್ಲೇ ನಿಂತು ನಗೆದಾಡುತ್ತಿರುವ ಭ್ರಮೆಯೋ ಎಂಬುದು ಸಾಹಿತ್ಯ ವಿಮರ್ಶೆಯ ಅತ್ಯಂತ ಕ್ಲಿಷ್ಟ ಪ್ರಶ್ನೆಯಾಗಿರುತ್ತದೆ. ಗ್ರಹಿಸುವ ಮನಸ್ಸು ಎಷ್ಟನ್ನು ಕೂಡಿಸುತ್ತ ‘ಅಹುದು’, ಎನ್ನಿಸುತ್ತ ‘ಅಹುದೆ?’, ಎಂಬ ವಿಸ್ಮಯಕ್ಕೆ ಸದಾ ಸನ್ನಾಹ ಮಾಡುತ್ತ ಚಲಿಸುತ್ತಿದೆಯೇ ಎಂಬುದಕ್ಕೆ ಸಂಬಂಧಿಸಿದ್ದು ಇದು. ದುಡಿಮೆಯ ಜೀವನದ ನಿಷ್ಠುರ ಅನಿವಾರ್ಯತೆಗಳ ಬಗ್ಗೆ, ಎಂಥ ಇಕ್ಕಟ್ಟಿನಲ್ಲೂ ಅರಳುವ ಬಾಳಿನ ಹಂಬಲದ ಬಗ್ಗೆ, ಸ್ವಾತಂತ್ರ ಸ್ಥೈರ್ಯಗಳ ನೈತಿಕ ಅಂತರದ ಬಗ್ಗೆ, ಮಾನವರ ಪರಸ್ಪರ ಸಂಬಂಧ ಹೇಗೋ, ಹಾಗೆಯೇ ಅವರು ನೆಚ್ಚಿದ ದೈವದ ಜೊತೆಗಿನ ಸಂಬಂಧದ ಬಗ್ಗೆ ‘ಮರಳಿ ಮಣ್ಣಿಗೆ’ ಹೊಸೆಯುತ್ತ ಹೋಗುವ ಹೆಣಿಗೆಯನ್ನು ಕಾದಂಬರಿಯ ಯಾವ ಸಾಮಾನ್ಯ ವಾಕ್ಯದಲ್ಲಾದರೂ ಕಾಣಬಹುದು. ನೋಡಿ ಇದೊಂದು ಸಾಮಾನ್ಯ ವಾಕ್ಯ ‘‘ನವರಾತ್ರಿಯ ಹೊಸತು ಊಟಕ್ಕೆ, ಪರರ ಮನೆಯ ಭತ್ತವನ್ನು ತಂದು, ಸುಲಿದು, ಹಾಲು ಪಾಯಸ ಮಾಡುವ ಗತಿ ಬರಲಿಲ್ಲ’’. (ಪು.246) ಈ ವಾಕ್ಯದಲ್ಲಿ ಕಾದಂಬರಿಯ ಪಾತ್ರಗಳು ಆರ್ಥಿಕ ಸ್ವಾವಲಂಬನೆಯ ವಿಷಯದಲ್ಲಿ ಧಾರ್ಮಿಕ ಆಚರಣೆಯ ವಿಷಯದಲ್ಲಿ ಯಾವ ಧೋರಣೆ ತಾಳಿದ್ದಾರೆಂಬುದು, ಋತುವಿನಿಂದ ಋತುವಿಗೆ ಪುನರಾವೃತ್ತವಾಗುವ ಕಾಲದಲ್ಲಿ ಅವರು ಹೇಗೆ ಬದುಕಿ ಹೊಂದಿಕೊಳ್ಳಲು ಆಪೇಕ್ಷಿಸುತ್ತಾರೆಂಬುದು ಸದ್ದಿಲ್ಲದಂತೆ ಧ್ವನಿತವಾಗುತ್ತದೆ. ಹಲವರು ಈಗಾಗಲೇ ಗಮನಿಸಿರುವಂತೆ ಕಷ್ಟದ ದುಡಿಮೆಯ ಅನಿವಾರ್ಯತೆಯೇ ಕಾದಂಬರಿಯ ಪಾತ್ರಗಳ ಉಲ್ಲಾಸ ದುಃಖಗಳಿಗೆ ಒಡಮೂಡುವ ಪರಸ್ಪರ ಸಂಬಂಧಗಳಿಗೆ ಶೃತಿ ಹಿಡಿಯುತ್ತವೆ. ನಾಗವೇಣಿ ಆಗಿ ಹೋದ ಕಾಲಗಳ ಗಣನೆ ಮಾಡುವುದನ್ನು ನೋಡಿ:
‘‘ಕಾರ್ ತಿಂಗಳಿಗೆ ಭತ್ತದ ಬೇಸಾಯ, ಮುಂದೆ ಕೊಡಿ ತಿಂಗಳಲ್ಲಿ ಹುರುಳಿ ಬೇಸಾಯ, ಮಕರ ಸಂಕ್ರಾಂತಿಗೆ ಸೌತೆಯ ಹಿತ್ತಲು ಇವನ್ನೆಲ್ಲ ಎಣಿಸಿದಳು. ‘ನಡುನಡುವೆ ಕೊರಳಿಗೆ ತಾಳಿಬಿದ್ದು, ಇಷ್ಟು ಕಾಲವಾಯಿತು ಅವರ ಮುಖ ಕಾಣದೆ ಇಷ್ಟು ವರ್ಷವಾಯಿತು. ಪುಟ್ಟು ಕೈ ಬಿಟ್ಟು ಇಷ್ಟು ದಿನವಾಯಿತು’ ಎನ್ನುತ್ತಾಳೆ. ಅವಳ ಪಾಲಿಗೆ ಸರಸೋತಿಯೇ ಈಗೊಂದು ಕೂಸಿನಂತಾಗಿದ್ದಾಳೆ’’(ಪು.250)
ದುಡಿಮೆಗೆ ಕರೆಯುವ ನಿರಂತರವಾದ ಋತುಗಳು, ಜೀವನ ತರುವ ದುಃಖಿ ವಿಫಲವಾದ ಆಸೆ, ಇಂಥಲ್ಲೂ ಮೂಡುವ ಸಾಫಲ್ಯ-ಈ ಎಲ್ಲವೂ ಮೇಲಿನ ಮಾತುಗಳಲ್ಲಿ ಸಾಕಾರವಾಗಿವೆ.
ಬದುಕೆಂದರೆ ಅದು ಎಷ್ಟು ಇಕ್ಕಟ್ಟಿನದು. ಎಷ್ಟು ಸ್ವಾತಂತ್ರ ಪಡೆದದ್ದು-ತತ್ತ್ವಜ್ಞಾನಿಗಳ ಸಮಸ್ಯೆಯಾದ ಈ ನೆಸೆಸಿಟಿ ಆ್ಯಂಡ್ ಫ್ರೀಡಂ ‘ಮರಳಿ ಮಣ್ಣಿಗೆ’ಯಲ್ಲಿ ಉದ್ದಕ್ಕೂ ವಾಕ್ಯ ವಾಕ್ಯದಲ್ಲೂ ಹೆಣೆಯುತ್ತ ಹೋಗುವ ಧ್ಯಾನವಾಗಿದೆ. ಋಣವಿಲ್ಲದೇ ಬದುಕಬೇಕೆಂಬ ನಿರಂತರ ಕಷ್ಟದ ದುಡಿಮೆಯಲ್ಲೇ ಸ್ವಾವಲಂಬನೆಯ ಹಠದ ಸ್ವಾತಂತ್ರದ ಕಲ್ಪನೆಯಿದೆ. ಈ ಹಠವಿಲ್ಲದಿದ್ದಾಗ ಲಚ್ಚನ ಸ್ವಾತಂತ್ರದ ಅಪೇಕ್ಷೆ ಸ್ವೈರವಾಗಿ ಬಿಡುತ್ತದೆ. ಬೇಸಾಯ ಜೀವನದ ಕ್ರೂರ ವಾಸ್ತವಗಳನ್ನು ಒಪ್ಪಿಕೊಳ್ಳದ, ಹಳ್ಳಿಜೀವನವೆಂದರೆ ಬೇಸರಪಡುವ ಲಚ್ಚ ಲಾಲಸ ಪ್ರವೃತ್ತಿಯವನಾಗುತ್ತಾನೆ. ಅವನನ್ನು ಹಾಗಾಗುವಂತೆ ಮಾಡುವುದು ಕಾದಂಬರಿಯ ಉಳಿದ ಪಾತ್ರಗಳಲ್ಲಿ ಮುಖ್ಯವಾಗಿ ತಂದೆ ರಾಮ ಐತಾಳದಲ್ಲೂ ಇರುವ ಕಷ್ಟದ ದುಡಿಮೆಯಿಂದ ಬಿಡುಗಡೆ ಪಡೆಯುವ ಹಂಬಲವೆಂಬುದೂ ಕಾದಂಬರಿಯ ನೈತಿಕ ಪ್ರಜ್ಞೆಗೊಂದು ಸೂಕ್ಷ್ಮವನ್ನು ತರುತ್ತದೆ. ಲಚ್ಚನಿಗೆ ಯಾಕೆ ಇಂಗ್ಲಿಷ್ ಕಲಿಸಬೇಕೆಂಬ ಬಗ್ಗೆ ಐತಾಳ ಸರಸೋತಿಗೆ ಹೇಳುವುದನ್ನು ಕೇಳಿ:
‘‘ಇನ್ನಿನ್ನು ಈ ಯಕ್ಷಗಾನ ತಾಳಮದ್ದಲೆಯಿಂದ ಮಕ್ಕಳ ಆಯುಷ್ಯ ಸಾಗಲಿಕ್ಕಿಲ್ಲ. ನೀಡು-ನಾನು ವೈದಿಕನಾಗಿ ನನಗೆ ಸಿಗುವ ಮಾನ ಎಷ್ಟೆಂದು ನಿನಗೆ ಗೊತ್ತಿದೆ. ಹೋಟೆಲಿನಲ್ಲಿ ನಾಲ್ಕು ಕಾಸು ಸಂಪಾದನೆಗೆ ದಾರಿಯಾದುದರಿಂದ ಶೀನಮಯ್ಯನಿಗೆ ಬರುವ ಮಾನ ಎಷ್ಟೆಂಬುದೂ ನಿನಗೆ ಗೊತ್ತಿದೆ’’(147)

ನಾನು ನಿತ್ಯ ನೋಡುತ್ತಿದ್ದುದನ್ನು ಕಾರಂತರ ಕೃತಿಗಳು ಕಾಂತಿಯುಕ್ತವಾಗಿ ಮಾಡಿ ಇನ್ನೊಂದು ಬಗೆಯಲ್ಲಿ ನೋಡುವಂತೆ ಮಾಡಿದವು. ಅಗ್ರಹಾರದ ಪರಿಸರದಲ್ಲಿ ನನ್ನ ಬಾಲ್ಯವನ್ನು ನನ್ನ ಹದಿನಾರು ತುಂಬುವ ತನಕ ಕಳೆದ ನನಗಂತೂ ‘ಮರಳಿ ಮಣ್ಣಿಗೆ’, ‘ಬೆಟ್ಟದ ಜೀವ’, ‘ಚೋಮನ ದುಡಿ’ಗಳು ಕ್ರಾಂತಿಕಾರಕ ಕೃತಿಗಳಾದವು. ‘ಚೋಮನ ದುಡಿ’, ಅಸ್ಪಶ್ಯತೆಯ ಬಗ್ಗೆ ಮಡಿವಂತ ಪರಿಸರದಲ್ಲಿ ಬೆಳೆದ ನನ್ನ ದೃಷ್ಟಿಯನ್ನೇ ಬದಲು ಮಾಡಿಬಿಟ್ಟಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News